ಮಂಗಳೂರು : ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ದಿನ ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯೋಗದಿನವನ್ನು ಸಂಭ್ರಮದಿಂದ ಆಚರಿಸಿದರು. ನಗರದ ಪ್ರಸಿದ್ಧ ವೈದರೂ, ಯೋಗ ತಜ್ಞರೂ ಆದ ಡಾ| ಗಣೇಶ್ ಭಟ್ ಯೋಗ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಗೈದರು. ಶರೀರ ಮತ್ತು ಮನಸ್ಸಿನ ಆರೋಗ್ಯಕ್ಕೆ ಯೋಗದ ಸಂಜೀವಿನಿ ಔಷಧಿಯಂತಿದ್ದು ವಿಶ್ವದಲ್ಲಿ ಶಾಂತಿ ನೆಲೆಗೊಳ್ಳಲು ಅಪೂರ್ವ ಕೊಡುಗೆಯಾಗಿದೆ. ಭಾರತದ ಪ್ರಾಚೀನ ಋಷಿಮುನಿಗಳು ತಪಃ ಸಾಧನೆಗಳ ಮುಖಾಂತರ ಕಂಡುಕೊಂಡ ವಿಚಾರವನ್ನು ಪತಾಂಜಲಿ ಮಹರ್ಷಿಯ ತನ್ನ ಯೋಗ ಸೂತ್ರದ ಮೂಲಕ ನಮಗೆ ವರವಾಗಿ ಇತ್ತಿದ್ದಾನೆ ಎಂಬುದಾಗಿ ಡಾ| ಗಣೇಶ್ ಭಟ್ ಈ ಸಂದರ್ಭದಲ್ಲಿ ಅಷ್ಟಾಂಗ ಯೋಗದ ಮಹತ್ವದ ಕುರಿತು ವಿವರಿಸಿದರು.
ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ.ಪುರಾಣಿಕರು ವಿಷಯ ಪ್ರಸ್ತಾವನೆಗೈದು ಯೋಗ ದಿನಾಚರಣೆಯ ಸಾಂದರ್ಭಿಕ ಮಹತ್ವವನ್ನು ತಿಳಿತುತ್ತಾ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾರದಾ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷರಾದ ಶ್ರೀ ಕೆ.ಎಸ್.ಕಲ್ಲೂರಾಯ, ಎಸ್.ಕೆ.ಡಿ.ಬಿ. ಅಸೋಸಿಯೇಶನ್ನಿನ ಅಧ್ಯಕ್ಷರಾದ ಶ್ರೀ ಸುಧಾಕರ ರಾವ್ ಪೇಜಾವರ, ಶಾರದಾ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಪ್ರದೀಪ ಕುಮಾರ್ ಕಲ್ಕೂರಾ, ಶ್ರೀಮತಿ ವಿಜಯಲಕ್ಷ್ಮಿ ಅನಂತರಾಮ ರಾವ್, ಶಾರದಾ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯ, ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಲಯದ ಉಪ-ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಸ್ವಾಗತಗೈದರು.
ದೀಪ ಪ್ರಜ್ವಲನದ ಬಳಿಕ ಸರಸ್ವತಿ ವಂದನೆಯೊಂದಿಗೆ ಯೋಗ ಪ್ರದರ್ಶನ ಪ್ರಾರಂಭಗೊಂಡಿತು. ವಿದ್ಯಾಲಯದ ಸುಮಾರು ೨೫೦ ವಿದ್ಯಾರ್ಥಿಗಳು ಈ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. ಯೋಗ ಶಿಕ್ಷಕ ಶ್ರೀ ಕುಶಾಲಪ್ಪ ಮಾರ್ಗದರ್ಶನವಿತ್ತರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ ಮಡಿ ಎಲ್ಲರಿಗೂ ವಂದಿಸಿದರು. ಶಾಂತಿ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಶುಭ ಸಮಾಪ್ತಿಗೊಳಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.