ಗ್ರಾಮೀಣ ಕರಕುಶಲಕರ್ಮಿ ಮತ್ತು ಉದ್ಯಮಿಗಳ ಏಳಿಗೆಗಾಗಿ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿರುವ ಹತ್ತು ಹಲವು ಕ್ರಮಗಳು ಇಂದು ಅಲ್ಲಿನ ಗ್ರಾಮೀಣ ಮತ್ತು ಬುಡಕಟ್ಟು ಜನತೆಯ ಬದುಕನ್ನು ಬದಲಾಯಿಸುತ್ತಿದೆ. ಅವರು ಉತ್ಪಾದಿಸಿದ ಉತ್ಪನ್ನಗಳಿಗೆ ಬೇಡಿಕೆ ಬರುವಂತೆ ಮಾಡಿದೆ. ಇದಕ್ಕಾಗಿ ಸಹಭಾಗ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಗ್ರಾಮೀಣ ಕಲಾವಿದರಿಗೆ ಉತ್ತೇಜನವನ್ನು ನೀಡುತ್ತಿದೆ. ಮುಂಬಯಿಯ ಅತೀದೊಡ್ಡ ಬೀದಿ ಉತ್ಸವದಲ್ಲಿ ಗ್ರಾಮೀಣ, ಬುಡಕಟ್ಟು ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸಿದ್ದು ಮತ್ತು ಅಲ್ಲಿನ ಗ್ರಾಮೀಣ ವಸ್ತುಗಳ ಮಾರಾಟ ಭಾರೀ ಚೇತರಿಕೆಯನ್ನು ಕಾಣುವಂತೆ ಮಾಡಿದ್ದು ಮಹಾ ಸರ್ಕಾರದ ಸಹಭಾಗ ಕಾರ್ಯಕ್ರಮದ ಅತೀದೊಡ್ಡ ಸಾಧನೆಯಾಗಿದೆ.
ಭಾರತದ ಅತೀದೊಡ್ಡ ಮತ್ತು ಅತೀ ರೋಮಾಂಚಕ ಸಾಮಾಜಿಕ-ಸಾಂಸ್ಕೃತಿಕ ಬೆಸುಗೆಯ ಉತ್ಸವವಾದ ‘ಕಾಲಾ ಘೋಡ ಆರ್ಟ್ಸ್ ಫೆಸ್ಟಿವಲ್’ ಫೆ.2ರಿಂದ ಫೆ.10ರವರೆಗೆ ಮುಂಬಯಿಯಲ್ಲಿ ಜರುಗಿದೆ. ಈ ಉತ್ಸವ ಈ ವರ್ಷ 20 ವರ್ಷವನ್ನು ಪೂರೈಸಿದೆ. ಈ ಉತ್ಸವದಿಂದಾಗಿ ದಕ್ಷಿಣ ಮುಂಬಯಿಯನ್ನು ಅತ್ಯದ್ಭುತ ಎನಿಸುವಂತಹ ರೀತಿಯಲ್ಲಿ ಜನರನ್ನು ಆಕರ್ಷಿಸಿದೆ. ಉತ್ಸವದ ವೇಳೆ ವಿವಿಧ ಖಾದ್ಯ, ಧಿರಿಸು, ಕರಕುಶಲ ವಸ್ತುಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಜನರಿಗೆ ಸಿಕ್ಕಿದೆ. 8 ದಿನಗಳ ಕಾಲ ಇಲ್ಲಿ ಹಬ್ಬದಂತಹ ವಾತಾವರಣವೇ ಸೃಷ್ಟಿಯಾಗಿತ್ತು. ಆಳೆತ್ತರದ ಪ್ರತಿಮೆಗಳು, ಫೋಟೋ ಎಕ್ಸಿಬಿಷನ್ಗಳು, ಪುಸ್ತಕ ಮೇಳ, ಖಾದ್ಯ ಮೇಳ, ಸ್ಟ್ರೀಟ್ ಥಿಯೇಟರ್, ಫಿಲ್ಮ್ ಸ್ಕ್ರೀನಿಂಗ್, ಪಾರಂಪರಿಕ ವಸ್ತುಗಳು ಇಲ್ಲಿ ಆಯೋಜನೆಗೊಂಡಿದೆ.
