ವಿರೋಧ ಪಕ್ಷದವರು ಮೋದಿ ಸರಕಾರವನ್ನು ಬಡವರ ವಿರೋಧಿ ಸರಕಾರ, ಶ್ರೀಮಂತರ ಸರಕಾರ ಅಂತೆಲ್ಲಾ ಹೇಳುತ್ತಿದೆ. ಹಾಗಾದರೆ ನಿಜ ಸಂಗತಿಯೇನು? ಪ್ರತಿ ಪಕ್ಷದವರ ಆರೋಪದಲ್ಲಿ ಹುರುಳಿದೆಯೇ? ಬನ್ನಿ ಒಮ್ಮೆ ಪರಿಶೀಲಿಸೋಣ.
ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ ಡಿಸೆಂಬರ್ 2018 ರ ಒಳಗೆ ದೇಶದ ಎಲ್ಲಾ ಬಡವರ ಮನೆಗೂ ವಿದ್ಯುತ್ ಸಂಪರ್ಕ
ಮೋದಿ ಸರಕಾರವು ಪ್ರಧಾನ ಮಂತ್ರಿ ಗ್ರಾಮೀಣ ವಿದ್ಯುತೀಕರಣ ಯೋಜನೆಯ ಮೂಲಕ ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಎಲ್ಲಾ 18452 ಹಳ್ಳಿಗಳಲ್ಲಿ ಟ್ರಾನ್ಸ್ಫಾರ್ಮರ್ಗಳನ್ನು ಸ್ಥಾಪಿಸಿ ವಿದ್ಯುತ್ ಸಂಪರ್ಕವನ್ನು ಮಾರ್ಚ್ 2018 ರ ಒಳಗೆ ಕೊಟ್ಟಿತು. ದೇಶದಲ್ಲಿ ಎಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಎಂದು ಲೆಕ್ಕ ಹಾಕಿದಾಗ ದೇಶದಲ್ಲಿ 3,18,13, 050 ಮನೆಗಳು ವಿದ್ಯುತ್ ವಂಚಿತವಾಗಿದೆ ಎಂದು ತಿಳಿದು ಬಂತು. ಪ್ರತೀ ಮನೆಗೂ ವಿದ್ಯುತ್ ಸಂಪರ್ಕವನ್ನು ಸಾಧಿಸುವ ಸೌಭಾಗ್ಯ ಯೋಜನೆಯು ಅಕ್ಟೋಬರ್ 2017 ರಲ್ಲಿ ಆರಂಭವಾಗಿ ಈಗಾಗಲೇ 1,59,34,795 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವಾಗಿದ್ದು ಉಳಿದ 1.58 ಕೋಟಿ ಮನೆಗಳಿಗೆ ಡಿಸೆಂಬರ್ 2018 ರ ಒಳಗೆ ಸಂಪರ್ಕವು ಲಭಿಸಲಿದೆ. ಉಚಿತ ವೈರಿಂಗ್ ಜೊತೆಗೆ ಸಂಪೂರ್ಣ ಉಚಿತವಾಗಿರುವ ಸೌಭಾಗ್ಯ ಯೋಜನೆಯಡಿ ದೇಶದ 3.18 ಕೋಟಿ ಬಡವರ ಮನೆಗಳು ಬೆಳಕು ಕಾಣಲಿವೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡ ಮಹಿಳೆಯರು ಕಷ್ಟಪಟ್ಟು ಕಟ್ಟಿಗೆಯನ್ನು ಉರಿಸಿ ಅಡಿಗೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಮೋದಿ ಸರಕಾರವು ದೇಶದ ಬಡ ಮಹಿಳೆಯರ ಕಷ್ಟವನ್ನು ತಪ್ಪಿಸಲು ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಕೊಡಿಸುವ ಪ್ರಧಾನ ಮಂತ್ರಿ ಉಜ್ಜ್ವಲ ಯೋಜನೆಯನ್ನು ಆರಂಭಿಸಿತು. ಇದುವರೆಗೆ 5,58,32,496 ಮಹಿಳೆಯರು ಉಜ್ವಲ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಂಪರ್ಕವನ್ನು ಗಳಿಸಿಕೊಂಡಿದ್ದಾರೆ. ಇಷ್ಟು ಮಂದಿ ಬಡ ಮಹಿಳೆಯರಿಂದು ಹೊಗೆ ಮುಕ್ತ ಅಡುಗೆಮನೆಯನ್ನು ಆನಂದಿಸುತ್ತಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ ಹಾಗೂ ಗ್ರಾಮೀಣ)
