ಬೆಳ್ತಂಗಡಿ: ಒಳ್ಳೆಯ ದಿನಗಳನ್ನು ನೀಡುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಾರಿ ಮಾಡುತ್ತಿರುವ ಕಾಯ್ದೆ, ಮಸೂದೆಗಳು ರೈತರ, ಬಡಜನರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸುತ್ತಿದೆ. ಪ್ರಧಾನಿ ಮೋದಿ ಸುಗ್ರಿವಾಜ್ಞೆ ಮೂಲಕ ಕಾಯ್ದೆಗಳನ್ನು ಜನರ ಮೇಲೆ ಬಲಾತ್ಕಾರವಾಗಿ ಹೇರುವ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಆರೋಪಿಸಿದ್ದಾರೆ.
ಅವರು ಸೋಮವಾರ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮತ್ತು ಕೇಂದ್ರ ಸರಕಾರದ ರೈತರ ಭೂಸ್ವಾಧೀನದ ಸುಗ್ರಿವಾಜ್ಞೆಯನ್ನು ವಿರೋಧಿಸಿ ಮಾರ್ಚ್ 28, 29ರಂದು ನಡೆದ ಕಾಲ್ನಡಿಗೆ ಜಾಥಾದ ಸಮಾರೋಪ ಮತ್ತು ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತಾವು ಅಧಿಕಾರಕ್ಕೆ ಬಂದರೆ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುತ್ತೇವೆಂದು ಹೇಳಿದ ಕೇಂದ್ರ ಸರಕಾರ ಇದೀಗ ಕಸ್ತೂರಿ ರಂಗನ್ ವರದಿಯಿಂದ ಯಾವುದೇ ತೊಂದರೆ ಇಲ್ಲವೆಂದು ಜನರಿಗೆ ಮೋಸ ಮಾಡುತ್ತಿದ್ದಾರೆ. ರೈತರ ಭೂಮಿಯನ್ನು ರೈತರ ಒಪ್ಪಿಗೆ ಇಲ್ಲದೇ ಸ್ವಾಧೀನ ಪಡಿಸಿಕೊಳ್ಳಲು ಭೂ ಸ್ವಾಧೀನ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು ಕೇಂದ್ರ ಸರಕಾರ ಚುನಾವಣೆಯ ಸಂದರ್ಭ ನೀಡಿದ ಭರವಸೆಯನ್ನು ಈಡೇರಿಸದೆ ದೇಶ ವಿದೇಶಗಳ ಬಂಡವಾಳಿಗರ ಸೇವೆಯಲ್ಲಿ ನಿರತವಾಗಿದೆ. ಬಡವರ ಹಿತ ಕಡೆಗಣಿಸಿ ಶ್ರೀಮಂತರ ಋಣ ತೀರಿಸಲು ಅಧಿಕಾರವನ್ನು ದುರುಪಯೋಗ ಪಡಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್, ಕಸ್ತೂರಿರಂಗನ್ ವರದಿಯನ್ನು ಜಾರಿ ಮಾಡುತ್ತಿರುವ ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಸಂಘ ಪರಿವಾರವೇ ಹೋರಾಟವನ್ನು ನಡೆಸುತ್ತಿರುವುದು ಹಾಸ್ಯಾಸ್ಪದ. ಕಸ್ತೂರಿ ರಂಗನ್ ವಿರುದ್ಧ ಲೋಕಸಭೆಯಲ್ಲಿ ಮಾತನಾಡಬೇಕಾದ ಸಂಸದರು, ಮಂತ್ರಿಗಳು ಬೀದಿಯಲ್ಲಿ ಅರಚಾಡುತ್ತಿದ್ದಾರೆ. ರೈತ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ರೈತನ ಬೆನ್ನೆಲುಬನ್ನು ಮುರಿಯುವ ಕೆಲಸದಲ್ಲಿ ಕೇಂದ್ರ ಸರಕಾರ ನಿರತವಾಗಿದ್ದು ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಿವಕುಮಾರ್ ಮಾತನಾಡಿ ತಾಲೂಕಿನಲ್ಲಿ ನೂರಾರು ಎಕ್ರೆ ಜಮೀನನ್ನು ಭೂ ಮಾಲೀಕರು ಒತ್ತುವರಿ ಮಾಡಿದ್ದರೂ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದೆ ಬಡ ಕೃಷಿಕರನ್ನು ಬೀದಿಗೆ ತಳ್ಳುವ ಷಡ್ಯಂತ್ರ ರೂಪಿಸಲಾಗುತ್ತಿದೆ. ಅಕ್ರಮ ಸಕ್ರಮ ಯೋಜನೆಗೆ 25 ವರ್ಷ ಕಳೆದರೂ ಕೂಡಾ ನೀಡಿದ ಅರ್ಜಿಗಳಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಇನ್ನೂ ವಿಲೆವಾರಿಯಾಗದೆ ಉಳಿದಿದೆ. ರೈತರ ಪರವಾದ ಕೆಲಸ ಮಾಡಲು ನಿರ್ಲಕ್ಷ್ಯ ವಹಿಸುತ್ತಿರುವುದು ನ್ಯಾಯವೇ? ಎಂದು ಪ್ರಶ್ನಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಶ್ಯಾಂರಾಜ್ ಬಿ., ಡೊಂಬಯ್ಯ ಗೌಡ ಪಟ್ರಮೆ, ರಾಮಚಂದ್ರ ಅರಳಿ, ಧನಂಜಯ ಗೌಡ, ಶೇಖರ ಎಲ್, ವಸಂತ ನಡ, ಜಯರಾಮ್ ಮಯ್ಯ, ನಾರಾಯಣ ಕೈಕಂಭ, ಗೋವಿಂದ ಗೌಡ, ದಿನೇಶ್ ನಾಯ್ಕ, ಅನಿಲ್ ಎಂ, ವಹಿಸಿದ್ದರು.
ಸಿಪಿಐ(ಎಂ.) ಕಚೇರಿಯಿಂದ ಮೆರವಣಿಗೆ ಮೂಲಕ ನಗರದ ಮುಖ್ಯರಸ್ತೆಯಲ್ಲಿ ಸಾಗಿ ತಾಲೂಕು ಕಚೆರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಕೊನೆಯಲ್ಲಿ ತಹಶೀಲ್ದಾರರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಶ್ಯಾಮರಾಜ್ ಬಿ. ಸ್ವಾಗತಿಸಿ ದೇವಕಿ ಕಳಂಜ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.