ಶಬರಿಮಲೆಯ ಅಯ್ಯಪ್ಪ ದೇವಾಲಯದೊಳಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎನ್ನುವ ತೀರ್ಪು ಕೆಲವರಿಗೆ ಸಂತೋಷ ತಂದಿದ್ದರೆ ಇನ್ನು ಕೆಲವರನ್ನು ಕೆರಳಿಸಿದೆ. ಆದರೆ ಶ್ರೇಷ್ಠ ನ್ಯಾಯಾಲಯದ ತೀರ್ಪನ್ನು ಗೌರವಿಸುವುದು ಈ ದೇಶದ ಪ್ರತಿಯೊಬ್ಬನ ಕರ್ತವ್ಯ. ಅದೇ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೂಡಾ ಅವಕಾಶವಿದೆ. ಆದ್ದರಿಂದ ಮೊದಲು ನ್ಯಾಯಾಲಯದ ತೀರ್ಪನ್ನು ಗೌರವಿಸೋಣ.
ಆದರೆ ನ್ಯಾಯಾಲಯದ ತೀರ್ಪನ್ನು ವಿರೋಧಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಇನ್ನು ಕೆಲವರು “ತ್ರಿವಳಿ ತಲಾಕ್ ತೀರ್ಪಿನ ಪರ ಇದ್ದವರೇ ಇಂದು ಶಬರಿಮಲೆ ತೀರ್ಪಿನ ವಿರುದ್ಧ ಯಾಕಿದ್ದಾರೆ?” ಎಂದು ಪ್ರಶ್ನಿಸುತ್ತಿರುವುದು ಮತ್ತು ಆ ಮೂಲಕ ಶಬರಿಮಲೆ ಮತ್ತು ತ್ರಿವಳಿ ತಲಾಕ್ ವಿಚಾರಗಳೆರಡೂ ಒಂದೇ ರೀತಿಯವು ಎಂದು ಹೋಲಿಸುತ್ತಿರುವುದು ಮಾತ್ರ ನಿಜಕ್ಕೂ ಬಾಲಿಶತನವೇ ಸರಿ. ಅತ್ಯಂತ ದೊಡ್ಡ ಕಾನೂನು ಪಂಡಿತರು,ಪತ್ರಕರ್ತರು,ವಿಚಾರವಂತರೇ ಈ ಎರಡೂ ವಿಚಾರಗಳೂ ಒಂದೇ ಬಗೆಯವು ಎನ್ನುವಂತೆ ಹೋಲಿಸಿ ಜನರನ್ನು ಒಪ್ಪಿಸಲು ನೋಡುತ್ತಿರುವುದಂತೂ ಇನ್ನೂ ಆಘಾತಕಾರೀ ವಿಷಯ. ಹಾಗೆಂದು ಈ ವಿಚಾರವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ನಾನೊಬ್ಬ ಕೇವಲ ಜನಸಾಮಾನ್ಯನಷ್ಟೇ ಹೊರತೂ ದೊಡ್ಡ ಕಾನೂನು ಪಂಡಿತನಾಗಲೀ ಅಥವಾ ಆಧ್ಯಾತ್ಮ ಗುರುವಾಗಲೀ ಅಲ್ಲ.ಆದರೆ ಈ ದೇಶದಲ್ಲಿ ಕಾನೂನು ಪಂಡಿತರುಗಳಿಗಿಂತಲೂ,ಆಧ್ಯಾತ್ಮ ಗುರುಗಳಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿರುವುದು ನಮ್ಮಂತಹಾ ಜನಸಾಮಾನ್ಯರೇ ತಾನೇ? ಅದೂ ಅಲ್ಲದೆ ನಮ್ಮಂತಹಾ ಜನಸಾಮಾನ್ಯರ ಮಾರ್ಗದರ್ಶನಕ್ಕಾಗಿಯೇ ಕಾನೂನು ಪಂಡಿತರು,ಆಧ್ಯಾತ್ಮ ಗುರುಗಳು ಹುಟ್ಟಿಕೊಂಡಿರುವುದು ತಾನೇ? ಹಾಗಾಗಿ ಒಬ್ಬ ಜನಸಾಮಾನ್ಯನಾಗಿ ನನ್ನ ಅಭಿಪ್ರಾಯಗಳನ್ನು ಹೇಳಲು ನನಗೆ ಯಾವ ನಿರ್ಬಂಧಗಳೂ ಇಲ್ಲ ಮತ್ತು ಇರಬಾರದು.
Supreme Court has made a decision, but now you are saying that it’s our tradition. Triple Talaq is also a tradition in that way, everybody was applauding when it was abolished. The same Hindus have come on the streets now: Subramanian Swamy. #SabarimalaTemple pic.twitter.com/8GZvM4kDTN
— ANI (@ANI) October 17, 2018
ಶಬರಿಮಲೆ ಮತ್ತು ತ್ರಿವಳಿ ತಲಾಕ್ ನಡುವೆ ಹೋಲಿಸುವುದು ಅದು ಹೇಗೆ ಬಾಲಿಶತನವೆನ್ನಿಸುತ್ತದೆ ಎನ್ನುವ ಚರ್ಚೆಗೆ ಪೂರಕವಾಗಿ ನಾನಿಲ್ಲಿ ಒಂದು ಉದಾಹರಣೆ ಕೊಡುತ್ತೇನೆ.
ಉಜ್ವಲಾ ಎನ್ನುವ ಮಹಿಳೆಯೊಬ್ಬರಿದ್ದರು.ಅವರಿಗೆ ರೋಹಿತ್ ಶೇಖರ್ ಎನ್ನುವ ಒಬ್ಬ ಮಗನಿದ್ದ. ಆದರೆ ಆ ಮಗನಿಗೆ ತನ್ನ ತಂದೆ ಯಾರೆಂದು ತಿಳಿದಿರಲಿಲ್ಲ. ಒಂದು ದಿನ ತಾಯಿಯ ಮೂಲಕ ‘ಇಂದಿರಾ ಗಾಂಧಿಯವರ ಅತ್ಯಾಪ್ತರಲ್ಲಿ ಒಬ್ಬರಾಗಿದ್ದ, ಮೂರು ಬಾರಿ ಉತ್ತರ ಪ್ರದೇಶದ,ಒಂದು ಬಾರಿ ಉತ್ತರಾಖಂಡ್ ರಾಜ್ಯದ ಮುಖ್ಯಮಂತ್ರಿಯಾಗಿ ಆಳಿದ್ದ,ರಾಜ್ಯವೊಂದರ ರಾಜ್ಯಪಾಲರಾಗಿ ಆಡಳಿತ ನಡೆಸುತ್ತಿದ್ದ ಎನ್.ಡಿ.ತಿವಾರಿಯವರೇ ಆತನ ತಂದೆ’ ಎನ್ನುವ ವಿಚಾರ ಆತನಿಗೆ ತಿಳಿದುಬಿಟ್ಟಿತು. ಆಗ ಆ ಮಗ ಎನ್.ಡಿ.ತಿವಾರಿಯವರ ಬಳಿ ತನ್ನನ್ನು ಮಗನೆಂದು ಒಪ್ಪಿಕೊಳ್ಳುವಂತೆ ಕೇಳಿಕೊಂಡ. ಅದಕ್ಕೆ ಅವರು ಒಪ್ಪದೇ ಹೋದಾಗ ನ್ಯಾಯಾಲಯದ ಮೊರೆ ಹೋದ. ಅಲ್ಲಿಯೂ ಒಪ್ಪದೇ ಹೋದಾಗ ಡಿಎನ್ಎ ಪರೀಕ್ಷೆಯ ಮೂಲಕ ಕಂಡುಹಿಡಿಯಬೇಕೆಂದು ನ್ಯಾಯಾಲಯದ ಮೊರೆ ಹೋದ. ಆಗ ಎನ್.ಡಿ.ತಿವಾರಿಯವರಿಗೆ ಆತನನ್ನು ತನ್ನ ಮಗನೆಂದು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲದಾಯಿತು. ಕೊನೆಗೆ ಎನ್.ಡಿ.ತಿವಾರಿಯವರು ತಮ್ಮ 88ನೇ ವಯಸ್ಸಿನಲ್ಲಿ ಆತನ ಸಮ್ಮುಖದಲ್ಲೇ ಆತನ ತಾಯಿ ಉಜ್ವಲಾ ಅವರೊಂದಿಗೆ ವಿವಾಹವನ್ನೂ ಆದರು. ಈಗ ಉಜ್ವಲಾ ಅವರು ಉಜ್ವಲಾ ತಿವಾರಿಯೆಂದೂ,ಅವರ ಮಗ ರೋಹಿತ್ ಶೇಖರ್ ಅವರು ರೋಹಿತ್ ಶೇಖರ್ ತಿವಾರಿ ಎಂದೂ ಅಧಿಕೃತವಾಗಿ ತಮ್ಮ ಹೆಸರನ್ನು ಹೇಳಿಕೊಳ್ಳುವ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ.
ಈಗ ಇನ್ನೊಂದು ಕಾಲ್ಪನಿಕ ಪ್ರಕರಣವನ್ನು ನೋಡೋಣ.
