ಪಾಕಿಸ್ತಾನದ ಯಶಸ್ವಿ ಭೇಟಿಯನ್ನು ಮುಗಿಸಿದ ಖಾನ್, ಜುಲ್ಫಿಕರ್ ಭುಟ್ಟೊನ ಆದೇಶದಂತೆ ಆಂಸ್ಟರ್ಡ್ಯಾಮ್ ತನ್ನ ಕೆಲಸಕ್ಕೆ ಮರಳಿದ. ಹೀಗೆ ಮರಳಿರುವ ವಿಜ್ಞಾನಿಯ ಕುರಿತೊಪ್ಪಳದಲ್ಲಿ ಅಡಗಿದ್ದು ಕರೀಂಖಾನ್ ಎಂಬ ಐ.ಎಸ್.ಐ ನ ತೋಳ ಎಂಬ ಸಂಗತಿ ಅತ್ಯಂತ ಕಟ್ಟುನಿಟ್ಟಿನ ತಪಾಸಣೆ ಹಾಗು ರಕ್ಷಣೆಯಿದ್ದ FDO ದ ಆ ದಫ್ತರಿನಲ್ಲಿ ಯಾರಿಗೂ ತಿಳಿದಿರಲಿಲ್ಲ.
ನೆದರ್ಲ್ಯಾಂಡಿಗೆ ಮರಳಿದ ನಂತರ ಖಾನ್ ಮಾಡಿದ ಮೊದಲ ಕೆಲಸವೆಂದರೆ ಆ ದೇಶದಲ್ಲಿ ಪಾಕಿಸ್ತಾನದ ರಾಯಭಾರ ಕಚೇರಿಯ ಸಿದ್ದಿಕ್ ಬಟ್ನನ್ನು ಸಂಪರ್ಕಿಸಿದ್ದು. ಸ್ವತಃ ಒಬ್ಬ ವಿಜ್ಞಾನಿಯಾಗಿದ್ದ ಬಟ್ ಆ ದಿನಗಳಲ್ಲಿ ನೆದರ್ಲ್ಯಾಂಡ್ನ ರಾಯಭಾರಿ ಕಚೇರಿಯಲ್ಲಿ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಅಧಿಕಾರಿಯಾಗಿದ್ದವ. ಬಹುಬೇಗನೆ ಖಾನನ ಜೊತೆ ನೇರ ಸಂಪರ್ಕದಲ್ಲಿರುವಂತಾಗಲು ಬಟ್ ಸುರಕ್ಷಿತ ಮತ್ತು ಗುಪ್ತಸಂಪರ್ಕದ ವ್ಯವಸ್ಥೆಯೊಂದನ್ನು ಸಿದ್ಧಪಡಿಸಿದ.
ಈ ವ್ಯವಸ್ಥೆಯ ಮುಖಾಂತರವೇ ಖಾನ್ ತನಗೆ ತಿಳಿದ Centrifugeಗಳ ನಿರ್ದಿಷ್ಟ ತಾಂತ್ರಿಕ ಮಾಹಿತಿಗಳನ್ನು, ವಿವಿಧ ಬಿಡಿಭಾಗಗಳ ತಯಾರಕರ ವಿವರಣೆಗಳನ್ನು ಬಟ್ನಿಗೂ ಮತ್ತು ಅವನ ಮೂಲಕ ಪಾಕಿಸ್ತಾನಕ್ಕೂ ರವಾನಿಸುತ್ತಿದ್ದ. ಬಟ್ನ ಕೆಲಸ ಬರೀ ಮಾಹಿತಿ ರವಾನೆಗಷ್ಟೇ ಅಲ್ಲದೇ ವಿದೇಶದ ಅದರಲ್ಲೂ ಯುರೋಪ್ನ ವಿವಿಧ ದೇಶಗಳಿಂದ ಅಣುಪರೀಕ್ಷೆಗೆ ಸಾಮಾನುಗಳನ್ನು ಖರೀದಿಸಿ ಅವನ್ನು ಆಯಾದೇಶಗಳ ಪಾಕಿಸ್ತಾನಿ ರಾಜತಾಂತ್ರಿಕರ ಮರೆಯಲ್ಲಿದ್ದ ಗುಪ್ತಚರರ ಸಹಾಯದಿಂದ ತವರು ನೆಲಕ್ಕೆ ಸೇರಿಸುವ ಕೆಲಸವನ್ನು ನೋಡಿಕೊಳ್ಳುವುದೂ ಆಗಿತ್ತು.
