ಕೊನೆಗೂ ಮೋದಿ ಸರ್ಕಾರ ಹಳಿಯಿಲ್ಲದೇ ರೈಲು ಬಿಡುವ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿಯೇ ಬಿಟ್ಟಿದೆ. ಹಾಗಂತ ನಾನು ಕೂಡಾ ಹಳಿಯಿಲ್ಲದ ರೈಲು ಬಿಡುತ್ತಿದ್ದೆನೇನೋ ಎಂದು ಪೂರ್ತಿ ಓದದೇ ಮುಂದಕ್ಕೆ ಹೋಗಿಬಿಡಬೇಡಿ. ಏಕೆಂದರೆ ನಾನು ಈಗ ಹೇಳುತ್ತಿರುವ ವಿಚಾರ ಹಳಿಯಿಲ್ಲದೇ ರೈಲು ಬಿಡುತ್ತಿದ್ದ ಹಿಂದಿನ ಉದಾಹರಣೆಗಳಂತಲ್ಲ. ಏಕೆಂದರೆ ಇನ್ನು ಮುಂದೆ ನಿಜಕ್ಕೂ ಹಳಿಯಿಲ್ಲದ ನಮ್ಮ ರಸ್ತೆಗಳಲ್ಲಿ ರೈಲುಗಳು ಓಡಾಡಲಿವೆ!
ಯುಕೆ, ಅಮೆರಿಕಾದಂತಹಾ ದೇಶಗಳಲ್ಲಿ 1950 -60 ರ ದಶಕದಲ್ಲೇ ಬಳಕೆಯಲ್ಲಿದ್ದ ರೋಡ್-ರೈಲರ್ ಪರಿಕಲ್ಪನೆ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡುವ ಮುಹೂರ್ತ ಸಿಗಲು ಇಷ್ಟು ಕಾಲ ಬೇಕಾಯಿತು. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲೇ ಇಂಥದ್ದೊಂದು ಯೋಜನೆ ಗರಿಗೆದರಿ ಭಾರತೀಯ ರೈಲ್ವೆಯು ಕಿರ್ಲೋಸ್ಕರ್ ನ್ಯುಮಾಟಿಕ್ ಕಂಪನಿಯ ಜೊತೆ ಈ ವಿಚಾರವಾಗಿ ಒಂದು ಒಪ್ಪಂದ ಮಾಡಿಕೊಂಡಿತ್ತಾದರೂ ಆ ಯೋಜನೆ ಅಂದುಕೊಂಡ ವೇಗ ಪಡೆಯದೇ ಓಡಬೇಕಾಗಿದ್ದ ರೈಲು ನಿಂತಲ್ಲಿಯೇ ನಿಂತುಬಿಟ್ಟಿತ್ತು!
ಕೊನೆಗೆ 2015 ರಲ್ಲಿ ಆ ಯೋಜನೆ ಪ್ರಾರಂಭವಾಯಿತು. ಆದರೆ ಒಂದು ರೈಲು ಹಳಿಯ ಮೇಲೂ ಮತ್ತು ರಸ್ತೆಯ ಮೇಲೂ ಸಂಚರಿಸಬಹುದಾದರೆ ಅದರ ನೋಂದಣಿ ಯಾವ ಇಲಾಖೆಯಲ್ಲಾಗಬೇಕು, ಅದು ರಸ್ತೆ ಸಾರಿಗೆ ವ್ಯವಸ್ಥೆಗೆ ಸೇರಬೇಕೇ ಅಥವಾ ರೈಲು ಸಾರಿಗೆ ವ್ಯವಸ್ಥೆಗೆ ಸೇರಬೇಕೇ ಎನ್ನುವ ಕಾನೂನು ಗೊಂದಲಗಳಿಂದಾಗಿ ಸ್ವಲ್ಪ ನಿಧಾನವಾದ ಯೋಜನೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ರೋಡ್-ರೈಲರ್ ಟ್ರೈನಿಗೆ ಅನುಮೋದನೆ ನೀಡಿದ ಬಳಿಕ ಕೊನೆಗೂ ಯಶಸ್ವಿಯಾಗಿ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ರೈಲ್ವೆಯು ರೋಡ್-ರೈಲರ್ ಟ್ರೈನ್ ಅನ್ನು ಬಿಡುಗಡೆಗೊಳಿಸಿದೆ. ಆ ಮೂಲಕ ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ.