ಅದೇ ರೋಹಿತ್ ಶೇಖರ್ ಎನ್ನುವ ಯುವಕ ಭಗವಾನ್ ಶಿವನನ್ನು ಬಹಳವಾಗಿ ನಂಬುತ್ತಿದ್ದ. ದಿನವೂ ಶಿವ ದೇವಾಲಯಕ್ಕೆ ಹೋಗಿ ಕೈ ಮುಗಿದು “ತಂದೇ, ನಾನು ಮುಖ್ಯ ಮಂತ್ರಿಯಾಗುವಂತೆ ಅನುಗ್ರಹಿಸು, ತಂದೇ, ನನಗೆ ಮುಖ್ಯ ಮಂತ್ರಿಯಾಗುವಂತೆ ಅನುಗ್ರಹಿಸು…” ಎಂದು ಬೇಡಿಕೊಳ್ಳುತ್ತಿದ್ದ. ಆದರೆ ಆತ ಮುಖ್ಯಮಂತ್ರಿಯಾಗುವುದಿಲ್ಲ. ಕೊನೆಗೊಂದು ದಿನ ಆತ ತಾನು ತಂದೆಯೆಂದೇ ಸಂಬೋಧಿಸುತ್ತಿದ್ದ ಭಗವಾನ್ ಶಿವನ ವಿರುದ್ಧ ಕೋಪಗೊಂಡು “ನನ್ನ ತಂದೆಯಾದ ಭಗವಾನ್ ಶಿವನು ಮಗನಾದ ನನಗೆ ಅನ್ಯಾಯ ಮಾಡುತ್ತಿದ್ದಾನೆ, ದಯವಿಟ್ಟು ಈ ಮಗನಿಗೆ ನ್ಯಾಯ ಒದಗಿಸಿಕೊಡಿ” ಎನ್ನುವ ದೂರಿನೊಂದಿಗೆ ನ್ಯಾಯಾಲಯದ ಮೊರೆ ಹೋದ. ಆತ ಶಿವನನ್ನು ತಂದೆ ಎಂದು ನಂಬಿರುವುದು ನಿಜ, ಶಿವ ತನ್ನ ಎಲ್ಲಾ ಕೋರಿಕೆಯನ್ನೂ ಈಡೇರಿಸುತ್ತಾನೆ ಎಂದು ನಂಬಿರುವುದೂ ನಿಜ, ದೇವಾಲಯ ಕೂಡಾ ನಮ್ಮ ಸಂವಿಧಾನದಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಹಾಗಾದರೆ ನ್ಯಾಯಾಲಯ ಆತನ ದೂರಿನ ವಿಚಾರಣೆಯನ್ನು ಹೇಗೆ ನಡೆಸಬಹುದು? ಏನೆಂದು ತೀರ್ಪು ಕೊಡಬಹುದು?
ಈಗ ಇನ್ನೊಂದು ಉದಾಹರಣೆಯನ್ನು ಕೊಡುತ್ತೇನೆ.
ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿಕೊಂಡಿದ್ದ ಕನ್ಸಲ್ಟೆನ್ಸಿ ಕಂಪನಿಯೊಂದರ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದ ನಾನು ಸೂಕ್ತ ದಾಖಲಾತಿಗಳೊಂದಿಗೆ ಅದರ ಕಚೇರಿಗೆ ತೆರಳುತ್ತೇನೆ. ಅಲ್ಲಿ ನನ್ನ ಸಂದರ್ಶನ ನಡೆಸಿ ಅವರ ಶುಲ್ಕವೆಂದು ಒಂದು ಲಕ್ಷ ರೂಪಾಯಿಗಳನ್ನು ಪಡೆದು ಒಂದು ತಿಂಗಳ ಒಳಗಾಗಿ ಕಂಪನಿಯಿಂದ ಅಪಾಯಿಂಟ್ ಮೆಂಟ್ ಲೆಟರ್ ಕೊಡಿಸುವ ಭರವಸೆ ನೀಡಿ ಕಳಿಸುತ್ತಾರೆ. ಆದರೆ ಆರು ತಿಂಗಳಾದರೂ ನನಗೆ ಉದ್ಯೋಗ ಸಿಗುವುದಿಲ್ಲ. ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ. ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ,ನನ್ನ ದೂರು ಸತ್ಯವೆಂದು ಸಾಬೀತಾದರೆ, ಆ ಕನ್ಸಲ್ಟೆನ್ಸಿಗೆ ಒಂದೋ ಕೆಲಸ ಕೊಡಿಸುವಂತೆಯೋ ಅಥವಾ ಅಥವಾ ಬಡ್ಡಿ ಸಮೇತ ನನ್ನ ಹಣವನ್ನು ಮರಳಿಸುವಂತೆಯೋ ಆದೇಶಿಸಬಹುದು. ಆ ಆದೇಶವನ್ನು ಪಾಲಿಸದಿದ್ದರೆ ಮಾಲೀಕನಿಗೆ ಶಿಕ್ಷೆಯನ್ನೂ ವಿಧಿಸಬಹುದು.
ಈಗ ಇನ್ನೊಂದು ಕಾಲ್ಪನಿಕ ಪ್ರಕರಣವನ್ನು ನೋಡೋಣ.
ಕರ್ನಾಟಕದ ಬಂಡೀಪುರ ಅಭಯಾರಣ್ಯದೊಳಗೆ ಪುರಾತನ ಹಿಮವದ್ ಗೋಪಾಲ ಸ್ವಾಮಿ ದೇವಸ್ಥಾನವಿದೆ.ಅದರ ಸಂಪೂರ್ಣ ಆಡಳಿತ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರುತ್ತದೆ. ಮಕ್ಕಳಿಲ್ಲದ ದಂಪತಿಗಳು ಆ ದೇವಾಲಯದಲ್ಲಿ ಸಂತಾನ ಗೋಪಾಲ ಕೃಷ್ಣ ಪೂಜೆ ಮಾಡಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.ಮಕ್ಕಳಿಲ್ಲದ ಜೋಡಿಯೊಂದು ಆ ದೇವಾಲಯಕ್ಕೆ ತೆರಳಿ,ಸರ್ಕಾರವೇ ನಿಗದಿಪಡಿಸಿದ ಮೊತ್ತವನ್ನು ಸರ್ಕಾರದ ಇಲಾಖೆಗೆ ಪಾವತಿಸಿ, ಅದಕ್ಕೆ ರಸೀತಿಯನ್ನೂ ಪಡೆದು ಸಂತಾನ ಗೋಪಾಲ ಕೃಷ್ಣ ಪೂಜೆ ಮಾಡಿಸುತ್ತಾರೆ. ಆದರೆ ಎರಡು ವರ್ಷ ಕಳೆದ ನಂತರವೂ ಅವರಿಗೆ ಮಕ್ಕಳಾಗುವುದಿಲ್ಲ. ಇದರಿಂದ ಬೇಸತ್ತ ಆ ದಂಪತಿ ನ್ಯಾಯಾಲಯದ ಮೊರೆ ಹೋಗುತ್ತಾರೆ. “ಸಂತಾನ ಗೋಪಾಲ ಕೃಷ್ಣ ಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎಂದು ನಂಬಿಸಿ ನಮ್ಮಿಂದ ಹಣ ಪಡೆದ ಸರ್ಕಾರ ನಮಗೆ ಮೋಸ ಮಾಡಿದೆ, ನಮಗೆ ನ್ಯಾಯ ಕೊಡಿಸಿ” ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸುತ್ತಾರೆ. ಸಂತಾನ ಸಂತಾನ ಗೋಪಾಲ ಕೃಷ್ಣ ಪೂಜೆ ಮಾಡಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆಯೂ ಸತ್ಯ.ಹಾಗೆ ಪೂಜೆ ಮಾಡಲು ಸರ್ಕಾರವೇ ಅವರಿಂದ ಹಣ ಪಡೆದು ರಸೀತಿ ನೀಡಿರುವುದೂ ಸತ್ಯ. ಅದೇ ನಂಬಿಕೆಯೊಂದಿಗೆ ಅವರು ಪೂಜೆ ಮಾಡಿಸಿರುವುದೂ ಸತ್ಯ. ಹಾಗಾದರೆ ನ್ಯಾಯಾಲಯ ಅವರ ದೂರಿನ ವಿಚಾರಣೆಯನ್ನು ಹೇಗೆ ನಡೆಸಬಹುದು? ಏನೆಂದು ತೀರ್ಪು ಕೊಡಬಹುದು?
ಬಹುಶಃ ಶಿವನನ್ನು ತಂದೆಯೆಂದು ಭಾವಿಸಿದ್ದಾಗಲೀ ಅಥವಾ ಸಂತಾನ ಗೋಪಾಲ ಕೃಷ್ಣನ ಪೂಜೆಯಿಂದ ಮಕ್ಕಳಾಗುತ್ತದೆ ಎನ್ನುವುದಾಗಲೀ ಅವೆಲ್ಲವೂ ಕೇವಲ ನಂಬಿಕೆಗಳಷ್ಟೇ ಹೊರತೂ ತಂದೆಯೆಂದು ನಂಬಿಕೊಂಡಿದ್ದ ಶಿವನಿಂದ ಆಸ್ತಿಯನ್ನು ಕೊಡಿಸುವುದಾಗಲೀ, ಅಥವಾ ನಂಬಿಕೆಯನ್ನೇ ಬಳಸಿಕೊಂಡು ಸಂತಾನ ಗೋಪಾಲ ಕೃಷ್ಣನ ಪೂಜೆ ಮಾಡಿಸಲು ಹಣ ಪಡೆದ ಮುಜರಾಯಿ ಇಲಾಖೆಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದಾಗಲೀ ಕಾನೂನು ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಆ ಅರ್ಜಿಗಳನ್ನೇ ವಜಾಗೊಳಿಸಬಹುದು. ಅನುಮಾನವಿದ್ದರೆ ನೀವೂ ಆ ರೀತಿಯ ದೂರುಗಳನ್ನು ಸಲ್ಲಿಸಿ ನೋಡಿ.
