ದೇಶ ಬದಲಾಗಬೇಕಾದರೆ ದೇಶವಾಸಿಗಳ ಮನಃಸ್ಥಿತಿ ಬದಲಾಗಬೇಕು.ಇದು ನಾವು ಹಿಂದಿನಿಂದಲೂ ಕೇಳಿಕೊಂಡು ಬರುತ್ತಿದ್ದ ಮಾತು. ಉದಾಹರಣೆಗೆ ಸ್ವಚ್ಛ ಭಾರತದ ವಿಚಾರದಲ್ಲಿ ಸರ್ಕಾರಗಳು ಹಾಗೂ ಇತರ ಸಾಮಾಜಿಕ ಸಂಘ ಸಂಸ್ಥೆಗಳು ಅದೆಷ್ಟೇ ಜಾಗೃತಿ ಮೂಡಿಸಿದರೂ, ಅದೆಷ್ಟೇ ಹಣ ಖರ್ಚು ಮಾಡಿದರೂ ಕೊನೆಗೆ ಜನಸಾಮಾನ್ಯರು ಕಂಡಲ್ಲಿ ಉಗುಳುವುದು, ಕಂಡ ಕಂಡಲ್ಲಿ ಕಸ ಹಾಕುವುದು, ಸ್ವಚ್ಛತೆಯ ಕೆಲಸ ನಮ್ಮದಲ್ಲ ಎಂದು ಭಾವಿಸುವುದು ಮುಂತಾದ ಅಭ್ಯಾಸಗಳನ್ನು ತೊರೆದು ಈ ದೇಶ ನಮ್ಮದು ಮತ್ತು ಇದನ್ನು ಸ್ವಚ್ಛವಾಗಿರಿಸಿಕೊಳ್ಳುವ ಹೊಣೆಗಾರಿಕೆಯೂ ನಮ್ಮದು ಎನ್ನುವ ಮನಃಸ್ಥಿತಿಗೆ ಬರದಿದ್ದರೆ ಎಲ್ಲವೂ ವ್ಯರ್ಥ! ಅದೃಷ್ಟವಶಾತ್ ಕಳೆದ ಕೆಲವು ವರ್ಷಗಳಿಂದ ಆ ವಿಷಯದಲ್ಲಿ ಭಾರತೀಯರ ಮನಃಸ್ಥಿತಿ ಸಾಕಷ್ಟು ಬದಲಾಗಿದೆ ಎನ್ನುವುದು ಅತ್ಯಂತ ಸಂತೋಷದ ವಿಚಾರ.
ಇದೇ ರೀತಿಯ ಇನ್ನೊಂದು ಉದಾಹರಣೆಯನ್ನು ಕೊಡುವುದಾದರೆ ಅದು ದೇಶಭಕ್ತಿ. ದೇಶ ಭಕ್ತಿಯ ವಿಚಾರದಲ್ಲಿ ಕೆಲವೇ ವರ್ಷಗಳಲ್ಲಿ ಭಾರತೀಯರ ಅದರಲ್ಲೂ ಭಾರತೀಯ ಯುವ ಜನತೆಯ ಮನಃಸ್ಥಿತಿ ಸಾಕಷ್ಟು ಬದಲಾಗಿದೆ. ದೇಶಭಕ್ತಿಯ ಒಂದು ಸಿನಿಮಾ ಭಾರತೀಯ ಯುವಜನರನ್ನು ಪರಸ್ಪರ ಬೆಸೆಯುತ್ತದೆ. ಚಿತ್ರಮಂದಿರಗಳಲ್ಲಿ ನಮ್ಮ ರಾಷ್ಟ್ರಗೀತೆ ಮೊಳಗುತ್ತಿದೆ. ರಾಷ್ಟ್ರಗೀತೆ ಮುಗಿಯುತ್ತಲೇ ಯಾರೋ ಒಬ್ಬ ಯುವಕ ತನ್ನ ಶಕ್ತಿ ಮೀರಿ ‘ವಂದೇ ಮಾತರಂ’ ಎನ್ನುವ ಘೋಷಣೆ ಎಂದು ಕೂಗುತ್ತಾನೆ. ಆತ ಯಾರು,ಎಲ್ಲಿ ಕುಳಿತಿದ್ದಾನೆ ಎನ್ನುವುದು ಕೂಡಾ ತಿಳಿದಿರದ ಇತರ ಪ್ರೇಕ್ಷಕರು ಆತನ ದನಿಗೆ ದನಿಗೂಡಿಸಿ ‘ವಂದೇ ಮಾತರಂ’ ಎನ್ನುವ ಘೋಷಣೆ ಕೂಗುತ್ತಾರೆ. ಅಷ್ಟರಲ್ಲಿ ಇನ್ನೊಂದು ಬದಿಯಿಂದ ಮತ್ಯಾರೋ ಒಬ್ಬರು ಭಾರತ್ ಮಾತಾಕ್ ಕೀ… ಎನ್ನುವ ಘೋಷಣೆ ಹೊರಡಿಸುತ್ತಾರೆ. ಆಗ ಬಹುತೇಕ ಪ್ರೇಕ್ಷಕರು ಒಕ್ಕೊರಲಿನಿಂದ ಭಾರತ ಮಾತೆಗೆ ಜೈಕಾರ ಹಾಕುತ್ತಾರೆ!
