ನಮ್ಮ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಸಾಕಷ್ಟು ಪತ್ರಿಕೆಗಳು ಹಿಂದಿನಿಂದಲೂ ಇದ್ದುದು ನಿಜವಾದರೂ ಸಾಮಾಜಿಕ ಜಾಲತಾಣಗಳು ಹೆಚ್ಚು ಬಳಕೆಗೆ ಬಂದ ನಂತರ ಅಂತಹಾ ಸುಳ್ಳು ಸುದ್ದಿಗಳು ಹರಡುವ ವೇಗ ಹತ್ತಾರು ಪಟ್ಟು ಹೆಚ್ಚಾಗಿದ್ದಂತೂ ಸುಳ್ಳಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ನಂತರ ಅಂತಹಾ ಸುಳ್ಳು ಸುದ್ದಿಗಳ ಸಂಖ್ಯೆ ಪ್ರತಿ ದಿನವೂ ಗಗನವನ್ನೇ ಚುಂಬಿಸಿ ಬರುತ್ತಿದ್ದವು. ಮೋದಿಯವರ ಬಟ್ಟೆ ಅಷ್ಟು ಕೋಟಿಯದ್ದಂತೆ ಎನ್ನುವ ಒಂದು ಸುಳ್ಳು ಸುದ್ದಿ ಇಡೀ ದೇಶದ ತುಂಬಾ ಹರಡುತ್ತಿದ್ದಂತೆಯೇ ಅವರು ದಿನವೂ ಲಕ್ಷಾಂತರ ರೂಪಾಯಿಯ ಅಣಬೆ ತಿನ್ನುತ್ತಾರಂತೆ ಎನ್ನುವ ಇನ್ನೊಂದು ಸುಳ್ಳು ಸುದ್ದಿ ಅದರ ಹಿಂದೆಯೇ ಹರಿದುಬರುತ್ತಿತ್ತು. ಅದೇ ರೀತಿ ಅವರ ಸಂಪುಟ ಸಹೋದ್ಯೋಗಿಗಳ ಬಗ್ಗೆಯೂ,ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆಯೂ ಸಾಕಷ್ಟು ಸುಳ್ಳು ಸುದ್ದಿಗಳನ್ನು ಪ್ರತಿ ದಿನವೂ ಹರಿಯಬಿಡಲಾಗುತ್ತಿತ್ತು. ಹಾಗೆಯೇ ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳ ಸರ್ಕಾರಗಳ ನಡೆಗಳ ಬಗ್ಗೆಯೂ,ಅಲ್ಲಿನ ನಾಯಕರ ವೈಯುಕ್ತಿಕ ವಿಚಾರಗಳ ಬಗ್ಗೆಯೂ ಸುಳ್ಳು ಸುದ್ದಿಗಳ ಮಹಾಪೂರವನ್ನೇ ಸೃಷ್ಟಿಸಿ ದೇಶದ ಉದ್ದಗಲಕ್ಕೂ ಹರಿಯಬಿಡಲಾಗುತ್ತಿತ್ತು. ಯಾವುದೋ ಬ್ಯಾಂಕ್ ಕ್ಯಾಶಿಯರ್ ಒಬ್ಬರ ಫೋಟೋ ತೋರಿಸಿ, ಬಿಜೆಪಿ ಆಡಳಿತವಿರುವ ಉತ್ತರಭಾರತದ ಯಾವುದೋ ರಾಜ್ಯದ ಯಾವುದೋ ಸಚಿವನ ಮಗಳು ನೋಟ್ ಬ್ಯಾನ್ ಸಮಯದಲ್ಲೇ ಕೋಟಿ ಕೋಟಿ ಮೌಲ್ಯದ ಹೊಸಾ ನೋಟುಗಳನ್ನು ಪಡೆದಿದ್ದಾಳೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸಿ ನೋಟ್ ಬ್ಯಾನ್ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರಯತ್ನಿಸಲಾಗಿತ್ತು. ಯಾವುದೋ ಒಂದು ಅಶ್ಲೀಲ ಚಿತ್ರವನ್ನು ತೋರಿಸಿ, ಆ ಚಿತ್ರದಲ್ಲಿರುವ ವ್ಯಕ್ತಿಯು ಉತ್ತರ ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯೆಂದು ಬಿಂಬಿಸಿ ಆ ಮೂಲಕ ರಾಜ್ಯವೊಂದರ ಮುಖ್ಯಮಂತ್ರಿಯೊಬ್ಬರ ಹೆಸರಿಗೆ ಮಸಿ ಬಳಿಯುವ ಸುಳ್ಳು ಸುದ್ದಿಯನ್ನು ವೈರಲ್ ಮಾಡಲಾಯಿತು. ಆದರೆ ಅದೆಲ್ಲವನ್ನೂ ರಾಜಕೀಯ ವಿರೋಧಿಗಳ ಒಂದು ಕಾರ್ಯತಂತ್ರವೆಂದು ಸಹಜಬವಾಗಿಯೇ ತೆಗೆದುಕೊಂಡಿದ್ದ ಕೇಂದ್ರ ಸರ್ಕಾರಕ್ಕೆ ಯಾವಾಗ ಅಂತಹಾ ಸುಳ್ಳು ಸುದ್ದಿಗಳು ಈ ದೇಶದ ಆಂತರಿಕ ಭದ್ರತೆಗೇ ಅಪಾಯವೊಡ್ಡುವ ಹಂತಕ್ಕೆ ಹೋದವೋ ಆಗ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ಸಲುವಾಗಿ ಹೊಸಾ ನಿಯಮವೊಂದನ್ನು ತರಲು ಮಾಹಿತಿ ಹಾಗೂ ಪ್ರಸಾರ ಸಚಿವೆ ಸ್ಮತಿ ಇರಾನಿ ಮುಂದಾದರು. ಕೆಲವೇ ಸಮಯದಲ್ಲಿ ಆ ಬಗ್ಗೆ ಪ್ರಧಾನಮಂತ್ರಿಗಳ ಕಾರ್ಯಾಲಯ ನಿರ್ದೇಶನವೊಂದನ್ನು ಹೊರಡಿಸಿತು. ಆದರೆ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ತನ್ನ ಕೆಲ ಮಾಧ್ಯಮ ಮಿತ್ರರೊಡಗೂಡಿ ಸುಳ್ಳು ಸುದ್ದಿಗಳಿಗೆ ನಿಯಂತ್ರಣ ಹೇರುವ ಆ ಹೊಸ ನಿಯಮವನ್ನು ಉಗ್ರವಾಗಿ ವಿರೋಧಿಸಿತು. ಇಂತಹಾ ನಿಯಮಗಳನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಹೊರಟಿದೆ ಎಂದು ಸಿಪಿಎಂ ಮುಂತಾದ ಪಕ್ಷಗಳ ಜೊತೆ ಸೇರಿ ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆದರು. ದೇಶದ ಮಾಧ್ಯಮಗಳ ಮೇಲೆ ತುರ್ತು ಪರಿಸ್ಥಿತಿ ಹೇರಲಾಗುತ್ತಿದೆ ಎಂದು ಅವರನ್ನು ಆ ಹೊಸ ನೀತಿಯ ವಿರುದ್ಧ ಎತ್ತಿಕಟ್ಟಿದರು. ಪ್ರತಿಭಟನೆಯ ತೀವ್ರತೆಯನ್ನರಿತ ಪ್ರಧಾನಿ ಕಾರ್ಯಾಲಯ ಆ ಹೊಸ ನಿಯಮವನ್ನು ಜಾರಿಗೆ ತರುವುದರಿಂದ ಹಿಂದೆ ಸರಿದಿತ್ತು. ಆಗ ಕಾಂಗ್ರೆಸ್ ಪಕ್ಷ ಅದೊಂದು ತನ್ನ ಹೋರಾಟಕ್ಕೆ ಸಿಕ್ಕ ದೊಡ್ಡ ಜಯ ಎಂದು ಸಂಭ್ರಮಿಸಿತ್ತು.
