ಕಮ್ಯುನಿಸ್ಟ್ ಸಂಘಟನೆಗಳು ಕರೆಕೊಟ್ಟ ಬಂದ್ ಒಬ್ಬ ಅಮಾಯಕ ಅಂಗನವಾಡಿ ಸಹಾಯಕಿಯೊಬ್ಬರ ಸಾವಿಗೆ ಕಾರಣವಾಗಿದೆ. ಉತ್ತರ ಕನ್ನಡದ ಮುಂಡಗೋಡದಲ್ಲಿ ನಡೆಯುತ್ತಿದ್ದ ಬಂದ್ನ ಪ್ರತಿಭಟನಾ ಮೆರವಣಿಗೆಯ ವೇಳೆ ಅಂಗನವಾಡಿ ಕಾರ್ಯಕರ್ತೆ ಶಾಂತವ್ವ ಎನ್ನುವ ಮಹಿಳೆ ಮೃತಪಟ್ಟಿದ್ದಾಳೆ. ಪ್ರತಿಭಟನೆಗೆ ಕಡ್ಡಾಯವಾಗಿ ಬರಲೇ ಬೇಕೆನ್ನುವ ಆಜ್ಞೆ ಹೊರಡಿಸಿದ ಪರಿಣಾಮ ಅನಾರೋಗ್ಯ ಪೀಡಿತವಾಗಿದ್ದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪರಿಣಾಮದಿಂದಲೇ ಆಕೆ ಮೃತಪಟ್ಟಿರುವುದಾಗಿ ಸ್ಥಳೀಯರಿಂದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಹಾಗೆ ನೋಡಿದರೆ ಕಮ್ಯುನಿಸ್ಟರು ಅಂಗನವಾಡಿ ಕಾರ್ಯಕರ್ತರನ್ನು ತಮ್ಮ ಪ್ರತಿಭಟನೆಗೆ ಬಳಸಿಕೊಳ್ಳುತ್ತಿರುವುದು ಇದೇ ಹೊಸದೇನೂ ಅಲ್ಲ. ಕಮ್ಯುನಿಸ್ಟ್ ಪ್ರೇರಿತ ಯಾವುದೇ ಪ್ರತಿಭಟನೆಗಳು ನಡೆದರೂ ಆ ಪ್ರತಿಭಟನೆಗಳಿಗೆ ಅಂಗನವಾಡಿ ಕಾರ್ಯಕರ್ತರೇ ಬೆನ್ನೆಲುಬು. ಹಾಗೆ ಅವರನ್ನು ಬಳಸಿಕೊಳ್ಳುವುದಕ್ಕಾಗಿಯೇ ಕಮ್ಯುನಿಸ್ಟ್ ಸಂಘಟನೆಗಳು ತಮ್ಮ ಬೇಡಿಕೆಗಳ ಜೊತೆಗೆ ಬಹುತೇಕ ಪ್ರತಿ ಬಾರಿಯೂ ಅಂಗನವಾಡಿ ಕಾರ್ಯಕರ್ತರ ಒಂದಾದರೂ ಸಮಸ್ಯೆಯನ್ನು ಆ ಪಟ್ಟಿಗೆ ಸೇರಿಸಿಕೊಂಡಿರುತ್ತಾರೆ. ಕಮ್ಯುನಿಸ್ಟ್ ಸಂಘಟನೆಗಳು ಅಂಗನವಾಡಿ ಕಾರ್ಯಕರ್ತರನ್ನೇ ತಮ್ಮ ಹೋರಾಟಗಳಿಗೆ ಬಳಸಿಕೊಳ್ಳುವುದರ ಹಿಂದೆ ಸಾಕಷ್ಟು ಕಾರಣಗಳೂ ಇವೆ. ಈ ದಿನಗಳಲ್ಲಿ ಸಾವಿರಾರು ಜನರನ್ನು ಸೇರಿಸಿ ಒಂದು ಪ್ರತಿಭಟನೆ ಮಾಡಿ ಯಶಸ್ವಿಗೊಳಿಸುವುದು ಅಷ್ಟು ಸುಲಭದ ಕೆಲಸವೇನೂ ಅಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಬಹುತೇಕ ಎಲ್ಲಾ ಊರುಗಳಲ್ಲೂ ಇದ್ದಾರೆ. ಅವರ ಒಂದು ಒಕ್ಕೂಟ ಬೆಂಬಲಿಸಿತೆಂದರೆ ಪ್ರತಿಭಟನೆಗೆ ಸಾವಿರಾರು ಜನರನ್ನು ಸೇರಿಸಿದಂತಾಗುತ್ತದೆ. ಒಂದೇ ಬಣ್ಣದ ಸೀರೆಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅವರನ್ನು ಸಾಲಾಗಿ ನಡೆಸಿಬಿಟ್ಟರೆ ಪ್ರತಿಭಟನೆ ಭಾರೀ ಯಶಸ್ವಿಯಾದಂತೆ ಗೋಚರವಾಗುತ್ತದೆ. ಆಗ ಮಂತ್ರಿಗಳು ಅವರ ಮುಖಂಡರನ್ನು ಮಾತುಕತೆಗೆ ಒಳಕ್ಕೆ ಕರೆಯುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಇನ್ನು ಅಂಗನವಾಡಿ ಕಾರ್ಯಕರ್ತೆಯರು ಬಹುತೇಕ ಬಡ ಮಹಿಳೆಯರೇ ಆಗಿರುವುದರಿಂದ ಅವರಲ್ಲಿ ಬಹುತೇಕರಿಗೆ ದೇಶದ ರಾಜಕೀಯ ಜ್ಞಾನ ಅಷ್ಟಾಗಿ ಇರುವುದಿಲ್ಲ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ಕಮ್ಯುನಿಸ್ಟ್ ಸಂಘಟನೆಗಳು ಹಲವಾರು ತಪ್ಪು ಮಾಹಿತಿಗಳನ್ನು ನೀಡಿ ಅವರನ್ನು ಹೋರಾಟಕ್ಕೆ ಅಣಿಗೊಳಿಸಿ ನಗರಗಳೆಡೆಗೆ ಕರೆತರುವಲ್ಲಿ ಯಶಸ್ವಿಯಾಗುತ್ತವೆ.
