ರೋಹಿತ್ ವೇಮುಲಾ ಎನ್ನುವ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಪ್ರಹಸನವನ್ನು ಮುಂದಿಟ್ಟುಕೊಂಡು ಜನರಿಂದ ಸೋಲಿಸಲ್ಪಟ್ಟ ವಿರೋಧ ಪಕ್ಷಗಳು ಹಿಂದಿನ ವರ್ಷಗಳಲ್ಲಿ ಸಾಕಷ್ಟು ನಾಟಕಗಳನ್ನು ನಡೆಸಿದವು. ಆತನ ಸಾವನ್ನೇ ಮುಂದಿಟ್ಟುಕೊಂಡು ದೇಶದಲ್ಲಿ ಗಲಭೆಗೆ ಕುಮ್ಮಕ್ಕು ಕೊಟ್ಟವು. ಆತನ ಮೃತದೇಹವನ್ನು ಮುಂದಿಟ್ಟುಕೊಂಡು ಪ್ರಚೋದನಾಕಾರೀ ಭಾಷಣಗಳ ಸುರಿಮಳೆಯನ್ನೇ ಸುರಿಸಿದವು. ಆತ ದಲಿತನಾಗಿದ್ದರಿಂದಲೇ ಆತನನ್ನು ಸಾಯಿಸಲಾಯಿತು ಎನ್ನುವ ಕ್ಷುಲ್ಲಕ ಆರೋಪಗಳನ್ನು ಮಾಡಿದವು. ಈ ದೇಶದಲ್ಲಿ ದಲಿತರಿಗೆ ಭದ್ರತೆಯಿಲ್ಲ ಎನ್ನುವ ಕಳಂಕವನ್ನು ದೇಶದ ಮೇಲೆ ಹೊರಿಸಿದವು. ಇದಕ್ಕೆಲ್ಲಾ ಅಸಹಿಷ್ಣುತೆಯೇ ಕಾರಣ ಎಂದು ಆರೋಪಿಸಿದವು.
ಆದರೆ….
ವಿರೋಧಪಕ್ಷಗಳು ಆರೋಪಿಸಿದ ಆ ಅಸಹಿಷ್ಣುತೆ ಆತನ ಹೃದಯದಲ್ಲೇ ತಾಂಡವವಾಡುತ್ತಿತ್ತು. ಕೇಸರಿ ಬಣ್ಣವಿದೆ ಎನ್ನುವ ಒಂದೇ ಕಾರಣಕ್ಕೆ ಕಂಡ ಕಂಡ ಬ್ಯಾನರ್ ಗಳನ್ನೂ ಆತ ಹರಿದು ಬಿಸಾಕುತ್ತಿದ್ದ. ತನ್ನ ಮನೆಯಲ್ಲಿ ಕೇಸರಿ ಬಣ್ಣದ ಬಟ್ಟೆಯನ್ನು ಕೂಡಾ ನಾನು ಸಹಿಸುವುದಿಲ್ಲ ಎಂದು ಅವನೇ ಹೇಳಿರುವ ವೀಡಿಯೋ ಈಗಲೂ ನಾವು ನೋಡಬಹುದು. ಅಷ್ಟೊಂದು ಅಸಹಿಷ್ಣುತೆಯಿದ್ದ ಆತನ ಮರಣವಾಗಿದ್ದು ಅಸಹಿಷ್ಣುತೆಯಿಂದ ಎನ್ನುವ ಆರೋಪವೇ ಹಾಸ್ಯಾಸ್ಪದ. ಅಸಹಿಷ್ಣುತೆಯ ಹೆಸರಿನಲ್ಲಿ ಆತನ ಸಾವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡ ವಿರೋಧಪಕ್ಷಗಳ ನಾಯಕರುಗಳಾದ ರಾಹುಲ್ ಗಾಂಧಿ, ಕೇಜ್ರಿವಾಲ್, ಸೀತಾರಾಮ್ ಯೆಚೂರಿ ಮುಂತಾದವರು ಪ್ರಚೋದನಕಾರಿ ಮಾತುಗಳನ್ನಾಡಿ ವಿದ್ಯಾರ್ಥಿಗಳ ಹೋರಾಟವನ್ನು ಹಿಂಸಾ ರೂಪಕ್ಕೆ ತಿರುಗಿಸಿದರು. ಆರೆಸ್ಸೆಸ್ ಶಾಖೆಗಳ ಮೇಲೆ ದಾಳಿ ಮಾಡಿಸಿದರು. ಬೆಂಗಳೂರು, ದೆಹಲಿ ಸೇರಿದಂತೆ ಅನೇಕ ಕಡೆ ಎಬಿವಿಪಿ ಕಚೇರಿಗಳ ಮೇಲೆ ಮೇಲೆ ದಾಳಿ ಮಾಡಿಸಲಾಯಿತು. ಈಗ ಹೇಳಿ, ಯಾರದ್ದು ನಿಜವಾದ ಅಸಹಿಷ್ಣುತೆ?
