ಸ್ವರ್ಗೀಯ ಡಾ. ಪ್ರಮೋದ ಬಾಸರಕರ ಶ್ರದ್ಧಾಂಜಲಿ ಸಭೆ
ಧಾರವಾಡ : ಸ್ವಂತಕ್ಕೆ ವಜ್ರದಷ್ಟು ಕಠೋರ; ಸಮಾಜಕ್ಕೆ ಹೂವಿನಷ್ಟು ಮೃದು ಎಂಬಂತೆ ಆದರ್ಶ ಪ್ರಾಧ್ಯಾಪಕ ಹಾಗೂ ಗುಣೀ ಸ್ವಯಂಸೇವಕನ ಪಾತ್ರ ನಿರ್ವಹಿಸಿದ ಡಾ. ಪ್ರಮೋದ ಬಾಸರಕರ ಧಾರವಾಡದ ಸಾಮಾಜಿಕ ಮತ್ತು ಬೌದ್ಧಿಕ ಲೋಕದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಸಹ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಅಭಿಪ್ರಾಯಪಟ್ಟರು.
ಶಿವ ಕೃಪಾ ಟ್ರಸ್ಟ್, ಇಲ್ಲಿನ ಸಾಧನಕೇರಿಯ ಡಾ. ದ.ರಾ. ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಸಭಾಭವನದಲ್ಲಿ ಆಯೋಜಿಸಿದ್ದ (ಸೋಮವಾರ ಸೆ.24, 2018) ಸ್ವರ್ಗೀಯ ಡಾ. ಪ್ರಮೋದ ಬಾಸರಕರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು, 93 ವರ್ಷದ ಬಾಸರಕರಜೀ ತಾಯಿ ಸುಧಾ ಅವರು ಬರೆದ ‘ವಾಟ ಶಂಭರೀಚಿ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸ್ವಯಂ ಶಿಸ್ತು, ಸಮಯ ಪರಿಪಾಲನೆಯ ಕಟ್ಟಾ ಮನೋಸ್ಥಿತಿ, ಸಮಾಜಕ್ಕೆ ಸರ್ವಸ್ವ ಧಾರೆ ಎಂಬ ಆತ್ಮ ಸಂಗಾತ ಸ್ವಯಂಸೇವಕತ್ವದ ಧಾರಣೆ, ಡಾ. ಬಾಸರಕರ ಅವರನ್ನು ಧಾರವಾಡದವರನ್ನಾಗಿಸಿತು. ಲಾಳಗಟ್ಟಿಯ ಗಾಂಧಿ ಸಮುದಾಯ ಭವನ, ಪ್ರಭು ಹೊನ್ನಾಪುರದ ಕೃಷ್ಣ ಮಂದಿರ, ಗೌಳಿಗರ ಮನೆಗಳು ಹಾಗೂ ಶಾಲೆ, ಸ್ವತಃ ಪುರೋಹಿತರಾಗಿ ಕೈಗೊಂಡ ಸಾಮಾಜಿಕ ಸಾಮರಸ್ಯದ ಮದುವೆಗಳು.. ಪ್ರತಿಭಾವಂತ, ಬಡ ವಿದ್ಯಾರ್ಥಿಗಳಿಗೆ ಪೋಷಕ, ಪಾಲಕರಾಗಿ ನಿರ್ವಹಿಸಿದ ಭೂಮಿಕೆ ಮನನೀಯ ಎಂದು ಮಂಗೇಶ್ಜೀ ನುಡಿದರು.
ಡಾ. ಬಾಸರಕರ ಅವರ ಹಿರಿ ಮಗಳು ಮುಗ್ಧಾ ಬಾಸರಕರ ತಂದೆಯ ನೆನಪು ಹಂಚಿಕೊಂಡರು. ಅವರ ಕಿರಿಯ ಸಹೋದರ ವಿನೋದ ಬಾಸರಕರ ‘ವಾಟ ಶಂಭರೀಚಿ’ ಕೃತಿ ಪರಿಚಯಿಸಿದರು. ಹಿರಿಯ ಸಹೋದರ ವಿಜಯ ಬಾಸರಕರ್ ವೇದಿಕೆಯ ಮೇಲಿದ್ದರು. ಸಹೋದ್ಯೋಗಿಗಳು, ಒಡನಾಡಿಗಳು, ಆಪ್ತೇಷ್ಠರು ತಮ್ಮ ಒಡನಾಟದ ಅನುಭವ ಹಂಚಿಕೊಂಡರು.
ಸೋಮೇಶ ಪಟ್ಟಣಕೋಡಿ ಪ್ರಾರ್ಥಿಸಿದರು. ಸಂತೋಷ ಪೂಜಾರಿ ಸ್ವಾಗತಿಸಿ, ಪರಿಚಯಿಸಿದರು. ಮೋಹನ ಬಾಸರಕರ ವಂದಿಸಿದರು. ಹರ್ಷವರ್ಧನ ಶೀಲವಂತ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.