ಹಾಗೆಯೇ ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಬಡತನದಲ್ಲಿರುವವರೇ ಆಗಿರುವುದರಿಂದ ಪ್ರತಿಭಟನೆಗಳಿಗೆ ಅವರನ್ನು ಕರೆತರಲು ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಸಾಮಾನ್ಯ ರೈಲುಗಳ ಬೋಗಿಗಳಲ್ಲಿ ಸಾವಿರಾರು ಮಂದಿ ಕುಳಿತೋ, ನಿಂತೋ, ಸೀಟಿನಡಿಯಲ್ಲಿ ಮಲಗಿಯೋ ಪ್ರಯಾಣಿಸಿ ಪ್ರತಿಭಟನಾ ಸ್ಥಳಕ್ಕೆ ಬಂದು ಸೇರುತ್ತಾರೆ. ಅಷ್ಟೇ ಅಲ್ಲದೆ ನಗರಗಳಲ್ಲೂ ಅವರುಗಳಿಗೆ ಉಳಿದುಕೊಳ್ಳಲು ವಸತಿಗೃಹಗಳ ಏರ್ಪಾಡು ಮಾಡಬೇಕಿಲ್ಲ.ರೈಲು ನಿಲ್ದಾಣಗಳಲ್ಲೋ, ಬಸ್ ನಿಲ್ದಾಣಗಳಲ್ಲೋ, ಪಾರ್ಕುಗಳಲ್ಲೋ, ರಸ್ತೆ ಬದಿಯಲ್ಲೋ ಮಲಗಿ ಅಲ್ಲಿಂದಲೇ ಎದ್ದು ಪ್ರತಿಭಟನೆಗೆ ಆಗಮಿಸುತ್ತಾರೆ. ಎಷ್ಟೋ ಬಾರಿ ಕೇವಲ ನಗರಗಳಿಗೆ ಹೋಗುವ ಅವಕಾಶ ದೊರೆಯುತ್ತದೆಯೆನ್ನುವ ಖುಷಿಗಾಗಿ ಅವರು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಒಪ್ಪಿಕೊಳ್ಳುವುದೂ ಇದೆ. ಏಕೆ ಪ್ರತಿಭಟನೆ ನಡೆಸುತ್ತಿದ್ದೇವೆ ಎನ್ನುವುದು ಕೂಡಾ ಅವರಲ್ಲಿ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ ಮತ್ತು ಅದನ್ನು ಅವರು ತಮ್ಮನ್ನು ಕರೆಯುವ ಕಮ್ಯುನಿಸ್ಟ್ ನಾಯಕರುಗಳಲ್ಲಿ ಕೇಳುವುದೂ ಇಲ್ಲ.
ಇದೆಲ್ಲಾ ಲಾಭಗಳನ್ನು ಬಳಸಿಕೊಂಡು ಕಮ್ಯುನಿಸ್ಟ್ ಸಂಘಟನೆಗಳು ಅಂಗನವಾಡಿ ಕಾರ್ಯಕರ್ತೆಯರನ್ನು ನಿರಂತರವಾಗಿ ಶೋಷಿಸುತ್ತಾ ಬಂದಿವೆ. ಅವರ ಸ್ವಾರ್ಥಕ್ಕೆ ಇದೀಗ ಅಮಾಯಕ ಜೀವವೊಂದು ಬಲಿಯಾಗಿದೆ.
ಹಾಗಾದರೆ ನಿಜಕ್ಕೂ ಈ ಸಾವಿಗೆ ಯಾರನ್ನು ಹೊಣೆ ಮಾಡಬೇಕು? ಭಾರತ್ ಬಂದ್ಗೆ ಕರೆ ಕೊಟ್ಟ ಕಮ್ಯುನಿಸ್ಟ್ ಸಂಘಟನೆಗಳನ್ನೋ, ಆ ಸಂಘಟನೆಗಳ ಬೆನ್ನ ಹಿಂದಿರುವ ಕಮ್ಯುನಿಸ್ಟ್ ಪಕ್ಷಗಳನ್ನೋ, ಬಂದ್ ನಡೆಸಲು ಪರೋಕ್ಷ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷವನ್ನೋ ಅಥವಾ ಎಲ್ಲವೂ ತಿಳಿದಿದ್ದರೂ ಅಸಹಾಯಕರಾಗಿ ಕುಳಿತು ಮುಲಾಜಿನಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರವನ್ನೋ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.