ಬಜೆಟ್ನ ಭಾಗವಾಗಿ, ಹಣಕಾಸು ಸಚಿವ ಪಿಯೂಶ್ ಗೋಯಲ್ ಅವರು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ಧನ್ನನ್ನು ಘೋಷಿಸಿದ್ದಾರೆ. ಈ ಯೋಜನೆ, ಮನೆಗೆಲಸ, ರಿಕ್ಷಾ ಚಾಲಕರು, ಕೃಷಿ ಕಾರ್ಮಿಕರು, ಬೀಡಿ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಎಲ್ಲಾ ಕಾಮಿಕರಿಗೆ ಪ್ರಯೋಜನಕಾರಿಯಾಗಿದೆ.
ಈ ಯೋಜನೆ ವಿಶ್ವದ ಅತೀದೊಡ್ಡ ಕಾರ್ಮಿಕ ಯೋಜನೆ ಎಂದು ಹೇಳಲಾಗುತ್ತಿದ್ದು, 100 ದಶಲಕ್ಷ ಸಂಭಾವ್ಯ ಫಲಾನುಭವಿಗಳನ್ನು ಹೊಂದಲಿದೆ. 60 ವರ್ಷದ ಬಳಿಕ ಕಾರ್ಮಿಕರು ಈ ಯೋಜನೆಯಡಿ ಮಾಸಿಕ ರೂ.3 ಸಾವಿರ ಪಿಂಚಣಿಯನ್ನು ಪಡೆಯಲಿದ್ದಾರೆ. ಈ ಯೋಜನೆಗೆ ಒಳಪಡುವ 29 ವರ್ಷ ಮತ್ತು ಮೇಲ್ಪಟ್ಟ ಕಾರ್ಮಿಕರು ತಿಂಗಳಿಗೆ ರೂ.100ನ್ನು ಪಾವತಿ ಮಾಡಬೇಕು. 18 ವರ್ಷದಿಂದ 29 ವರ್ಷದವರೆಗಿನ ಕಾರ್ಮಿಕರು ಮಾಸಿಕ ರೂ.55ನ್ನು ಪಾವತಿಸಬೇಕು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿನ ಜೀವ ವಿಮೆಯ ಹೆಚ್ಚುವರಿ ಯೋಜನೆಯಾಗಿದೆ.
ಈ ಯೋಜನೆಗೆ ವಿತ್ತ ಸಚಿವರು ರೂ.500 ಕೋಟಿಯನ್ನು ಎತ್ತಿಟ್ಟಿದ್ದಾರೆ. ಅಗತ್ಯಬಿದ್ದರೆ ಹೆಚ್ಚುವರಿಯಾಗಿ ಹಣ ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ. ಫಲಾನುಭವಿಗಳ ಬ್ಯಾಂಕ್ ಖಾತೆಗೂ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಆಧಾರ್ಗೂ ಇದನ್ನು ಲಿಂಕ್ ಮಾಡುವ ಸಾಧ್ಯತೆ ಇದೆ. ಇನ್ನೊಂದೆಡೆ ಬಜೆಟ್ನಲ್ಲಿ ಮಧ್ಯಮವರ್ಗದ ಜನರಿಗೂ ದೊಡ್ಡ ರಿಲೀಫ್ ನೀಡಲಾಗಿದ್ದು, ರೂ.5 ಲಕ್ಷವರೆಗಿನ ಆದಾಯಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ ಎಂದಿದೆ. ಇದರಿಂದ ಸುಮಾರು 3 ಕೋಟಿ ಮಧ್ಯಮವರ್ಗದ ತೆರಿಗೆದಾರರಿಗೆ ಸಹಾಯವಾಗಲಿದೆ. ವೇತನ ಪಡೆಯುವ ವರ್ಗದ ಸ್ಟ್ಯಾಂಡರ್ಡ್ ಟ್ಯಾಕ್ಸ್ ಡಿಡಕ್ಷನ್ನನ್ನು ರೂ.40,000ದಿಂದ ರೂ.50,000ಕ್ಕೆ ಏರಿಸಲಾಗಿದೆ. ಪಿಎಫ್, ಉಳಿತಾಯ, ಇನ್ಸುರೆನ್ಸ್ನಲ್ಲಿ ಹೂಡಿಕೆ ಮಾಡಿರುವ ವಾರ್ಷಿಕ ರೂ 6.50 ಲಕ್ಷದವರೆಗೆ ಆದಾಯ ಇರುವವರು ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಬ್ಯಾಂಕ್ / ಪೋಸ್ಟ್ ಆಫೀಸ್ ಠೇವಣಿಗಳ ಮೇಲೆ ಗಳಿಸಿದ ಬಡ್ಡಿಯ ಮೇಲಿನ ಟಿಡಿಎಸ್ ಮಿತಿಯನ್ನು 10,000 ರಿಂದ 40,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಬಾಡಿಗೆಗೆ ತೆರಿಗೆ ಕಡಿತಗೊಳಿಸುವುದಕ್ಕಾಗಿ ಟಿಡಿಎಸ್ ಮಿತಿ ರೂ. 1,80,000 ರಿಂದ ರೂ. 2,40,000 ಕ್ಕೆ ಏರಲಿದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ಧನ್ ಯೋಜನೆಯು, ಯಾವುದೇ ಔಪಚಾರಿಕ ಪಿಂಚಣಿ ಯೋಜನೆಯಡಿ ಇರದ ಅಸಂಘಟಿತ ವಲಯದವರಿಗಾಗಿ ಇರುವ ಅಟಲ್ ಪಿಂಚಣಿ ಯೋಜನೆಯೆ ಮರುರಚನಾ ಆವೃತ್ತಿಯಾಗಿದೆ. ಅಟಲ್ ಯೋಜನೆ 2015ರ ಜೂನ್ನಲ್ಲಿ ಅನುಷ್ಠಾನಕ್ಕೆ ಬಂದಿತ್ತು, 18 ವರ್ಷದಿಂದ 40 ವರ್ಷ ನಡುವಣ ಜನರು 60 ವರ್ಷ ದಾಟಿದ ಬಳಿಕ ರೂ.1000ದಿಂದ 5000ದವರೆಗೆ ಪಿಂಚಣಿ ಪಡೆಯುವ ಯೋಜನೆಯಾಗಿದೆ. ಇದರಡಿ 18 ವರ್ಷದಲ್ಲಿ ರ್ಸೇಡೆಯಾದವರು ರೂ.42-210ಗಳನ್ನು ಮಾಸಿಕ ಪಾವತಿ ಮಾಡಬೇಕು, 40 ವರ್ಷದಲ್ಲಿ ಸೇರ್ಪಡೆಯಾದವರು ರೂ.291-454 ಪಾವತಿಸಬೇಕು. ಯೋಜನೆಗೊಳಪಟ್ಟವರು ಪಾವತಿಸುವ ಮೊತ್ತಕ್ಕೆ ಶೇ.100ರಷ್ಟು ಕೊಡುಗೆಯನ್ನು ಸರ್ಕಾರವೂ ನೀಡುತ್ತದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದ್ದು, ಇದರಡಿ ಅನ್ನದಾತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಹಣಕಾಸು ನೆರವು ಸಿಗಲಿದೆ. ಎರಡು ಎಕರೆ ಪ್ರದೇಶಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯಡಿ ರೂ.6000 ಸಿಗಲಿದೆ. ಮೂರು ಹಂತದಲ್ಲಿ ರೈತರ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮಾವಣೆಗೊಳ್ಳಲಿದೆ. ಸರ್ಕಾರದ ಈ ಯೋಜನೆಯಿಂದ ದೇಶದ 12 ಕೋಟಿ ರೈತರಿಗೆ ಅನುಕೂಲವಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ರೂ.75 ಸಾವಿರ ಕೋಟಿ ಹೊರೆ ಬೀಳಲಿದೆ.ಇನ್ನೊಂದೆಡೆ ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಶೇ1.5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲದೇ, ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ ಮೂಲಕ ಹಣಕಾಸು ವಲಯದಲ್ಲಿ ಹಲವಾರು ಪರಿವರ್ತನೀಯ ಸುಧಾರಣೆಗಳನ್ನೂ ಮಾಡಿದೆ.
ಸರ್ಕಾರದ ಸಾಧನೆಗಳ ಮೇಲೆ ಬೆಳಕು ಚೆಲ್ಲಿರುವ ಗೋಯಲ್ ಅವರು, ಸ್ವಚ್ಛ ಭಾರತ್ ಅಭಿಯಾನದ ಯಶಸ್ಸಿನ ಬಗ್ಗೆಯೂ ಹೇಳಿದ್ದಾರೆ. ಈ ಯೋಜನೆಯಡಿ, ಭಾರತ ಶೇ.98ರಷ್ಟು ಗ್ರಾಮೀಣ ನೈರ್ಮಲ್ಯವನ್ನು ಒಳಪಡಿಸಿದೆ ಮತ್ತು 5.4 ಲಕ್ಷದಷ್ಟು ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿದೆ, ಕಳೆದ ಐದು ವರ್ಷಗಳಲ್ಲಿ ಜಿಡಿಪಿ ಪ್ರಗತಿ ದರವೂ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಎಲ್ಲದಕ್ಕಿಂತಲೂ ಮಿಗಿಲಾಗಿ, ಮನರೇಗಾಕ್ಕಾಗಿ ರೂ.60 ಸಾವಿರ ಕೋಟಿಯನ್ನು ಎತ್ತಿಡಲಾಗಿದೆ. ಕಳೆದ 5 ವರ್ಷದಲ್ಲಿ ಆರೋಗ್ಯ ಸೇವೆ ವಲಯದಲ್ಲೂ ಸಾಕಷ್ಟು ಸುಧಾರಣೆಗಳು ಕಂಡಿವೆ. ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ನ ಮೂಲಕ 50 ಕೋಟಿ ಜನರಿಗೆ ಆರೋಗ್ಯ ವಿಮೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ, ಈಗಾಗಲೇ 10 ಲಕ್ಷ ಜನ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಪಿಯೂಶ್ ಗೋಯಲ್ ಹೇಳಿದ್ದಾರೆ. ಅಲ್ಲದೇ ಮುಂದಿನ 5 ವರ್ಷಗಳಲ್ಲಿ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
source: inreportcard
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.