ಸಾಮಾನ್ಯ ವರ್ಗಕ್ಕೆ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ಕಲ್ಪಿಸುವ ಮಸೂದೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪರಿಚಯಿಸಿದೆ. ನಿಜಕ್ಕೂ ಇದೊಂದು ಐತಿಹಾಸಿಕ ನಿರ್ಧಾರ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಒದಗಿಸುವ ಕಾರ್ಯ. 1991ರಲ್ಲೇ ನರಸಿಂಹ ರಾವ್ ಸರ್ಕಾರ ಮೇಲ್ವರ್ಗದ ಮೀಸಲಾತಿಯನ್ನು ಮೊದಲ ಬಾರಿಗೆ ಪರಿಚಯಿಸಿತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪು ಸೇರಿದಂತೆ ಇತರ ಅಡೆತಡೆಗಳಿಂದಾಗಿ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪರಿಶಿಷ್ಟ ಪಂಗಡ ಮತ್ತು ಪರಿಶೀಷ್ಟ ವರ್ಗಕ್ಕೆ ಮೀಸಲಾತಿ ನೀಡುವ ನಿರ್ಧಾರ ಸ್ವಾತಂತ್ರ್ಯ ಪೂರ್ವದಲ್ಲಿ ಬಂದಿತ್ತು. 1990ರ ಆರಂಭದಲ್ಲಿ ಮೀಸಲಾತಿಯನ್ನು ಉದ್ಯೋಗ ಕ್ಷೇತ್ರದಲ್ಲಿ ಇತರ ಹಿಂದುಳಿದ ವರ್ಗಕ್ಕೂ ವಿಸ್ತರಣೆಗೊಳಿಸಲಾಯಿತು. 2006ರಲ್ಲಿ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತರಿಸಲಾಯಿತು.
ಮೀಸಲಾತಿ ವ್ಯವಸ್ಥೆ ಮೇಲ್ವರ್ಗದ ಬಡ ಜನರನ್ನು ನಿರ್ಲಕ್ಷ್ಯ ಮಾಡಿತ್ತು. ನೈಸರ್ಗಿಕ ನ್ಯಾಯಕ್ಕಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯದತ್ತ ಈ ಮೀಸಲಾತಿಗಳು ಹೆಚ್ಚು ಒಲವು ಹೊಂದಿದ್ದವು. ಮೇಲ್ವರ್ಗದಲ್ಲಿನ ಬಡ ಜನರಲ್ಲಿ ಅನ್ಯಾಯಕ್ಕೊಳಗಾದ ಭಾವವನ್ನು ಈ ಮೀಸಲಾತಿ ವ್ಯವಸ್ಥೆ ಸೃಷ್ಟಿಸಿತು. ಇದರಿಂದ ಮೀಸಲಾತಿ ಮತ್ತು ಮೀಸಲಾತಿ ಇಲ್ಲದ ಸಮುದಾಯದ ನಡುವಣ ಅಂತರವೂ ದೊಡ್ಡದಾಯಿತು. ಒಂದು ನಿರ್ದಿಷ್ಟ ಜಾತಿಯಲ್ಲಿ ಜನಿಸಿದ್ದೇವೆ ಎಂಬ ಕಾರಣಕ್ಕೆ ತಾರತಮ್ಯಕ್ಕೆ ಒಳಗಾಗಿದ್ದೇವೆ ಎಂಬ ಭಾವ ಸಮಾಜದಲ್ಲಿ ಅಸ್ಥಿರತೆಯನ್ನೇ ಸೃಷ್ಟಿಸಿದೆ. ಉದಾಹರಣೆಗೆ, ಇಬ್ಬರು ಸ್ನೇಹಿತರು ಸಮಾನವಾದ ಆರ್ಥಿಕ ಸ್ಥಿತಿಯಿಂದ ಬಂದವರು, ಉದ್ಯೋಗಕ್ಕಾಗಿ ಒಂದೇ ಪ್ರವೇಶ ಪರೀಕ್ಷೆಯನ್ನು ಬರೆಯುತ್ತಾರೆ ಮತ್ತು ಒಂದೇ ರೀತಿಯ ಅಂಕ ಗಳಿಸುತ್ತಾರೆ. ಆದರೆ ಒಬ್ಬ ತುಳಿತಕ್ಕೊಳಗಾದ ಜಾತಿಯ ಕಾರಣಕ್ಕೆ ಮೀಸಲಾತಿ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾನೆ, ಆದರೆ ಮತ್ತೋರ್ವ ಅವಕಾಶ ವಂಚಿತನಾಗುತ್ತಾನೆ. ಈ ಪರಿಸ್ಥಿತಿ ವಂಚಿತನ ಮನಸ್ಸಲ್ಲಿ ಅಸಮಾಧಾನ ಭುಗಿಲೇಳುವುದು ಸರ್ವೇ ಸಾಮಾನ್ಯ.
