ಇರುವ ಕೆಲಸವ ಮಾಡು, ಗೊಣಗಿಡದೇ ಮನವಿಟ್ಟು ಧ್ಯೇಯದ ಮೇಷ್ಟ್ರು ಬಾಸರಕರ್ಜೀ
ಧಾರವಾಡ : ‘ರಾಷ್ಟ್ರಾಯ ಇದಂ; ನ ಮಮ’ ಉಕ್ತಿಗೆ ಅನ್ವರ್ಥಕವಾಗಿ ಬಾಳಿದವರು ಡಾ. ಪ್ರಮೋದ ಬಾಸರಕರ. ಸಮಾಜ ಸೇವೆ ಅವರಿಗೆ ಹವ್ಯಾಸವಾಗಿರಲಿಲ್ಲ. ಬದುಕಿನ ವೃತವಾಗಿತ್ತು. ಮೌಲ್ಯಗಳನ್ನು ನಾಲಿಗೆಯಾಗಿಸಿಕೊಂಡವರ ಸಂಖ್ಯೆ ಇಂದು ಕಳವಳಕಾರಿಯಾಗಿದೆ. ಆದರೆ, ಚರ್ಮವಾಗಿಸಿಕೊಂಡವರು ಅಪರೂಪ. ಅಂತಹ ವಿರಳರ ಸಾಲಿಗೆ ಸೇರಿದ ಪ್ರಾಧ್ಯಾಪಕ ಬಾಸರಕರ್ಜೀ.
ಕಳೆದ ಶುಕ್ರವಾರ (ಸೆ.14) ತಮ್ಮ 68 ನೇ ವಯಸ್ಸಿನಲ್ಲಿ ಬಾಸರಕರ್ಜೀ ನಿಧನರಾದಾಗ ಕಂಬನಿ ಮಿಡಿದ ಅನೇಕರ ಭಾವ, ‘ಅವರಿನ್ನೂ ನಮ್ಮೊಡನೆ ಇರಬೇಕಿತ್ತು.’ ಬಾಸರಕರ್ಜೀ.. ನಮ್ಮ ಧಾರವಾಡದವರೇ ಆಗಿಹೋದರು. ಮೂಲತಃ ಮಹಾರಾಷ್ಟ್ರದ ನಾಗಪುರದವರಾದರೂ ‘ನಮ್ಮವರು’ ಎಂಬ ಸ್ಥಾಯೀಭಾವ ಅವರು ಒಡನಾಡಿಗಳಲ್ಲಿ ಮೂಡಿಸಿದರು. ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ ಜೀವ ರಸಾಯನಶಾಸ್ತ್ರ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡು ಧಾರವಾಡಕ್ಕೆ ಬಂದಾಗ ಅವರಿಗೆ ಕನ್ನಡ ಬರುತ್ತಿರಲಿಲ್ಲ! ಮರಾಠಿ ಅವರ ಮನೆ ಮಾತು. ಸಂಘ ಕಾರ್ಯ ಹಾಗೂ ಅಧ್ಯಾಪಕ ವೃತ್ತಿಯ ದೆಸೆಯಿಂದ ಕನ್ನಡ ಭಾಷಾ ಪರೀಕ್ಷೆ ಬರೆದು, ಓದಲು, ಬರೆಯಲು ಮತ್ತು ಮಾತನಾಡಲು ಕರತಲಾಮಲಕ ಮಾಡಿಕೊಂಡ ಪ್ರಯತ್ನವಾದಿ.
ಇಲ್ಲಿನ ಜನ ಸಾಧನಕೇರಿಯ ಮನೆ ‘ಹರಿ ಓಂ’ ಖರೀದಿಸಲು ಹಣ ಸಹಾಯ ಮಾಡಿದರು ಎಂಬ ಒಂದೇ ಕಾರಣಕ್ಕೆ, ಧಾರವಾಡದ ಋಣ ತೀರಿಸಲು ನಿಂತ, ಸಣ್ಣ ಸಹಾಯವನ್ನೂ ಮಹದುಪಕಾರ ಎಂಬಂತೆ ಪರಿಭಾವಿಸಿದ ಮೇಷ್ಟ್ರು ಬಾಸರಕ್ಜೀ.
ಅವರು ಹುಟ್ಟಿದ್ದು ಜುಲೈ 15, 1950 ಚಂದ್ರಪುರ ಜಿಲ್ಲೆಯ ಬಲ್ಲಾರಪುರದಲ್ಲಿ. ತಂದೆ ದಿ.ವಾಮನ್ರಾವ್ ಖಾಸಗಿ ಗಣಿ ಕಂಪೆನಿಯಲ್ಲಿ ಅದಿರು ವ್ಯವಸ್ಥಾಪನಾ ಅಧೀಕ್ಷಕರಾಗಿದ್ದರು. ತಾಯಿ ಸುಧಾ ಸದ್ಗೃಹಿಣಿ. ಓರ್ವ ಅಣ್ಣ, ಓರ್ವ ತಮ್ಮ ಹಾಗೂ ತಂಗಿ ಮಧ್ಯೆ ಸುಂದರ ಬಾಲ್ಯ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ’ಕಾಶಿ’ – ನಾಗಪುರದಲ್ಲಿ ಪ್ರಾಥಮಿಕ ಶಿಕ್ಷಣ. ಸಂಘದ ಸ್ವಯಂ ಸೇವಕನಾಗಿ ದೀಕ್ಷೆ.
ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಿಂದ ಬಿ.ಎಸ್ಸಿ. ಸ್ನಾತಕ ಪದವಿ. 1975 ರಲ್ಲಿ ನಾಗಪುರ ವಿಶ್ವವಿದ್ಯಾಲಯದಿಂದ ಜೀವ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿ. ಪ್ರೊ. ಹಾಥವಳೆ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಅಧ್ಯಯನ ಆರಂಭ. ಡಿಸೆಂಬರ್ 14, 1976 ನಾಗಪುರದಲ್ಲಿ ಶ್ರೀಮತಿ ಸಂಧ್ಯಾತಾಯಿ ಅವರೊಂದಿಗೆ ಪ್ರೇಮ ವಿವಾಹ. ಉಪನ್ಯಾಸಕರಾಗಿ ವೃತ್ತಿ ಜೀವನಕ್ಕೆ ಪದಾರ್ಪಣೆ.
ಹೊಸದಿಲ್ಲಿಯ ರಕ್ಷಣಾ ಮಂತ್ರಾಲಯದ ಸಂಶೋಧನಾ ವಿಭಾಗದಲ್ಲಿ ಐದು ವರ್ಷಗಳ ಸೇವೆ. ೧೯೮೧ರಲ್ಲಿ ಡಾ.ನಾಥ್ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿ ಸಂಪಾದನೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸಂಶೋಧನಾ ವಿಭಾಗಕ್ಕೆ ಆಗಮನ. ಎರಡು ವರ್ಷಗಳ ಸೇವೆ. ನಂತರ ಧಾರವಾಡದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತಿ. ಸುಧೀರ್ಘ ೨೮ ವರ್ಷಗಳ ಸೇವೆ. ಜೀವ ರಸಾಯನ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರೊಫೆಸರ್, ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕಲ್ಯಾಣ ನಿಕಾಯದ ಡೀನ್ ಆಗಿ ಸೇವೆ. ಜುಲೈ ೩೧, ೨೦೧೨ ಅಧ್ಯಾಪನ, ಪಿ.ಚ್.ಡಿ. ಮಾರ್ಗದರ್ಶನ ಹಾಗೂ ಸಂಶೋಧನೆಯಿಂದ ಸೇವಾ ನಿವೃತ್ತಿ.