ರೋಡ್-ರೈಲರ್ ಟ್ರೈನ್ಗಳ ವಿಶೇಷತೆಯೇನೆಂದರೆ ಇದು ರೈಲ್ವೆ ಹಳಿಗಳ ಮೇಲೂ ಮತ್ತು ರಸ್ತೆಯಲ್ಲೂ ಸಂಚರಿಸಬಲ್ಲದು. ಇದಕ್ಕೇಕಿಷ್ಟು ಮಹತ್ವ ಕೊಡಬೇಕು?ನಮ್ಮ ಊರಿನಲ್ಲಿ ಅಗಲವಾದ ರಸ್ತೆಯೇ ಇಲ್ಲ, ಹಾಗಿರುವಾಗ ಇದರಿಂದೇನು ಪ್ರಯೋಜನ? ಇದರಿಂದ ಅಂತಹಾ ದೊಡ್ಡ ಉಪಕಾರವೇನಾದೀತು?… ಹೀಗೆ ಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಅದಕ್ಕೆಲ್ಲಾ ಉತ್ತರ ಇಲ್ಲಿದೆ.
ಮೊದಲನೆಯದಾಗಿ ಯಾವುದೋ ರಾಜ್ಯದಿಂದ ಬರುವ ಸರಕುಗಳನ್ನು ರೈಲ್ವೆ ಹಳಿ ಇರುವ ಕಡೆಗಳಿಂದ ಇಲ್ಲದ ಕಡೆಗೂ ಸುಗಮವಾಗಿ ಸಾಗಿಸಲು ಇದು ಉಪಯೋಗವಾಗಲಿದೆ. ಉದಾಹರಣೆಗೆ ಹಾಸನದ ಗೂಡ್ಸ್ ರೈಲು ನಿಲ್ದಾಣಕ್ಕೆ ಗುಜರಾತಿನಿಂದ ಬಂದು ನಿಲ್ಲುವ ರೈಲೊಂದರಲ್ಲಿರುವ ಸರಕನ್ನು ಒಂದಿಡೀ ದಿನ ಒಂದಷ್ಟು ಜನ ಕಾರ್ಮಿಕರು ಎತ್ತಿ ಲಾರಿಯೊಳಗೆ ತುಂಬುತ್ತಾರೆ ಎಂದಿಟ್ಟುಕೊಳ್ಳಿ. ನಂತರ ಆ ಲಾರಿ ಹೊಳೆ ನರಸೀಪುರದ ಮುಖ್ಯ ರಸ್ತೆಯ ಬದಿಯಲ್ಲಿರುವ ಯಾವುದೋ ಒಂದು ಗೋಡೌನ್ ಗೆ ತಲುಪಿ ಅಲ್ಲಿ ಮತ್ತೆ ಆ ಸರಕುಗಳನ್ನು ಅನ್ಲೋಡ್ ಮಾಡಲಾಗುತ್ತದೆ ಎಂದುಕೊಳ್ಳಿ.
ಅದೇ ರೀತಿ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ಯಾವುದೋ ಒಂದು ಫ್ಯಾಕ್ಟರಿಯಿಂದ ಸರಕುಗಳನ್ನು ಗೂಡ್ಸ್ ರೈಲಿನ ಮೂಲಕ ಉತ್ತರ ಪ್ರದೇಶದ ಇನ್ನೊಂದು ಸಂಸ್ಥೆಗೆ ಕಳಿಸಬೇಕಾದರೆ ಆ ಸರಕುಗಳನ್ನು ಲಾರಿಗಳಿಗೆ ಲೋಡ್ ಮಾಡಿ ಅದನ್ನು ಯಶವಂತಪುರಕ್ಕೆ ತಂದು ಅಲ್ಲಿ ಮತ್ತೆ ಲಾರಿಗಳಿಂದ ಇಳಿಸಿ ಗೂಡ್ಸ್ ರೈಲುಗಳ ಬೋಗಿಗಳಿಗೆ ಲೋಡ್ ಮಾಡಬೇಕು ಎಂದಿಟ್ಟುಕೊಳ್ಳಿ. ಆದರೆ ಈ ರೋಡ್-ರೈಲರ್ ಟ್ರೈನ್ ಬಂದರೆ ಬೆಂಗಳೂರಿನ ಆ ಫ್ಯಾಕ್ಟರಿಯಿಂದ ಸರಕುಗಳನ್ನು ನೇರವಾಗಿ ರೋಡ್-ರೈಲರ್ ಒಳಗೆ ತುಂಬಿಕೊಂಡು ಅದು ತಲುಪಬೇಕಾಗಿರುವ ಉತ್ತರ ಪ್ರದೇಶದ ಇನ್ನೊಂದು ಸಂಸ್ಥೆಯ ಗೋಡೌನ್ ಒಳಗೆ ಇಳಿಸಬಹುದು. ಇದರಿಂದ ಉಳಿತಾಯವಾಗುವ ಕೆಲಸವೆಷ್ಟು, ಸಮಯವೆಷ್ಟು ಮತ್ತು ಹಣವೆಷ್ಟು ಎನ್ನುವುದನ್ನು ಈಗ ನೀವೇ ಲೆಕ್ಕ ಹಾಕಿ.
ಎಂಟು ಲಾರಿಗಳ ಚಕ್ರಗಳನ್ನು ಹೊಂದಿರುವ ಮತ್ತು ನಾಲ್ಕು ರೈಲು ಗಾಲಿಗಳನ್ನು ಹೊಂದಿರುವ ಒಂದು ರೋಡ್-ರೈಲರ್ ರಸ್ತೆಯಲ್ಲಿ ಸಾಗುವ 50 ಲಾರಿಗಳಿಗೆ ಸಮ! ಹಾಗಾಗಿಯೇ ಸರಕು ಸಾಗಾಣಿಕೆಯ ವೆಚ್ಚವನ್ನು ಇದು ಗಣನೀಯವಾಗಿ ಇಳಿಸಲಿದೆ. ಹಾಗೆ ಇಳಿಕೆಯಾದ ವೆಚ್ಚದಿಂದ ಅಂತಿಮವಾಗಿ ಗ್ರಾಹಕನಿಗೇ ಲಾಭ.
ದೇಶದ ಮೊದಲ ರೋಡ್-ರೈಲರ್ ಕಳೆದ ವಾರ ತಮಿಳುನಾಡಿನ ವೆಲ್ಲೂರಿನ ವೆಲಪ್ಪಾಕ್ಕಂನಿಂದ ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದು, ಇದರಿಂದ ಭಾರತದ ಸರಕು ಸಾಗಣೆಯ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಯೇ ಆರಂಭವಾಗುವ ಲಕ್ಷಣಗಳಿವೆ.
ಆದರೂ ವಿರೋಧಿಗಳೇನೂ ಬೇಸರಿಸಿಕೊಳ್ಳುವ ಅಗತ್ಯವಿಲ್ಲ. ರೋಡ್-ರೈಲರ್ಗಳು ದಿನಗೂಲಿ ಕಾರ್ಮಿಕರ ಉದ್ಯೋಗ ಕಸಿಯುತ್ತಿದೆ ಎಂದೋ, ಲಾರಿ ಮಾಲೀಕರುಗಳನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದೋ ಪ್ರತಿಭಟನೆ ಮಾಡುವ ಅವಕಾಶಗಳಂತೂ ಹಿಂದೆಂದಿನಂತೆ ಮುಂದೆಯೂ ಇದ್ದೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.