ಮೊನ್ನೆ ಅಮೇರಿಕದ ಕ್ರಿಶ್ಚಿಯನ್ ಮತಪ್ರಚಾರಕ ಇವ್ಯಾಂಜಲಿಸ್ಟ್ ಜಾನ್ ಆಲ್ಲೆನ್ ಚಾವ್ ಅಂಡಮಾನಿನ ಸೆಂಟಿನೆಲ್ ದ್ವೀಪದ ಬುಡಕಟ್ಟು ಜನಾಂಗದ ಬಾಣಗಳ ದಾಳಿಗೆ ಬಲಿಯಾದ. ಅಂಡಮಾನಿನ ದ್ವೀಪ ಸಮೂಹಗಳಲ್ಲಿ ಒಂದಾದ ಸೆಂಟಿನೆಲ್ ದ್ವೀಪದಲ್ಲಿ ಸಹಸ್ರಾರು ವರ್ಷಗಳಿಂದ ಹೊರ ಪ್ರಪಂಚಕ್ಕೆ ತೆರೆದುಕೊಳ್ಳದೆಯೇ ಜೀವನ ನಡೆಸುತ್ತಿರುವ ಬುಡಕಟ್ಟು ಜನಾಂಗದ ಜನರನ್ನು ಕ್ರೈಸ್ತ ಮತದೆಡೆಗೆ ಸೆಳೆಯಲು ಜಾನ್ ಅಲ್ಲಿಗೆ ಹೋಗಿದ್ದ. ಭಾರತ ಸರಕಾರವು ಅಂಡಮಾನ್ ದ್ವೀಪದಲ್ಲಿ ವಾಸಿಸುತ್ತಿರುವ ಹಲವು ಬುಡಕಟ್ಟು ಜನರ ರಕ್ಷಣಿಗಾಗಿ ಅವರು ವಾಸಿಸುವ ದ್ವೀಪಗಳಿಗೆ ಪ್ರವೇಶವನ್ನು ನಿಷೇಧಿಸಿದೆ. ಅಲ್ಲಿಗೆ ವಿದೇಶೀಯರೂ ಸೇರಿದಂತೆ ಯಾವುದೇ ಪ್ರವಾಸಿಗರು ಸುಳಿಯದಂತೆ ಭಾರತೀಯ ನೌಕಾಪಡೆಯು ಕಟ್ಟು ನಿಟ್ಟಿನ ಕಣ್ಗಾವಲನ್ನೂ ಹಾಕಿದೆ. ಆದರೆ ಜಾನ್ ಸ್ಥಳಿಯ ಮೀನುಗಾರರ ಸಹಾಯದಿಂದ ಕೋಸ್ಟ್ ಗಾರ್ಡ್ಗಳ ಕಣ್ತಪ್ಪಿಸಿ ಸೆಂಟಿನಲ್ ದ್ವೀಪಕ್ಕೆ ತೆರಳಿದ್ದ. ಕೇವಲ ಬುಡಕಟ್ಟು ಜನರಿಗೆ ಮಾತ್ರ ಅವನು ಆಮಿಷ ಒಡ್ಡಲಿಲ್ಲ. ಆ ಮೀನುಗಾರರಿಗೂ ಇಪ್ಪತ್ತೈದು ಸಾವಿರ ಹಣ ಕೊಟ್ಟಿದ್ದ ಎನ್ನುವ ಸುದ್ದಿಯೂ ಇದೆ. ಜೊತೆಗೆ ಯೆಸುವಿನ ಸಂದೇಶವನ್ನು ಸೆಂಟಿನಲ್ ಬುಡಕಟ್ಟು ಜನಾಂಗದವರಿಗೆ ತಲುಪಿಸಲು ತೆರಳುತ್ತಿದ್ದೇನೆ ಅಂತಲೂ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ.
