ಇದು 2018ರ ಬಹುನಿರೀಕ್ಷಿತ ಚಿತ್ರ. ಆದರೆ ಹಲವು ತಿಂಗಳುಗಳ ಹಿಂದೆ ಇದೊಂದು ಸಾಮಾನ್ಯ ಚಿತ್ರ. ಯಶ್ ಅವರ ಮತ್ತೊಂದು ಚಿತ್ರ. ಆದರೆ ಆ ಚಿತ್ರದ ನಿರ್ದೇಶಕ, ಛಾಯಾಗ್ರಾಹಕ ಹಾಗೂ ಸಂಗೀತ ನಿರ್ದೇಶಕರ ಹಿಂದಿನ ಸಿನಿಮಾದ (ಉಗ್ರಂ) ಯಶಸ್ಸು ಹಾಗೂ ತಾಂತ್ರಿಕತೆ ಈ ಚಿತ್ರದ ಮೇಲೂ ಒಂದು ನಿಗಾ ಇಟ್ಟು ಕಾಯುವಂತೆ ಮಾಡಿತ್ತು. ಆದರೆ ಕೆಲವೇ ಕೆಲವು ವಾರಗಳ ಹಿಂದೆ ಬಂದ ಟ್ರೈಲರ್, ಇದು ಸಾಮಾನ್ಯ ಚಿತ್ರವಲ್ಲ ಎಂದು ಸಾರಿ ಹೇಳಿತು. ಅಲ್ಲದೇ ಯಾವಾಗ ಬಿಡುಗಡೆಯಾದೀತೋ ಎಂಬ ಕಾತರತೆ ಪ್ರತಿಯೊಬ್ಬರಲ್ಲೂ ಮೂಡುವಂತೆ ಮಾಡಿತು. ಅಲ್ಲದೇ ಪ್ರಪ್ರಥಮ ಬಾರಿಗೆ ಕನ್ನಡೇತರ ಇಂಡಸ್ಟ್ರಿಯಲ್ಲೂ ಡಬ್ ಆಗಿ ರಿಲೀಸ್ ಮಾಡಲು ತಯಾರಾದರು. ಕನ್ನಡವಷ್ಟೇ ಅಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಪ್ರೇಕ್ಷಕರು ಹುಚ್ಚೆದ್ದು ಟ್ರೈಲರ್ನ್ನು ಗೆಲ್ಲಿಸಿಬಿಟ್ಟಿದ್ದಾರೆ.
ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದೇವೆ. ಆದರೆ ಕನ್ನಡ ಪ್ರೇಕ್ಷಕ ಥಿಯೇಟರ್ಗೆ ಬರುವುದಿಲ್ಲ ಎಂಬ ಆರೋಪ ಮೊದಲಿನಿಂದಲೂ ಗಾಂಧಿನಗರದಲ್ಲಿ ಕೇಳಿ ಬರುತ್ತಿತ್ತು. ಅನೇಕ ಥಿಯೇಟರ್ಗಳು ಕೂಡ ಮುಚ್ಚಲ್ಪಡುತ್ತಿವೆ. ಅಷ್ಟೇ ಯಾಕೆ, ಹುಚ್ಚ ವೆಂಕಟ್ ತನ್ನ ಸಿನಿಮಾ ರಿಲೀಸ್ ಆದಾಗ ಜನ ಬರದೇ ಇದ್ದುದ್ದಕ್ಕೆ ತಾನೇನು ಮಾತನಾಡುತ್ತಿರುವೆ ಎಂಬ ಪರಿಜ್ಞಾನವಿಲ್ಲದೇ ಆತ ಟಿ.ವಿ.ಮಾಧ್ಯಮದ ಮುಂದೆ ನಿಂತು ಪ್ರೇಕ್ಷಕಪ್ರಭುವಿನ ಮೇಲೆ ಕಿರುಚಾಡಿ, ತನ್ನ ಕೋಪ ವ್ಯಕ್ತಪಡಿಸಿದ್ದ. ಆತನ ಹುಚ್ಚಾಟವನ್ನೇ ಬಂಡವಾಳ ಮಾಡಿಕೊಂಡ ಮೀಡಿಯಾ, ಟಿ.