ಅಪರಾಧಿಗಳಿಗೆ ನಮ್ಮ ದೇಶದಲ್ಲಿ ಕಾನೂನಿನ ಭಯ ಬಹುತೇಕ ಹೊರಟು ಹೋಗಿದೆ. ನಾನೊಬ್ಬ ದೊಡ್ಡ ಕ್ರಿಮಿನಲ್ ಎಂದು ತೋರಿಸಿಕೊಳ್ಳುವುದಕ್ಕೋಸ್ಕರವೇ ಕೊಲೆ, ಸುಲಿಗೆ ನಡೆಸಿದ ಪ್ರಕರಣಗಳೂ ಸಾಕಷ್ಟಿವೆ. ಅದರಲ್ಲೂ ಉತ್ತರ ಪ್ರದೇಶ ಗೂಂಡಾ ರಾಜ್ಯವೆಂದೇ ಒಂದು ಕಾಲದಲ್ಲಿ ಕುಪ್ರಸಿದ್ಧಿ ಪಡೆದಿತ್ತು. ಆದರೆ ಯೋಗಿ ಆದಿತ್ಯನಾಥರು ಅಲ್ಲಿನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿ ಎಲ್ಲವೂ ಬದಲಾಗತೊಡಗಿದೆ. ಅಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದೆ. ಉತ್ತರ ಪ್ರದೇಶ ಇದೀಗ ಗೂಂಡಾ ರಾಜ್ಯವೆನ್ನುವ ತನ್ನ ಹಣೆಪಟ್ಟಿ ಕಳಚಿಕೊಂಡು ಹೊಸ ದಿಕ್ಕಿನತ್ತ ಸಾಗುತ್ತಿದೆ.
ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಅದು ಅಪರಾಧಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳತೊಡಗಿತು. ಕೆಲವು ಕುಖ್ಯಾತ ಅಪರಾಧಿಗಳ ಎನ್ಕೌಂಟರ್ಗಳು ಕೂಡಾ ನಡೆದವು. ಆ ಮೂಲಕ “ಶರಣಾಗಿರಿ ಅಥವಾ ಪ್ರಾಣ ಕಳೆದುಕೊಳ್ಳಿರಿ” ಎನ್ನುವ ಸಂದೇಶ ಅಲ್ಲಿನ ಅಪರಾಧಿಗಳಿಗೆ ರವಾನೆಯಾಯಿತು. ಇದರಿಂದ ಭಯಭೀತರಾದ ಅಪರಾಧಿಗಳು ಶರಣಾಗಲು ಸಾಲುಗಟ್ಟಿ ನಿಂತರು. ಆದರೆ ಅಲ್ಲಿನ ಅಪರಾಧಿಗಳ ಸಂಖ್ಯೆ ತುಂಬಾ ಕಡಿಮೆಯೇನೂ ಇರಲಿಲ್ಲ. ಆದ್ದರಿಂದ ಅಪರಾಧಿಗಳನ್ನು ಬಗ್ಗುಬಡಿಯುವ ಕಾರ್ಯ ಯಾವುದೇ ಕಾರಣಕ್ಕೂ ನಿಲ್ಲುವಂತಿರಲಿಲ್ಲ ಮತ್ತು ನಿಲ್ಲಿಸಲೂ ಇಲ್ಲ.
ಇತ್ತೀಚಿಗೆ ಬುಲಂದ್ ಶಹರ್ನಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಯ ನಂತರ ಅಲ್ಲಿನ ಕಾನೂನು ಸುವ್ಯವಸ್ಥೆಯ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿತ್ತು. ಆದರೆ ರಾಜ್ಯದಲ್ಲಿ ಅಪರಾಧಗಳ ಪ್ರಮಾಣವನ್ನು ತಗ್ಗಿಸಲೇಬೇಕೆನ್ನುವ ಯೋಗಿ ಆದಿತ್ಯನಾಥ್ ಅವರ ಕಾರ್ಯಸೂಚಿಯನ್ವಯ ಕಾರ್ಯಾಚರಿಸುತ್ತಿರುವ ಅಲ್ಲಿನ ಪೊಲೀಸ್ ಇಲಾಖೆ ತಮ್ಮ ಕಾರ್ಯಾಚರಣೆಯನ್ನು ಹಿಂದೆಂದಿಗಿಂತಲೂ ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಜಾಮೀನು ಪಡೆದು ಹೊರ ಬಂದು ಮತ್ತದೇ ಚಾಳಿ ಮುಂದುವರಿಸುವ ಅಪರಾಧಿಗಳನ್ನು ನೋಡಿದ್ದೇವೆ. ಜಾಮೀನು ಪಡೆದು ಹೊರ ಬಂದಿದ್ದನ್ನೇ ವಿಜಯೋತ್ಸವವನ್ನಾಗಿ ಆಚರಿಸುವ ಅಪರಾಧಿಗಳ ಬೆಂಬಲಿಗರನ್ನೂ ನೋಡಿದ್ದೇವೆ. ಆದರೆ ಇದೀಗ ಉತ್ತರ ಪ್ರದೇಶದಲ್ಲಿ ಅಪರಾಧಿಗಳು ತಮ್ಮ ಜಾಮೀನು ಅರ್ಜಿಗಳನ್ನೇ ವಾಪಸ್ ಪಡೆದು, ಶರಣಾಗಲು ಪೊಲೀಸರ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ!
ಹಾಗೆ ಶರಣಾದ ಅಪರಾಧಿಗಳ ಸಂಖ್ಯೆ ಕೇವಲ ನೂರೋ ಅಥವಾ ಇನ್ನೂರೋ ಆಗಿದ್ದರೆ ಅದೊಂದು ವಿಶೇಷವೆನಿಸುತ್ತಿರಲಿಲ್ಲ. ಅಥವಾ ಸಾವಿರವೋ, ಎರಡು ಸಾವಿರವೋ ಆದರೂ ಅದೊಂದು ದೊಡ್ಡ ಸುದ್ದಿಯೆನಿಸುತ್ತಿರಲಿಲ್ಲ. ಆದರೆ ಹಾಗೆ ಶರಣಾದ ಅಪರಾಧಿಗಳ ಸಂಖ್ಯೆ ಬರೋಬ್ಬರಿ 12,291(ಹನ್ನೆರಡು ಸಾವಿರದ ಇನ್ನೂರಾ ತೊಂಬತ್ತೊಂದು)!
ಈ ಮಾಹಿತಿಯನ್ನು ಅಲ್ಲಿನ ಡಿಜಿಪಿ ಓ.ಪಿ.ಸಿಂಗ್ ಅವರೇ ಮಾಧ್ಯಮಗಳ ಸಮ್ಮುಖದಲ್ಲಿ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಅಪರಾಧಿಗಳಿಗೆ ಇಷ್ಟೊಂದು ಭಯ ಇತಿಹಾಸದಲ್ಲೇ ಇರಲಿಲ್ಲ. ಆದ್ದರಿಂದ ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಆಗುತ್ತಿರುವ ಇಂಥದ್ದೊಂದು ಧನಾತ್ಮಕ ಬದಲಾವಣೆ ಈ ಶತಮಾನದ ಶ್ರೇಷ್ಠ ಬದಲಾವಣೆಗಳಲ್ಲೊಂದು ಎಂದರೂ ತಪ್ಪಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.