ಅದ್ಭುತ ಶಿಲ್ಪಕಲೆಗಳ ಹಾಗೂ ದೇವಾಲಯಗಳ ತವರು ಎಂದೇ ಪ್ರಸಿದ್ಧವಾಗಿರುವ ಹಾಸನದ ಹಾಸನಾಂಬಾ ದೇವಾಲಯ ಮತ್ತೆ ಪವಾಡವನ್ನೇ ಸೃಷ್ಟಿಸಿದೆ. ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಅಧಿಕೃತ ತೆರೆ ಬಿದ್ದಿದೆ. ಕಳೆದ ನವೆಂಬರ್ 1 ರಂದು ತೆರೆಯಲಾಗಿದ್ದ ದೇವಾಲಯದ ಬಾಗಿಲನ್ನು ನವೆಂಬರ್ 9ರಂದು ಮುಚ್ಚುವ ಮೂಲಕ ಈ ವರ್ಷದ ಹಾಸನಾನೆಂಬ ದೇವಿಯ ಸಾರ್ವಜನಿಕ ದರ್ಶನಾವಕಾಶಕ್ಕೆ ತೆರೆ ಬಿದ್ದಿದೆ. ನವೆಂಬರ್ 1ರಂದು ಮಧ್ಯಾಹ್ನ ದೇವಾಲಯದ ಬಾಗಿಲು ತೆರೆಯಲಾಯಿತಾದರೂ ದೇಗುಲದ ಸ್ವಚ್ಛತೆ, ಅಲಂಕಾರ ಹಾಗೂ ಪೂಜಾ ವಿಧಿ ವಿಧಾನಗಳಿರುವುದರಿಂದ ಆ ಮೊದಲ ದಿನ ಮತ್ತು ಕೊನೆಯ ದಿನವಾದ ನವೆಂಬರ್ 9ರಂದು ದರ್ಶನಕ್ಕೆ ಅವಕಾಶವಿರದ ಕಾರಣ ಭಕ್ತರಿಗೆ ದರ್ಶನ ಮಾಡಲು ಅವಕಾಶ ದೊರೆತಿದ್ದು ಬಾಕಿ ಉಳಿದ ಕೇವಲ 7 ದಿನಗಳು ಮಾತ್ರ.
ಆ 7 ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ತೆರಳಿದ್ದಾರೆ. ಆದರೆ ಕೇವಲ ಆ ಏಳು ದಿನಗಳ ಅವಧಿಯಲ್ಲಿ ಈ ಬಾರಿ ಹಾಸನಾಂಬೆಯ ದೇವಾಲಯದಿಂದ ಸರ್ಕಾರಕ್ಕೆ ದೊರೆತ ಆದಾಯ 2.64 ಕೋಟಿ ರೂ! ಭಾರತದ ಒಂದು ಸಾಧಾರಣ ದೇವಾಲಯ ಕೇವಲ ಏಳು ದಿನದಲ್ಲಿ ಸರ್ಕಾರಕ್ಕೆ ಎರಡೂವರೆ ಕೋಟಿಗೂ ಹೆಚ್ಚು ಆದಾಯ ಗಳಿಸಿಕೊಡುತ್ತದೆ ಎಂದರೆ ಇದು ಪವಾಡವಲ್ಲದೆ ಮತ್ತೇನು?
ಆದರೆ ನಿಜವಾದ ಪವಾಡವೆಂದರೆ ಇದಲ್ಲ. ಹಾಸನಾಂಬ ದೇವಾಲಯದ ಬಾಗಿಲು ಮುಚ್ಚುವ ಮುನ್ನ ದೇವರಿಗೆ ಮೂಡಿಸಲಾಗುವ ಹೂವು,ಇರಿಸಲಾಗುವ ಅನ್ನ ಹಾಗೂ ಹಚ್ಚಲಾಗುವ ದೀಪಗಳು ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆಯುವವರೆಗೂ ಬಾಡದೆ,ಹಳಸದೇ,ಆರದೆ ಇರುತ್ತವೆ ಎನ್ನುವ ನಂಬಿಕೆಯೊಂದು ಇತ್ತೀಚಿನ ದಿನಗಳಲ್ಲಿ ಬೆಳೆದುಬಂದಿತ್ತು. ಆ ನಂಬಿಕೆಯಿಂದಲೇ ಭಕ್ತಾದಿಗಳು ಹೆಚ್ಚಾಗಿ ಬರುತ್ತಾರೆ ಎನ್ನುವ ನಂಬಿಕೆಯೂ ಸಾರ್ವಜನಿಕರು ಹಾಗೂ ವಿಚಾರವಾದಿಗಳಲ್ಲಿ ಬೆಳೆದುಬಂದಿತ್ತು. ಹಾಗೆ ಅಂತಹಾ ಪವಾಡಗಳಿಂದಲೇ ದೇವಾಲಯವೊಂದು ಜನಪ್ರಿಯವಾಗುತ್ತಿದೆ ಎನ್ನುವ ಅಭಿಪ್ರಾಯ ಬಲವಾಗುತ್ತಿದ್ದಂತೆಯೇ ಅಂತಹಾ ನಂಬಿಕೆಯೊಂದನ್ನು ಸುಳ್ಳು ಎಂದು ಸಾಬೀತುಪಡಿಸಿಬಿಟ್ಟರೆ ಭಕ್ತರು ಅಲ್ಲಿಗೆ ಬರುವುದನ್ನು ನಿಲ್ಲಿಸುತ್ತಾರೆ ಮತ್ತು ಆ ಮೂಲಕ ಅವರನ್ನು ನಾಸ್ತಿಕರನ್ನಾಗಿಸಬಹುದು ಎನ್ನುವ ಆಲೋಚನೆಯೊಂದು ರಾಜ್ಯದ ವಿಚಾರವಾದಿಗಳ ಮನದಲ್ಲಿ ಚಿಗುರೊಡೆದಿರಬಹುದು. ಅದೇ ಉದ್ದೇಶದ ಕಾರ್ಯಸಾಧನೆಗಾಗಿ ಒಂದಷ್ಟು ವಿಚಾರವಾದಿಗಳು ದುಂಡು ಮೇಜಿನ ಸಭೆ ನಡೆಸಿ ಅಂತಹಾ ಪವಾಡಗಳು ಸುಳ್ಳೆಂದು ಸಾಬೀತುಪಡಿಸಲು ತಮಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಅಷ್ಟೇ ಅಲ್ಲದೆ ಅದೇ ನಂಬಿಕೆಯ ವಿಚಾರವಾಗಿ ನ್ಯಾಯಾಲಯದ ಕದ ತಟ್ಟಲು ತೀರ್ಮಾನಿಸಿದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ, ಹಾಸನಾಂಬೆಯ ಪವಾಡದ ಕುರಿತು ತಾನು ಕಳೆದ ವರ್ಷದಂತೆ ಕರಪತ್ರ ಹೊರಡಿಸುವುದಿಲ್ಲ ಎಂದು ಒಪ್ಪಿಕೊಂಡಿತು. ಏತನ್ಮಧ್ಯೆ ದೇವಾಲಯದ ಪ್ರಧಾನ ಅರ್ಚಕರು ಹೇಳಿಕೆ ನೀಡಿ, “ದೇವಾಲಯದಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ, ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ಹಣತೆ ಹಚ್ಚಿಡಲಾಗುತ್ತದೆ. ಇಟ್ಟ ನೈವೇದ್ಯ ಹಳಸಲ್ಲ, ಹೂ ಬಾಡಲ್ಲ ಎನ್ನುವುದೆಲ್ಲಾ ಕೇವಲ ನಂಬಿಕೆಗಳಷ್ಟೇ ಹೊರತೂ ಅವು ನಿಜವೇನಲ್ಲ, ಅಲ್ಲಿ ಬಾಗಿಲು ಮುಚ್ಚುವಾಗ ಹೂ ಅಥವಾ ಯಾವುದೇ ನೈವೇದ್ಯ ಇಡುವುದಿಲ್ಲ. ಬಾಗಿಲು ತೆರೆಯುವ ಮುಂಚೆ ಹೊಸದಾಗಿ ಬತ್ತಿ ಹಚ್ಚಲಾಗುತ್ತದೆ. ಅನ್ನ ಇಟ್ಟು, ಹೂ ಹಾಕಲಾಗುತ್ತದೆ. ಎಲ್ಲವೂ ಅವರವರ ಭಾವಕ್ಕೆ, ಭಕುತಿಗೆ ಮತ್ತು ನಂಬಿಕೆಗೆ ಬಿಟ್ಟಿದ್ದು” ಎಂದು ಹೇಳುವ ಮೂಲಕ ಎಲ್ಲ ಗೊಂದಲಗಳಿಗೂ ತೆರೆ ಎಳೆದರು.
