ವರ್ಷಗಳ ಹಿಂದೆ ಬೆಂಗಳೂರಿನ ಹೊರ ವಲಯದ ಎಟಿಎಂಗಳನ್ನೂ ಲೂಟಿ ಮಾಡುವ ಕಳ್ಳರ ಗುಂಪೊಂದು ಹುಟ್ಟಿಕೊಂಡಿತ್ತು. ಮಾರಕಾಸ್ತ್ರಗಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಆ ಕಳ್ಳರ ಗುಂಪಿನ ಯುವಕರು ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ಘಟಕಕ್ಕೆ ನುಗ್ಗಿ ಅಲ್ಲಿದ್ದ ಎಟಿಎಂ ಯಂತ್ರವನ್ನು ಹೊತ್ತೊಯ್ದಿದ್ದರು. ನಂತರ ಆ ಯಂತ್ರವನ್ನು ಕತ್ತರಿಸಿ ಅದರಲ್ಲಿದ್ದ ಲಕ್ಷಾಂತರ ಹಣವನ್ನು ದೋಚಿ, ಆ ಯಂತ್ರವನ್ನು ಕೆರೆಯೊಂದರಲ್ಲಿ ಎಸೆದಿದ್ದರು. ಅದೇ ರೀತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಘಟಕದಲ್ಲಿದ್ದ ಎಟಿಎಂ ಯಂತ್ರವನ್ನು ಹೊತ್ತೊಯ್ದು ಅದರಲ್ಲಿದ್ದ ಲಕ್ಷಾಂತರ ರೂ.ಗಳನ್ನೂ ದೋಚಿ, ನಂತರ ಆ ಯಂತ್ರವನ್ನು ಕೆರೆಯೊಂದರಲ್ಲಿ ಎಸೆದು ಪರಾರಿಯಾಗಿದ್ದರು. ಅದೇ ಗುಂಪು ಕೆನರಾ ಬ್ಯಾಂಕ್, ಸೌತ್ ಇಂಡಿಯಾ ಬ್ಯಾಂಕ್, ಕರೂರು ವೈಶ್ಯಾ ಬ್ಯಾಂಕ್ ಮುಂತಾದವುಗಳ ಎಟಿಎಂಗಳನ್ನೂ ಕಳವು ಮಾಡಲು ಯತ್ನಿಸಿತ್ತು.
ಪೊಲೀಸರಿಗೆ ಆ ಲೂಟಿಕೋರರು ದೊಡ್ಡ ತಲೆನೋವಾಗಿ ಪರಿಣಮಿಸಿದರು. ಆದರೆ ಕೊನೆಗೂ ಒಂದು ದಿನ ಸಿಸಿಟಿವಿ ದೃಶ್ಯಾವಳಿಂದ ಸುಳಿವನ್ನಾಧರಿಸಿ ಆ ಗುಂಪನ್ನು ಬಂಧಿಸಿ ಸೆರೆಮನೆಗಟ್ಟುವಲ್ಲಿ ಪೊಲೀಸರು ಯಶಸ್ವಿಯಾದರು. ನಮ್ಮ ಮಕ್ಕಳು ಉತ್ತಮ ಪ್ರಜೆಗಳಾಗಬೇಕು, ಹುಟ್ಟಿದ ಊರಿಗೆ ಹಾಗೂ ನಮಗೆ ಒಳ್ಳೆಯ ಹೆಸರು ತರಬೇಕು ಎಂದು ಕನಸು ಕಾಣುತ್ತಾ ಸಾಕಿ ಸಲಹಿದ್ದ ಪೋಷಕರ ಆಸೆ ನುಚ್ಚು ನೂರು ಮಾಡಿದ ಆ ಯುವಕರು ಜೈಲಿನ ಕಡೆಗೆ ನಡೆದರು.
ಇಷ್ಟಕ್ಕೂ ಕಷ್ಟಪಟ್ಟು ದುಡಿಯುವುದನ್ನು ಬಿಟ್ಟು ಎಟಿಎಂಗಳನ್ನು ಕಳವು ಮಾಡುವ ಯೋಚನೆ ಆ ಯುವಕರಿಗೆ ಬರಲು ಕಾರಣವಾದರೂ ಏನು ಗೊತ್ತೇ? ಎಟಿಎಂ ಘಟಕವೊಂದರ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಾರ್ತಾ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ರೋಚಕ ಸುದ್ದಿಯೊಂದು ಅವರನ್ನೂ ಆ ಕೆಲಸ ಮಾಡುವಂತೆ ಪ್ರೇರೇಪಿಸಿತ್ತು. ವಿಚಾರಣೆಯ ವೇಳೆ ಸ್ವತಃ ಆ ಆರೋಪಿಗಳೇ ಹಾಗೆಂದು ಹೇಳಿಕೆಯನ್ನೂ ಕೊಟ್ಟಿದ್ದರು.
ಛೆ! ಇಂತಹಾ ದುರಂತ. ಈ ದೇಶದ ಸರಿದಾರಿಯಲ್ಲಿ ನಡೆಸಬೇಕಾದ, ಉತ್ತಮ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಬೇಕಾಗಿದ್ದ, ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮಗಳ ಪ್ರೇರೇಪಣೆಯಿಂದಲೇ ಯುವಕರು ಕೆಟ್ಟ ದಾರಿ ಹಿಡಿಯುತ್ತಾರೆಂದರೆ? ಆದರೆ ಇದು ನಿಜ. ಕೇವಲ ಮೇಲಿನದೊಂದೇ ಅಲ್ಲದೆ ಇಂದಿನ ಬಹುತೇಕ ಅಪರಾಧ ಪ್ರಕರಣಗಳ ಹಿಂದೆ ಮಾಧ್ಯಮಗಳು ಪ್ರಸಾರ ಮಾಡುವ ನಕಾರಾತ್ಮಕ ಸುದ್ದಿಗಳ ಪ್ರಭಾವವಿದೆ. ಮಾಧ್ಯಮಗಳು ದೇಶದ ಹಿತ ಮರೆತು ತಮ್ಮ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲು ನಕಾರಾತ್ಮಕ ಸುದ್ದಿಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿವೆ. ಜನರಿಗೆ ಏನು ಬೇಕೋ ಅದನ್ನೇ ಕೊಡುತ್ತಿದ್ದೇವೆ ಎನ್ನುವ ಮೂಲಕ ಅಂತಹಾ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಲೂ ಇವೆ.
ಕ್ಷುಲ್ಲಕ ಬೀದಿ ಜಗಳಗಳನ್ನು ಪ್ರಸಾರ ಮಾಡುವಷ್ಟು ಸಮಯವನ್ನು ರಾಷ್ಟ್ರೀಯತೆಗೆ, ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಚಾರಗಳಿಗೆ ನೀಡುತ್ತಿಲ್ಲ. ಸೇನಾ ಆಯ್ಕೆ ಶಿಬಿರಗಳು ಅಲ್ಲಲ್ಲಿ ಆಗಾಗ ನಡೆಯುತ್ತಿರುತ್ತವೆ. ಎಷ್ಟೋ ಯುವಕರು ಆ ಬಗೆಗಿನ ಮಾಹಿತಿಗಳನ್ನು ಎದುರು ನೋಡುತ್ತಿರುತ್ತಾರೆ. ಆದರೆ ಅವು ಮಾಧ್ಯಮಗಳಲ್ಲಿ ಪ್ರಸಾರವಾಗುವುದೇ ಇಲ್ಲ. ಯಾವ ಯಾವ ಭಾಗದ ಯುವಕರು ಸೇನಾ ನೇಮಕಾತಿಯಲ್ಲಿ ಎಷ್ಟು ಆಸಕ್ತಿ ತೋರಿಸುತ್ತಿದ್ದಾರೆ ಎನ್ನುವ ಚರ್ಚೆಗಳು ಮಾಧ್ಯಮಗಳಲ್ಲಿ ನಡೆಯುವುದಿಲ್ಲ. ಅದೇ ಸಮಯದಲ್ಲಿ ಯಾವುದೋ ನಟನ ಮನೆಯ ಕೌಟುಂಬಿಕ ಸಮಸ್ಯೆಯ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಹಾಗಾದರೆ ಸೇನಾ ನೇಮಕಾತಿಗೆ ಸಂಬಂಧಿಸಿದ ಸುದ್ದಿಗಳ ಮಾಹಿತಿಗಾಗಿ ನಾನು ಯಾವ ಮಾಧ್ಯಮಗಳನ್ನು ಅನುಸರಿಸಬೇಕು? ಜನರಿಗೆ ಏನು ಬೇಕೋ ಅದನ್ನೇ ನೀಡುತ್ತೇವೆ ಎಂದು ಸಮರ್ಥಿಸಿಕೊಳ್ಳುವ ಮಾಧ್ಯಮಗಳಿಂದ ನನಗೇನು ಬೇಕೋ ಅದು ಏಕೆ ಸಿಗುತ್ತಿಲ್ಲ?
ಯಾವುದೋ ಜಿಲ್ಲೆಯಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯೊಂದು ಅಲ್ಲಿನ ಯಾವುದೋ ಸ್ಥಳೀಯ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿರುತ್ತದೆ. ಆ ಪರೀಕ್ಷೆಯಲ್ಲಿ ಬರೆಯಬೇಕಿದ್ದ ನಾನು ಹಿಂದಿನ ದಿನವೇ ನನ್ನೂರಿನಿಂದ ಹೊರಟು ಅಲ್ಲಿಗೆ ತಲುಪಬೇಕಾಗಿರುತ್ತದೆ. ದುರಾದೃಷ್ಟವೆಂದರೆ ನಾನು ಅಲ್ಲಿಗೆ ಹೋಗಿ ತಲುಪುವ ವರೆಗೂ ಆ ಪರೀಕ್ಷೆ ಮುಂದೂಡಲ್ಪಟ್ಟ ವಿಚಾರ ಗೊತ್ತೇ ಆಗಿರುವುದಿಲ್ಲ. ಹಾಗಾದರೆ ನನಗೆ ಸಿಗಬೇಕಾಗಿದ್ದ ಆ ಮಾಹಿತಿಗಾಗಿ ನಾನು ಯಾವ ಮಾಧ್ಯಮವನ್ನು ಆಶ್ರಯಿಸಬೇಕು? ಆ ಸುದ್ದಿಯಿರಬೇಕಾಗಿದ್ದ ಸ್ಥಳದಲ್ಲಿ ರಾಜಕಾರಣಿಯೊಬ್ಬರು ಇನ್ನೊಬ್ಬರ ಮೇಲೆ ಆಡಿದ ಬೈಗುಳಗಳನ್ನು ಚಿತ್ರ ಸಮೇತ ಪ್ರಕಟಿಸಿದ್ದು ಏಕೆ? ಜನರಿಗೆ ಏನು ಬೇಕೋ ಅದನ್ನೇ ನೀಡುತ್ತೇವೆ ಎಂದು ಸಮರ್ಥಿಸಿಕೊಳ್ಳುವ ಮಾಧ್ಯಮಗಳಿಂದ ನನಗೇನು ಬೇಕೋ ಅದು ಏಕೆ ಸಿಗುತ್ತಿಲ್ಲ?
ಬಹುಶಃ ಇದಕ್ಕೆಲ್ಲಾ ಒಂದೇ ಒಂದು ಪರಿಹಾರವೆಂದರೆ ಇಂದಿನ ಸಾಮಾಜಿಕ ಮಾಧ್ಯಮಗಳನ್ನು ನಾವು ಸಮರ್ಥವಾಗಿ ಬಳಸಿಕೊಳ್ಳುವುದು. ಆ ಮೂಲಕ ನಮಗೆ ಬೇಕಾದ ಸಕಾರಾತ್ಮಕ ಸುದ್ದಿಗಳನ್ನು ನಾವೇ ಅರಸಿಕೊಳ್ಳುವುದು. ನಮಗೆ ದೊರೆತ ಉತ್ತಮ, ಸಕಾರಾತ್ಮಕ ಸುದ್ದಿಗಳನ್ನು ಇತರರೊಂದಿಗೂ ಹಂಚಿಕೊಳ್ಳುವುದು. ಮಾಧ್ಯಮಗಳು ಉದ್ದೇಶಪೂರ್ವಕವಾಗಿ ನೀಡುವ ನಕಾರಾತ್ಮಕ ಸುದ್ದಿಗಳನ್ನು ತಿರಸ್ಕರಿಸುವುದು ಮತ್ತು ಆ ಮೂಲಕ ಅವುಗಳಿಗೂ ಸಕಾರಾತ್ಮಕ ಸುದ್ದಿಗಳನ್ನೇ ಪ್ರಸಾರ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.