ಆರ್.ಪಿ. ಗಿಟ್ಟಿಸಿಕೊಂಡಿತ್ತಲ್ಲದೆ, ಆತನಿಗೆ ಒಬ್ಬ ಸೆಲೆಬ್ರಿಟಿ ಸ್ಟಾರ್ ಪಟ್ಟ ನೀಡಿತ್ತು. ನಿಜವಾಗಿಯೂ ಅಪ್ರತಿಮ ಪ್ರತಿಭೆಗಳು ಇನ್ನೂ ವೇದಿಕೆ ಸಿಗದೇ, ಎಲೆಮರೆಯಲ್ಲೇ ನಲುಗುತ್ತಿವೆ. ಆದರೆಬ ಇಂಥವರಿಗೆ ಸೆಲೆಬ್ರಿಟಿ ಪಟ್ಟ.! ಒಂದೊಳ್ಳೆ ಸಿನಿಮಾ ಮಾಡಿ, ಖಂಡಿತಾ ನೋಡುತ್ತೇವೆ ಎಂಬುದನ್ನು ಸೂಕ್ಷ್ಮವಾಗಿಯೇ ಪ್ರೇಕ್ಷಕ ಹೇಳಿದ್ದಾನೆ. ಮೊನ್ನೆ ಮೊನ್ನೆ ಕೊಪ್ಪಳದ ಜಿಲ್ಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾರದಾ ಎಂಬ ಥಿಯೇಟರ್ನ್ನು ರೀ-ಓಪನ್ ಮಾಡಿಸಿದ್ದಾರಂತೆ ಸಿನಿಮಾ ಅಭಿಮಾನಿಗಳು. ಒಂದೊಳ್ಳೆ ಕಂಟೆಂಟ್ ಇರೋ ಸಿನಿಮಾವನ್ನು ನಮ್ಮ ಜನ ಗೆಲ್ಲಿಸುತ್ತಲೇ ಬಂದಿದ್ದಾರೆ.
ಸುಮಾರು ವರುಷಗಳ ಕಾಲ ತಪ್ಪಸ್ಸಿಗೆ ಕುಳಿತ ವಟುಗಳಂತೆ ಬಹುತೇಕ ಎಲ್ಲರೂ ಗಡ್ಡ ಬಿಟ್ಟು ಅತೀವ ಶ್ರದ್ಧೆಯಿಂದ ಈ ಸಿನಿಮಾ ಮಾಡಿದ್ದಾರೆ. ಅವರ ಶ್ರದ್ಧೆ ಪ್ರತಿ ಫ್ರೇಮಿನಲ್ಲೂ ಕಾಣಿಸುತ್ತದೆ. ತಾಯಿಯ ಮಾತಿಗೆ ಬೆಲೆ ಕೊಟ್ಟು, ತಾನೇನ್ನೋ ಅಚಲವಾದುದನ್ನ ಸಾಧಿಸುವ ಸಲುವಾಗಿ ತಾಯಿ ಸತ್ತ ನಂತರ ಊರು ಬಿಟ್ಟು, ಮುಂಬೈಗೆ ಬಂದು ಸೇರುವ ನಾಯಕ, ಯಾವುದೋ ಕಾರಣಕ್ಕಾಗಿ ಆತ ಕೋಲಾರದ ಚಿನ್ನದ ಗಣಿಗೆ ಬಂದು ಸೇರುವ ಇವನು, ಅಲ್ಲಿನ ಜನರಿಗೆ ಬೆಂಗಾವಲಾಗಿ ನಿಲ್ಲುತ್ತಾನೆ. ಅದು ಹೇಗೇ? ಏಕೇ? ಎಂಬುದೇ ಈ ಸಿನಿಮಾ ಕಥೆ. ಕಥೆ ಇಷ್ಟೇನಾ ಅಂದ್ರೆ ತಪ್ಪಾಗುತ್ತದೆ. ಕಥೆ ಇನ್ನೂ ಇದೆ ಅನ್ಬೋದು ಇದೆ ವಾಸ್ತವ.