ಹೀಗೆ ಈ ದೇಶದಲ್ಲಿ ಸಿನಿಮಾ ವೀಕ್ಷಣೆ ಕೂಡಾ ಕೇವಲ ಮನರಂಜನೆಯಷ್ಟೇ ಆಗಿ ಉಳಿದಿಲ್ಲ. ಕಳೆದ ಕೆಲವೇ ವರ್ಷಗಳಿಂದ ಅದೂ ಕೂಡಾ ದೇಶದ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುವ, ತಮ್ಮ ಮನದಾಳದಲ್ಲಿರುವ ದೇಶ ಭಕ್ತಿಯನ್ನು ಮುಕ್ತವಾಗಿ ಪ್ರದರ್ಶಿಸುವ ಆ ಮೂಲಕ ಈ ದೇಶದ ಸಾರ್ವಭೌಮತೆಗೆ,ಈ ದೇಶದ ಭವ್ಯ ಇತಿಹಾಸಕ್ಕೆ, ಈ ದೇಶದ ಹೆಮ್ಮೆಯ ಸೈನಿಕರಿಗೆ, ರೈತರಿಗೆ ಗೌರವ ಸಲ್ಲಿಸುವ ಅವಕಾಶ ಒದಗಿಸುವ ಸುಸಂದರ್ಭವಾಗಿಯೂ ಬಳಕೆಯಲ್ಲಿದೆ. ಹಾಗಾದರೆ ಈ ಹಿಂದೆ ಕೇವಲ ಮನರಂಜನೆಯಾಗಿದ್ದ ಸಿನಿಮಾ ವೀಕ್ಷಣೆಯ ಸಂದರ್ಭವನ್ನು ದೇಶಪ್ರೇಮಿಗಳೆಲ್ಲರೂ ಭಾವನಾತ್ಮಕವಾಗಿ ಒಂದಾಗುವಂತೆ ಬದಲಾಯಿಸಿರುವ ಹಿಂದಿನ ಶಕ್ತಿ ಯಾವುದು? ಯುವ ಜನರ ಮನಸ್ಸಿನಲ್ಲಿ ಇಂಥದ್ದೊಂದು ಬದಲಾವಣೆಯ ಗಾಳಿ ಬೀಸಲು ಕಾರಣವಾದ ಆ ಶಕ್ತಿ ಯಾವುದು?
ಬಹುಷಃ ಈಗ ನಿಮಗೆ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡುವ ಕ್ರಮವನ್ನು ಉಗ್ರವಾಗಿ ವಿರೋಧಿಸಿದವರ ಉದ್ದೇಶವೇನಿತ್ತು ಎನ್ನುವುದು ಅರಿವಾಗಿರಬಹುದಲ್ಲವೇ?
ಉರಿ ಸೇನಾ ನೆಲೆಯ ಮೇಲೆ ಪಾಕೀಸ್ತಾನದ ಭಯೋತ್ಪಾದಕರು ದಾಳಿ ನಡೆಸಿದಾಗ ನಮ್ಮ ದೇಶದ ಹಲವಾರು ಸೈನಿಕರು ಹುತಾತ್ಮರಾಗುತ್ತಾರೆ. ಇದಕ್ಕೆ ಉತ್ತರ ನೀಡಲು ನಮ್ಮ ಯೋಧರು ಗಡಿಯನ್ನು ದಾಟಿ ಜಗತ್ತೇ ಅಚ್ಚರಿಪಡುವಂತೆ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಾರೆ. ಇದಕ್ಕಾಗಿ ಭಾರತೀಯ ಸೇನೆಯ ಸಿದ್ಧತೆ ಹೇಗಿತ್ತು, ದಾಳಿ ವೇಳೆ ಎದುರಾದ ಕಷ್ಟಗಳೇನು ಎಂಬುದನ್ನು ಇಂಚಿಂಚು ಪ್ರೇಕ್ಷಕರ ಎದುರು ತೆರೆದಿಡುವ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಎನ್ನುವ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದೆ.
