ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆಂದರೆ ಅದಕ್ಕೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಈ ದೇಶವನ್ನು ಕಾಯುತ್ತಿರುವ ನಮ್ಮ ಯೋಧರೇ ಕಾರಣ ಎಂದರೆ ತಪ್ಪಲ್ಲ. ಆದರೆ ಅವರಿಗಾಗಿ ನಾವೇನು ಮಾಡುತ್ತಿದ್ದೇವೆ? ದೇಶಸೇವಕರಾದ ಯೋಧರಿಗೆ ನಮ್ಮ ಕೈಲಾದ ಸೇವೆ ಮಾಡಬೇಕೆನ್ನುವ ಮನಸ್ಸು ಎಲ್ಲರಲ್ಲಿಯೂ ಇದ್ದರೂ ಕೂಡಾ ನಮ್ಮ ವೃತ್ತಿಯ ಜೊತೆ ಜೊತೆಗೇ ನಿರಂತರವಾಗಿ ಯೋಧರ ಕಲ್ಯಾಣಕ್ಕಾಗಿ ಏನಾದರೊಂದು ಯೋಜನೆ ಹಾಕಿಕೊಳ್ಳುವವರ ಸಂಖ್ಯೆ ಇಂದಿಗೂ ಕಡಿಮೆಯಿದೆಯೆಂದೇ ಹೇಳಬಹುದು.
ಹೌದು, ಯೋಧರ ಬಗ್ಗೆ ನಮಗೆಲ್ಲರಿಗೂ ಪ್ರೀತಿಯಿದೆ, ಅಷ್ಟೇ ಗೌರವವೂ ಇದೆ. ಅವರ ಶೌರ್ಯದ ಕುರಿತಾದ ಸಂದೇಶಗಳನ್ನು ನಿತ್ಯವೂ ಹಂಚಿಕೊಳ್ಳುತ್ತೇವೆ. ಸಂಕಷ್ಟದಲ್ಲಿರುವ ಯೋಧರ ಕುಟುಂಬಗಳ ಬಗ್ಗೆ ಸುದ್ದಿಯಾದರೆ ಆ ಕ್ಷಣದಲ್ಲಿ ಕೈಲಾದಷ್ಟು ಧನ ಸಹಾಯ ಮಾಡುವುದೂ ಇದೆ. ಆದರೆ ಅವರಿಗೆ ನಿರಂತರವಾಗಿ ನೆರವಾಗಬಲ್ಲ ಯಾವುದಾದರೂ ಯೋಜನೆ ರೂಪಿಸಲು ನಮ್ಮಿಂದ ಸಾಧ್ಯವೇ ಎಂದು ಯೋಚಿಸುವವರ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ಆರ್ಥಿಕವಾಗಿ ಸಹಾಯ ಮಾಡುವ ಶಕ್ತಿ ಕೆಲವರಿಗಿಲ್ಲದಿರಬಹುದು ಅಥವಾ ಅದರ ಅಗತ್ಯ ಅವರಿಗೂ ಇಲ್ಲದಿರಬಹುದು. ಆದರೆ ನಾವು ಯಾವುದಾದರೂ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದೇವೆಂದರೆ ಅದೇ ಪರಿಣತಿಯನ್ನೇ ಯೋಧರ ಸೇವೆಗಾಗಿಯೂ ಬಳಸಿಕೊಳ್ಳಬಹುದೇ, ಆ ಮೂಲಕ ದೇಶ ಕಾಯುವ ಯೋಧರ ಹಾಗೂ ಪರೋಕ್ಷವಾಗಿ ಈ ದೇಶದ ಸೇವೆ ಮಾಡಲೂಬಹುದೇ ಎನ್ನುವ ಬಗ್ಗೆ ಪ್ರತಿಯೊಬ್ಬರೂ ಯೋಚಿಸಿದರೆ ಖಂಡಿತವಾಗಿಯೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಲೇ ಯೋಧರಿಗೂ ನಮ್ಮದೊಂದು ಸೇವೆ ಸಲ್ಲಿಸಲು ಅವಕಾಶವಂತೂ ಇದ್ದೇ ಇದೆ.
