ಭಾರತದ ಮೇಲೆ ಯಾವುದೇ ಉಗ್ರಗಾಮಿಗಳ ದಾಳಿ ಆದಾಗ ಮೊದಲು ಜನರಿಂದ ಬರುವ ಅಕ್ರೋಶ ಏನೆಂದರೆ ಪಾಕಿಸ್ಥಾನದ ಜೊತೆಗೆ ಯುದ್ಧ ಮಾಡಿ, ಪಾಕಿಸ್ಥಾನವನ್ನು ಹೆಡೆಮುರಿ ಕಟ್ಟಿ ಎನ್ನುವುದು. ಒಬ್ಬ ನಿವೃತ್ತ ಸೈನಿಕನಾಗಿ ನಾನು ಹೇಳುವುದು ಏನೆಂದರೆ ಯುದ್ಧದಿಂದ ಶಾಂತಿ ಬಂದಿದೆ ಎನ್ನವುದು ಇತಿಹಾಸದಲ್ಲೇ ಇಲ್ಲ. ಸ್ವತಃ ಭಾರತ ಪಾಕಿಸ್ಥಾನ 4 ಯುದ್ಧಗಳನ್ನು ಕಂಡಿದೆ. ಆದರೂ ಶಾಂತಿ ಇದೆಯೇ ? ಯುದ್ಧವಲ್ಲದೆ ಬೇರೆ ಹಲವಾರು ರಸ್ತೆಗಳಿವೆ.
ನಮ್ಮ ಕಾಶ್ಮೀರದಂತೆ ಇಸ್ರೇಲ್ ದೇಶಕ್ಕೂ ಪ್ಯಾಲಸ್ತೈನ್ನಿಂದ ಹಲ್ಲೆ, ದಾಳಿ ನಡೆಯುತ್ತಿದೆ. ಆದರೆ ಇಸ್ರೇಲ್ ಯಾವತ್ತು ಆ ದೇಶದ ಮೇಲೆ ದಂಡೆತ್ತಿ ಹೋಗಲಿಲ್ಲ. ಉಲ್ಟಾ ಅದರ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಪ್ಯಾಲಸ್ತೈನ್ನ ಗಾಜಾ ಪಟ್ಟಿಯ ವಿದ್ಯುತ್, ನೀರು ವಾರಗಟ್ಟಲೆ ನಿಲ್ಲಿಸುತ್ತದೆ. ಆಹಾರ ಪೂರೈಕೆ ಆಗದಂತೆ ನೋಡಿಕೊಳ್ಳುತ್ತದೆ. ಆವಾಗ ಅಲ್ಲಿ ಅಡಗಿದ ಉಗ್ರರು ಹೊರಗೆ ಬರುತ್ತಾರೆ ತಕ್ಷಣ ಅವರನ್ನು ಖಲ್ಲಾಸ್ ಮಾಡುತ್ತಾರೆ. ನೀರು, ಆಹಾರ ಸಿಗದೇ ಇದ್ದಾಗ ಅಲ್ಲಿರುವ ಉಗ್ರ ರಕ್ಷಣಾ ಸಮಿತಿ (ಬೆಂಬಲಿಗರು) ಕೆಂಗೆಟ್ಟು ಹೋಗುತ್ತದೆ. ಯಾಕೆ ನಾವು ಸಹಾಯ ಮಾಡಿದೆವು ಎನ್ನುವ ಹುಚ್ಚು ಅವರಿಗೆ ಹಿಡಿಯುತ್ತದೆ.