2022 ನೇ ಇಸವಿಯ ಒಳಗೆ ದೇಶದ ಎಲ್ಲಾ ವಸತಿ ರಹಿತ ಬಡ ಪ್ರಜೆಗಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಸರಕಾರವು ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ನಗರ ಪ್ರದೇಶದಲ್ಲಿ ಈಗಾಗಲೇ 53.79 ಲಕ್ಷ ಮನೆಗಳನ್ನು ಕಟ್ಟಲು ಆರ್ಥಿಕ ಮಂಜೂರಾತಿ ದೊರಕಿದೆ. ಇದರಲ್ಲಿ 8 ಲಕ್ಷ ಮನೆಗಳ ನಿರ್ಮಾಣ ಸಂಪೂರ್ಣವಾಗಿ ಜನರು ವಾಸ ಆರಂಭಿಸಿದ್ದಾರೆ, 29 ಲಕ್ಷ ಮನೆಗಳ ನಿರ್ಮಾಣ ಈಗಾಗಲೇ ಆರಂಭವಾಗಿದೆ. ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆಯಡಿ ಈಗಾಗಲೇ 43.27 ಲಕ್ಷ ಮನೆಗಳ ನಿರ್ಮಾಣವಾಗಿದೆ. 2018-19 ರ ಆರ್ಥಿಕ ವರ್ಷದ ಅಂತ್ಯದೊಳಗೆ ಸುಮಾರು ಒಂದು ಕೋಟಿ ಮನೆಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳಲಿವೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ – ಆಯುಷ್ಮಾನ್ ಭಾರತ
ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಯ ಬಿಲ್ಲನ್ನು ಪಾವತಿ ಮಾಡೋದೇ ದೊಡ್ಡ ಸವಾಲು. ಎಷ್ಟೋ ಜನರು ಆಸ್ಪತ್ರೆಯ ಬಿಲ್ಗೆ ಹೆದರಿಯೇ ಆಸ್ಪತ್ರೆಗೆ ಹೋಗಲು ಹೆದರಿ ಸರಿಯಾದ ಚಿಕಿತ್ಸೆ ಲಭಿಸದೆ ಪ್ರಾಣ ಕಳೆದುಕೊಳ್ಳುತ್ತಾರೆ. ಭಾರತ ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ವಾರ್ಷಿಕ ರುಪಾಯಿ 5 ಲಕ್ಷದ ವರೆಗಿನ ಆಸ್ಪತ್ರೆ ವೆಚ್ಚವನ್ನು ಭರಿಸುವ ಕೇಂದ್ರ ಸರಕಾರದ ಆಯುಷ್ಮಾನ್ ಭವ ಯೋಜನೆಯನ್ನು ಬಡವರ ಭಾಗ್ಯವೆಂದೇ ಹೇಳಬಹುದು. ದೇಶದ ಬಡ ಹಾಗೂ ಮಧ್ಯಮ ವರ್ಗದ 10 ಕೋಟಿ ಕುಟುಂಬಗಳು/50 ಕೋಟಿ ಬಡ ಹಾಗೂ ಮಧ್ಯಮ ವರ್ಗದ ಜನರು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ 6 ಕೋಟಿ ಟಾಯ್ಲೆಟ್ಗಳ ನಿರ್ಮಾಣ
ತೆರೆದ ಸ್ಥಳದಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಅನಾರೋಗ್ಯಕ್ಕೆ ತುತ್ತಾಗಿ ದೇಶದಲ್ಲಿ ವಾರ್ಷಿಕವಾಗಿ 3 ಲಕ್ಷಕ್ಕಿಂತಲೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದರು. ಸ್ವಚ್ಛಭಾರತ್ ಅಭಿಯಾನದಡಿ ದೇಶದಲ್ಲಿ 6 ಕೋಟಿಗಿಂತಲೂ ಹೆಚ್ಚು ಬಡ ಕುಟುಂಬಗಳಿಗೆ ಶೌಚಾಲಯವನ್ನು ಕಟ್ಟಿಸಿಕೊಡಲಾಗಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ವಾರ್ಷಿಕವಾಗಿ 3 ಲಕ್ಷ ಜನರ ಪ್ರಾಣ ಉಳಿಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಸರಕಾರವನ್ನು ಶ್ಲಾಘಿಸಿದೆ.
ಕಡಿಮೆ ಬೆಲೆಯ ಜನೌಷಧ ಯೋಜನೆ
ಜನರಿಗೆ ಅತೀ ಕಡಿಮೆ ಬೆಲೆಯಲ್ಲಿ ಔಷಧಿ ಸಿಗುವ ಜನೌಷಧ ಮೆಡಿಕಲ್ ಶಾಪ್ ಗಳನ್ನು ದೇಶಾದ್ಯಂತ ತೆರೆದು ಬಡಜನರಿಗೆ ಕೇಂದ್ರ ಸರಕಾರವು ಸಹಾಯ ಮಾಡಿದೆ.
ಕಾರ್ಮಿಕರ ಇ ಎಸ್ ಐ ಸೌಲಭ್ಯ ಅರ್ಹತಾ ಮಿತಿಯನ್ನು ರೂ 15000 ದಿಂದ ರೂ 25000 ಕ್ಕೆ ಏರಿಕೆ
ಮೊದಲು ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಕಾರ್ಮಿಕರ ವಿಮೆ ಸೌಲಭ್ಯ ( ಇ ಎಸ್ ಐ) ಸಿಗುವ ಸಂಬಳದ ಮಿತಿ ತಿಂಗಳಿಗೆ 15000 ರುಪಾಯಿಗಳಾಗಿತ್ತು. ಈ ಮಿತಿಯನ್ನು ಕೇಂದ್ರ ಸರಕಾರವು 25000 ಕ್ಕೆ ಏರಿಸಿದೆ. ಈಗ ಮಾಸಿಕ 25000 ಸಂಬಳ ಪಡೆಯುವವರು ಕೂಡಾ ಇ ಎಸ್ ಐ ವಿಮಾ ಸೌಲಭ್ಯ ಪಡೆಯಬಹುದು.
ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ
ಮೊದಲು ಬೆಳೆ ನಷ್ಟಗೊಂಡ ಸಣ್ಣ ಹಾಗೂ ಅತೀ ಸಣ್ಣ ರೈತರು ಆರ್ಥಿಕ ಸಮಸ್ಯೆಯನ್ನೆದುರಿಸಿ ಬೇರೆ ದಾರಿ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಈಗ ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆಯ ಮೂಲಕ ಬೆಳೆ ನಷ್ಟವನ್ನು ಪರಿಹಾರವಾಗಿ ರೈತರಿಗೆ ಕೊಡಲಾಗುತ್ತಿದೆ.ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರಕಾರವು 29000 ಕೋಟಿ ರುಪಾಯಿಗಳನ್ನು ಫಸಲ್ ಬೀಮಾ ಯೋಜನೆಗೆ ಹೆಚ್ಚುವರಿಯಾಗಿ ಖರ್ಚು ಮಾಡಿದೆ.
ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆ
ಕೆಲವು ವರ್ಷಗಳ ಮೊದಲು ರಸಗೊಬ್ಬರ ಪೂರೈಕೆಯ ಕೊರತೆಯ ವಿಚಾರವಾಗಿ ರೈತರು ಸರಕಾರದ ವಿರುದ್ದ ಹೋರಾಟ ಮಾಡುತ್ತಿದ್ದರು. ಕೆಲವು ಬಾರಿ ಹೋರಾಟಗಳು ಹಿಂಸೆಗೆ ತಿರುಗಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್, ಗೋಲಿಬಾರ್ ಮಾಡುತ್ತಿದ್ದರು. ಕಳೆದ 4 ವರ್ಷಗಳಲ್ಲಿ ರಸಗೊಬ್ಬರ ಪೂರೈಕೆಯ ವಿಚಾರವಾಗಿ ದೇಶದ ಯಾವೊಬ್ಬ ರೈತನೂ ಸರಕಾರದ ವಿರುದ್ಧ ಹೋರಾಟ ಮಾಡಬೇಕಾದ ಪ್ರಸಂಗ ಬಂದಿಲ್ಲ. ವಿತರಣೆಯ ವ್ಯವಸ್ಥೆಯನ್ನು ಆಧಾರ್ ಜೊತೆ ಲಿಂಕ್ ಮಾಡಿ ಹಾಗೂ ರಸಗೊಬ್ಬರಕ್ಕೆ ಕಹಿಬೇವನ್ನು ಲೇಪಿಸಿದ ಕೇಂದ್ರ ಸರಕಾರವು ಸಬ್ಸಿಡಿಯ ರಸಗೊಬ್ಬರವು ಉದ್ದಿಮೆಗಳಿಗೆ ದುರುಪಯೋಗವಾಗುವುದನ್ನು ತಪ್ಪಿಸಿದೆ. ಹಾಗಾಗಿ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಸಿಗುತ್ತಿದೆ.
ಬಡವರಿಗೆ ವರದಾನವಾದ ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನಾ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾಯೋಜನೆ
ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನಾ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾಯೋಜನೆಗಳು ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 10 ಕೋಟಿಗಳಿಗಿಂತಲೂ ಹೆಚ್ಚು ಜನರು ಹೆಸರು ನೊಂದಾಯಿಸಿಕೊಂಡಿದ್ದು ಈಗಾಗಲೇ 10000 ಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ 1000 ಕೋಟಿ ರುಪಾಯಿಗಳ ವಿಮಾ ಪರಿಹಾರ ದೊರೆತಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ ದೇಶದ 3.5% ನಾಗರಿಕರು ಹೆಸರು ನೊಂದಾಯಿಸಿಕೊಂಡು 16000 ಕ್ಕಿಂತಲೂ ಹೆಚ್ಚು ಜನರು ವಿಮೆ ಪರಿಹಾರವನ್ನು ಪಡೆದುಕೊಂಡಿದ್ದಾರೆ.
ನಿಯಂತ್ರಿತ ಹಣದುಬ್ಬರ
ಆಗಸ್ಟ್ 2018 ರ ಹಣದುಬ್ಬರದ ಸೂಚ್ಯಂಕವು 3.69 ಆಗಿತ್ತು. 2013-14 ರಲ್ಲಿ ಹಣದುಬ್ಬರದ ಸೂಚ್ಯಂಕವು 8 ರಿಂದ ಮೇಲೆ ಇತ್ತು. ಮಧ್ಯವರ್ತಿಗಳ ತಂತ್ರದಿಂದ ಆಹಾರ ಧಾನ್ಯ ವಸ್ತುಗಳ ಬೆಲೆಯು ಗಗನಕ್ಕೆ ಏರಿದ್ದುವು. ಆಗ ಬೇಳೆ ಕಾಳುಗಳ ಬೆಲೆ ಕಿಲೋಗೆ 200 ರುಪಾಯಿಗಳಾಗಿದ್ದರೆ, ಈಗ ಅದು ರುಪಾಯಿ 80 ರ ಆಸುಪಾಸಿನಲ್ಲಿದೆ. ಈಗ ಸಕ್ಕರೆ, ಅಕ್ಕಿ, ಗೋಧಿ ಮುಂತಾದವುಗಳು ಕೂಡಾ ಮಧ್ಯವರ್ತಿಗಳ ಕಾಟದಿಂದ ತಪ್ಪಿಸಿಕೊಂಡು ಜನಸಾಮಾನ್ಯರಿಗೆ ಮಿತ ದರದಲ್ಲಿ ದೊರಕುತ್ತಿವೆ.
ಕೃಷಿ ಉತ್ಪನ್ನಗಳಿಗೆ 50% ಹೆಚ್ಚುವರಿ ಬೆಂಬಲ ಬೆಲೆ
ರಾಗಿ, ಗೋಧಿ, ಅಕ್ಕಿ, ಬೇಳೆ ಕಾಳುಗಳಿಗೆ 2013-14 ರಲ್ಲಿ ಕೊಡಲಾಗುತ್ತಿದ್ದ ಬೆಂಬಲ ಬೆಲೆಯನ್ನು ಹೋಲಿಸಿದಾಗ 2018-19 ರಲ್ಲಿ ಕೊಡುವ ಬೆಂಬಲ ಬೆಲೆಯು ಸರಾಸರಿ 50% ಹೆಚ್ಚಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಷದ ಕೃಷಿಕರ ಆದಾಯವೂ ಒಂದೂವರೆ ಪಟ್ಟು ಹೆಚ್ಚಾಗಿದೆ.
ಇವುಗಳೆಲ್ಲದರ ಹೊರತಾಗಿ ಸರಕಾರವು ಬಡ ಜನರಿಗೆ ಕೊಡುತ್ತಿರುವ ಸಬ್ಸಿಡಿ, ಪೆನ್ಶನ್, ಸಹಾಯಧನಗಳು ಒಂದು ನಯಾಪೈಸೆ ಸೋರಿಕೆಯಾಗದೆ ಜನಧನ್ ಅಕೌಂಟ್ ಗಳ ಮೂಲಕ ಜನರಿಗೆ ಸೇರುತ್ತಿವೆ. 30 ವರ್ಷಗಳ ಹಿಂದೆ ಈ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಸರಕಾರ ಜನರಿಗೆ ಕೊಡುತ್ತಿದ್ದ ಒಂದು ರುಪಾಯಿಯಲ್ಲಿ 10 ಪೈಸೆ ಮಾತ್ರ ಜನರಿಗೆ ಸೇರುತ್ತಿದೆ ಎಂದು ಹೇಳಿದ್ದರು. ಆದರೆ ಈಗಿನ ಬದಲಾದ ವ್ಯವಸ್ಥೆಯಲ್ಲಿ ಆಧಾರ್ ಲಿಂಕ್ ಮೂಲಕದ Direct Benefit Transfer- ನೇರ ಲಾಭ ವರ್ಗಾವಣೆಯಿಂದಾಗಿ ನೂರಕ್ಕೆ ನೂರು ಶೇಕಡಾ ಸರಕಾರೀ ಆರ್ಥಿಕ ಸಹಾಯಧನವು ಫಲಾನುಭವಿಗಳಿಗೆ ಸೇರುತ್ತಿದೆ. ಈಗ ವಾರ್ಷಿಕವಾಗಿ 90,000 ಕೋಟಿ ರುಪಾಯಿಗಳಷ್ಟು ಸರಕಾರೀ ಹಣದ ಸೋರಿಕೆ ನಿಂತು ಅರ್ಹ ಜನಸಾಮಾನ್ಯರ ಖಾತೆಗೆ ಬಂದು ಸೇರುತ್ತಿದೆ.
ಈಗ ಹೇಳಿ ಮೋದಿ ಸರಕಾರವು ಬಡಜನರಿಗೆ ಏನೂ ಮಾಡುತ್ತಿಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.