ಆದರೆ ಅದಾಗಿ ಒಂದು ವರ್ಷ ಕಳೆಯುವುದರೊಳಗಾಗಿ ಸುಳ್ಳು ಸುದ್ದಿಗಳನ್ನು ಹರಡಲು ತನಗೆ ಅನುಕೂಲವಾಗಲಿ ಎಂದು ಸುಳ್ಳು ಸುದ್ದಿಗಳ ನಿಯಂತ್ರಣಕ್ಕಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಮಾಡಿ ಗೆಲುವಿನ ನಗೆ ಬೀರಿದ್ದ ಕಾಂಗ್ರೆಸ್ ಪಕ್ಷ ತಾನೇ ತೋಡಿದ ಹಳ್ಳದೊಳಗೆ ಬಿದ್ದು ನರಳಾಡುತ್ತಿದೆ. ಮೊನ್ನೆ ತಾನೇ ದುಬೈ ಪ್ರವಾಸದಲ್ಲಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು “14 ವರ್ಷದ ಬಾಲಕಿಯೊಬ್ಬಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕಾರ್ಯಕ್ರಮದ ನೇರ ಪ್ರಸಾರವನ್ನೇ ಸ್ಥಗಿತಗೊಳಿಸಲಾಗಿತ್ತು” ಎನ್ನುವ ಸುದ್ದಿಯೊಂದು ಇದೀಗ ದೇಶದಾದ್ಯಂತ ವೈರಲ್ ಆಗಿದೆ. ನೂರಾರು ವೆಬ್ ಸೈಟ್ ಗಳು,ಪತ್ರಿಕೆಗಳು ಆ ಸುದ್ದಿಯನ್ನು ಹಂಚಿಕೊಂಡಿವೆ. ಆ ಸುದ್ದಿಯನ್ನೋದಿದ ಕೋಟ್ಯಂತರ ಭಾರತೀಯರ ಕಣ್ಣಲ್ಲಿ ಕಾಂಗ್ರೆಸ್ ಅಧ್ಯಕ್ಷರು ನಗೆಪಾಟಲಿಗೀಡಾಗಿದ್ದಾರೆ. ಇದರಿಂದ ಕಂಗಾಲಾಗಿರುವ ಕಾಂಗ್ರೆಸ್ ಪಕ್ಷ, ಅದೊಂದು ಸುಳ್ಳು ಸುದ್ದಿಯೆಂದು ದೇಶದ ಜನರಿಗೆ ವಿವರಿಸಲು ಹರಸಾಹಸ ಪಡುತ್ತಿದೆ. ಆದರೆ ಕಾಲ ಮಿಂಚಿಹೋಗಿದೆ. ಸುಳ್ಳು ಸುದ್ದಿಗಳನ್ನು ಹರಡುವುದರಿಂದಲೇ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರದೊಂದಿಗೆ ಯಾವಾಗ ಸುಳ್ಳು ಸುದ್ದಿ ನಿಯಂತ್ರಣ ಕಾನೂನನ್ನು ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸಿತ್ತೋ ಆಗಲೇ ಅದು ವಿಷಸರ್ಪದ ಹೆಡೆಯನ್ನು ನೇವರಿಸುತ್ತಿದ್ದೇನೆ,ಒಂದಲ್ಲಾ ಒಂದು ದಿನ ಅದು ನನಗೂ ಕಚ್ಚಬಹುದು ಎನ್ನುವ ಅರಿವು ಹೊಂದಿರಬೇಕಿತ್ತು.
ಈಗೇನಿದ್ದರೂ ಮಾಡಿದ್ದುಣ್ಣೋ ಮಹಾರಾಯ ಎನ್ನಬಹುದಷ್ಟೇ….
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.