ಜಲಮೂಲ ಸಂರಕ್ಷಣೆ ಕಳಕಳಿ, ಜಾಗೃತಿಗೆ ಮುಂದಾದ ಯುವ ಮನಗಳು, ಉತ್ತಮ ನಿರ್ಧಾರಕ್ಕೆ ಗ್ರಾಮ ಪಂಚಾಯಿತಿ ಸಾಥ್….
ಇದು ಪುಟ್ಟ ಹಳ್ಳಿಯಲ್ಲೊಂದು ಕ್ರಾಂತಿಗೆ ಕಾರಣವಾದ ಕಥೆ. ಜೀವ ಜಲ ಸಂರಕ್ಷಣೆಯ ಸಂಕಲ್ಪ ಇಲ್ಲಿ ಸಾಕಾರವಾಗಿದೆ. ಪರಿಸರ ಉಳಿಸಲು ಹಾತೊರೆಯುವ ಮನಗಳಲ್ಲಿ ಮತ್ತಷ್ಟು ಕೆಲಸ ಮಾಡಬೇಕೆಂಬ ಬಲವನ್ನೂ ತುಂಬಿದೆ. ಈ ಗ್ರಾಮಸ್ಥರ ನಿರ್ಧಾರ ಇತರರಿಗೂ ಮಾದರಿಯಾಗಿದೆ.
ಹುನ್ನೂರು. ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಈ ಪುಟ್ಟ ಗ್ರಾಮದಲ್ಲಿ ಗಣೇಶ ಉತ್ಸವಕ್ಕೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ ಒಂದು ಪವಾಡವೇ ನಡೆದಿದೆ. ಎರಡೂವರೆ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸುತ್ತಿದ್ದ ಜನ ಈ ಬಾರಿ ಒಂದೇ ಒಂದು ಮೂರ್ತಿಯನ್ನೂ ಅಲ್ಲಿ ವಿಸರ್ಜಿಸಲಿಲ್ಲ. 25 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಗುಡ್ ಬೈ ಹೇಳಿ ಕೆರೆ ಸಂರಕ್ಷಣೆಗೆ ಮುಂದಾದರು. ಗ್ರಾಮಸ್ಥರ ಈ ನಿರ್ಧಾರಕ್ಕೆ ನೆರೆಹೊರೆಯವರೂ ಭೇಷ್ ಎಂದರು. ಇದು ಪವಾಡವೂ ಹೌದು, ಕ್ರಾಂತಿಯೂ ಹೌದು.
ಈ ಗ್ರಾಮದ ಜನಸಂಖ್ಯೆ ಅಂದಾಜು 10 ಸಾವಿರ. ಜಮಖಂಡಿ ನಗರದ ಹೆಚ್ಚುವರಿ ಪ್ರದೇಶ ಹಾಗೂ ಪಕ್ಕದ ಕಡಪಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಲ್ಪ ಭಾಗ ಸೇರಿ ಈ ಪ್ರದೇಶದಲ್ಲಿ ಅಂದಾಜು 15 ಸಾವಿರ ಜನ ವಾಸಿಸುತ್ತಾರೆ.
ಇವರೆಲ್ಲ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದ ಗಣೇಶ ಮೂರ್ತಿಗಳ ಸಂಖ್ಯೆ ಅಂದಾಜು ಎರಡೂವರೆ ಸಾವಿರ. ಈ ಎಲ್ಲ ಮೂರ್ತಿಗಳನ್ನು ಜಾನುವಾರುಗಳ ದಾಹ ತಣಿಸುತ್ತಿದ್ದ ಗ್ರಾಮದ ಏಕೈಕ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು. ಇದರಿಂದ ನಾಲ್ಕು ಎಕರೆ ವಿಶಾಲವಾದ ಕೆರೆಯಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ನೀರಿನ ಸಂಗ್ರಹ ಕ್ರಮೇಣ ಕಡಿಮೆಯಾಗಿತ್ತು. ಇದರಿಂದ ಅಂತರ್ಜಲಮಟ್ಟ ಕುಸಿದು ಗ್ರಾಮದಲ್ಲಿ ಬೋರ್ವೆಲ್ಗಳೂ ಬತ್ತಿದ್ದವು.
ಕೆಲವು ವರ್ಷಗಳ ಹಿಂದೆ ಕೆರೆಯ ಹೂಳು ತೆಗೆಸಿ ಸ್ವಚ್ಛಗೊಳಿಸಲಾಗಿದ್ದರೂ ಪ್ರತಿ ವರ್ಷ ಗಣೇಶ ವಿಸರ್ಜನೆ ಮುಂದುವರಿದಿತ್ತು. ಇದರಿಂದ ಹೂಳಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು.
