ಬಹುದಿನಗಳ ಬಳಿಕ ಕಾಶ್ಮೀರದಲ್ಲಿ ಉಗ್ರರು ಮತ್ತೊಮ್ಮೆ ಅತ್ಯಂತ ಹೀನ ಕೃತ್ಯ ಎಸಗಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ಗೆ ಜೈಷ್–ಎ–ಮೊಹಮ್ಮದ್ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ ಇದುವರೆಗೆ 49 ಯೋಧರು ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ. ಈ ಘೋರ ಕೃತ್ಯದ ಹಿಂದೆ ಪಕ್ಕದ ಪಾಕಿಸ್ಥಾನದ ಕೈವಾಡವಿದೆ ಎನ್ನುವ ಆರೋಪದ ಜೊತೆಗೆ ಪಾಕಿಸ್ಥಾನದ ವಿರುದ್ಧ ಯುದ್ಧ ಮಾಡಿ ಸೇಡು ತೀರಿಸಿಕೊಳ್ಳಬೇಕೆನ್ನುವ ಆಕ್ರೋಶದ ನುಡಿಗಳೂ ಎಲ್ಲೆಡೆಯಿಂದ ಕೇಳಿಬರುತ್ತಿವೆ.
ಆದರೆ ಪಾಕಿಸ್ಥಾನ ಎನ್ನುವುದು ಕೇವಲ ಒಂದು ದೇಶವಲ್ಲ, ಅದೊಂದು ಮನಃಸ್ಥಿತಿ. ಧಾರ್ಮಿಕ ಮೊಲಭೂತವಾದಿತನವೇ ಭಾರತ ಮಾತೆಯ ದೇಹವನ್ನು ತುಂಡರಿಸಿ ಪಾಕಿಸ್ಥಾನ ಎನ್ನುವ ದೇಶವೊಂದರ ಸೃಷ್ಟಿಗೆ ಕಾರಣವಾದ ಅಂಶ. ಭಾರತ ಮಾತೆಯು ತುಂಡಾಗಲು ಕಾರಣವಾಗಿದ್ದೇ ಆ ಒಂದು ಮನೋಧರ್ಮ. ಅಂದರೆ ನಾವೆಂದಿಗೂ ಒಟ್ಟಿಗೆ ಬಾಳಲಾರೆವು ಎನ್ನುವ ತುಂಡರಿಸುವ ಆ ಮನೋಭಾವವನ್ನೇ ನಾವು ಪಾಕಿಸ್ಥಾನ ಎನ್ನಬಹುದು.
ಅಂದರೆ ಪಾಕಿಸ್ಥಾನವೆನ್ನುವುದು ಕೇವಲ ಒಂದು ಭೂ ಪ್ರದೇಶವಲ್ಲ. ಆ ಮನಃಸ್ಥಿತಿ ಭೂಮಿಯ ಯಾವ ಭಾಗದಲ್ಲಿ ಬೇಕಾದರೂ ಇರಬಹುದು. ಹಾಗಿರುವಾಗ ನಾವು ಪಾಕಿಸ್ಥಾನವನ್ನು ಕೇವಲ ಕಾಶ್ಮೀರದಾಚೆಗೆ ಹುಡುಕುವ ಅಗತ್ಯವಿಲ್ಲ. ನಮ್ಮದೇ ನಗರದ ಗಲ್ಲಿಯೊಂದು ಕೂಡಾ ಪಾಕಿಸ್ಥಾನವಾಗಿರಬಹುದು. ನಾವೇ ಮೆಚ್ಚಿ ಚಪ್ಪಾಳೆ ತಟ್ಟುವ ನಮ್ಮದೇ ದೇಶದ ಒಬ್ಬ ಖ್ಯಾತ ನಟ ಅಥವಾ ನಿರ್ದೇಶಕ ಆಂತರಿಕವಾಗಿ ಪಾಕಿಸ್ಥಾನವೇ ಆಗಿರಬಹುದು. ನಮ್ಮದೇ ದೇಶದ ಒಬ್ಬ ಕವಿ ಅಥವಾ ಸಾಹಿತಿ ಕೂಡಾ ಪಾಕಿಸ್ಥಾನವಾಗಿರಬಹುದು. ಮಾನವ ಹಕ್ಕುಗಳ ಕಾರ್ಯಕರ್ತರ ಸೋಗು ಹಾಕಿಕೊಂಡು ನಮ್ಮ ನಡುವೆ ಭಯೋತ್ಪಾದಕರ ಪರ ಅನುಕಂಪ ಸೃಷ್ಟಿಸುವ ಕೆಲಸ ಮಾಡುತ್ತಿರುವ ಯಾರೋ ಒಬ್ಬ ವ್ಯಕ್ತಿ ಅಥವಾ ಒಂದು ಸಂಘಟನೆ ಕೂಡಾ ಆಂತರಿಕವಾಗಿ ಪಾಕಿಸ್ಥಾನವೇ ಆಗಿರಬಹುದು. ಯಾವುದೋ ಒಂದು ಘಟನೆಯನ್ನು ಮುಂದಿಟ್ಟುಕೊಂಡು ಇಡೀ ದೇಶದ ಸೈನಿಕರೇ ಅತ್ಯಾಚಾರಿಗಳು, ಕ್ರೂರಿಗಳು ಎಂದು ಬಿಂಬಿಸುತ್ತಾ ನಮ್ಮ ಸೈನ್ಯದ ಮನೋಬಲ ಕುಗ್ಗಿಸಲು ಪ್ರಯತ್ನಿಸುವ ಯಾರೋ ಒಬ್ಬ ಪ್ರಗತಿಪರ ಕೂಡಾ ಪಾಕಿಸ್ಥಾನವೇ ಆಗಿರಬಹುದು. ನಮ್ಮದೇ ತೆರಿಗೆ ಹಣದಲ್ಲಿ ನಡೆಯುತ್ತಿರುವ ನಮ್ಮದೇ ದೇಶದ ಯಾವುದೋ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಗಳು ಪಾಕಿಸ್ಥಾನವೆನ್ನುವ ಆ ಮನಃಸ್ಥಿತಿಯ ಕಾರ್ಯಾಲಯವಾಗಿರಬಹುದು. ನಮ್ಮದೇ ಮಕ್ಕಳಿಗೆ ಜೀವನ ಬೋಧಿಸಬೇಕಾದ ಯಾರೋ ಒಬ್ಬ ಪ್ರೊಫೆಸರ್ ಕೂಡಾ ಆಂತರಿಕವಾಗಿ ಪಾಕಿಸ್ಥಾನವಾಗಿರಬಹುದು ಮತ್ತು ನಮ್ಮದೇ ಮಕ್ಕಳು ಕೂಡಾ ಅವರಿಂದಾಗಿ ಮುಂದೊಂದು ದಿನ ಪಾಕಿಸ್ಥಾನವಾಗಿ ಬದಲಾಗಬಹುದು!
ಆದ್ದರಿಂದ ಪಾಕಿಸ್ಥಾನವೆಂದ ಕೂಡಲೇ ನಾವು ಗಡಿಯಾಚೆಗೆ ಕಣ್ಣು ಹಾಯಿಸಬೇಕೆಂದೇನೂ ಇಲ್ಲ. ಸೂಕ್ಷ್ಮವಾಗಿ ದೃಷ್ಟಿ ಹಾಯಿಸಿದರೆ ನಮ್ಮ ಸುತ್ತ ಮುತ್ತಲೇ ಹಲವಾರು ಪಾಕಿಸ್ಥಾನಗಳು ಕಾಣಸಿಗಬಹುದು. ಮತ್ತು ಆ ಪಾಕಿಸ್ಥಾನಗಳೊಂದಿಗೆ ನಾವೇ ಹಲವಾರು ರೀತಿಯಲ್ಲಿ ವ್ಯವಹರಿಸುತ್ತಿರಬಹುದು. ಅಂತಹಾ ಪಾಕಿಸ್ಥಾನಗಳನ್ನು ನಮಗೇ ಗೊತ್ತಿಲ್ಲದೇ ಯಾವುದೋ ಮಾರ್ಗದಲ್ಲಿ ನಾವೇ ಬೆಂಬಲಿಸುತ್ತಿರಬಹುದು. ಇನ್ಯಾವುದೋ ವಿಚಾರದಲ್ಲಿ ಪ್ರೋತ್ಸಾಹಿಸುತ್ತಾ ಸುಪ್ತವಾಗಿ ಅಡಗಿರುವ ಅಂತಹಾ ಪಾಕಿಸ್ಥಾನಗಳ ಬೆಳವಣಿಗೆಗೆ ಸ್ವತಃ ನಾವೇ ಕಾರಣರಾಗುತ್ತಲೂ ಇರಬಹುದು. ಆದ್ದರಿಂದ ನಮ್ಮ ಸುತ್ತ ಮುತ್ತಲೇ ಇರಬಹುದಾದ ಪಾಕಿಸ್ಥಾನಗಳ ಬಗ್ಗೆ ಕಟ್ಟೆಚ್ಚರ ವಹಿಸಬೇಕಾದ ಹಾಗೂ ಅಂತಹಾ ಪಾಕಿಸ್ಥಾನಗಳ ಬೆಳವಣಿಗೆಗೆ ತಡೆಯೊಡ್ಡಬೇಕಾದ ಹೊಣೆ ನಮ್ಮ ಮೇಲೆಯೇ ಇದೆ.
ಗಡಿಯಾಚೆಗಿನ ಪಾಕಿಸ್ಥಾನವನ್ನು ನಮ್ಮ ಸೈನಿಕರು ಎದುರಿಸುತ್ತಾರೆ. ಆದರೆ ನಮ್ಮ ನಡುವೆಯೇ ಇರುವ ಪಾಕಿಸ್ಥಾನಗಳನ್ನು ಗುರುತಿಸುವ ಹಾಗೂ ಅವುಗಳನ್ನು ಮತ್ತಷ್ಟು ಬೆಳೆಯದಂತೆ ಚಿವುಟಿ ಹಾಕುವ ಹೊಣೆ ಸಾಮಾನ್ಯ ಭಾರತೀಯರದ್ದೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.