ನೇರವಾಗಿ ಹೇಳುವುದಾದರೆ ಮನುಷ್ಯ ಮತ್ತು ಮನುಷ್ಯನ ನಡುವಿನ ನಂಬಿಕೆಗಳನ್ನು ಅಥವಾ ಸಂಬಂಧಗಳನ್ನು ಮಾತ್ರ ಕಾನೂನು ವ್ಯಾಪ್ತಿಯಲ್ಲಿ ತರಬಹುದೇ ಹೊರತೂ ಮನುಷ್ಯ ಮತ್ತು ದೇವರ ನಡುವಿನ ನಂಬಿಕೆಗಳನ್ನು ಅಥವಾ ಸಂಬಂಧಗಳನ್ನು ಕಾನೂನಿನ ವ್ಯಾಪ್ತಿಗೆ ತರಲು ಸಾಧ್ಯವೇ ಇಲ್ಲ. ನೀವು ಅಯ್ಯಪ್ಪನನ್ನು ದೇವರೆಂದುಕೊಂಡರೆ ದೇವರು,ತಂದೆಯೆಂದುಕೊಂಡರೆ ತಂದೆ,ಕೇವಲ ಒಂದು ಲೋಹದ ಪುತ್ಥಳಿಯೆಂದುಕೊಂಡರೆ ಲೋಹದ ಪುತ್ಥಳಿ ಅಷ್ಟೇ. ನೀವು ಅಯ್ಯಪ್ಪನನ್ನು ದೇವರೆಂದು ನಂಬಲೇ ಬೇಕು ಎಂದಾಗಲೀ ಅಥವಾ ದೇವರೆಂದು ನಂಬಲೇ ಬಾರದು ಎಂದಾಗಲೀ ಯಾವ ನ್ಯಾಯಾಲಯವೂ ತೀರ್ಪು ಕೊಡಲು ಸಾಧ್ಯವಿಲ್ಲ. ದೇವರನ್ನು ತಂದೆ ಎಂದು ಕರೆದಾಕ್ಷಣ ಡಿಎನ್ಎ ಪರೀಕ್ಷೆ ಮಾಡಿಸಿ ಸಾಬೀತುಪಡಿಸಿ ಎಂದು ಆದೇಶಿಸುವಂತೆಯೂ ಇಲ್ಲ. ಏಕೆಂದರೆ ಅಯ್ಯಪ್ಪ ಮತ್ತು ಭಕ್ತನ ನಡುವಿನ ಸಂಬಂಧ ತ್ರಿವಳಿ ತಲಾಕ್ ವಿಚಾರದಂತೆ ಇಬ್ಬರು ಮನುಷ್ಯರ ನಡುವಿನ ಸಂಬಂಧವಲ್ಲ.
ವ್ರತಧಾರಿಗಳು ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ ಸ್ವಾಮಿಯ ದರ್ಶನ ಪಡೆಯಬೇಕೆನ್ನುವ ನಿಯಮವಿದೆ. ಆ ಹದಿನೆಂಟು ಮೆಟ್ಟಿಲಿನ ಜೊತೆ ಹಲವಾರು ನಂಬಿಕೆಗಳೂ ಕೂಡಿಕೊಂಡಿವೆ. ಹದಿನೆಂಟು ಮೆಟ್ಟಿಲನ್ನು ತೆಗೆದು ಅಲ್ಲಿ ಎಸ್ಕಲೇಟರ್ ಜೋಡಿಸಿ ಎಂದು ಆದೇಶಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ. ಏಕೆಂದರೆ ಅಯ್ಯಪ್ಪನ ಜೊತೆಗೆ ಆ ಹದಿನೆಂಟು ಮೆಟ್ಟಿಲುಗಳ ನಂಬಿಕೆಗಳೂ ಮಿಳಿತಗೊಂಡಿವೆ. ಆದರೆ ಯಾವುದೋ ಒಂದು ಮಾಲ್ ಅಥವಾ ಕಾಂಪ್ಲೆಕ್ಸ್ ಗಳೊಳಗೆ ಅಲ್ಲಿ ಸೇರುವ ಬೃಹತ್ ಜನಸಂದಣಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಎಸ್ಕಲೇಟರ್ ಜೋಡಿಸುವಂತೆ ಆದೇಶಿಸಲು ಅಥವಾ ಕಾನೂನು ತರಲು ಸಾಧ್ಯವಿದೆ. ಏಕೆಂದರೆ ಅಲ್ಲಿ ಆ ಮೆಟ್ಟಿಲುಗಳ ಬಗ್ಗೆ ಯಾವುದೇ ಪವಿತ್ರ ನಂಬಿಕೆಗಳು ಮಿಳಿತಗೊಂಡಿಲ್ಲ. ಕೇವಲ ಜನರಿಗೆ ಅನುಕೂಲ ಕಲ್ಪಿಸುವುದಷ್ಟೇ ಅಲ್ಲಿನ ಮುಖ್ಯ ಧ್ಯೇಯ ವಾಗಿರುತ್ತದೆ. ನಿಮಗೆ ಯಾವುದೇ ನಂಬಿಕೆಗಳೂ ಬೇಡ,ನಿಯಮಗಳೂ ಬೇಡ, ವ್ರತ ನಿಷ್ಠೆಗಳೂ ಬೇಡ, ಆದರೆ ಸಮಾನ ಪ್ರವೇಶಾವಕಾಶ ಮಾತ್ರ ಬೇಕು ಎನ್ನುವುದಾದರೆ ನೀವು ಅಂತಹಾ ಮಾಲ್ ಗಳಿಗೋ,ಶಾಪಿಂಗ್ ಕಾಂಪ್ಲೆಕ್ಸ್ ಗಳಿಗೋ ಹೋಗಬೇಕೇ ಹೊರತೂ ನಂಬಿಕೆಯೇ ಆಧಾರವಾಗಿರುವ ದೇವಾಲಯಗಳಿಗೆ ಹೋಗಿ ಅಲ್ಲಿನ ಆಚರಣೆಗಳಿಗೆ ಭಂಗ ತರುವ ವಿಕೃತ ಕೆಲಸಕ್ಕೆ ಕೈ ಹಾಕಲೇಬಾರದು.
ಹಾಗೆಯೇ ಹೆಂಗಸರು ಏಕೆ ಹೋಗಬಾರದು,ಗಂಡಸರು ಏಕೆ ಹೋಗಬೇಕು,ಅಲ್ಲಿ ಯಾವ ರೀತಿಯ ಸಂಪ್ರದಾಯಗಳನ್ನು ಪಾಲಿಸಬೇಕು,ಯಾವ ಯಾವ ರೂಢಿಗತ ಅಭ್ಯಾಸಗಳಿಂದ ದೂರವಿರಬೇಕು ಎನ್ನುವ ಎಲ್ಲಾ ವಿಚಾರಗಳೂ ಕೇವಲ ನಂಬಿಕೆಯ ಮೇಲೆಯೇ ನಿಂತಿವೆಯೇ ಹೊರತೂ ಕಾನೂನಿನ ಆಧಾರದ ಮೇಲಲ್ಲ. ಒಂದು ವೇಳೆ ದೇವರ ಬಗೆಗಿನ ನಂಬಿಕೆಗಳನ್ನು ಕಾನೂನು ಪರಿಧಿಯೊಳಕ್ಕೆ ತಂದಿದ್ದೇ ಆದರೆ, ಮುಂದೊಮ್ಮೆ “ದೇವರನ್ನು ಪೂಜಿಸಿಯೂ ನಾನು ಅಂದುಕೊಂಡಿದ್ದ ಕೆಲಸ ಈಡೇರಿಲ್ಲ” ಎಂದು ಭಕ್ತರೊಬ್ಬರು ದೇವರ ವಿರುದ್ಧ ನ್ಯಾಯಾಲಯದ ಕದ ತಟ್ಟಿದರೆ ಆಗ ನ್ಯಾಯಾಲಯವು ಆ ಪ್ರಕರಣವನ್ನೂ ಪರಿಶೀಲಿಸಿ ದೇವರಿಂದ ಆ ಭಕ್ತನಿಗೆ ಸಿಗಬೇಕಾದ ನ್ಯಾಯವನ್ನು ಕೊಡಿಸಬೇಕಾದ ಹೊಣೆ ಹೊರಲೇ ಬೇಕಾಗುತ್ತದೆ.