ಬುಡಕಟ್ಟುಜನರನ್ನು ಆಕರ್ಷಿಸಲು ರೇಸರ್, ಸೇಫ್ಟಿ ಪಿನ್ನಂತಹ ವಸ್ತುಗಳನ್ನು ಆತ ಅಲ್ಲಿಗೆ ಕೊಂಡುಹೋಗಿದ್ದ. ಯೇಸುವನ್ನು ಸ್ತುತಿಸುವ ಹಾಡುಗಳನ್ನು ಅವರಿಗಾಗಿ ಹಾಡಿದ್ದ. ಆದರೆ ಹೊರ ಜನರೊಂದಿಗೆ ಬೆರೆಯಲು ಇಷ್ಟಪಡದ ಮೂಲನಿವಾಸಿಗಳು ಬಾಣ ಪ್ರಯೋಗಿಸಿ ಜಾನ್ನನ್ನು ಸಾಯಿಸಿದರು. ಇನ್ನೂ ಜಾನ್ನ ಕಳೇಬರ ಸಿಕ್ಕಿಲ್ಲ. ಜೀವವನ್ನು ಒತ್ತೆ ಇಟ್ಟಾದರೂ ಮತಾಂತರಿಸುವ ಮನಸ್ಥಿತಿ ಜಾನ್ಗೆ ಬಂದದ್ದಾದರೂ ಹೇಗೆ?
ಕ್ರೈಸ್ತ ಮತವು ಯುರೋಪಿನಲ್ಲಿ ಉಗಮಗೊಂಡು ಅಮೇರಿಕಾ ಖಂಡ, ಆಫ್ರಿಕಾ ಖಂಡ, ಆಸ್ಟ್ರೇಲಿಯಾ ಖಂಡಗಳಲ್ಲಿ ಅಲ್ಲಿನ ಮೂಲ ನಿವಾಸಿಗಳನ್ನು ಹಾಗೂ ಮೂಲ ಸಂಸ್ಕೃತಿಗಳನ್ನು ಹತ್ತಿಕ್ಕಿಯೇ ಬೆಳೆಯಿತು. ಕ್ರೈಸ್ತ ಮತವನ್ನು ಒಪ್ಪದ ಆಯಾ ಪ್ರದೇಶಗಳ ಮೂಲ ನಿವಾಸಿಗಳನ್ನು ಕೊಂದು ಹಾಕಲಾಯಿತು. ಹಲವಾರು ಸಾಮ್ರಾಜ್ಯಗಳು ಕ್ರೈಸ್ತ ಮತದ ವಿಸ್ತರಣಾವಾದಕ್ಕೆ ಸಿಲುಕಿ ನಾಶವಾದವು. ದಕ್ಷಿಣ ಅಮೆರಿಕದ ಇಂಕಾ ಸಾಮ್ರಾಜ್ಯವು ಇವುಗಳಲ್ಲಿ ಒಂದು. ಅವರು ಪಾಲಿಸುತ್ತಿದ್ದ ಮತವೂ ಇಂಕಾ ಮತ. ಇಂಕಾ ಸಾಮ್ರಾಜ್ಯವನ್ನು ಆಕ್ರಮಿಸಿದ ಸ್ಪಾನಿಷರು ಅಲ್ಲಿಯ ಅಪಾರ ಸಂಪತ್ತನ್ನು ಕೊಳ್ಳೆಹೊಡೆದದ್ದು ಮಾತ್ರವಲ್ಲದೆ ಇಂಕಾ ಸಾಮ್ರಾಜ್ಯದ ಕೊನೇ ಅಧಿಪತಿ ಅತಾಹುವಲ್ಪಾನನ್ನು ಕ್ರಿ ಶ. 1533 ರಲ್ಲಿ ಕುತಂತ್ರದಿಂದ ಬಂಧಿಸಿದರು. ಒಂದು ಕೋಣೆ ತುಂಬುವಷ್ಟು ಚಿನ್ನವನ್ನು ಕೊಟ್ಟರೆ ಅತಾಹುವಲ್ಪಾನನ್ನು ಬಿಡುಗಡೆ ಮಾಡುವುದಾಗಿ ಶರತ್ತು ಒಡ್ಡಲಾಯಿತು. ಆದರೆ ಕೋಣೆ ತುಂಬಾ ಚಿನ್ನವನ್ನು ಕೊಟ್ಟರೂ ಅತಾಹುವಲ್ಪಾನನ್ನು ಬಿಡದ ಸ್ಪಾನಿಷರು ಆತನನ್ನು ಬಲವಂತವಾಗಿ ಕ್ರೈಸ್ತ ಮತಕ್ಕೆ ಮತಾಂತರಿಸಿ ಕೊನೆಗೆ ಜೀವಂತವಾಗಿ ಸುಟ್ಟರು. ಅತಾಹುವಲ್ಪಾನೊಂದಿಗೆ ಇಂಕಾ ಸಾಮ್ರಾಜ್ಯ, ಸಂಸ್ಕೃತಿ, ಭಾಷೆ, ಜೀವನಪದ್ಧತಿ ಹಾಗೂ ಒಂದು ಜನಾಂಗವೇ ನಾಶವಾಗಿ ಹೋಯಿತು. ಅಲ್ಲೆಲ್ಲಾ ಕ್ರೈಸ್ತ ಮತವೇ ತುಂಬಿ ಹೋಯಿತು. ಇಂದು ದಕ್ಷಿಣ ಅಮೇರಿಕದುದ್ದಕ್ಕೂ ಅಂದರೆ ಪೆರು, ಬ್ರೆಝಿಲ್, ಮೆಕ್ಸಿಕೋ, ಅರ್ಜೆಂಟೀನಾ ಇಲ್ಲೆಲ್ಲಾ ಕ್ರೈಸ್ತ ಮತವೇ ಆಚರಣೆಯಲ್ಲಿದೆ.
