ಬಹುಶಃ ಭಾರತದ ಇತಿಹಾಸದಷ್ಟು ಶ್ರೀಮಂತ ಇತಿಹಾಸ ಜಗತ್ತಿನ ಇನ್ಯಾವ ದೇಶದ್ದೂ ಇರಲಿಕ್ಕಿಲ್ಲ. ಆದರೆ ದುರದೃಷ್ಟವಶಾತ್ ನಮ್ಮ ಇತಿಹಾಸ ಪಠ್ಯಗಳಲ್ಲಿ ನಮ್ಮವರ ಸೋಲಿನ ಹಾಗೂ ನಮ್ಮನ್ನಾಕ್ರಮಿಸಿದ ಪರಕೀಯರ ವೈಭವೀಕೃತ ಪಠ್ಯಗಳನ್ನೇ ನಮಗೆ ಹೆಚ್ಚಾಗಿ ಕಲಿಸುತ್ತಾ ಬರಲಾಗಿದೆ.
ನಮ್ಮ ದೇಶದ ಶ್ರೀಮಂತ ಇತಿಹಾಸಗಳ ಸಾಲಿನಲ್ಲಿ ಇಂದಿಗೂ ದಸರಾ ಸಮಯದಲ್ಲಿ ನಮ್ಮ ಮೈಸೂರು ರಾಜರು ಅತ್ಯಂತ ಭಕ್ತಿಯಿಂದ ಪೂಜಿಸಿ, ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸುವ ರತ್ನಖಚಿತ ಸಿಂಹಾಸನ ಕೂಡಾ ಒಂದು.
ರತ್ನ ಖಚಿತ ಸಿಂಹಾಸನವನ್ನು ಮೂಲತಃ ಅಂಜೂರದ ಮರದಿಂದ ತಯಾರಿಸಲಾಗಿದ್ದು ಉತ್ಕೃಷ್ಟ ಕುಸುರಿ ಕಲೆಗಳಿಂದ ಅಲಂಕಾರಗೊಳಿಸಲಾಗಿದೆ. ಅಪರಂಜಿ ಚಿನ್ನ, ನವರತ್ನದ ಹರಳುಗಳು, ಬೆಳ್ಳಿಯ ಪುಟ್ಟ ಪುಟ್ಟ ಪ್ರತಿಮೆಗಳನ್ನು ಹೊಂದಿರುವ ಸಿಂಹಾಸನದ ಮೇಲೆ ವನ ದೇವತೆಗಳನ್ನು ಚಿತ್ರಿಸಲಾಗಿದೆ. ಸಿಂಹಾಸನದ ನಾಲ್ಕೂ ಕಡೆಗಳಲ್ಲೂ ಬಳ್ಳಿಗಳನ್ನು ಚಿತ್ರಿಸಲಾಗಿದೆ. ರತ್ನ ಸಿಂಹಾಸನದ ಒಂದೊಂದು ಬದಿಯಲ್ಲೂ ಆನೆಗಳ ಸಾಲು, ಸೈನಿಕರ ಸಾಲು, ರಥಗಳ ಸಾಲುಗಳನ್ನು ಚಿತ್ರಿಸಲಾಗಿದ್ದು ಇನ್ನೊಂದು ಕಡೆ ಮಹೇಶ್ವರನನ್ನು ಚಿತ್ರಿಸಿ ಪ್ರತಿಷ್ಠಾಪಿಸಲಾಗಿದೆ. ದಕ್ಷಿಣದಲ್ಲಿ ಬ್ರಹ್ಮದೇವನ ಪ್ರತಿಮೆಯನ್ನೂ, ಸಿಂಹಾಸನ ಮಧ್ಯದಲ್ಲಿ ತ್ರಿಮೂರ್ತಿಗಳನ್ನೂ ಕೆತ್ತಲಾಗಿದೆ. ಈ ಚಿನ್ನದ ಸಿಂಹಾಸನದಲ್ಲಿ ಚಿನ್ನದ ಛತ್ರಿಯನ್ನು ಅಳವಡಿಸಲಾಗಿದೆ. ಚಿನ್ನದ ಛತ್ರಿಯ ಮೇಲೆ ಚಿನ್ನದ ನವಿಲು ಕೂಡಾ ಇದೆ. ತಳ ಭಾಗದಲ್ಲಿ ಸುವರ್ಣ ಸಿಂಹದ ಪೀಠವಿದೆ. ಚಿನ್ನದ ಸಿಂಹಾಸನಕ್ಕೆ ಆಕರ್ಷಕವಾದ ರೇಷ್ಮೆ ವಸ್ತ್ರದ ಹೊದಿಕೆ ಕೂಡ ಇದೆ. ಸಿಂಹಾಸನಕ್ಕೆ ಆನೆದಂತದ ಪಟ್ಟಿಗಳನ್ನು ಅಳವಡಿಸಲಾಗಿದೆ.
ರತ್ನ ಖಚಿತ ಸಿಂಹಾಸನದಲ್ಲಿ ಮುಖ್ಯ ಆಸನ, ಮೆಟ್ಟಿಲುಗಳು ಮತ್ತು ಬಂಗಾರದ ಛತ್ರಿ, ಹೀಗೆ ಪ್ರಮುಖವಾಗಿ ಮೂರು ಭಾಗಗಳಿವೆ. ವಿಶೇಷವೆಂದರೆ ಆ ಭಾಗಗಳನ್ನು ಕಳಚುವ ಮತ್ತು ಜೋಡಿಸುವ ತಾಂತ್ರಿಕತೆಯನ್ನು ಅದು ಹೊಂದಿದೆ. ವರ್ಷವಿಡೀ ಭದ್ರತಾ ಕೊಠಡಿಯಲ್ಲಿ ಇರಿಸಲಾಗುವ ಸಿಂಹಾಸನವನ್ನು ದಸರಾ ಸಮಯದಲ್ಲಿ ಹೊರ ತೆಗೆದು ನಿಗದಿತ ಮುಹೂರ್ತದಲ್ಲಿ ಶಾಸ್ತ್ರೋಕ್ತವಾಗಿ ಅವುಗಳನ್ನು ಜೋಡಿಸುವ ಕೆಲಸ ಮಾಡಲಾಗುತ್ತದೆ. ಹಾಗೆ ಜೋಡಿಸುವ ಮತ್ತು ವಿಸರ್ಜಿಸುವ ಕೆಲಸವನ್ನು ತಲೆ ತಲಾಂತರಗಳಿಂದಲೂ ಮೈಸೂರು ಸಮೀಪದ ಗೆಜ್ಜಗಳ್ಳಿಯ ಗ್ರಾಮಸ್ಥರು ನೆರವೇರಿಸುತ್ತಾರೆ.
ಈ ಸಿಂಹಾಸನ ಮೈಸೂರು ಅರಸರಿಗೆ ವಿಜಯನಗರ ಸಾಮ್ರಾಜ್ಯದದಿಂದ ಬಂದ ಬಳುವಳಿ ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ತನ್ನ ಆಶ್ರಿತ ಸಂಸ್ಥಾನವಾಗಿದ್ದ ಶ್ರೀರಂಗಪಟ್ಟಣಕ್ಕೆ ಆ ಸಿಂಹಾಸ ವರ್ಗಾವಣೆಯಾಯಿತು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಿಗೆ ಈ ರತ್ನಖಚಿತ ಸಿಂಹಾಸನ ದೊರೆತಿದ್ದರ ಹಿಂದೆಯೂ ದೊಡ್ಡ ಕಥೆಯಿದೆ. ಅದು ದ್ವಾಪರ ಯುಗದಲ್ಲಿ ಪಾಂಡವರಲ್ಲಿ ಹಿರಿಯನಾದ ಧರ್ಮರಾಯನ ಸಿಂಹಾಸನವಾಗಿದ್ದು ನಂತರ ಅವನ ಉತ್ತರಾಧಿಕಾರಿಯಾದ ಪರೀಕ್ಷಿತನ ರಾಜಾಸನವಾಗಿತ್ತು ಎನ್ನುವ ನಂಬಿಕೆಯೂ ಇದೆ. ಸಿಂಹಾಸನದ ಛತ್ರಿಯ ಮೇಲೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರನ್ನು ಸಂಬೋಧಿಸಿ ಸಂಸ್ಕೃತದ 24 ಶ್ಲೋಕಗಳನ್ನು ಕೆತ್ತಲಾಗಿದ್ದು, ಆ ಶ್ಲೋಕಗಳಲ್ಲೂ ಆ ಸಿಂಹಾಸನ ಮತ್ತು ಮಹಾಭಾರತದ ಕಾಲದ ಸಂಬಂಧಗಳ ಬಗ್ಗೆ ಸೂಚ್ಯವಾಗಿ ಉಲ್ಲೇಖಿಸಲಾಗಿದೆಯಂತೆ.