ಎದುರಾಳಿಯ ರಕ್ತ ಬಸಿದು ಕುಡಿಯುವಷ್ಟು ಕಟುಕನಾದ ನಾಯಕ, ದಾರಿ ಮಧ್ಯೆ ತಾಯಿಯೊಬ್ಬಳು ರಸ್ತೆ ದಾಟುವಾಗ ತಾನು ಬೀಳಿಸಿಕೊಂಡ “ಬನ್”ನ್ನು ಇವನು ಎತ್ತಿಕೊಡುವಾಗ, ತಾನು ಪಟ್ಟ ಕಷ್ಟ ನೆನೆದು, “ಎಂಟು ಜನ ಶೂ ಪಾಲಿಶ್ ಮಾಡಿದ್ರೆ, ಒಂದು ಬನ್ ಸಿಕ್ತಾ ಇತ್ತು ನನಗೆ. ತಟ್ಟೆಯಲ್ಲಿರೋ ಅನ್ನ ಚೆಲ್ಲಿಕೊಂಡು ತಿನ್ನೋ ಜನರ ಮಧ್ಯೆ ನೀನು ಬನ್ ಗಾಗಿ ನಿಂತಿರೋದ ನೋಡಿದ್ರೆ… ನೀನೇ ಗ್ರೇಟ್” ಎಂದು ಆಕೆಗೆ ಹೇಳಿ ಬನ್ ತೆಗೆದುಕೊಡುತ್ತಾನೆ. ಈ ದೃಶ್ಯದಿಂದ ಹಸಿವು ಎಂದರೇನು? ಹಸಿವಿನಿಂದ ನೊಂದವರು ಯಾರು? ಆ ನೋವು ಹೇಗಿರುತ್ತೆ ? ಎಂಬುದನ್ನು ಊಟ ತಿನ್ನುವಾಗ ಅರೆಬರೆ ತಿಂದು ತಟ್ಟೆಯಲ್ಲಿ ಅರ್ಧ ಬಿಟ್ಟು ಶೋಕಿ ಮಾಡೋ ಜನ ತಪ್ಪದೇ ನೋಡಿ ತಿಳಿದುಕೊಳ್ಳುವಂತೆ ದೃಶ್ಯ ಕಟ್ಟಿದ್ದಾರೆ. ಅಷ್ಟೇ ಅಲ್ಲ, ಗಣಿಯಲ್ಲಿ ಕೆಲಸ ಮಾಡುವಾಗ ವೃದ್ಧ ಹೆಣ್ಣೊಬ್ಬಳು ತಾನು ತರುತ್ತಿದ್ದ ಅಕ್ಕಿಯನ್ನು ಮಣ್ಣಿನಲ್ಲಿ ಅಚಾನಕ್ಕಾಗಿ ಚೆಲ್ಲಿಕೊಂಡು ಬಿಡುತ್ತಾಳೆ. ಆಗ ಹೀರೋ ತನ್ನ ಪಾಲಿನ ಅಕ್ಕಿಯನ್ನು ಆಕೆಗೆ ಕೊಡುತ್ತಾನೆ. ಬಡತನದ ಬೇಗೆ ಕರುಳು ಹಿಂಡುವಂತೆ ಮನಸಿಗೆ ನೋವು ಉಂಟು ಮಾಡುವ ದೃಶ್ಯ ಅದಾಗಿದೆ. ಇಂಥ ಅನೇಕ ದೃಶ್ಯಗಳಿವೆ.
ಖಡಕ್ ರಗಡ್ ಲುಕ್ನಲ್ಲಿ ಮಿಂಚಿರುವ ಯಶ್ ತನ್ನ ಆ್ಯಟೀಟೂಡ್ (Attitude) ‘ಮ್ಯಾನರಿಸಂ’ನಿಂದ ಪ್ರೇಕ್ಷಕನ ಮನ ಗೆಲ್ಲುತ್ತಾರೆ. “ನೀನು ಸಾಯುವಾಗ ಶ್ರೀಮಂತನಾಗಿ ಸಾಯಬೇಕು” ಎಂದು ತಾಯಿ ಹೇಳಿದ ಮಾತಿಗೆ ಅವನು ಮುಂಬೈಗೆ ಬಂದು ಡಾನ್ ಆಗುತ್ತಾನೆ ಎಂಬಂತೆ ಅನೇಕರು ವಿಮರ್ಶಿಸಿದ್ದರು. ಆದರೆ ಪ್ರಸವಪೂರ್ವದಲ್ಲೇ ಆಕೆ ತನ್ನ ಮಗನನ್ನು ಉದ್ದೇಶಿಸಿ “ನೀನು ಬೇಗ ಬಾರೋ, ನೀನು ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಊರಿನ ಜನರನ್ನು ಚೆನ್ನಾಗಿ ನೋಡ್ಕೋಬೇಕು” ಎಂದು ಆಕೆ ಹೇಳಿದ ಮಾತು ಮರೆತಿರಬಹುದು ಆ ವಿಮರ್ಶಕರು. ಶ್ರೀಮಂತಿಕೆ ಎಂದರೆ ಹೃದಯ ಶ್ರೀಮಂತಿಕೆ. ಅಂದರೆ ಸಾವಿರಾರು ಜನರ ಹೃದಯದಲ್ಲಿ ನಿನ್ನ ನೆನಪು, ನಿನ್ನ ಬಗ್ಗೆ ಒಲವು ಶಾಶ್ವತವಾಗಿರುವಂತೆ ಸಂಪಾದಿಸುವ ಜನಪ್ರೀತಿಯೇ ಹೃದಯ ಶ್ರೀಮಂತಿಕೆ. ಆಕೆ ಈ ಅರ್ಥದಲ್ಲಿ ನೀನು ಸಾಯುವಾಗ ಶ್ರೀಮಂತನಾಗಿ ಸಾಯಬೇಕು ಎಂದು ತನ್ನ ಆಸೆಯನ್ನು ಹೇಳಿಕೊಂಡಿರಬಹುದು.