ಗ್ರಾಮೀಣ ಮತ್ತು ಬುಡಕಟ್ಟು ಕರಕುಶಲಕರ್ಮಿಗಳಿಗೆ, ನೇಕಾರರಿಗೆ, ಸಣ್ಣ ಉದ್ಯಮಿಗಳಿಗೆ ತಮ್ಮ ವಸ್ತುಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮಾರುಕಟ್ಟೆಯಾಗಿ ಕಾಲಾ ಘೋಡ ಆರ್ಟ್ಸ್ ಫೆಸ್ಟಿವಲ್ ಸೇವೆ ಸಲ್ಲಿಸುತ್ತಿದೆ. ಸಹಭಾಗ ಕಾರ್ಯಕ್ರಮದ ಮೂಲಕ ಈ ಫೆಸ್ಟಿವಲ್ನಲ್ಲಿ ಗ್ರಾಮೀಣ ಮತ್ತು ಬುಡಕಟ್ಟು ಜನರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಮಹಾರಾಷ್ಟ್ರ ಸರ್ಕಾರ ಹೆಚ್ಚಿನ ಅವಕಾಶವನ್ನು ಒದಗಿಸಿತ್ತು. ಮಾತ್ರವಲ್ಲ, ಇದಕ್ಕೆ ಬೇಕಾದ ಮೂಲಸೌಕರ್ಯವನ್ನೂ ಪೂರೈಸಿತ್ತು. ಈ ಫೆಸ್ಟಿವಲ್ನಲ್ಲಿ ಸರ್ಕಾರವೇ 5 ಸ್ಟಾಲ್ಗಳನ್ನು ಸಹಭಾಗ ಯೋಜನೆಯಡಿ ನಿರ್ಮಾಣ ಮಾಡಿದೆ. ಇಲ್ಲಿ ಗ್ರಾಮೀಣ ಮತ್ತು ಬುಡಕಟ್ಟು ಜನರು ತಮ್ಮ ವಸ್ತುಗಳನ್ನು ಮಾರಾಟ ಮಾಡಿದ್ದಾರೆ. ಮಹಾರಾಷ್ಟ್ರದ ಸಾಮಾಜಿಕ ಜವಾಬ್ದಾರಿ ಮಂಡಳಿ ಸಹಭಾಗದ ನೇತೃತ್ವ ವಹಿಸಿದೆ.
ಸಹಭಾಗ ಎಂಬುದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ನಗರದ ಅಗತ್ಯತೆಗಳನ್ನು ಗ್ರಾಮೀಣ ಪೂರೈಕೆಯೊಂದಿಗೆ ನೀಗಿಸುವ ಮಹತ್ತರವಾದ ಉದ್ದೇಶವನ್ನು ಇದು ಹೊಂದಿದೆ. 36 ಜಿಲ್ಲೆಗಳ ಕೌಶಲ್ಯಭರಿತ ಕಲಾವಿದರಿಗೆ ಮಾರುಕಟ್ಟೆ ಸಂಪರ್ಕವನ್ನು ಈ ಕಾರ್ಯಕ್ರಮದ ಮೂಲಕ ಒದಗಿಸಲಾಗಿದೆ.
ಸಹಭಾಗ ಬಂದು ಎರಡು ವರ್ಷಗಳಾಗಿದ್ದು, ಪ್ರಸ್ತುತ ಅದು ಐದು ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳನ್ನು ಪ್ರತಿನಿಧಿಸುವ ಕಲಾವಿದರನ್ನು ಹೊಂದಿದೆ. ಬಿದಿರು ಸಂಶೋಧನೆ ಮತ್ತು ತರಬೇತಿ ಕೇಂದ್ರ, ಬುಡಕಟ್ಟು ಅಭಿವೃದ್ಧಿ ಇಲಾಖೆ, ಮಹಾರಾಷ್ಟ್ರ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕ ಮಂಡಳಿ, ಮಹಾರಾಷ್ಟ್ರ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ, ಮಹಿಳಾ ಆರ್ಥಿಕ ವಿಕಾಸ ಮಹಾಮಂಡಲ್ಗಳನ್ನು ಸಹಭಾಗ ಹೊಂದಿದ್ದು, ಈ ಇಲಾಖೆಗಳು 9 ದಿನಗಳ ಫೆಸ್ಟಿವಲ್ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿವೆ.
2018ರಲ್ಲಿ ಐದು ಸರ್ಕಾರಿ ಇಲಾಖೆಗಳು ಸೇರಿ ಒಂದು ಸ್ಟಾಲ್ನ್ನು ಇಟ್ಟಿದ್ದವು, ಆದರೆ ಈ ಬಾಕೀ ಐದೂ ಇಲಾಖೆಗಳು ವೈಯಕ್ತಿಕ ಸ್ಟಾಲ್ಗಳನ್ನು ಇಟ್ಟಿವೆ. ಕಳೆದ ವರ್ಷ ಒಂದು ದಶಲಕ್ಷ ರೂಪಾಯಿಗೂ ಅಧಿಕ ಮಾರಾಟವನ್ನು ಕಾಣಲಾಗಿದೆ. ಅದೇ ಉತ್ಸಾಹದಿಂದ ಪ್ರತ್ಯೇಕ ಸ್ಟಾಲ್ಗಳನ್ನು ಮಾಡಲಾಗಿದ್ದು, ಈ ಬಾರಿಗೆ 5 ಪಟ್ಟು ಪ್ರಗತಿ ಕಂಡಿದೆ ಎಂದು ಸಚಿವ ರಿಶದ್ ಸುರ್ತಿ ಹೇಳಿದ್ದಾರೆ.