ಆತನಿಗೆ ದಲಿತ ಪಟ್ಟ ಕಟ್ಟಲು ವಿರೋಧ ಪಕ್ಷಗಳು ಹರಸಾಹಸಪಟ್ಟವು. ಆತ ದಲಿತನೆನ್ನುವ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದ ಬಗ್ಗೆ ತನಿಖೆ ಕೂಡಾ ನಡೆಯಿತು. ಆದರೆ ಸತ್ಯ ಬೇರೆಯದ್ದೇ ಇತ್ತು. ಆತ ದಲಿತ ಎನ್ನುವುದು ಇಂದಿಗೂ ಸಾಬೀತಾಗಿಲ್ಲ!
ಇವೆಲ್ಲದರ ನಡುವೆ ಇದೀಗ ಮತ್ತೆ ಆತನ ಜನ್ಮ ದಿನ ಬಂದಿದೆ. ಆತನ ಜನ್ಮ ದಿನದಂದು ಮತ್ತೆ ಆತನನ್ನು ದಲಿತ, ಹುತಾತ್ಮ, ಅಸಹಿಷ್ಣುತೆಗೆ ಬಲಿಯಾದ ಅಮಾಯಕ ಎಂದು ಬಿಂಬಿಸುವ ಕಾರ್ಯಗಳೂ ಭರಪೂರವಾಗಿ ನಡೆಯುತ್ತಿವೆ. ಆದರೆ ಅವೆಲ್ಲ ಸುಳ್ಳುಗಳ ನಡುವೆ ಆತನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಹಿಂದೆ ನಡೆದ ಘಟನೆಗಳನ್ನು ನಾವಿಂದು ಮತ್ತೊಮ್ಮೆ ಮುನ್ನೆಲೆಗೆ ತರಲೇಬೇಕಿದೆ.
ಮುಂಬೈ ಸರಣಿ ಸ್ಪೋಟದ ಸೂತ್ರಧಾರ ಯಾಕುಬ್ ಮೆಮನ್ ಎನ್ನುವ ಭಯೋತ್ಪಾದಕನನ್ನು ಗಲ್ಲಿಗೇರಿಸಿದಾಗ ಮೋದಿ ವಿರೋಧಿಗಳಾದ ಒಂದು ವರ್ಗ ಅದನ್ನು ವಿರೋಧಿಸುತ್ತದೆ. ಹೈದರಾಬಾದ್ ವಿಶ್ವ ವಿದ್ಯಾಲಯದ ಕ್ಯಾಂಪಸ್ ನಲ್ಲಿ ಸೇರಿಕೊಂಡಿದ್ದ ಆ ಗುಂಪು ‘ತುಮ್ ಕಿತನೇ ಯಾಕುಬ್ ಮಾರ್ ದೇಂಗೆ? ಹರ್ ಘರ್ಸೆ ಏಕ್ ಏಕ್ ಯಾಕುಬ್ ನಿಕಲೇಗಾ!’ (ನೀವು ಎಷ್ಟು ಯಾಕೂಬ್ ರನ್ನು ಕೊಲ್ಲುತ್ತೀರಿ? ಪ್ರತಿಯೊಂದು ಮನೆಯಿಂದಲೂ ಒಬ್ಬೊಬ್ಬ ಯಾಕುಬ್ ಮತ್ತೆ ಹುಟ್ಟಿ ಬರುತ್ತಾನೆ) ಎನ್ನುವ ಘೋಷಣೆಗಳನ್ನು ಹೈದರಾಬಾದ್ ವಿಶ್ವ ವಿದ್ಯಾಲಯದ ಕ್ಯಾಂಪಸ್ ನಲ್ಲಿ ಕೂಗಲಾಗುತ್ತದೆ. ವಿಶ್ವ ವಿದ್ಯಾಲಯದೊಳಗೇ ಇರುವ ದೇಶದ್ರೋಹಿಗಳ ಈ ನಡೆಯನ್ನು ಕಂಡ ಸುಶೀಲ್ ಕುಮಾರ್ ಎನ್ನುವ ವಿದ್ಯಾರ್ಥಿ ಆ ಘಟನೆಯನ್ನು ಖಂಡಿಸಿ Facebookನಲ್ಲಿ ಬರೆದು ತನ್ನ ವಿರೋಧ ವ್ಯಕ್ತಪಡಿಸುತ್ತಾನೆ. ಆದರೆ ಅದರಿಂದ ರೊಚ್ಚಿಗೆದ್ದ ಭಯೋತ್ಪಾದಕರ ಬೆಂಬಲಿಗರ ಗುಂಪು ವಿದ್ಯಾರ್ಥಿ ವಸತಿ ನಿಲಯದಲ್ಲಿದ್ದ ಸುಶೀಲ್ ಕುಮಾರನ ಕೊಠಡಿಗೆ ನುಗ್ಗಿ ಮನಬಂದಂತೆ ಹಲ್ಲೆ ಮಾಡುತ್ತಾರೆ. ಕೊನೆಗೆ ಆತನನ್ನು ವಿಶ್ವವಿದ್ಯಾಲಯದ ಮುಖ್ಯದ್ವಾರದವರೆಗೆ ದರದರನೆ ಎಳೆದು ತರುತ್ತಾರೆ. ವಿವಿ ಸೆಕ್ಯುರಿಟಿ ರೂಮಿನೊಳಕ್ಕೆ ಎಳೆದೊಯ್ದು ಅಲ್ಲಿದ್ದ ಕಂಪ್ಯೂಟರಿನಲ್ಲಿ ಫೇಸ್ಬುಕ್ ಅಕೌಂಟನ್ನು ಓಪನ್ ಮಾಡಿಸಿ ಕಮೆಂಟನ್ನು ಬಲವಂತವಾಗಿ ಅಳಿಸಿಹಾಕುವಂತೆ ಮಾಡುತ್ತಾರೆ. ಸುಶೀಲನ ತಾಯಿ ನ್ಯಾಯಾಲಯದ ಮೊರೆ ಹೋಗುತ್ತಾರೆ. ಘಟನೆಯ ತನಿಖೆ ಮಾಡಿ ಸಂಪೂರ್ಣ ವರದಿ ಕೊಡಲು ನ್ಯಾಯಾಲಯ ವಿವಿಗೆ ಆದೇಶಿಸುತ್ತದೆ. ಘಟನೆಯ ತನಿಖೆ ನಡೆಸಿದ ವಿಶೇಷ ತನಿಖಾ ಸಮಿತಿ ಸುಶೀಲ್ ನ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿಗಳ ಪೈಕಿ ಇದೇ ರೋಹಿತ್ ವೆಮುಲಾ ಸೇರಿದಂತೆ ಪ್ರಮುಖ ಐವರನ್ನು ವಿವಿಯಿಂದ ಉಚ್ಚಾಟನೆ ಮಾಡಲು ಶಿಫಾರಸು ಮಾಡುತ್ತದೆ.
ವಿದ್ಯಾರ್ಥಿ ವಸತಿ ನಿಲಯದಿಂದ ಹೊರಹಾಕಿದ ವಿವಿ ತೀರ್ಮಾನ ಪ್ರಶ್ನಿಸಿ ರೋಹಿತ್ ವೇಮುಲ ಮತ್ತು ಆತನ ಸಹಪಾಠಿಗಳು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಳ್ಳುವ ಮುನ್ನವೇ ರೋಹಿತ್ ವೆಮುಲಾ ಎನ್ನುವ ಅಸಹಿಷ್ಣು ಮನಸ್ಸಿನ ಹುಡುಗ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಈ ಎಲ್ಲಾ ಅಂಶಗಳೂ ಅಂದಿನ ಬಹುತೇಕ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆದರೆ ರೋಹಿತ್ ವೆಮುಲಾ ಎನ್ನುವ ಯುವಕನ ದಾರಿ ತಪ್ಪಿಸಿದ ಅದೇ ಶಕ್ತಿಗಳು ಆತನ ಸಾವಿನ ಹಿಂದಿನ ಎಲ್ಲಾ ಘಟನೆಗಳನ್ನೂ ಬೇಕೆಂದೇ ಮುಚ್ಚಿಡುತ್ತಿವೆ. ಅದೇ ಶಕ್ತಿಗಳು ಅಂದಿನಿಂದ ಇಂದಿನವರೆಗೂ ಆತನ ಸಾವನ್ನೇ ತಮ್ಮ ದಾಳವನ್ನಾಗಿ ಮಾಡಿಕೊಂಡು ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲು ಹವಣಿಸುತ್ತಾ ನಿಂತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.