ಬಂಗಾರದ ಗಣಿಯಲ್ಲಿ ‘ಲೈಮ್ ಸ್ಟೋನ್’ (ಸುಣ್ಣದ) ಹೆಸರಲ್ಲಿ ಗಣಿಗಾರಿಕೆ ಮಾಡುತ್ತಿರುವುದಾಗಿ 99 ವರುಷಗಳ ಲೀಸ್ ತೆಗೆದುಕೊಂಡು, ಆ ಜಾಗದಲ್ಲಿ ಜನರನ್ನು ಒತ್ತೆಯಾಳಾಗಿಸಿಕೊಂಡು ದರ್ಪದಿಂದ ಗಣಿಯ ಕೆಲಸ ಮಾಡಿಸುತ್ತಿರುತ್ತಾರೆ. ಅಂಥಾ ಭಯಾನಕ ಲೋಕದ ಅಧಿಪತಿ ‘ಗರುಡ’ ಎಂಬುವವನ ಹತ್ಯೆ ನಡೆಯುವುದರೊಂದಿಗೆ ಸಿನಿಮಾದ ಮೊದಲನೇ ಅಧ್ಯಾಯ ಮುಕ್ತಾಯಗೊಳ್ಳುತ್ತದೆ. ಅಲ್ಲದೇ ಕಥೆ ಮುಂದುವರೆಯುವುದರ ಬಗ್ಗೆಯೂ ಸೂಚನೆ ನೀಡುತ್ತದೆ ಹಾಗೂ ಎರಡನೇ ಅಧ್ಯಾಯಕ್ಕೆ ಕಾಯುವಂತೆ ಮಾಡುತ್ತದೆ. ನಟರಾದ ಅನಂತನಾಗ್, ಮಾಳವಿಕ, ಶ್ರೀನಿಧಿ ಶೆಟ್ಟಿ, ವಸಿಷ್ಠ ಸಿಂಹ, ಅಚ್ಯುತ್, ಅರ್ಚನಾ ಜೋಯೀಸ್, ಗೋವಿಂದೇಗೌಡ (ಕಾಮಿಡಿ ಕಿಲಾಡಿ) ಸೇರಿದಂತೆ ಅನೇಕರು ಹಾಗೂ ಹೊಸ ಕಲಾವಿದರು ಅದ್ಬುತವಾದ ನಟನೆ ಮಾಡಿದ್ದಾರೆ.
ಬಿಡುಗಡೆಗೂ ಮುನ್ನ ಹಾಗೂ ನಂತರವೂ ಅನೇಕ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿರುವ ಈ ಕೆ.ಜಿ.ಎಫ್. ಸಿನಿಮಾ ನೋಡ್ಲೇಬೇಕಾ? ಅನ್ನೋ ಪ್ರಶ್ನೆಗೆ ನೀವು ನಿಸ್ಸಂದೇಹವಾಗಿ “ಹೌದು” ಎಂದೇ ಹೇಳುವಿರಿ. ಒಮ್ಮೆ ಚಿತ್ರ ನೋಡಿದ ಮೇಲಂತೂ ಕನ್ನಡದ ಮೇಲೆ ಅಭಿಮಾನ ಮೂಡದೇ ಇರದು. ಹೊರರಾಜ್ಯ, ಹೊರದೇಶಗಳಲ್ಲೂ ತನ್ನ ಛಾಪು ಮೂಡಿಸಿ ಹಾಗೂ ಆ ಇಂಡಸ್ಟ್ರಿಗಳ ಘಟಾನುಘಟಿ ನಟರ ಸಿನಿಮಾಗಳಿಗೆ (ಮಾರಿ-2, ಜೀರೋ, ಅಂತರಿಕ್ಷಂ, ಪಡಿ ಪಡಿ ಲೇಚೆ ಮನಸು ಹಾಗೂ ಇತ್ಯಾದಿ) ಸ್ಪರ್ಧೆ ನೀಡುತ್ತಿರುವ ನಮ್ಮ ಕನ್ನಡ ಸಿನಿಮಾವನ್ನು ಗೆಲ್ಲಿಸಲೇಬೇಕು. ರಾಕಿ ಭಾಯ್ ನೇ ಬೋಲಾ… “ಪಿಕ್ಚರ್ ಅಭಿ ಬಾಕಿ ಹೈ”
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.