ಆದರೆ ಪವಾಡ ನೋಡಿ; ಅಲ್ಲಿ ನಡೆಯುವ ಪವಾಡದಿಂದಾಗಿಯೇ ಭಕ್ತರು ಸಾಗರೋಪಾದಿಯಲ್ಲಿ ದರ್ಶನ ಮಾಡಲು ಆಗಮಿಸುತ್ತಾರೆ ಎಂದು ಭಾವಿಸಲಾಗಿದ್ದ ದೇವಾಲಯಕ್ಕೆ, ಅಲ್ಲಿ ಯಾವುದೇ ಪವಾಡವೂ ನಡೆಯುವುದಿಲ್ಲ ಎನ್ನುವುದು ಗೊತ್ತಾದ ನಂತರವೂ ಭಕ್ತರ ಸಂಖ್ಯೆ ನಿರೀಕ್ಷೆಗೂ ಮೀರಿ ಹರಿದುಬಂತು. ಅದು ಎಷ್ಟೆಂದರೆ ಲಕ್ಷಾಂತರ ಭಕ್ತರು ದರ್ಶನ ಮಾಡಿದ ನಂತರವೂ ಮತ್ತೂ ಸಾಕಷ್ಟು ಜನ ಭಕ್ತರು ದರ್ಶನ ಭಾಗ್ಯ ಸಿಗದೇ ನಿರಾಶೆಯಿಂದ ಮರಳಬೇಕಾಯಿತು! ಅಲ್ಲಿಗೆ ಕೇವಲ ಪವಾಡವನ್ನೇ ನಂಬಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ ಎನ್ನುವ ವಿಚಾರವಾದಿಗಳ ಊಹೆಯನ್ನು ಸಂಪೂರ್ಣ ಸುಳ್ಳು ಮಾಡಿದ ಹಾಸನಾಂಬೆ ಮತ್ತೊಂದು ದೊಡ್ಡ ಪವಾಡವನ್ನೇ ಮಾಡಿಬಿಟ್ಟಳು.
ಭಾರತದ ಪ್ರತಿಯೊಂದು ದೇವಾಲಯಗಳ ಜೊತೆಗೂ ಅದರದ್ದೇ ಆದ ಒಂದಷ್ಟು ಐತಿಹ್ಯ, ಸ್ಥಳ ಪುರಾಣ, ನಂಬಿಕೆ ,ಪ್ರತೀತಿ, ಸ್ಥಳೀಯ ಪ್ರಾಕೃತಿಕ ವಿಸ್ಮಯಗಳು ಸೇರಿಕೊಂಡಿರುತ್ತವೆ. ಅವುಗಳನ್ನು ಕೇವಲ ವೈಜ್ಞಾನಿಕ ದೃಷ್ಟಿಕೋನದಿಂದ ಮಾತ್ರ ನೋಡಿ ಸರಿ ಅಥವಾ ತಪ್ಪು ಎಂದು ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ವಿಚಾರವಾದಿಗಳಿಗೂ ಅದು ಅರಿವಿರದ ವಿಚಾರವೇನಲ್ಲ. ಆದರೂ ಕೆಲ ಹಿತಾಸಕ್ತಿಗಳಿಗಾಗಿ ಅವರುಗಳು ಅಂತಹಾ ಕೆಲಸಗಳಿಗೆ ಕೈ ಹಾಕುತ್ತಲೇ ಇದ್ದಾರೆ.
ಕಾಕತಾಳೀಯವೆನ್ನುವಂತೆ ಈ ವರ್ಷದ ಹಾಸನಾಂಬೆಯ ದರ್ಶನಕ್ಕೆ ವಿದ್ಯುಕ್ತವಾಗಿ ತೆರೆ ಬಿದ್ದ ದಿನವೇ ಹಾಸನಾಂಬೆಯ ಪವಾಡವನ್ನು ಬಯಲು ಮಾಡಬೇಕೆಂದು ಹೋರಾಟ ನಡೆಸಿದ ಪ್ರಸಿದ್ಧ ವಿಚಾರವಾದಿಯೊಬ್ಬರು ಅಕಾಲಿಕವಾಗಿ ಮೃತಪಟ್ಟಿದ್ದಾರೆ! ಮುಂದೊಂದು ದಿನ ಹಾಸನಾಂಬೆಯ ಪವಾಡ ಬಯಲು ಮಾಡ ಹೊರಟ ವಿಚಾರವಾದಿಗಳೇ ಹಾಸನಾಂಬೆಯ ದರ್ಶನದ ಕೊನೆಯ ದಿನದಂದು ಅಕಾಲಿಕವಾಗಿ ಮರಣ ಹೊಂದಿದ್ದೂ ಆ ದೇವರ ಪವಾಡಗಳಲ್ಲೊಂದು ಎಂದು ಅಲ್ಲಿನ ಭಕ್ತರು ನಂಬತೊಡಗಿದರೆ, ಈಗ ಹಾಸನಾಂಬೆಯ ಪವಾಡದ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಲಿಚ್ಛಿಸಿದ ವಿಚಾರವಾದಿಗಳು ಭಕ್ತರ ಆ ನಂಬಿಕೆಯನ್ನೂ ನ್ಯಾಯಾಲಯದ ವ್ಯಾಪ್ತಿಗೆ ಕೊಂಡೊಯ್ದು ಅಂತಹಾ ನಂಬಿಕೆಗಳ ವಿರುದ್ಧ ಆದೇಶ ಹೊರಬರುವಂತೆ ಮಾಡಲು ಸಾಧ್ಯವಿದೆಯೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.