ಆಫ್ರಿಕಾ ಖಂಡದಲ್ಲೂ ವಿವಿಧ ಬುಡಕಟ್ಟುಗಳ ಜನರ ಮತಾಂತರ ಅವ್ಯಾಹತವಾಗಿ ವ್ಯವಸ್ಥಿತವಾಗಿ ನಡೆಯಿತು. ಜನರನ್ನು ಬೆದರಿಸಿ ಅಥವಾ ಆಮಿಷವೊಡ್ಡಿ ಮತಾಂತರಿಸಲಾಯಿತು. ಮತಾಂತರಿಸಿ ಅಲ್ಲಿನ ಮೂಲ ನಿವಾಸಿಗಳ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಆಫ್ರಿಕಾದ ಜನ ನಾಯಕ ಡೆಸ್ಮಂಡ್ ಟು ಟು ಆಫ್ರಿಕಾದಲ್ಲಿ ನಡೆದ ಕ್ರೈಸ್ತ ಮತ ವಿಸ್ತರಣಾ ವ್ಯವಸ್ಥೆಯ ಬಗ್ಗೆ ಹೀಗೆ ಹೇಳಿದ್ದಾರೆ ಕ್ರೈಸ್ತ ಮಿಷನರಿಗಳು ಆಫ್ರಿಕಾಗೆ ಬಂದಾಗ ಅವರ ಬಳಿ ಬೈಬಲ್ ಇತ್ತು, ನಮ್ಮ ಬಳಿ ಭೂಮಿ ಇತ್ತು. ಅವರು ನಾವು ಪ್ರಾರ್ಥಿಸೋಣ ಎಂದು ಹೇಳಿದರು. ಪ್ರಾರ್ಥನೆಗೆ ನಾವು ಕಣ್ಣುಗಳನ್ನು ಮುಚ್ಚಿಕೊಂಡೆವು. ನಾವು ಕಣ್ಣು ತೆರೆದಾಗ ನಮ್ಮ ಬಳಿ ಬೈಬಲ್ ಇತ್ತು, ನಮ್ಮ ನೆಲ ಅವರ ಬಳಿ ಇತ್ತು ಹೀಗೆ ಕ್ರೈಸ್ತ ಮತವನ್ನು ವಿಸ್ತರಿಸುವುದು ಮತ್ತು ಭೂಮಿಯನ್ನು ವಶಪಡಿಸಿಕೊಳ್ಳುವುದು ಎಲ್ಲೆಡೆ ಜೊತೆಜೊತೆಗೇ ಸಾಗಿತು.
ಭಾರತದಲ್ಲೂ ಮತಾಂತರ ಅವ್ಯಾಹತವಾಗಿ ಸಾಗಿತು. ಗೋವಾಕ್ಕೆ ಪೊರ್ಚುಗಿಸರೊಡನೆ ಅಗಮಿಸಿದ ಕ್ರೈಸ್ತ ಪ್ರಚಾರಕರು ಅಲ್ಲಿನ ಜನರನ್ನು ಬಲವಂತವಾಗಿ ಮತಾಂತರಿಸಿದುದು ಕ್ರೂರ ಇತಿಹಾಸ. ಗೋವಾದಲ್ಲಿ ಕ್ರೈಸ್ತ ಮತವನ್ನು ಪಾಲಿಸದ ಸಹಸ್ರ ಸಹಸ್ರ ಜನರನ್ನು ಇಂಕ್ವಿಸಿಷನ್ ಹೆಸರಿನಲ್ಲಿ ಜೀವಂತವಾಗಿ ದಹಿ ಕೊಲ್ಲಲಾಯಿತು. ಇದಲ್ಲದೆ ಈಶಾನ್ಯ ರಾಜ್ಯಗಳಲ್ಲಿ ಬಹುತೇಕ ಬುಡಕಟ್ಟು ಜನಾಂಗಗಳನ್ನು ವಿವಿಧ ದಾರಿಗಳ ಮೂಲಕ ಕ್ರೈಸ್ತ ಮತಕ್ಕೆ ಮತಾಂತರಿಸಲಾಯಿತು. ಬುಡಕಟ್ಟಿನ ಜನರೇ ತುಂಬಿದ್ದ ನಾಗಾಲ್ಯಾಂಡ್ನಲ್ಲಿ 88% ಜನರು ಹಾಗೂ ಮಿಜೋರಾಂ ರಾಜ್ಯದ ಜನಸಂಖ್ಯೆಯಲ್ಲಿ ಈಗ 87% ಜನರು ಕ್ರೈಸ್ತರಾಗಿದ್ದಾರೆ, ಮೇಘಾಲಯದ 83% ಜನರು, ಮಣಿಪುರದ 41%, ಅರುಣಾಚಲ ಪ್ರದೇಶದ 30% ರಷ್ಟು ಜನರು ಕ್ರೈಸ್ತ ಮತಾನುಯಾಯಿಗಳಾಗಿದ್ದಾರೆ. ಬುಡಕಟ್ಟುಜನಾಂಗದ ಮುಗ್ಧತೆ ಮತಾಂತರಕ್ಕೆ ಪ್ರಮುಖ ಅಸ್ತ್ರವಾಯಿತು. ಸರಕಾರೀ ಜನ ಕಲ್ಯಾಣ ಯೊಜನೆಗಳು ಈ ಭಾಗವನ್ನು ತಲುಪದೇ ಇದ್ದುದು, ಮೂಲಭೂತ ಸೌಕರ್ಯಗಳ ಕೊರತೆ ಮಿಶನರಿಗಳ ಮತಾಂತರದ ಕೆಲಸವನ್ನು ಸುಲಭವಾಗಿಸಿತು. ಅದಲ್ಲದೆ ಭಾರತದ ಇತರ ಭಾಗಗಳ ಜನರ ಬಡತನ, ಅನಾರೋಗ್ಯ ಹಾಗೂ ಭಾರತೀಯ ಸಮಾಜದಲ್ಲಿದ್ದ ಮೇಲು-ಕೀಳು, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಮುಂತಾದವುಗಳೂ ಮತಾಂತರಕ್ಕೆ ನೆಪವಾಯಿತು. ಆದರೂ ಮತ ವಿಸ್ತರಣೆಯ ಹಪಾಹಪಿ ಮುಗಿದಿಲ್ಲ, ಮುಗಿಯುವುದೂ ಇಲ್ಲ. ಸೇವೆಯ ಹೆಸರಿನಲ್ಲಿಯೂ, ವಿದ್ಯಾಭ್ಯಾಸದ ಹೆಸರಿನಲ್ಲಿಯೂ ಇದು ಮುಂದುವರಿದಿದೆ.
ಸೆಂಟಿನೆಲ್ ದ್ವೀಪದ ಬೆರಳೆಣಿಕೆಯ ಬುಡಕಟ್ಟು ಜನಾಂಗವನ್ನೂ ಬಿಟ್ಟು ಬಿಡಲಾರದ ಮತಾಂಧತೆ ಜಾನ್ನ ಜೀವವನ್ನು ಬಲಿಕೊಟ್ಟಿತು. ಆದರೆ ಭರತಭೂಮಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಮತ ವಿಸ್ತರಣಾವಾದಕ್ಕೆ ಸೆಂಟಿನಲ್ ಮೂಲನಿವಾಸಿಗಳು ಪ್ರತಿರೋಧವನ್ನು ತೋರಿದರು. ಇದು ಇಲ್ಲಿಗೆ ನಿಲ್ಲುತ್ತೋ, ಮುಂದೆಯೂ ಸಾಗುತ್ತೋ ಕಾದುನೋಡಬೇಕಷ್ಟೇ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.