ಈ ಮಧ್ಯೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಬೌದ್ಧಿಕ ಪ್ರಮುಖರಾಗಿ, ಭಾರತ ವಿಕಾಸ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿಯಾಗಿ ಅಸಂಖ್ಯಾತ ಸ್ವಯಂ ಸೇವಕರಿಗೆ ಪ್ರೇರಣೆ ನೀಡಿದ ಸ್ವಯಂ ಸೇವಕ. ರಾಷ್ಟ್ರನಿಷ್ಠ ಬಹುಭಾಷಾ ಕವಿ. ಕಂಚಿನ ಕಂಠದ ಗಾಯಕ. ಪ್ರಖರ ವಾಗ್ಮಿ. ಯೋಗ ಶಿಕ್ಷಕ. ಅಗ್ನಿಹೋತ್ರ ಮತ್ತು ಹೋಮ ಸಾವಯವ ಕೃಷಿಯಲ್ಲಿ ವಿಶೇಷ ಪರಿಣತಿ ಮತ್ತು ಪ್ರಯೋಗಶೀಲತೆ ಮೈಗೂಡಿಸಿಕೊಂಡವರು ಬಾಸರಕರ್ಜೀ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಬಾಸರಕರ್ಜೀ ತಾಯಿ, ಜ್ಞಾನವೃದ್ಧ 93 ವರ್ಷದ ಸುಧಾ ಅವರು ಬರೆದ, ಸ್ವತಃ ಬಾಸರಕರ್ಜೀ ಹಾಗೂ ಕಿರಿಯ ತಮ್ಮ ವಿನೋದ ಸಂಪಾದಿಸಿದ ಕೃತಿ ‘ವಾಟ ಶಂಭರೀಚಿ’ (ನೂರಕ್ಕೆ ದಾರಿ) ಮೇಷ್ಟ್ರು ತೀರಿದ ದಿನ (ಸೆ.14, ಶುಕ್ರವಾರ) ಬಿಡುಗಡೆಗೊಳ್ಳಬೇಕಿತ್ತು. ತಾಯಿ ಬರೆದ ಪುಸ್ತಕದ ಮುಖಪುಟ ನೋಡಿ ತುಂಬ ಹರ್ಷಚಿತ್ತರಾಗಿದ್ದ ಅವರು, ಸತ್ತೂರಿನ ಎಸ್ಡಿಎಂ ಆಸ್ಪತ್ರೆಯಲ್ಲಿ ಅನಿರೀಕ್ಷಿತ ಹೃದಯ ಸ್ಥಂಬನದಿಂದ ಇಹದ ವ್ಯಾಪಾರ ಮುಗಿಸಿದರು.
ಡಯಾಬಿಟಿಸ್ ಅವರನ್ನು ಕಳೆದ 6 ವರ್ಷಗಳಲ್ಲಿ ಹಿಂಡಿ-ಹಿಪ್ಪೆ ಮಾಡಿತ್ತು. ಪರಿಣಾಮ ಎಂಬಂತೆ, ಪಾರ್ಶ್ವವಾಯುವಿಗೂ ಅವರನ್ನು ಈಡು ಮಾಡಿತ್ತು. ಕಣ್ಣಿಗೆ ತೀವ್ರ ತೊಂದರೆಯಾಗಿತ್ತು. ಆಯಿ ಸಂಧ್ಯಾ ದಿನ ಪತ್ರಿಕೆಗಳನ್ನು ಓದಿ ಹೇಳುತ್ತಿದ್ದರು. ಮೇಷ್ಟ್ರು ಹೇಳಿದ್ದನ್ನು ಬರೆದಿಡುತ್ತಿದ್ದರು. ಅನಾರೋಗ್ಯ ಪೀಡಿಸಿದಾಗಲೂ ತಮ್ಮನ್ನು, ತಮ್ಮ ಮನವನ್ನು ತಾವು ಸಂತೈಸಿಕೊಳ್ಳಲು ಕಲಿತಿದ್ದ ಮೇಷ್ಟ್ರು, ಅಪ್ಪಿತಪ್ಪಿಯೂ ಮನೆಗೆ ಬಂದವರಿಗೆ ತಮ್ಮ ಕಷ್ಟ ಅರಿವಿಗೆ ಬಾರದಂತೆ ನಡೆದುಕೊಳ್ಳುತ್ತಿದ್ದರು. ಆತಿಥ್ಯ ಅವರ ಗುಣವಾಗಿತ್ತು. ಅವರ ವ್ಯಕ್ತಿತ್ವ ಇತರರಿಗೆ ಪ್ರೇರಣಾದಾಯಿಯಾಗಿತ್ತು.