ಈ ಕೆಲಸಕ್ಕೆಂದೇ ಆತ ಕೆಲ ನಕಲಿ ಕಂಪನಿಗಳನ್ನೂ ಹುಟ್ಟುಹಾಕಿದ್ದ. ಈ ಕಂಪನಿಗಳ ಕೆಲಸವೆಂದರೆ ಅಣುಪರೀಕ್ಷೆಗೆ ಬೇಕಾಗಿದ್ದ ಪ್ರತಿಯೊಂದು ಬಿಡಿಭಾಗ ಅಥವಾ ಯಂತ್ರಣಗಳನ್ನು ನಾಗರೀಕ ಉದ್ದೇಶಗಳ ಹೆಸರಿನಲ್ಲಿ ಖರೀದಿಸುವುದು. ಉದಾಹರಣಗೆ, Centrifugeಗಳ ಫ್ರೀಕ್ವೆನ್ಸಿ ಇನ್ವರ್ಟರ್ಗಳನ್ನು ಜವಳಿ ಫ್ಯಾಕ್ಟರಿಯಲ್ಲಿ ಬೇಕಾಗುವ ಸ್ಪಿನ್ನಿಂಗ್ ಮಶೀನ್ಗಳ ಹೆಸರಿನಲ್ಲಿ ಖರೀದಿಸುವುದು. ಹೀಗೆ ಮಾಡುವುದರ ಉದ್ದೇಶ, ವಿದೇಶಿ ಬೇಹುಗಾರಿಕಾ ಸಂಸ್ಥೆಗಳ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದೇ ಆಗಿತ್ತು.
ಭೇಟಿಯಾದ ಆರೇ ತಿಂಗಳಲ್ಲಿ ಖಾನ್ ಯುರೇನಿಯಂ ಪುಷ್ಟಿಕರಣಕ್ಕೆ ಬೇಕಾಗಿದ್ದ ಬಿಡಿ-ಯಂತ್ರಣಗಳ ವಿವರಗಳ ಪಟ್ಟಿಯೊಂದನ್ನೇ ಬಟ್ನ ಕೈಯಲ್ಲಿರಿಸಿದ. ಅವನ್ನೆಲ್ಲ ಜಗತ್ತಿನ ವಿವಿಧ ಭಾಗಗಳಲ್ಲಿದ್ದ ಪಾಕಿಸ್ತಾನಿ ರಾಯಭಾರಿ ಕಚೇರಿಗಳ ಮೂಲಕವೋ ಇಲ್ಲ ತಾನು ನಡೆಸುತ್ತಿದ್ದ ಜಾಲಿ ಕಂಪನಿಗಳ ಜಾಲಗಳ ಮೂಲಕವೋ ತನ್ನ ದೇಶಕ್ಕೆ ತಲುಪಿಸುವುದು ಬಟ್ನ ಜವಾಬ್ದಾರಿ. ಪಾಕಿಸ್ತಾನದ ನಕಲಿ ಕಂಪನಿಗಳ ಬೇಡಿಕೆಗಳಿಗೆ ಜರ್ಮನಿ, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ನ ಸಮೇತ ಅನೇಕ ಯುರೋಪಿಯನ್ ರಾಷ್ಟ್ರಗಳೇ ಪ್ರಮುಖ ಪೂರೈಕೆದಾರರಾಗಿದ್ದರು. ಈ ಖರೀದಿ ವ್ಯವಹಾರಗಳ ಭರಾಟೆ ಹೆಚ್ಚಿದಂತೆ ಅದರ ರಹಸ್ಯ ಬಯಲಾಗುವ ಸಾಧ್ಯತೆಗಳೂ ಹೆಚ್ಚುತ್ತಲೇ ಇದ್ದವು.
1975ರ ಬೇಸಿಗೆಯಲ್ಲಿ ನೆದರ್ಲ್ಯಾಂಡ್ ಮೂಲದ ಕಂಪನಿಯೊಂದಕ್ಕೆ URENCO, ತಾನು ತಯಾರಿಸುತ್ತಿದ್ದ Centrifuge ಗಳ ಜೋಡಣೆಯಲ್ಲಿ ಬಳಸುತ್ತಿದ್ದ ರೋಟಾರುಗಳ ತಯಾರಿಕೆಗೆ ಉಪಯೋಗಿಸುತ್ತಿದ್ದ ನಿರ್ಬಂಧಿತ ಲೋಹದ ಖರೀದಿಗಾಗಿ ಬೇಡಿಕೆಯನ್ನು ಸಲ್ಲಿಸಿತು. ಅದೇ ಹೊತ್ತಿಗೆ, ಬಟ್ನ ಅಧೀನದ ನಕಲಿ ಕಂಪನಿಯೂ ಸಹ ಅದೇ ಕಂಪನಿಗೆ ತನ್ನ ಬೇಡಿಕೆಯನ್ನೂ ಒಪ್ಪಿಸಿತು. URENCOದ ಉದ್ದೇಶಗಳ ಪರಿಚಯವಿದ್ದ ನೆದರ್ಲ್ಯಾಂಡ್ ಕಂಪನಿಗೆ ಪಾಕಿಸ್ತಾನಿ ಮೂಲದ ಕಂಪನಿಯೂ ಅದೇ ಮಾದರಿಯ ನಿರ್ಬಂಧಿತ ಲೋಹವನ್ನೇ ಮತ್ತು ಅದೇ ತಾಂತ್ರಿಕ ವಿವರಣೆ ಮತ್ತು ನಿರ್ದಿಷ್ಟತೆಗಳಲ್ಲಿಯೇ ಕೇಳುತ್ತಿರುವುದು ಅಪಾಯದ ಸಂಕೇತವಾಗಿ ