ಬ್ಯಾಂಕ್ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ!
ಒಂದು ಕಡೆ ಮಲ್ಯ ಬ್ಯಾಂಕ್ಗಳಿಗೆ ವಂಚಿಸಿ ಪರಾರಿಯಾಗಲು ಅರುಣ್ ಜೈಟ್ಲಿ ನೆರವು ನೀಡಿದ್ದಾರೆ, ನರೇಂದ್ರ ಮೋದಿಯವರ ಶ್ರೀರಕ್ಷೆಯಿದೆ ಎಂದು ನಿರಂತರವಾಗಿ ಕಾಂಗ್ರೆಸ್ ಆರೋಪಿಸುತ್ತಾ ಬಂದಿದೆ.
ಮತ್ತೊಂದು ಕಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡಿ ಟ್ವೀಟ್ ಮಾಡಿದರೆ, ಅದನ್ನು ಬ್ಯಾಂಕ್ಗಳಿಗೆ ವಂಚಿಸಿ ಪರಾರಿಯಾಗಿರುವ ಅದೇ ವಿಜಯ್ ಮಲ್ಯ ವಿದೇಶದಲ್ಲಿ ಕುಳಿತೇ ರಿಟ್ವೀಟ್ ಮಾಡಿ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ತಮ್ಮ ಸಹಮತ ವ್ಯಕ್ತಪಡಿಸುತ್ತಾರೆ!
ಮಲ್ಯ ಅವರ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿ ತಾನು ಪಡೆದ ಸಾಲದ ಋುಣಮುಕ್ತ ಪತ್ರ ನೀಡುತ್ತಿಲ್ಲ ಎಂದು ಬ್ಯಾಂಕ್ ವಿರುದ್ಧ ಅರ್ಜಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಮಲ್ಯ ಅವರ ಕಂಪನಿಯ ಪರವಾಗಿ ವಾದಿಸುತ್ತಿರುವವರು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ!
ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೇ ವಿಜಯ್ ಮಲ್ಯ ಸಾವಿರಾರು ಕೋಟಿ ರೂ. ಸಾಲ ಪಡೆದಿದ್ದಂತೂ ಎಲ್ಲರಿಗೂ ತಿಳಿದೇ ಇದೆ. ಸ್ವತಃ ಅವರೇ ಈ ದೇಶದ ಹಣಕಾಸು ಸಚಿವರಾಗಿದ್ದೂ ಎಲ್ಲರಿಗೂ ತಿಳಿದೇ ಇದೆ. ಅವರು ಹಣಕಾಸು ಸಚಿವರಾಗಿದ್ದಾಗ ಕೂಡಾ ವಿಜಯ್ ಮಲ್ಯ ಅವರ ಕಂಪನಿಗಳು ಸಾವಿರಾರು ಕೋಟಿ ಬ್ಯಾಂಕ್ ವ್ಯವಹಾರ ನಡೆಸಿವೆ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಮಲ್ಯ ಮೋಸ ಮಾಡಲು ಹಾಗೂ ಪರಾರಿಯಾಗಲು ಮೋದಿಯವರೇ ಕಾರಣ ಎಂದು ಇದೇ ಚಿದಂಬರಂ ಅವರೂ ಸೇರಿದಂತೆ ಕಾಂಗ್ರೆಸ್ ಪಕ್ಷ ಈ ದೇಶದ ಮುಂದೆ ಪದೇ ಪದೇ ಆರೋಪಿಸಿದೆ. ವಿಜಯ್ ಮಲ್ಯ ಅವರ ಚಲನವಲನದ ಬಗ್ಗೆ ಬಿಜೆಪಿ ನಾಯಕರಿಗೆ ಪೂರ್ತಿ ಗೊತ್ತಿದ್ದರೂ ಅವರನ್ನು ವಿದೇಶದಲ್ಲಿ ರಕ್ಷಣೆ ಮಾಡಲಾಗಿರುವುದು ದೇಶದ ಆರ್ಥಿಕತೆಗೆ ಕೊಟ್ಟ ಬಹುದೊಡ್ಡ ಹೊಡೆತವಲ್ಲವೇ ಎಂದು ಚಿದಂಬರಂ ಕೆಲವು ತಿಂಗಳ ಹಿಂದಷ್ಟೇ ಪ್ರಶ್ನಿಸಿದ್ದೂ ಇದೆ.
ಆದರೆ ಇದೀಗ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿಯನ್ನು ಸಾಲದ ಹೊಣೆಯಿಂದ ಬಿಡುಗಡೆಗೊಳಿಸುವಂತೆ ಐಡಿಬಿಐಗೆ ನಿರ್ದೇಶನ ನೀಡಬೇಕು ಎಂದು ಅದೇ ಪಿ.ಚಿದಂಬರಂ ಅವರು ನ್ಯಾಯಾಲಯದ ಮುಂದೆ ವಾದಿಸುತ್ತಿದ್ದಾರೆ! ಕಿಂಗ್ಫಿಷರ್ ವಿಮಾನಯಾನ ಸಂಸ್ಥೆಗೆ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿ ಗ್ಯಾರಂಟಿ ನೀಡಿ ಸಾಲ ಪಡೆದಿತ್ತು ಮತ್ತು ಆ ಸಮಯದಲ್ಲಿ ವಿಜಯ್ ಮಲ್ಯ ಅವರೇ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ನ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಆ ಕಂಪನಿಯಲ್ಲಿ ಮಲ್ಯ ಅವರ ಹೆಸರಿನಲ್ಲಿ ಹೆಚ್ಚಿನ ಶೇರ್ ಇಲ್ಲವೆಂದು ಸಾಬೀತುಪಡಿಸಿ ಅವರನ್ನು ಆ ವಂಚನೆಯ ಪ್ರಕರಣದಿಂದ ಮುಕ್ತಗೊಳಿಸುವ ದೊಡ್ಡ ಹೊಣೆಯನ್ನು ನ್ಯಾಯವಾದಿಯೂ ಆಗಿರುವ ಕಾಂಗ್ರೆಸ್ ನಾಯಕ ಚಿದಂಬರಂ ಅವರು ಹೊತ್ತುಕೊಂಡಿದ್ದಾರೆ!
ರಾಜಕೀಯ ಬೇರೆ, ವೃತ್ತಿಯೇ ಬೇರೆ ನಿಜ. ಪಿ.ಚಿದಂಬರಂ ಅವರು ಒಬ್ಬ ವೃತ್ತಿಪರ ವಕೀಲರಾಗಿ ಸರಿ ಎನಿಸಿದವರ ಪರ ವಾದಿಸಲು ಅವರಿಗೆ ಸಂಪೂರ್ಣ ಹಕ್ಕಿದೆ ಎನ್ನುವುದೂ ನಿಜ. ಈ ದೇಶದ ಕಾನೂನು ಪ್ರಕಾರ ಅವರು ಮಾಡುತ್ತಿರುವುದು ತಪ್ಪೇನಲ್ಲ. ಆದರೆ ನೈತಿಕವಾಗಿ?
ಈ ದೇಶದ ಪ್ರಜೆಗಳಿಗೆ ಚಿದಂಬರಂ ಅವರ ನಡೆಯ ಬಗ್ಗೆ ಒಂದಷ್ಟು ಪ್ರಶ್ನೆಗಳೆದ್ದಿವೆ. ಅದನ್ನಿಲ್ಲಿ ಕೇಳಲೇಬೇಕು.
ಪ್ರಶ್ನೆ ಒಂದು: ವೃತ್ತಿಪರ ವಕೀಲರಾಗಿ ಸರಿ ಎನಿಸಿದವರ ಪರ ವಾದಿಸಲು ಅವರಿಗೆ ಸಂಪೂರ್ಣ ಹಕ್ಕಿದೆ ಎನ್ನುವುದಾದರೆ ಮಲ್ಯ ಅವರು ಸರಿ ಇದ್ದಾರೆ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಒಪ್ಪುತ್ತಾರೆಯೇ?