ಸಾವನ್ನು ಬೆನ್ನಿಗೆ ಕಟ್ಟಿಕೊಂಡು ವೈರಿಗಳ ವಿರುದ್ಧ ಹೋರಾಡುವ ಸೈನಿಕರು, ದೇಶ-ಕುಟುಂಬ ಎರಡನ್ನೂ ಕಾಯಬೇಕು ಎನ್ನುವ ಹಂಬಲದಲ್ಲಿರುವ ಸೈನಿಕನ ಕಥೆ, ಅವರ ಉತ್ಕಟ ದೇಶಭಕ್ತಿಯನ್ನು ಪರಿಚಯಿಸುವ ‘ಉರಿ’ ಸಿನಿಮಾ ಕೂಡಾ ಇದೀಗ ಕೇವಲ ಒಂದು ಸಿನಿಮಾ ಆಗಿ ಗುರುತಿಸಿಕೊಂಡಿಲ್ಲ. ದೇಶದ ಯುವ ಜನರು ಅದೊಂದು ನಮ್ಮ ದೇಶದ ಹೆಮ್ಮೆ ಎಂಬಂತೆ ಸ್ವೀಕರಿಸಿದ್ದಾರೆ. ಅದೇ ಕಾರಣಕ್ಕೆ ಉರಿ ಸಿನಿಮಾವನ್ನು ರಾಷ್ಟ್ರಭಕ್ತ ಯುವಕರು ತಂಡೋಪತಂಡವಾಗಿ ಚಿತ್ರಮಂದಿರಗಳತ್ತ ಧಾವಿಸಿ ಒಟ್ಟಾಗಿ ಕುಳಿತು ವೀಕ್ಷಿಸುತ್ತಿದ್ದಾರೆ. ರಾಷ್ಟ್ರದ ಪರವಾಗಿ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಸ್ವತಃ ಸೈನಿಕರ ಜೊತೆಯೇ ಕುಳಿತು ಸೈನಿಕರ ಕುರಿತಾದ ಈ ಸಿನಿಮಾ ವೀಕ್ಷಿಸುವ,ಸೈನಿಕರ ಅನುಭವಗಳನ್ನು ಖುದ್ದಾಗಿ ಅವರಿಂದಲೇ ಕೇಳುವ,ಸೈನಿಕರನ್ನು ಗೌರವಿಸುವ ಹೊಸ ಪರಿಪಾಠವೊಂದು ಪ್ರಾರಂಭವಾಗಿದೆ. ಭಾರತ ಸ್ಪಂದನ ಮತ್ತು ನಮೋ ಭಾರತ್ ಕಾರ್ಯಕರ್ತರು ನಡೆಸಿದ ಇಂತಹದ್ದೊಂದು ಪ್ರಯತ್ನ ಅತ್ಯಂತ ಪ್ರೇರಣಾದಾಯಿ ಹಾಗೂ ಅನುಕರಣೀಯವಾಗಿದೆ. ಇದೇ ರೀತಿಯ ದೇಶಭಕ್ತ ಮನಸ್ಸುಗಳು ಇದೀಗ ಭಾರತದ ತುಂಬೆಲ್ಲಾ ಹರಡಿವೆ. ಇದೀಗ ಭಾರತೀಯರು ತಮ್ಮ ಭಾರತವನ್ನು ನೋಡುವ ದೃಷ್ಟಿಕೋನ ಸಂಪೂರ್ಣ ಬದಲಾಗಿದೆ.
ಸೈನಿಕರೆಂದರೆ ಕೇವಲ ಅದೊಂದು ಉದ್ಯೋಗ ಎನ್ನುವ ಮನಃಸ್ಥಿತಿ ಇದೀಗ ಇಲ್ಲವಾಗಿದೆ. ಭಾರತೀಯರಲ್ಲಿ, ಅದರಲ್ಲೂ ಭಾರತೀಯ ಯುವ ಜನರಲ್ಲಿ ಹಾಗೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸೈನಿಕರೆಂದರೆ ಅವರು ದೇಶಾಭಿಮಾನದ ಪ್ರತೀಕವಾಗಿ ಬದಲಾಗಿದ್ದಾರೆ. ಸೈನಿಕರನ್ನು, ಮಾಜಿ ಸೈನಿಕರನ್ನು ತಮ್ಮ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಅವರ ಅನುಭವಗಳನ್ನು ಕೇಳುವ ಮೂಲಕ ರೋಮಾಂಚನಗೊಳ್ಳುವ ಪರಿಪಾಠವನ್ನು ಭಾರತೀಯರು ಬೆಳೆಸಿಕೊಳ್ಳುತ್ತಿದ್ದಾರೆ.
ಹಾಗಾದರೆ ಭಾರತೀಯರ ಮನಃ ಸ್ಥಿತಿಯಲ್ಲಿ ಉಂಟಾಗಿರುವ ಇಂಥದ್ದೊಂದು ಸಕಾರಾತ್ಮಕ ಬದಲಾವಣೆಯ ಹಿಂದಿರುವ ಶಕ್ತಿ ಯಾವುದು?
ಹೂ ಈಸ್ ದ ಜೋಷ್?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.