‘ಇರುವ ಕೆಲಸವ ಮಾಡು, ಗೊಣಗಿಡದೇ ಮನವಿಟ್ಟು’ ಅವರ ನಡೆ. ತಾಯಿ ಸುಧಾ, 42 ವರ್ಷಗಳ ಸಾಂಗತ್ಯದಲ್ಲಿ ಶ್ರೀಮತಿ ಸಂಧ್ಯಾ ಆಯಿ, (ರಾಷ್ಟ್ರ ಸೇವಿಕಾ ಸಮಿತಿಯ ಗೀತ ಪ್ರಮುಖ), ಓರ್ವ ಪುತ್ರಿ ಮುಗ್ಧಾ ಹಾಗೂ ಪುತ್ರ ಮೋಹನ್ ಅವರೊಂದಿಗೆ ಸಂತೃಪ್ತಿಯ ಜೀವನ ನಡೆಸಿದ ಕುಟುಂಬ ವತ್ಸಲ ಬಾಸರಕರ್ಜೀ, ತಮ್ಮ ಅನೇಕ ವಿದ್ಯಾರ್ಥಿಗಳಿಗೆ ‘ಲೋಕಲ್ ಗಾರ್ಡಿಯನ್’ ಆದವರು. ಅರ್ಹ, ಪ್ರತಿಭಾವಂತ ಮತ್ತು ಬಡತನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸ್ವತಃ ಫೀ ಕಟ್ಟಿ ಓದಿಸಿದ ಪಾಲಕ ‘ಬಾಬಾ’ ಎನಿಸಿದವರು. ವಿದ್ಯಾರ್ಥಿ ಅಂತಃಕರುಣಿ, ವಾತ್ಸಲ್ಯಮಯಿ ಶಿಕ್ಷಕ. ಕಿರಿಯರ ಸಣ್ಣ ಸಾಧನೆಗಳನ್ನೂ ಸಂಭ್ರಮಿಸಿ, ಪ್ರೇರೇಪಿಸುತ್ತ, ಯೋಜನಾಬದ್ಧ ಸಂಘ ಕಾರ್ಯ ಕಿರಿ ಪೀಳಿಗೆಗೆ ನಿರೂಪಿಸಿದವರು. ಇಂದಿಗೆ ಕೀರ್ತಿಶೇಷರು. ಬನ್ನಿ, ಅವರ ವ್ಯಕ್ತಿತ್ವ ಮತ್ತು ಕೃತಿತ್ವದಿಂದ ಪ್ರೇರಣೆ ಪಡೆಯೋಣ. ಶ್ರದ್ಧಾಂಜಲಿ ಅರ್ಪಿಸೋಣ.
ಸೆ.24, ಸೋಮವಾರ ಸಂಜೆ 6.30 ಕ್ಕೆ ಸಾಧನಕೇರಿಯ ಡಾ. ದ.ರಾ. ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್, ಸಭಾಭವನದಲ್ಲಿ ಕೀರ್ತಿಶೇಷ ಡಾ. ಬಾಸರಕರ್ಜೀ ಅವರಿಗೆ ಶ್ರದ್ಧಾಂಜಲಿ ಸಭೆ ಆಯೋಜಿತವಾಗಿದೆ. ಅವರ ತಾಯಿ, 93 ವರ್ಷದ ಸುಧಾತಾಯಿ ಉಪಸ್ಥಿತರಿದ್ದು, ಮಗ ತಮ್ಮ ಕುರಿತು ಸಂಪಾದಿಸಿದ ‘ವಾಟ ಶಂಭರೀಚಿ’ ಮರಾಠಿ ಕೃತಿ ಬಿಡುಗಡೆಗೊಳಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು, ಹಿರಿಯ ಅಧಿಕಾರಿಗಳು, ವಿದ್ಯಾರ್ಥಿ ಬಳಗ, ಸಹೋದ್ಯೋಗಿ ಪರಿವಾರ ಹಾಗೂ ಆಪ್ತೇಷ್ಠರು ಪಾಲ್ಗೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.