ಪ್ರಶ್ನೆ ಎರಡು: ದೇಶದಲ್ಲಿ ಸಾವಿರಾರು ಹಿರಿಯ ವಕೀಲರಿದ್ದಾಗಿಯೂ ಮಲ್ಯ ಅವರ ಕಂಪನಿ, ಮಲ್ಯ ಅವರನ್ನು ವಂಚಕ ಎನ್ನುತ್ತಿರುವ ಕಾಂಗ್ರೆಸ್ ನಾಯಕನನ್ನೇ ತಮ್ಮ ವಕೀಲನನ್ನಾಗಿ ಆಯ್ಕೆ ಮಾಡಿಕೊಂಡಿದ್ದೇಕೆ?
ಪ್ರಶ್ನೆ ಮೂರು: ದೇಶದ ಒಬ್ಬ ಪ್ರತಿಷ್ಠಿತ ವಕೀಲರಾಗಿ ಎಷ್ಟು ಬೇಕಾದರೂ ಪ್ರಕರಣಗಳು ಅವರನ್ನು ಹುಡುಕಿಕೊಂಡು ಬರುವಾಗ, ಅವರೇ ನಿರಂತರವಾಗಿ ವಂಚಕನೆಂದು ಬಿಂಬಿಸಿದ ಮಲ್ಯ ಅವರ ಕಂಪನಿಯ ಪರವಾದ ಪ್ರಕರಣವನ್ನು ಅತ್ಯಾಸಕ್ತಿಯಿಂದ ಕೈಗೆತ್ತಿಕೊಳ್ಳಲು ಕಾರಣವಾದ ಅಂಶಗಳಾದರೂ ಏನು?
ಪ್ರಶ್ನೆ ನಾಲ್ಕು: ಒಬ್ಬ ನ್ಯಾಯವಾದಿಯು ತನ್ನ ಕಕ್ಷಿದಾರನ ಪ್ರಕರಣಗಳ ಸಂಪೂರ್ಣ ಸತ್ಯವನ್ನು ತಿಳಿದಿರಲೇಬೇಕಾಗುತ್ತದೆ. ಹಾಗಾದರೆ ಮಲ್ಯ ಅವರ ವಂಚನೆ ಪ್ರಕರಣದಲ್ಲಿ ಮೋದಿಯವರಿಗಿಂತಲೂ ಹೆಚ್ಚು ಮಾಹಿತಿ ಮಲ್ಯ ಕಂಪನಿಯ ಪರ ವಕೀಲರೂ ಆದ ಕಾಂಗ್ರೆಸ್ ನಾಯಕ ಚಿದಂಬರ ಅವರ ಬಳಿ ಇದೆ ಎನ್ನುವುದನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುತ್ತದೆಯೇ?
ಪ್ರಶ್ನೆ ಐದು: ಚಿದಂಬರಂ ಅವರು ನ್ಯಾಯಾಲಯದ ಒಳಗೆ ಮಲ್ಯ ಅವರು ತಪ್ಪಿತಸ್ಥರಲ್ಲ ಎಂದು ವಾದಿಸಿ, ನ್ಯಾಯಾಲಯದ ಹೊರಗೆ ಮಲ್ಯ ಒಬ್ಬ ತಪ್ಪಿತಸ್ಥ ಎಂದು ಹೇಳಿದರೆ ದೇಶದ ಪ್ರಜೆಗಳು ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ವಾದಿಸುವ ನ್ಯಾಯಾಲಯದೊಳಗಿನ ಅವರ ಹೇಳಿಕೆಗಳನ್ನು ನಂಬಬೇಕೋ ಅಥವಾ ಒಬ್ಬ ಕಾಂಗ್ರೆಸ್ ಪಕ್ಷದ ರಾಜಕಾರಣಿಯಾಗಿ ಹೊರಗೆ ಅವರು ಮಾಡುವ ಆರೋಪಗಳನ್ನು ನಂಬಬೇಕೋ?
