ನಡೆದಾಡುವ ದೇವರ ಅಗಲುವಿಕೆಯಿಂದ ಈ ನಾಡು ಬರಿದಾಗಿದೆ. ಸಂತ ಪರಂಪರೆಯ ಶ್ರೇಷ್ಠ ಕೊಂಡಿಯೊಂದು ಇಹಲೋಕವನ್ನು ಕಳಚಿ ಶಿವನಲ್ಲಿ ಐಕ್ಯಗೊಂಡಿದೆ. 111 ವರ್ಷಗಳ ಸಾರ್ಥಕ ಬದುಕು, ಮನುಕುಲಕ್ಕೆ ಆದರ್ಶ. ಕಾಯಕ ಮತ್ತು ದಾಸೋಹ ಎಂಬ ಬಸವತತ್ವದ ಪ್ರಮುಖ ಆದರ್ಶಗಳನ್ನು ಮುಂದಿಟ್ಟುಕೊಂಡು ಶತಾಯುಷಿಗಳಾಗಿ ಅವರು ಬದುಕಿದ ಮಾದರಿಯೇ ರೋಚಕ. ಧರ್ಮ ಮತ್ತು ಕರ್ಮವನ್ನು ಅರ್ಥವತ್ತಾಗಿ ಅನುಷ್ಠಾನಕ್ಕೆ ತಂದ ಶ್ರೇಷ್ಠರಲ್ಲಿ ಅವರು ಅಗ್ರಗಣ್ಯರು. ಮಾನವೀಯತೆಯ ಸಾಕಾರ ರೂಪ.
ತಮ್ಮ ಮಠದಲ್ಲಿ 500 ಮಕ್ಕಳ ಮೂಲಕ ಶಿಕ್ಷಣವನ್ನು ನೀಡಲು ಅವರು ಆರಂಭಿಸಿದ್ದರು. ಇಂದು ಅವರ ಮಠದಲ್ಲಿ ಓದಿದ 7 ಲಕ್ಷ ಮಕ್ಕಳು ವೈದ್ಯರು, ವಕೀಲರು, ಎಂಜಿನಿಯರ್ಗಳಾಗಿದ್ದಾರೆ. ಬಡವರ ಹಸಿವನ್ನು ನೀಗಿಸಲು ಮತ್ತು ಶಿಕ್ಷಣವನ್ನು ನೀಡಲು ಅವರು ಜೀವನವನ್ನೇ ಸವೆಸಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಎದ್ದು ಶಿವಪೂಜೆಯೊಂದಿಗೆ ಕಾರ್ಯ ಆರಂಭಿಸುತ್ತಿದ್ದ ಅವರು, ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸಿ ತೋರಿಸಿದವರು. ಅನ್ನ ನೀಡುವುದು, ಶಿಕ್ಷಣವನ್ನು ನೀಡುವುದನ್ನು ಅವರು ಎಂದಿಗೂ ದಾನ ಎಂದು ಪರಿಗಣಿಸಿರಲಿಲ್ಲ, ಅವರು ಅದನ್ನು ’ದಾಸೋಹ’ ಅಂದರೆ ಕರ್ತವ್ಯ ಎಂದು ಪರಿಗಣಿಸಿದ್ದರು.
ಸಿದ್ಧಗಂಗಾ ಮಠ ಎಂಬುದು ಆಲದ ಮರವಿದ್ದಂತೆ, ಹಲವಾರು ಮಂದಿಗೆ ಅದು ಆಶ್ರಯ ನೀಡಿದೆ. ಪ್ರತಿವರ್ಷ ಇಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ 9 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಅವರಿಗೆ ಉಚಿತ ಊಟ, ವಸತಿ, ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ. ಇಲ್ಲಿ ಧರ್ಮ, ಮತ, ಜಾತಿಯ ಹಂಗಿಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗೆ ಪ್ರವೇಶಾತಿ ಪಡೆಯಲು ಬಡವನಾಗಿರಬೇಕು ಮತ್ತು ಶಿಕ್ಷಣದ ಹಸಿವಿರಬೇಕು ಅಷ್ಟೇ. ಮಕ್ಕಳೇ ನನ್ನ ದೇವರು ಎಂದು ಆಗಾಗ ಶ್ರೀಗಳು ಹೇಳಿದ್ದೂ ಇದೆ. ಮಾತ್ರವಲ್ಲ, ಕೃಷಿ, ಗೋವು, ರೈತರಿಗೂ ಮಠ ಸಾಕಷ್ಟು ನೆರವುಗಳನ್ನು ನೀಡುತ್ತಿದೆ. ಪ್ರತಿ ವರ್ಷ ಮಠದಲ್ಲಿ ರೈತ ಜಾತ್ರೆಯನ್ನೂ ಆಯೋಜನೆಗೊಳಿಸಲಾಗುತ್ತದೆ.