ಕಾಲಾನಂತರ ಕಂಪಿಲರಾಯನು ಆ ಸಿಂಹಾಸನವನ್ನು ಇಂದಿನ ಆಂಧ್ರ ಪ್ರದೇಶದ ಪೆನುಗೊಂಡಕ್ಕೆ ತಂದನು ಎನ್ನಲಾಗುತ್ತದೆ. ಆ ನಂತರ ಸಿಂಹಾಸನ ಶತ್ರುಗಳ ಕೈಸೇರದಿರಲಿ ಎಂದು ಅರಣ್ಯದಲ್ಲಿ ಹುದುಗಿಸಿಡಲಾಗಿತ್ತು.ನಂತರ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ವಿದ್ಯಾರಣ್ಯರು ತಮ್ಮ ತಪೋಬಲದಿಂದ ಸಿಂಹಾಸನ ಹುದುಗಿಸಿಟ್ಟಿದ್ದ ಜಾಗವನ್ನು ಗುರುತಿಸಿ ತಮ್ಮ ಸಾಮ್ರಾಜ್ಯಕ್ಕೆ ತರಿಸಿಕೊಂಡಿದ್ದರು ಎಂಬ ನಂಬಿಕೆ ಇದೆ ಎನ್ನುತ್ತಾರೆ ಇತಿಹಾಸ ತಜ್ಞರು. ನಂತರ ಆ ಸಿಂಹಾಸನ ಸುಮಾರು ಒಂದೂವರೆ ಶತಮಾನಗಳ ಕಾಲ ವಿಜಯನಗರದ ಅರಸರ ಬಳಕೆಯಲ್ಲಿತ್ತು.
ತಾಳಿಕೋಟೆ ಕದನದ ತರುವಾಯ ವಿಜಯನಗರದ ಮಹಾರಾಜರಿಂದ ಮೈಸೂರು ಒಡೆಯರ್ ಅವರಿಗೆ ಸಿಂಹಾಸನ ಹಸ್ತಾಂತರವಾದ ನಂತರ ದಸರಾ ಉತ್ಸವಕ್ಕೆ ಚಾಲನೆ ದೊರಕಿತು. ಆದರೆ ನಂತರ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಅವಧಿಯಲ್ಲಿ ಈ ರತ್ನ ಖಚಿತ ಸಿಂಹಾಸನಕ್ಕೆ ಆತಂಕ ಎದುರಾಗಿತ್ತು ಎನ್ನಲಾಗುತ್ತದೆ. ಬಹುಶಃ ಅದೇ ಕಾರಣಕ್ಕೆ ಮತ್ತೆ ಆ ಸಿಂಹಾಸನವನ್ನು ಬೇರ್ಪಡಿಸಿ ಶ್ರೀರಂಗ ಪಟ್ಟಣದ ಅರಮನೆಯ ಕತ್ತಲೆ ಕೋಣೆಯಲ್ಲಿ ಇರಿಸಲಾಗಿತ್ತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದ ನಂತರ ಕತ್ತಲೆ ಕೋಣೆಯಲ್ಲಿದ್ದ ಸಿಂಹಾಸವನ್ನು ಹೊರ ತೆಗೆದು ಜೋಡಿಸಿ ಮತ್ತೆ ಬಳಕೆಗೆ ತರಲಾಯಿತು ಎನ್ನುತ್ತದೆ ಇತಿಹಾಸ.
ಆದರೂ ಈ ಭವ್ಯ ಇತಿಹಾಸವಿರುವ ಸಿಂಹಾಸನದ ಬಗ್ಗೆ ಇತಿಹಾಸ ಪಠ್ಯಗಳಲ್ಲೆಲ್ಲೂ ಕರಾರುವಾಕ್ಕಾದ ಮಾಹಿತಿಗಳನ್ನು ಒದಗಿಸದ ಕಾರಣ ಅಲ್ಲಲ್ಲಿ ಸಿಗಬಹುದಾದ ಮಾಹಿತಿಗಳನ್ನು ಹೆಕ್ಕಿ ಸ್ವತಃ ನಾವೇ ತಿಳಿದುಕೊಳ್ಳಬೇಕಾದ ಅನಿವಾರ್ಯತೆಯಿದೆ.ಅಷ್ಟಾಗಿಯೂ ಈ ಮೇಲಿನ ಮಾಹಿತಿಗಳು ಒಂದಷ್ಟು ಭಿನ್ನ ಮಾಹಿತಿಗಳೊಂದಿಗೆ ಎಲ್ಲಾ ಇತಿಹಾಸಕಾರರೂ ಒಪ್ಪುತ್ತಾರೆ.
ಒಮ್ಮೆ ಯೋಚಿಸಿ,ಇಂತಹಾ ಅದ್ಭುತ ಇತಿಹಾಸವುಳ್ಳ ರತ್ನ ಖಚಿತ ಸಿಂಹಾಸನವನ್ನು ಕಣ್ಣಾರೆ ನೋಡುವ ಭಾಗ್ಯ ಪಡೆದಿರುವ ನಾವೆಷ್ಟು ಪುಣ್ಯವಂತರು! ಯುಗ ಯುಗಗಳ ನಡುವೆ ಸಾಕ್ಷಿಯಾಗಿ ನಿಂತಿರುವ ಪವಿತ್ರ ಸಿಂಹಾಸನದ ಮೇಲೆ ಕುಳಿತು ಖಾಸಗಿ ದರ್ಬಾರ್ ನಡೆಸುವ ಮೈಸೂರು ಮಹಾರಾಜರೆಷ್ಟು ಪುಣ್ಯವಂತರು!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.