ಅದೇ ರೀತಿ ಭಾರತ ಇಡೀ ವಿಶ್ವದ ಮುಂದೆ ಪಾಕಿಸ್ಥಾನವನ್ನು ಕಡೆಗಣಿಸಿ ಅದನ್ನು ಶಿಥಿಲಗೊಳಿಸುತ್ತಿದೆ. ಫೆ. 18-19 ರಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್ ಕೇಸ್ ವಿಚಾರಣೆ ಸಂದರ್ಭದಲ್ಲಿ ಹೆಮ್ಮೆಯ ವಕೀಲ ಹರೀಶ್ ಸಾಳ್ವೆ ಅವರು ಪಾಕಿಸ್ಥಾನದ ಕುಟಿಲ ಬುದ್ದಿಯನ್ನು ವಿಶ್ವದ ಮುಂದೆ ಬಗೆದರು.
ಫ್ರಾನ್ಸ್ ದೇಶವು ಉಗ್ರ ಹಾಫಿಸ್ ಅನ್ನು ಅಂತರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಒತ್ತಾಯಿಸಿದೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರು ಅಮೇರಿಕಾ ಸೈನ್ಯವನ್ನು ಭಾರತಕ್ಕೆ ಕಳುಹಿಸುವ ಮಾತು ಹೇಳಿದ್ದಾರೆ. ಇಸ್ರೇಲ್ ತಕ್ಷಣ ಸಹಾಯಕ್ಕೆ ಮುಂದಾಗಿದೆ.
ಅಷ್ಟಕ್ಕೂ ಯುದ್ಧ ಬೇಕೇ ಬೇಕು ಎಂದರೆ ನಮ್ಮ ದೇಶ ಯುದ್ಧ ಆದ ಒಂದೇ ದಿನಕ್ಕೆ ದಿವಾಳಿ ಆಗುತ್ತದೆ. ಒಂದು ದೇಶದಲ್ಲಿ ಯುದ್ಧ ಆಗುತ್ತದೆ ಎಂದರೆ ಆ ದೇಶದಲ್ಲಿರುವ ಎಲ್ಲಾ ವಿದೇಶಿಗಳು, ಅವರ ಕಂಪೆನಿ ಹಿಂದಕ್ಕೆ ಹೋಗುತ್ತದೆ. ಹೊರದೇಶವು ಕಳುಹಿಸುವ ಸಾಮಾನಿನ ದರವನ್ನು ದುಪ್ಪಟ್ಟು ಮಾಡುತ್ತದೆ ಮತ್ತು ಮೊದಲು ಹಣ ನಂತರ ಸಾಮಾನು ಎನ್ನುವ ನಿರ್ಧಾರಕ್ಕೆ ಬರುತ್ತದೆ. ಯುದ್ಧದ ಸಮಯದಲ್ಲಿ ತೈಲದ ಅವಶ್ಯಕತೆ ಹೆಚ್ಚು ಇರುತ್ತದೆ. ತೈಲ ರಾಷ್ಟ್ರಗಳು ತಮ್ಮ ದರವನ್ನು ಹೆಚ್ಚಿಸುತ್ತದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ. ಅಲ್ಲದೆ ಸೈನ್ಯದ ಖರ್ಚು ವೆಚ್ಚ ಐದು ಪಟ್ಟು ಹೆಚ್ಚಾಗುತ್ತದೆ. ಇಷ್ಟೆಲ್ಲಾ ಖರ್ಚು ಆದರೆ ಅದನ್ನು ಭರಿಸಲು ನಮ್ಮ ದೇಶವೇ ಸಾಲದಲ್ಲಿದೆ.