ರಾಜಕಾರಣಿಗಳು ಪದೇ ಪದೇ ಹೋಗಿ ಅವರ ಕಾಲಿಗೆರಗಿ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ಶ್ರೀಗಳು ಅವರನ್ನು ಆಶೀರ್ವದಿಸಿ ಕಳುಹಿಸುತ್ತಿದ್ದರು. ಆದರೆ ಎಂದಿಗೂ ಅವರು ರಾಜಕೀಯ ಮಾಡಲಿಲ್ಲ, ಪಕ್ಷಗಳ ಪರ ವಿರೋಧ ಹೇಳಿಕೆ ನೀಡಿಲ್ಲ. ಒಂದು ಸಮುದಾಯದ ಪರವಾಗಿ ಲಾಬಿ ನಡೆಸಿಲ್ಲ. ಯಾವೊಂದು ರಾಜಕೀಯ ಒಲವನ್ನು ಲೆಕ್ಕಿಸದೆಯೇ ಪ್ರತಿಯೊಬ್ಬರಿಗೂ ಸಮಾನವಾಗಿ ಆದರಿಸಿದ್ದರು. ಹಲವರಿಗೆ ಸನ್ಯಾಸವೆಂದರೆ ಸಮಾಜದಿಂದ ಅಂತರಕಾಯ್ದುಕೊಳ್ಳುವ ಮಾರ್ಗ, ಆದರೆ ಶ್ರೀಗಳು ಸನ್ಯಾಸತ್ವದೊಂದಿಗೆಯೇ ಸಮಾಜವನ್ನು ಒಟ್ಟಿಗೆ ಮುಂದಕ್ಕೆ ಕೊಂಡೊಯ್ದರು. ಅವರೆಂದಿಗೂ ಕೇವಲ ಧಾರ್ಮಿಕತೆಗೆ ಸೀಮಿತವಾಗಿರಲಿಲ್ಲ, ಅದರಾಚೆಗೂ ಚಿಂತನೆ ಮಾಡಬಲ್ಲವರಾಗಿದ್ದರು. ಹಸಿವು ಮತ್ತು ಜ್ಞಾನದ ಮಹತ್ವ ಸಮಾಜಕ್ಕೆಷ್ಟಿದೆ ಎಂಬುದನ್ನು ಅವರು ಅರಿತುಕೊಂಡವರಾಗಿದ್ದರು. ತನ್ನ ಜೀವನದುದ್ದಕ್ಕೆ ಹಸಿವು ನೀಗಿಸುವುದು, ವಿದ್ಯಾದಾನವೇ ಅತ್ಯಂತ ಮುಖ್ಯ ಎಂದು ಭಾವಿಸಿದ್ದ ಶ್ರೀಗಳು ಬಸವಣ್ಣ ಮತ್ತು ಅವರ ಆದರ್ಶಗಳ ಅನುಯಾಯಿಯಾಗಿದ್ದರು.
111 ವರ್ಷಗಳ ತುಂಬು ಜೀವನ, 88 ವರ್ಷಗಳ ಸನ್ಯಾಸ ಎಂಬುದು ಸುಲಭದ ಮಾತಲ್ಲ. ಕಾಯಕ ಯೋಗಿಯಾಗಿ ಶತಾಯುಷಿಯಾಗಿ ಅವರು ಬದುಕಿದ ರೀತಿ ಎಲ್ಲರಿಗೂ ಮಾದರಿ. ರಾಜಕೀಯ, ಧರ್ಮ, ಜಾತಿಯ ಎಲ್ಲೆಯನ್ನು ಮೀರಿ ನಿಂತು ಕೇವಲ ಮಾನವೀಯತೆ, ಮಾನವ ಸೇವೆಯನ್ನೇ ಉಸಿರಾಗಿಸಿಕೊಂಡದ್ದು ಸಿದ್ಧಗಂಗಾ ಶ್ರೀಗಳ ಶತಾಯುಷ್ಯದ ಗುಟ್ಟು. ಅವರ ಅಗಲುವಿಕೆಯ ಮೂಲಕ ಈ ನಾಡು ಶೋಕಸಾಗರದಲ್ಲಿ ಮುಳುಗಿದೆ. ಆದರೆ ಅವರು ಹಾಕಿಕೊಟ್ಟ ಆದರ್ಶಗಳು ನಮ್ಮ ಮುಂದಿದೆ. ಆ ಆದರ್ಶಗಳನ್ನು ಕೃತಿಯಲ್ಲಿ ಅನುಸರಿಸಿಕೊಂಡು ಹೋಗಬೇಕಾದ ಕರ್ತವ್ಯ ಈ ನಾಡಿನದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.