ಹಾಗಾದರೆ ತಾನು ನಂಬಿದ ದೇವರನ್ನು ಪೂಜೆ ಮಾಡಿದ ನಂತರವೂ ನನಗೆ ನಿರೀಕ್ಷಿಸಿದ್ದ ಫಲ ದೊರೆಯಲಿಲ್ಲ ಎಂದು ಭಕ್ತನೊಬ್ಬ ನ್ಯಾಯಾಲಯದ ಮೆಟ್ಟಿಲು ಏರಿದರೆ ದೇವರಿಂದ ಆ ಭಕ್ತನಿಗೆ ನ್ಯಾಯ ಕೊಡಿಸಲು ನ್ಯಾಯಾಲಯಕ್ಕೆ ಸಾಧ್ಯವಿದೆಯೇ? ಒಂದು ವೇಳೆ ಸಾಧ್ಯವಿಲ್ಲ ಎನ್ನುವುದಾದರೆ ಅದು ಹೇಗೆ ದೇವರು ಮತ್ತು ಮನುಷ್ಯನ ನಡುವಿನ ನಂಬಿಕೆಯ ವಿಷಯವಾದ ಶಬರಿಮಲೆ ಪ್ರಕರಣವನ್ನು ಮನುಷ್ಯ ಮತ್ತು ಮನುಷ್ಯನ ನಡುವಿನ ಸಂಬಂಧದ ವಿಷಯವಾದ ತ್ರಿವಳಿ ತಲಾಕ್ ತೀರ್ಪಿನ ಜೊತೆಗೆ ಹೋಲಿಸುತ್ತೀರಿ? ತ್ರಿವಳಿ ತಲಾಕ್ ತೀರ್ಪನ್ನು ಹಿಂದೂಗಳ ಯಾವುದಾದರೂ ಪದ್ಧತಿಯೊಂದಿಗೆ ಹೋಲಿಸಲೇ ಬೇಕಿದ್ದರೆ ಪತಿಯು ಸತ್ತಾಗ ಪತ್ನಿಯೂ ಚಿತೆಗೆ ಹಾರಬೇಕು ಎನ್ನುವ ಪದ್ಧತಿಯಾಗಿದ್ದ ಸತಿ ಪದ್ಧತಿ ಮತ್ತದರ ನಿಷೇಧದ ಜೊತೆಗೆ ಧಾರಾಳವಾಗಿ ಹೋಲಿಸಿ.
ಒಂದೊಂದು ದೇವಾಲಯಕ್ಕೂ ಅದರದ್ದೇ ಆದ ವಿಶೇಷತೆಯಿರುತ್ತದೆ, ಅದರದ್ದೇ ಆದ ಸಂಪ್ರದಾಯವಿರುತ್ತದೆ, ಪೂಜಾ ವಿಧಾನಗಳೂ ಬೇರೆ ಬೇರೆಯೇ ಇರುತ್ತದೆ. ಹಾಗಿದ್ದರೂ ಎಲ್ಲಾ ಹಿಂದೂ ದೇವಾಲಯಗಳಲ್ಲೂ ಮಹಿಳೆಯರಿಗೆ ಪ್ರವೇಶವಿಲ್ಲ ಎಂದಿದ್ದರೆ ಈ ಪ್ರಕರಣಕ್ಕೊಂದು ಗಂಭೀರತೆಯಿರುತ್ತಿತ್ತು. ಆದರೆ ಲಕ್ಷಾಂತರ ದೇವಾಲಯಗಳಲ್ಲಿ ಪ್ರವೇಶವಿದ್ದೂ ಎಲ್ಲೋ ಒಂದೆರಡು ದೇವಾಲಯಗಳಲ್ಲಿ ಅಲ್ಲಿನ ನಂಬಿಕೆಗಳಿಗೆ ತಕ್ಕಂತೆ ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿಲ್ಲ ಎಂದ ಮಾತ್ರಕ್ಕೆ ಅದೇ ದೇವಾಲಯಕ್ಕೆ ಪ್ರವೇಶ ಬೇಕು ಎಂದು ಹೋರಾಡುತ್ತಿರುವುದರ ಹಿಂದೆ ಹಿಂದೂ ವಿರೋಧಿಗಳ ಷಡ್ಯಂತ್ರವಿರುವುದಂತೂ ನೂರಕ್ಕೆ ನೂರು ಸತ್ಯ. ಸ್ವತಃ ಹಿಂದೂ ಮಹಿಳೆಯರೇ ವಿರೋಧಿಸುತ್ತಿದ್ದರೂ ಮುಸ್ಲಿಂ,ಕ್ರಿಶ್ಚಿಯನ್ ಹಾಗೂ ಕೆಲವು ನಾಸ್ತಿಕ ಮಹಿಳೆಯರೇ ಪಟ್ಟು ಹಿಡಿದು ಪ್ರವೇಶ ಪಡೆಯಲು ಪ್ರಯತ್ನಿಸುತ್ತಿರುವುದೇ ಅದಕ್ಕೆ ಸಾಕ್ಷಿ. ಅಷ್ಟಕ್ಕೂ ದೇವರೇ ಇಲ್ಲ ಎನ್ನುವ ನಾಸ್ತಿಕರನ್ನು,ವಿಗ್ರಹಾರಾಧನೆಯನ್ನು ಹರಾಮ್ ಎನ್ನುವ ಧರ್ಮದವರನ್ನು, ನನ್ನ ದೇವರು ಮಾತ್ರ ಶ್ರೇಷ್ಠ ಎಂದು ಪ್ರಚಾರ ಮಾಡುವ ಧರ್ಮದವರನ್ನು ನಮ್ಮ ದೇವರ ವಿಗ್ರಹಾರಾಧನೆಯ ಸ್ಥಳದೊಳಕ್ಕೆ ಏಕೆ ಬಿಟ್ಟುಕೊಳ್ಳಬೇಕು? ನನಗೆ ಗೋವು ಶ್ರೇಷ್ಠವಲ್ಲ, ಗೋವು ಕೇವಲ ಒಂದು ಪ್ರಾಣಿ ಮತ್ತು ನಾವದನ್ನು ಕಡಿದು ತಿನ್ನುತ್ತೇವೆ ಎಂದು ಹೇಳುವವರು, ಗೋವನ್ನೇ ದೇವರೆಂದು ನಂಬಿರುವ ನಮ್ಮ ಹಸುಗಳ ಕೊಟ್ಟಿಗೆಯೊಳಗೆ ನುಗ್ಗಿ ಗೋಪೂಜೆ ಮಾಡುತ್ತೇವೆ ಎಂದು ಬಂದರೆ ನಾವೇಕೆ ಅವರನ್ನು ಒಳಗೆ ಬಿಟ್ಟುಕೊಳ್ಳಬೇಕು?
ಯಾವುದೋ ಒಂದು ಧರ್ಮದವರ ಹಬ್ಬದ ದಿನ ಆಗಸದಲ್ಲಿ ಚಂದ್ರ ಕಾಣಿಸಲಿಲ್ಲವೆಂದು ಆ ಹಬ್ಬ ಮುಂದೂಡಲ್ಪಟ್ಟರೆ ಚಂದ್ರನನ್ನು ಕಾನೂನು ವ್ಯಾಪ್ತಿಯಲ್ಲಿ ಹೇಗೆ ತರುತ್ತೀರಿ? ಅದು ಚಂದ್ರ ಮತ್ತು ಆ ಧರ್ಮೀಯರ ನಡುವಿನ ನಂಬಿಕೆಗೆ ಸಂಬಂಧಪಟ್ಟ ವಿಚಾರವೇ ಹೊರತೂ ಚಂದ್ರ ಕಾಣಿಸದಿದ್ದರೂ ನೀವು ಇಂದೇ ಹಬ್ಬ ಮಾಡಬೇಕು ಎಂದು ಆದೇಶಿಸುವುದು ಖಂಡಿತಾ ಸಾಧ್ಯವಿಲ್ಲ. ಮತ್ತು ಆ ನಂಬಿಕೆಯನ್ನು ಹಿಂದೂ ವಿವಾಹ ಕಾಯ್ದೆಯೊಂದಿಗೆ ಥಳುಕು ಹಾಕಿ, ಇದನ್ನು ಒಪ್ಪುವವರೆಲ್ಲಾ ಅದನ್ನೂ ಒಪ್ಪಬೇಕು,ಅದನ್ನು ಒಪ್ಪುವವರೆಲ್ಲಾ ಇದನ್ನೂ ಒಪ್ಪಬೇಕು ಎನ್ನಲೂ ಸಾಧ್ಯವಿಲ್ಲ. ಏಕೆಂದರೆ ಹಿಂದೂ ವಿವಾಹ ಕಾಯ್ದೆ ಮನುಷ್ಯ ಮತ್ತು ಮನುಷ್ಯನ ನಡುವಿನ ಸಂಬಂಧಗಳಿಗೆ ಸಂಬಂಧಿಸಿದ್ದಾಗಿದ್ದರೆ ಚಂದ್ರನನ್ನು ನೋಡಿ ಹಬ್ಬ ಮಾಡುವುದು ಮನುಷ್ಯ ಮತ್ತು ಆತನ ಧಾರ್ಮಿಕ ನಂಬಿಕೆಗಳಿಗೆ ಸಂಬಂಧಿಸಿದ್ದಾಗಿದೆ. ಮೊದಲೇ ಹೇಳಿದಂತೆ ಮನುಷ್ಯ ಮತ್ತು ದೇವರ ನಡುವಿನ ನಂಬಿಕೆಗಳನ್ನು ಅಥವಾ ಸಂಬಂಧಗಳನ್ನು ಕಾನೂನಿನ ವ್ಯಾಪ್ತಿಗೆ ತರಲು ಸಾಧ್ಯವೇ ಇಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.