ಜನತೆಯ ಮೇಲೆ ಭರವಸೆಯನ್ನು ಇಟ್ಟು ಸಾಲ ಮಾಡೋಣ ಎಂದರೆ ನಮ್ಮ ಜನತೆ ಸಣ್ಣ ಸಣ್ಣ ವಿಷಯಕ್ಕೆ ಬಂದ್ಗೆ ಕರೆ ಕೊಡುತ್ತಾರೆ. ಈರುಳ್ಳಿ ಬೆಲೆ ಜಾಸ್ತಿ ಆದರೆ ಬಂದ್, ಯಾರೋ ನೇತಾ ಸಾರ್ವಜನಿಕರ ಹಣ ತಿಂದು ಜೈಲಿಗೆ ಸೇರಿದರೆ ಬಂದ್, ಒಬ್ಬ ಉಗ್ರನನ್ನು ನೇಣಿಗೆ ಏರಿಸಿದರೆ ಅದಕ್ಕೆ ಬಂದ್. ಹೀಗೆ ನೋಡಿದರೆ ನಮ್ಮ ದೇಶವು ರಜೆ ಮತ್ತು ಬಂದ್ ಸೇರಿಸಿದರೆ 120 ದಿನ ವರ್ಷದಲ್ಲಿ ಬಂದ್ನಲ್ಲೇ ಇರುತ್ತದೆ. ಹೀಗಾದರೆ ನಾವು ಸಾಲವನ್ನು ಯಾವತ್ತು ತೀರಿಸುವುದು ? ಯಾವತ್ತು ನಮ್ಮ ದೇಶ ಒಂದು ವಿಷಯವನ್ನು ಪ್ರತಿಭಟಿಸಿ ಬಂದ್ ಮಾಡದೆ ದೈನಂದಿನ ಕೆಲಸಕ್ಕಿಂತ ಹೆಚ್ಚು ಕೆಲಸ ಮಾಡಿ ತೋರಿಸುತ್ತದೆಯೋ ಆ ದಿನ ನಮ್ಮ ದೇಶ ಅಮೇರಿಕಾ ಮೇಲೆ ಯುದ್ಧ ಸಾರಿದರೂ ದಿವಾಳಿ ಆಗದು.
ಯುದ್ಧ ಬೇಕು ಎಂದು ಹೇಳುವವರೇ ಮೊದಲು ದೇಶದ ಅರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಶಕ್ತಿಯನ್ನು ಬಲಪಡಿಸಿ. ಎಲ್ಲಿಯ ತನಕ ದೇಶದ ಒಳಗಿದ್ದು ಸೈನಿಕರ ಸಾವನ್ನು ಸಂಭ್ರಮಿಸುವ ಅವಿವೇಕಿಗಳು ಇದ್ದಾರೋ ಅಲ್ಲಿಯ ತನಕ ನಮ್ಮ ದೇಶಕ್ಕೆ ಹೊರಗಿನ ಶತ್ರುಗಳು ಬೇಡ. ಎಲ್ಲೆಲ್ಲೋ ದೂರದಲ್ಲಿ ಬೇಡ. ನಮ್ಮ ಮಂಗಳೂರು, ಬೆಂಗಳೂರಿನಲ್ಲೇ ಹಲವಾರು ಜನ ಇದ್ದಾರೆ. ಅವರನ್ನು ಹುಡುಕಿ ಮನಃ ಪರಿವರ್ತನೆ ಮಾಡಿ ಮೊದಲು. ಒಬ್ಬ ಸೈನಿಕ ವೀರಗತಿ ಪಡೆದಲ್ಲಿ ಫೇಸ್ಬುಕ್, ಟ್ವಿಟ್ಟರ್ ಮೂಲಕ ಕಂಬನಿ ಹಾಕುವ ಬದಲು ಮುಂದೆ ಇನ್ನೊಬ್ಬ ಸೈನಿಕನಿಗೆ ಆ ಸ್ಥಿತಿ ಬರುವುದು ಬೇಡ ಎನ್ನುವ ನಿರ್ಧಾರಕ್ಕೆ ಬನ್ನಿ. ಹ್ಯಾಶ್ ಟ್ಯಾಗ್ ಮಾಡಿ ಟ್ರೆಂಡ್ ಮಾಡುವ ಬದಲು ಸ್ವತಃ ಸೈನ್ಯಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂದು ಯೋಚಿಸಿ.