ಅಂತಹಾ ಯೋಜನೆಯೊಂದನ್ನು ಹಾಕಿಕೊಂಡು ಅದನ್ನು ಕಾರ್ಯರೂಪಕ್ಕೆ ತಂದು, ಯೋಧರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಲ್ಲಿ ಮೈಸೂರಿನ ಪ್ರಕೃತಿ ಆಯುರ್ವೇದ ಪ್ರತಿಷ್ಠಾನ ಕೂಡಾ ಒಂದು. ಪ್ರಕೃತಿ ಆಯುರ್ವೇದ ಪ್ರತಿಷ್ಠಾನವು ತನ್ನ ಶ್ರೀ ರಂಗ ಆಯುರ್ವೇದ ಚಿಕಿತ್ಸಾ ಮಂದಿರ ಎನ್ನುವ ಆಸ್ಪತ್ರೆಯ ಮುಖಾಂತರ ಮಾಜಿ ಹಾಗೂ ಹಾಲಿ ಯೋಧರಿಗೆ ಸಂಪೂರ್ಣ ಉಚಿತ ಆಯುರ್ವೇದ ಚಿಕಿತ್ಸೆಗಳನ್ನು ಒದಗಿಸುತ್ತಿದೆ.
ನಾವೊಂದು ಸೇವೆಯನ್ನು ನೀಡುತ್ತೇವೆಂದರೆ ಅದನ್ನು ಪಡೆಯುವವರಿಗೆ ನಿಜಕ್ಕೂ ಆ ಸೇವೆಯ ಅಗತ್ಯವಿದೆಯೇ ಎನ್ನುವುದನ್ನು ಮೊದಲು ಕಂಡುಕೊಳ್ಳಬೇಕು. ಅದೇ ರೀತಿ ಪ್ರಕೃತಿ ಆಯುರ್ವೇದ ಪ್ರತಿಷ್ಠಾನ ಕೂಡಾ ಯೋಧರಿಗಾಗಿ ಉಚಿತ ಆಯುರ್ವೇದ ಚಿಕಿತ್ಸೆ ನೀಡುವ ನಿರ್ಧಾರಕ್ಕೆ ಬರುವ ಮೊದಲು ಸಾಕಷ್ಟು ಅಧ್ಯಯನ ನಡೆಸಿತು. ಹಲವಾರು ಯೋಧರನ್ನು,ಮಾಜಿ ಯೋಧರನ್ನು,ಪರಿಣತರನ್ನು ಸಂದರ್ಶಿಸಿ ಅವರಿಂದ ಆ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿತು.
ತಮ್ಮ ಕರ್ತವ್ಯದ ವೇಳೆಯಲ್ಲಿ ಯೋಧರಿಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಗೆ ಅವಕಾಶವಿಲ್ಲದಿರುವುದರಿಂದ ಜೀರ್ಣಾಂಗ ವ್ಯವಸ್ಥೆ ಕೆಡುವ ಸಾಧ್ಯತೆ, ತಮ್ಮ ಕರ್ತವ್ಯದ ವೇಳೆಯಲ್ಲಿ ಎಷ್ಟೋ ಕಡೆ ನಮ್ಮಂತಹಾ ಸಾಮಾನ್ಯರಿಂದ ಸಾಧ್ಯವೇ ಇಲ್ಲವೇನೋ ಎನ್ನಿಸುವಷ್ಟು ಸಮಯ ಒಂದೇ ಭಂಗಿಯಲ್ಲಿ ಇರಬೇಕಾದ ಅನಿವಾರ್ಯತೆಯಿಂದಾಗಿ ಮೂಳೆಗಳ ಸವೆತ,ಕೀಲು ನೋವುಗಳು ಬರುವ ಸಾಧ್ಯತೆ, ಹಾಗೆಯೇ ಬಹುಕಾಲ ಕುಟುಂಬದ ಹಾಗೂ ಸ್ನೇಹಿತರ ಸಂಪರ್ಕದಿಂದ ದೂರವುಳಿಯಬೇಕಾದ ಅನಿವಾರ್ಯತೆಯಿಂದಾಗಿ ಉಂಟಾಗಬಹುದಾದ ಮಾನಸಿಕ ಒತ್ತಡ ಮುಂತಾದವುಗಳಿಗೆ ಆಯುರ್ವೇದ ಚಿಕಿತ್ಸೆಯು ಪರಿಹಾರವಾಗಬಲ್ಲದು ಎನ್ನುವುದನ್ನು ಕಂಡುಕೊಂಡಿತು. ಅದೇ ರೀತಿ, ಸಾಮಾನ್ಯರು ಬದುಕುವುದಕ್ಕೇ ಸಾಧ್ಯವಿಲ್ಲದಂತಹಾ ಅತಿಯಾದ ಶೀತ ಪ್ರದೇಶ ಹಾಗೂ ಅತಿಯಾದ ಉಷ್ಣ ಪ್ರದೇಶಗಳೆರಡರಲ್ಲೂ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯಿದೆ. ಅದರಿಂದುಂಟಾಗಬಹುದಾದ ಪರಿಣಾಮಗಳಿಗೂ ಕೂಡಾ ಆಯುರ್ವೇದ ಚಿಕಿತ್ಸೆಯು ಲಾಭದಾಯಕವಾಗಬಲ್ಲದು ಎನ್ನುವುದನ್ನೂ ಕಂಡುಕೊಂಡ ನಂತರ ಪ್ರಕೃತಿ ಆಯುರ್ವೇದ ಪ್ರತಿಷ್ಠಾನವು ಯೋಧರಿಗೆ ಉಚಿತ ಆಯುರ್ವೇದ ಚಿಕಿತ್ಸೆಯನ್ನು ನೀಡುವ ಮತ್ತು ಆ ಮೂಲಕ ಯೋಧರಿಗೆ ತಮ್ಮಿಂದಾಗಬಹುದಾದ ಸೇವೆ ಸಲ್ಲಿಸುವ ನಿರ್ಧಾರವನ್ನು ಕೈಗೊಂಡಿತು.
2017ರ ಏಪ್ರಿಲ್ 01ರಂದು ಬೆಂಗಳೂರಿನಲ್ಲಿ ‘ಯೋಧ ನಮನ’ ಎನ್ನುವ ಕಾರ್ಯಕ್ರಮದ ಮೂಲಕ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಂದ ಉಪನ್ಯಾಸ ಹಾಗೂ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರಿಂದ ಇಂಥದ್ದೊಂದು ಮಹತ್ಕಾರ್ಯಕ್ಕೆ ಚಾಲನೆ ದೊರಕಿತು. ಆ ನಂತರ ಹಂತ ಹಂತವಾಗಿ ತಮ್ಮ ಸೇವೆಗಳನ್ನು ವಿಸ್ತರಿಸಿದ್ದು, ಪ್ರತಿಷ್ಠಾನವು ಇದೀಗ ಎಲ್ಲಾ ರೀತಿಯ ಆಯುರ್ವೇದ ಚಿಕಿತ್ಸೆಗಳನ್ನೂ ನಮ್ಮ ಯೋಧರಿಗೆ ಸಂಪೂರ್ಣ ಉಚಿತವಾಗಿ ನೀಡಲು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದೆ.
ದೇಶದ ಯಾವುದೇ ಭಾಗದ ಭೂಸೇನೆ,ವಾಯುಸೇನೆ,ಹಾಗೂ ನೌಕಾಪಡೆಗಳ ಮಾಜಿ ಅಥವಾ ಹಾಲಿ ಯೋಧರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಊಟ, ವಸತಿ ಸೇರಿದಂತೆ ಕೇವಲ ಚಿಕಿತ್ಸೆಯಷ್ಟೇ ಅಲ್ಲದೆ ವೈದ್ಯರ ಸಲಹೆ ಮತ್ತು ಔಷಧಗಳನ್ನು ಕೂಡಾ ಪ್ರಕೃತಿ ಆಯುರ್ವೇದ ಪ್ರತಿಷ್ಠಾನವು ಉಚಿತವಾಗಿಯೇ ಒದಗಿಸಲಿದೆ. ಹೆಚ್ಚಿನ ಮಾಹಿತಿಗಳನ್ನು http://prakruthiayurveda.org/special-project https://ayurvedamysore.org ಮೂಲಕ ಪಡೆಯಬಹುದು ಅಥವಾ E-mail: info@ayurvedamysore.org Phone: (+91) 8762867710 ಮೂಲಕವೂ ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.