ಪ್ರಶ್ನೆ ಆರು: ನ್ಯಾಯಾಲಯದಲ್ಲಿ ಚಿದಂಬರಂ ಅವರು ಕೇಂದ್ರ ಸಚಿವರಾಗಿರುವಾಗಲೇ ಮಲ್ಯ ಅವರ ಕಂಪನಿಗಳು ಸಾಲ ಪಡೆದ ಪ್ರಕರಣಗಳೇನಾದರೂ ವಿಚಾರಣೆಗೆ ಬಂದರೆ ಆಗ ಅವರು ಒಬ್ಬ ವೃತ್ತಿಪರ ವಕೀಲರಾಗಿ ಮಲ್ಯ ಅವರ ಪರ ವಾದ ಮಂಡಿಸುತ್ತಾರೋ ಅಥವಾ ಒಬ್ಬ ರಾಜಕಾರಣಿಯಾಗಿ ಬದಲಾಗಿ ವಾದ ಮಂಡಿಸುವುದರಿಂದ ಹಿಂದೆ ಸರಿಯುತ್ತಾರೋ?
ಪ್ರಶ್ನೆ ಏಳು: ಒಬ್ಬ ಮಲ್ಯ ಅವರ ಕಂಪನಿಯ ಪರ ನ್ಯಾಯವಾದಿಯಾಗಿ, ಮಲ್ಯ ಅವರ ಯಾವ ಯಾವ ಕಂಪನಿಗಳು ಯಾವ ಸರ್ಕಾರದ ಅವಧಿಯಲ್ಲಿ ಎಷ್ಟೆಷ್ಟು ಸಾವಿರ ಕೋಟಿ ಸಾಲ ಪಡೆದಿವೆ ಎನ್ನುವ ಸಂಪೂರ್ಣ ಮಾಹಿತಿ ಕಾಂಗ್ರೆಸ್ ನಾಯಕ ಚಿದಂಬರಂ ಅವರ ಬಳಿ ಇದೆ ಎಂದು ನಾವು ನಂಬಬಹುದಲ್ಲವೇ?
ಪ್ರಶ್ನೆ ಎಂಟು: ಇದು ಅವರ ವೃತ್ತಿಗೆ ಸಂಬಂಧಿಸಿದ ವಿಷಯವೇ ಹೊರತು ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಯನ್ನೇ ಪರಿಗಣಿಸುವುದಾದರೆ ಮಲ್ಯ ಅವರ ಪ್ರಕರಣದಲ್ಲಿ ಮೋದಿಯವರ ಮೇಲೆ ಆರೋಪ ಮಾಡುತ್ತಿರುವುದು ಕೇವಲ ರಾಜಕಾರಣ ಎಂದು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುತ್ತದೆಯೇ?
ಪ್ರಶ್ನೆ ಒಂಬತ್ತು: ಆರೋಪಿಯ ವಿರುದ್ಧ ಹೋರಾಟ ಮಾಡಿದವರೇ ಆ ಆರೋಪಿಯ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿ ರಕ್ಷಿಸುವುದು ನೈತಿಕವಾಗಿ ಎಷ್ಟು ಸರಿ?
ಪ್ರಶ್ನೆ ಹತ್ತು: ಆರೋಪಿಯೊಬ್ಬ ವಂಚಕನೆಂದು ಗೊತ್ತಿದ್ದೂ ಆತನ ಮತ್ತು ಆತನ ಕಂಪನಿಯ ಪರ ವಾದ ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಅವರು ಬೇಷರತ್ ಆಗಿ ಭಾರತೀಯ ಪ್ರಜೆಗಳೆದುರು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ?
ಈ ಎಲ್ಲಾ ಪ್ರಶ್ನೆಗಳೂ ಈ ದೇಶದ ಪ್ರಜೆಗಳ ಪ್ರಶ್ನೆಗಳು. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಮಲ್ಯ ಅವರನ್ನು ವಂಚಕ ಎನ್ನುತ್ತಲೇ ಮಲ್ಯ ಅವರ ಪರ ವಾದ ಮಂಡಿಸಿ ಅವರನ್ನು ರಕ್ಷಿಸಲೆತ್ನಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ಕರ್ತವ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.