ಅನ್ಶುಲ್ ಸಕ್ಸೇನ ಎನ್ನುವಾತ ಯಾವುದೇ ಹ್ಯಾಶ್ ಟ್ಯಾಗ್ ಮಾಡಿಲ್ಲ. ಫೇಸ್ಬುಕ್ನಲ್ಲಿ ದೊಡ್ಡ ದೊಡ್ಡ ಭಾಷಣ ಬಿಗಿದಿಲ್ಲ. ಆದರೆ ಯಾರೆಲ್ಲ ದೇಶದ ವಿರುದ್ಧ ಕಾಮೆಂಟ್ ಮಾಡಿದ್ದರೋ ಅವರನ್ನು ಬಯಲಿಗೆ ಎಳೆದು ಅಂತಹ ಜನರಿಗೆ ಬುದ್ದಿಕಲಿಸಿದ. ಕಾಶ್ಮೀರದಿಂದ 370 ಕಾನೂನು ಹೋಗಬೇಕು ಎಂದು ಒಂದು ಟ್ವೀಟ್ ಮಾಡಿದರೆ ಏನೂ ಪರಿಹಾರವಿಲ್ಲ. ನಮ್ಮಲ್ಲೇ ಎಷ್ಟೋ ಜನ ಪದವೀಧರರು ಇದ್ದಾರೆ. ಎಷ್ಟೋ ಜನ ವಕೀಲರು ಇದ್ದಾರೆ. ಬನ್ನಿ, ನಮ್ಮ ಅಕ್ಕ-ಪಕ್ಕ ಊರಿನ ತಹಸೀಲ್ದಾರರು, ಜಿಲ್ಲಾಧಿಕಾರಿಗಳ ಮೂಲಕ ಸುಪ್ರೀಂ ಕೋರ್ಟ್, ಪ್ರಧಾನಿ, ರಾಷ್ಟ್ರಪತಿಗಳಿಗೆ ಮನವಿ ಕೊಡೋಣ. ಇದರಿಂದ ಕಾಶ್ಮೀರಕ್ಕೆ ಸಿಕ್ಕ ವಿಶೇಷ ಸ್ಥಾನ-ಮಾನ ಹೋಗುತ್ತದೆ ಮತ್ತು ಅವರು ಮಾಮೂಲಿ ಭಾರತೀಯರಿಗೆ ಸಿಗುವ ಸೌಲಭ್ಯವನ್ನು ಪಡೆಯುತ್ತಾರೆ. ಅವರಿಗೆ ಬರುವ ಹಣದ ಮೂಲವನ್ನು ನೀವು ಇಲ್ಲಿ ಕುಳಿತು RTI ಮೂಲಕ ಪಡೆಯಬಹುದು. ಕಾಶ್ಮೀರಿ ಯುವತಿಯರು ಭಾರತದ ಯಾವ ಮೂಲೆಯ ಯುವಕನನ್ನು ಕೂಡ ವಿವಾಹವಾಗಬಹುದು. ಹೇಗೆ ಭಾರತೀಯ ಏಕ ಪೌರತ್ವವನ್ನು ಹೊಂದಿದ್ದನೋ ಹಾಗೆಯೇ ಅವರು ಕೂಡ ಕೇವಲ ಭಾರತದ ಪ್ರಜೆ ಆಗಿರಬಹುದು. ಅವರೂ ಕೂಡ ಸುಪ್ರೀಂ ಕೋರ್ಟ್ಗೆ ತಲೆ ಬಾಗಲೇ ಬೇಕಾದ ಪರಿಸ್ಥಿತಿ ಬರುತ್ತದೆ.
ಪ್ರತಿಯೊಂದಕ್ಕೂ ಯುದ್ಧವೇ ಮೂಲವಲ್ಲ. ಯುದ್ಧವಿಲ್ಲದೆ ನಾವು ಕಾಶ್ಮೀರವನ್ನು ಗೆಲ್ಲಬಹುದು ಮತ್ತು ಪಾಕಿಸ್ಥಾನವನ್ನು ಸೋಲಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.