ಬೈಂದೂರು : ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಇಂದು ನಡೆಯಬೇಕಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ನ 2014-15ನೇ ಸಾಲಿನ ದ್ವಿತೀಯ ಗ್ರಾಮಸಭೆಯು ಗ್ರಾಮಮಟ್ಟದ ಅಧಿಕಾರಿಗಳ ಗೈರು ಹಾಜರಿ ಹಿನ್ನಲೆಯಲ್ಲಿ ರದ್ದುಗೊಳಿಸಿದ ಘಟನೆ ನಡೆದಿದೆ.
ಸಭೆಯ ಆರಂಭಕ್ಕೂ ಮುನ್ನ ಗ್ರಾಮಮಟ್ಟದ ಅಧಿಕಾರಿಗಳ ಗೈರು ಹಾಜರಿ ಗ್ರಾಮಸ್ಥರನ್ನು ಕೆರಳಿಸಿತ್ತು. ಪ್ರತಿಯೊಂದು ಗ್ರಾಮಸಭೆಯಲ್ಲಿ ಗ್ರಾಮಮಟ್ಟದ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಗ್ರಾಮಸಭೆಯಲ್ಲಿ ಕೈಗೊಂಡ ಯಾವುದೇ ನಿರ್ಣಯಗಳಿಗೆ ಬೆಲೆ ಇಲ್ಲ. ಗ್ರಾಮಸಭೆಯ ನಿರ್ಣಯಗಳ ಅನುಷ್ಠಾನ ಕೂಡ ನಡೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದಿನ ಗ್ರಾಮಸಭೆಯಲ್ಲಿ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು, ಗ್ರಾಮಸಭೆಯ ಉದ್ದೇಶ ಸಫಲವಾಗುತ್ತಿಲ್ಲ. ಹೀಗಾಗಿ ಇಂದಿನ ಗ್ರಾಮಸಭೆಯನ್ನು ರದ್ದುಪಡಿಸಿ ಗ್ರಾಮಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮ್ಮುಖದಲ್ಲಿ ಮತ್ತೊಮ್ಮೆ ಗ್ರಾಮಸಭೆಯನ್ನು ನಡೆಸುವಂತೆ ಗ್ರಾಮಸ್ಥರು ಪಟ್ಟುಹಿಡಿದರು.
ವರ್ಷಾಂತ್ಯದಲ್ಲಿ ಗ್ರಾಮಸಭೆಯ ದಿನಾಂಕವನ್ನು ನಿಗದಿಪಡಿಸಿದ ಗ್ರಾಮ ಪಂಚಾಯತ್ ವಿರುದ್ಧ ಕೂಡ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ನಲ್ಲಿ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ವಿವಿಧ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳಿಗೆ ಪುನ: ಸವಲತ್ತು ನೀಡುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ಪಂಚಾಯತ್ ಕಛೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿ ಭಾಗೀರಥಿ ಹೆಬ್ಬಾರ್, ವರ್ಷಾಂತ್ಯವಾದುದರಿಂದ ಕೆಲವೊಂದು ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವ ಸಾಧ್ಯತೆ ಇದೆ. ಗ್ರಾಮ ಮಟ್ಟದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಪ್ರಿಲ್ ತಿಂಗಳಿನಲ್ಲಿ ಪುನ: ಗ್ರಾಮ ಸಭೆಯನ್ನು ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಜಿಪಂ ಸದಸ್ಯರು, ಎಲ್ಲಾ ಗ್ರಾಪಂ ಸದಸ್ಯರು, ಬಂದರು ಇಲಾಖೆ ಅಧಿಕಾರಿಗಳು, ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಜಿಪಂ ಇಂಜಿನಿಯರಿಂಗ್ ವಿಭಾಗ, ಅಬಕಾರಿ ಇಲಾಖೆ, ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಿರುವಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ, ತಾಪಂ ಸದಸ್ಯೆ ಪೂರ್ಣಿಮಾ ಎಂ.ಖಾರ್ವಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಕಮರಿ, ಮೆಸ್ಕಾಂ ಇಂಜಿನಿಯರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ, ಗ್ರಾಮ ಲೆಕ್ಕಿಗ ರಾಘವೇಂದ್ರ ದೇವಾಡಿಗ, ಪಿಡಿಒ ಪ್ರವೀಣ ಡಿಸೋಜ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.