ಸಹಭಾಗನ ನಿರೀಕ್ಷೆಯಂತೆಯೇ, ಕಾಲಾ ಘೋಡ ಆರ್ಟ್ಸ್ ಪೆಸ್ಟಿವಲ್ ಈ ಬಾರಿಯೂ ಭಾರೀ ಮಟ್ಟದಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ವಿದೇಶಿಯರೇ ಪ್ರಾಥಮಿಕ ಗ್ರಾಹಕರಾಗಿದ್ದರು. ಕೊಲಂಬಿಯಾ ಮೂಲದ ಮಹಿಳೆಯಯೊಬ್ಬರು ರೂ.62 ಸಾವಿರಗಳನ್ನು ನೀಡಿ ಪೈತಾನಿ ಸಿಲ್ಕ್ ಸಾರಿಯನ್ನು ಖರೀದಿ ಮಾಡಿದ್ದಾರೆ. ಬೇರೆ ಬೇರೆ ರಾಷ್ಟ್ರಗಳ ಗ್ರಾಹಕರು ಭಾರತೀಯ ಗ್ರಾಮೀಣರ ಕೈಯಿಂದ ಮೂಡಿ ಬಂದ ವಸ್ತುಗಳನ್ನು ಬೆರಗು ಕಣ್ಣಿನಿಂದ ನೋಡಿ ಖರೀದಿ ಮಾಡಿದ್ದಾರೆ.
ಮಹಾರಾಷ್ಟ್ರದಾದ್ಯಂತದ ಹಿಂದುಳಿದ ಜಿಲ್ಲೆಗಳ ಸುಮಾರು 700 ಕಲಾವಿದರು ಇದರಲ್ಲಿ ಭಾಗಿಯಾಗಿದ್ದರು. ಸಾವಯವ, ಕೈಮಗ್ಗದ ಖಾದಿ ಉತ್ಪನ್ನಗಳು, ಸೀರೆಗಳು, ಕುರ್ತಾಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು.
ಸಹಭಾಗ್ ಮಹಿಳೆಯರ ಸಬಲೀಕರಣದತ್ತವೂ ಗಮನವನ್ನು ಹರಿಸಿದ್ದು, ಎಂಎವಿಐಎಂ ಮೂಲಕ ಬ್ಯಾಗ್, ತಲೆದಿಂಬು ಕವರ್, ಶಾಲ್, ಡೋರ್ಮ್ಯಾಟ್ ಇತ್ಯಾದಿಗಳನ್ನು ತಯಾರಿಸಲು ಸುಮಾರು 12 ಲಕ್ಷ ಮಹಿಳಯೆರಿಗೆ ತರಬೇತಿಯನ್ನೂ ನೀಡುತ್ತಿದೆ. ಅಲ್ಲದೇ ಧಾರವಿಯಲ್ಲಿನ ಮಹಿಳೆಯರಿಗೆ ತ್ಯಾಜ್ಯದಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗೆಯನ್ನೂ ಕಲಿಸುತ್ತಿದೆ.
ಮಹಾರಾಷ್ಟ್ರ ಸರ್ಕಾರದ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಕಲಾವಿದರ ಮೂಲಸೌಕರ್ಯ ಖರ್ಚುಗಳು ಶೂನ್ಯವಾಗಿದೆ, ಹೀಗಾಗಿ ಅವರ ಎಲ್ಲಾ ಗಳಿಕೆಯೂ ಅವರ ಬಳಿಯೇ ಉಳಿಯುತ್ತದೆ, ಸ್ಟಾಲ್ ನಿರ್ಮಾಣ, ಅದರ ವಿನ್ಯಾಸ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಎಲ್ಲದರ ವೆಚ್ಚವನ್ನೂ ಸಹಭಾಗ್ ಪಾಲುದಾರರೇ ನೋಡಿಕೊಳ್ಳುತ್ತಿದ್ದಾರೆ. ಕಾರ್ಪರೇಟ್ಗಳು, ಮಹಾರಾಷ್ಟ್ರ ಟೂರಿಸಂ ಡೆವಲಪ್ಮೆಂಟ್ ಕಾರ್ಪರೇಶನ್ ಮುಂತಾದವರು ಇದರ ಪಾಲುದಾರರಾಗಿದ್ದಾರೆ.
ದೊಡ್ಡ ದೊಡ್ಡ ಸಂಸ್ಥೆ, ಕಂಪನಿಗಳ ಕಾರ್ಯಕ್ರಮಗಳ ವೇಳೆಯೂ ಗ್ರಾಮೀಣ ಜನರು ತಯಾರಿಸಿದ ವಸ್ತುಗಳೇ ಉಡುಗೊರೆಗೆ ಬಳಕೆಯಾಗುವಂತೆ ಮಾಡುವ ನಿಟ್ಟಿನಲ್ಲೂ ಸರ್ಕಾರ ಕಾರ್ಯೋನ್ಮುಖವಾಗಿದೆ. ಮಹಾರಾಷ್ಟ್ರದ ಈ ಪ್ರಯತ್ನವನ್ನು ಇತರ ರಾಜ್ಯಗಳೂ ನಡೆಸಿದರೆ ಗ್ರಾಮೀಣ ಗುಡಿಕೈಗಾರಿಕೆಗಳಿಗೆ ಮರುಜೀವ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.