ಮನಮೋಹನ್ ಸಿಂಗ್ ಸರ್ಕಾರ ಇತರ ಹಿಂದುಳಿದ ವರ್ಗಕ್ಕೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ವಿಸ್ತರಿಸಿದ ಸಂದರ್ಭದಲ್ಲಿ, 2006ರ ಮೇನಲ್ಲಿ ಫ್ರೆಂಚ್ ಪತ್ರಕರ್ತ ಫ್ರಾಂಕೋಯಿಸ್ ಗೌಟಿರ್ ಅವರು ‘ಆರ್ ಬ್ರಾಹ್ಮೀಣ್ಸ್ ದಿ ದಲಿತ್ಸ್ ಆಫ್ ಟುಡೇ?’ ಎಂಬ ಲೇಖನವನ್ನು ಬರೆದರು. ಇದರಲ್ಲಿ ಅವರು, ದೇಶದ ಮೇಲ್ವರ್ಗ ಎಂದು ಕರೆಸಿಕೊಳ್ಳುವ ಬ್ರಾಹ್ಮಣರ ಆರ್ಥಿಕ ಸ್ಥಿತಿಗತಿಯ ಬಗ್ಗೆ ವಿವರಿಸಿದ್ದರು. ’ಇತರ ಹಿಂದುಳಿದ ವರ್ಗದ ಖೋಟಾವನ್ನು ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಶೇ 49.5 ರಷ್ಟು ಹೆಚ್ಚಳಗೊಳಿಸಲು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರದ ಈ ಸಂದರ್ಭದಲ್ಲಿ, ಮೇಲ್ವರ್ಗದ ಕುಂದುಕೊರತೆಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ’ ಎಂದು ಗೌಟಿರ್ ಬರೆದಿದ್ದರು.
ಅಷ್ಟೇ ಅಲ್ಲದೇ, ಮ್ಯಾನ್ಹೋಲ್ ಸ್ವಚ್ಛತೆಯನ್ನು ಕೇವಲ ಕೆಳವರ್ಗದವರು ಮಾಡುತ್ತಾರೆ ಎಂಬ ವಾದವನ್ನೂ ನಿರಾಕರಿಸಿದ್ದರು. ‘ದೆಹಲಿಯಲ್ಲಿ 50 ಸುಲಭ ಶೌಚಾಲಯಗಳಿವೆ, ಇವೆಲ್ಲವುಗಳನ್ನು ಬ್ರಾಹ್ಮಣರು ನೋಡಿಕೊಳ್ಳುತ್ತಾರೆ ಮತ್ತು ಸ್ವಚ್ಛ ಮಾಡುತ್ತಾರೆ. ಪ್ರತಿ ಶೌಚಾಲಯಗಳನ್ನು ಐದರಿಂದ ಆರು ಬ್ರಾಹ್ಮಣರು ನಿರ್ವಹಿಸುತ್ತಿದ್ದಾರೆ. ಉತ್ತರಪ್ರದೇಶ ಮತ್ತು ಬಿಹಾರದ ಹಲವು ಗ್ರಾಮಗಳಲ್ಲಿ ದಲಿತ ಸಂಘಟನೆಗಳಿವೆ. ಅವುಗಳು ಅವರಿಗೆ ಗ್ರಾಮದಲ್ಲಿ ಉದ್ಯೋಗ ಸಿಗುವಂತೆ ನೋಡಿಕೊಳ್ಳುತ್ತಿವೆ’ ಎಂದಿದ್ದರು.