ಗ್ರಾಮದ ಸಮಾಜ ಸೇವಕ, ವಿಕಲಚೇತನ ಬಸಪ್ಪ ಸಾವಳಗಿ ಎಂಬುವರು ಮನೆಯಲ್ಲೇ ಹಾಸಿಗೆ ಮೇಲೆ ಮಲಗಿದ್ದರೂ ಗ್ರಾಮದಲ್ಲಿ ಪಿಒಪಿ ಮೂರ್ತಿ ಮಾರಾಟ ಮಾಡಬಾರದು ಮತ್ತು ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಬಾರದು ಎಂದು ಬೇರೆಯವರ ಸಹಾಯದಿಂದ ಮನವಿ ಬರೆಸಿ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದರು. ಇದರ ಪರಿಣಾಮ ಸಂಬಂಧಿಸಿದ ಅಧಿಕಾರಿಗಳು ಈ ಬಾರಿ ಪಿಒಪಿ ಮೂರ್ತಿಗಳ ಮಾರಾಟಕ್ಕೆ ಬಹುತೇಕ ಕಡಿವಾಣ ಹಾಕಿ ಕೆರೆ ಸಂರಕ್ಷಣೆಗೂ ಮುಂದಾಗಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮದ ಪರಿಸರ ಪ್ರಿಯ ಯುವಕರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜಿಸುವಂತಿಲ್ಲ ಎಂದು ವಾಟ್ಸ್ ಆಪ್, ಫೇಸ್ಬುಕ್ಗಳ ಜಾಗೃತಿ ಮೂಡಿಸಿದ್ದರು. ಕೆರೆಗೆ ನೀರು ಹರಿಸುವ ಕಾಲುವೆಯನ್ನು ಗ್ರಾಮ ಪಂಚಾಯಿತಿ ಹೊಂಡವಾಗಿ ನಿರ್ಮಿಸಿದ್ದು, ಅಲ್ಲಿಯೇ ವಿಸರ್ಜಿಸಬೇಕು ಎಂಬ ಸಂದೇಶ ರವಾನಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಲಪ್ಪ ಕುಲ್ಹಳ್ಳಿ, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಕೂಡ ಕೆರೆ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿದ್ದರು. ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುವಂತಿಲ್ಲ ಎಂದು ಗ್ರಾಮದಲ್ಲಿ ಡಂಗುರವನ್ನೂ ಸಾರಲಾಗಿತ್ತು. ಇದರಿಂದ ಎಲ್ಲರೂ ಹೊಂಡದಲ್ಲಿ ಮೂರ್ತಿ ವಿಸರ್ಜನೆ ನಿರ್ಧಾರ ಕೈಗೊಂಡಿದ್ದರು. ಆದರೂ ಕೆಲವು ಯುವಕರು ಉತ್ಸವ ಸಂದರ್ಭದಲ್ಲಿ ಕೆರೆಯ ಕಾವಲು ಕಾಯ್ದರು. ಇದರ ಪರಿಣಾಮ ಕೆರೆಯಲ್ಲಿ ಒಂದೇ ಒಂದು ಗಣಪತಿ ಕೂಡ ವಿಸರ್ಜನೆಯಾಗಲಿಲ್ಲ.
ಗ್ರಾಮದಿಂದ ಮೂರು ಕಿ.ಮೀ.ದೂರದಲ್ಲಿರುವ ಜಮಖಂಡಿ ನಗರದ ಲಕ್ಕನ ಕೆರೆ ಬಳಿಯ ಜನತೆ ಕೆಲವು ವರ್ಷಗಳ ಹಿಂದೆಯೇ ಕೆರೆಯಲ್ಲಿ ಮೂರ್ತಿ ವಿಸರ್ಜನೆ ಮಾಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದು ಹುನ್ನೂರು ಗ್ರಾಮದ ಪರಿಸರ ಪ್ರೇಮಿಗಳ ಮೇಲೆ ಪ್ರಭಾವ ಬೀರಿತ್ತು. ಆ ಕಳಕಳಿಯೇ ನಮ್ಮೂರ ಕೆರೆ ಸಂರಕ್ಷಣೆಗೂ ಕಾರಣವಾಯಿತು ಎಂದು ಗ್ರಾಮದ ಹಿರಿಯರು ಸಂತಸದಿಂದ ಹೇಳುತ್ತಿದ್ದಾರೆ.
ಪರಿಸರ ಸಂರಕ್ಷಣೆಯ ಇಂಥ ನಿರ್ಧಾರಗಳು ನಿರ್ವಿಘ್ನವಾಗಿ ಸಾಕಾರಗೊಳ್ಳಲು ಗಣೇಶನ ಅನುಗ್ರಹವೂ ಇದೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.