ದೆಹಲಿಯ ಪಟೇಲ್ ನಗರದಲ್ಲಿ ರಿಕ್ಷಾ ಎಳೆಯುವವರ ಸಂಖ್ಯೆಯಲ್ಲಿ ಶೇ. 50 ರಷ್ಟು ಬ್ರಾಹ್ಮಣರು ಇದ್ದಾರೆ ಎಂದು ಗುಟೆರ್ ಅವರ ಅಧ್ಯಯನ ತಿಳಿಸಿದೆ. ವಾರಣಾಸಿಯಲ್ಲೂ ಇಷ್ಟೇ ಪ್ರಮಾಣದಲ್ಲಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಬ್ರಾಹ್ಮಣರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಆಂಧ್ರದ ಮನೆ ಮನೆಯಲ್ಲಿ ಅಡುಗೆ ಮಾಡುವ ಕೆಲಸದಾಳುಗಳ ಪೈಕಿ ಶೇ.70 ರಷ್ಟು ಬ್ರಾಹ್ಮಣರು. ಜೆ. ರಾಧಕೃಷ್ಣ ಅವರು ಹೊರತಂದಿರುವ ಬ್ರಾಹ್ಮಿಣ್ಸ್ ಆಫ್ ಇಂಡಿಯಾ ಪುಸ್ತಕವು, ಆಂಧ್ರದ ಜಿಲ್ಲೆಗಳಲ್ಲಿನ ಪೋರೋಹಿತ ಬ್ರಾಹ್ಮಣರು ಬಡತನ ರೇಖೆಗಿಂತ ಕೆಳಗೆ ಇದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಗುಟೆರ್ ಹೇಳುತ್ತಾರೆ. ತಮಿಳುನಾಡು ಸರ್ಕಾರ ಕೆಳ ವರ್ಗದ ಮೀಸಲಾತಿಯನ್ನು ಶೇ. 69 ರಷ್ಟು ವಿಸ್ತರಿಸಿದೆ. ಅಲ್ಲಿ ಕೇವಲ ಶೇ. 31 ರಷ್ಟು ಉದ್ಯೋಗ ಸಾಮಾನ್ಯ ವರ್ಗಕ್ಕೆ ಮೀಸಲು.
ಇನ್ನು ಕರ್ನಾಟಕದಲ್ಲಿ 2006ರಲ್ಲಿ ಎಸ್ಟಿ ವರ್ಗಗಳ ತಲಾ ಆದಾಯ 577 ರೂಪಾಯಿ, ಎಸ್ಸಿ ವರ್ಗದ ತಲಾ ಆದಾಯ 680 ರೂಪಾಯಿ, ಮುಸ್ಲಿಮರ ತಲಾ ಆದಾತ 794 ರೂಪಾಯಿ, ಒಕ್ಕಲಿಗರ ತಲಾ ಆದಾಯ 914 ಮತ್ತು ಕ್ರಿಶ್ಚಿಯನ್ನರ ತಲಾ ಆದಾಯ 1,562 ರೂಪಾಯಿ ಇತ್ತು. ಆದರೆ ಬ್ರಾಹ್ಮಣರ ತಲಾ ಆದಾಯ 537 ರೂಪಾಯಿ ಇತ್ತು. ಅಂದರೆ, ಮೇಲ್ವರ್ಗ ಎಂದು ಕರೆಸಿಕೊಳ್ಳುವ ಒಂದು ಸಮುದಾಯ ಆರ್ಥಿಕವಾಗಿ ದಲಿತರಿಂದ, ಮುಸ್ಲಿಮರಿಂದ, ಕ್ರಿಶ್ಚಿಯನ್ನರಿಂದ ಹಿಂದುಳಿದಿತ್ತು. ದೇಶದ ಸಮಾಜಶಾಸ್ತ್ರಜ್ಞರು OBC ಮೀಸಲಾತಿಯನ್ನು ವಿರೋಧಿಸಿದ್ದರು. ಯುಪಿ ಸರ್ಕಾರ ಒಬಿಸಿ ಮೀಸಲಾತಿಯನ್ನು ವಿಸ್ತರಿಸಿದ ವೇಳೆ, ಆಂಡ್ರೆ ಬೆಟೆಲ್ಲೆ ಮತ್ತು ಪ್ರತಾಪ್ ಭಾನು ಮೆಹ್ತಾ ಎಂಬ ಇಬ್ಬರು ಶೈಕ್ಷಣಿಕ ತಜ್ಞರು ನ್ಯಾಷನಲ್ ನಾಲೆಡ್ಜ್ ಕಮಿಷನ್ಗೆ ರಾಜೀನಾಮೆ ನೀಡಿ ಹೊರ ನಡೆದಿದ್ದರು. ಭಾರತದ ಜಾತಿಪದ್ಧತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಸಮಾಜಶಾಸ್ತ್ರಜ್ಞರು ಮೀಸಲಾತಿ ವಿಸ್ತರಣೆಯನ್ನು ವಿರೋಧಿಸುತ್ತಲೇ ಬಂದಿದ್ದಾರೆ.
ಪ್ರಸ್ತುತ ಮೋದಿ ಸರ್ಕಾರ ಪರಿಚಯಿಸಿರುವ ಸಾಮಾನ್ಯ ವರ್ಗಕ್ಕೂ ಮೀಸಲಾತಿ, ಜಾತಿಯ ಹೆಸರಲ್ಲಿ ಅವಕಾಶದಿಂದ ವಂಚಿತರಾಗುತ್ತಿದ್ದ ಎಷ್ಟೋ ಪ್ರತಿಭಾವಂತರಿಗೆ ಅವಕಾಶದ ಬಾಗಿಲನ್ನು ತೆರೆಯಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.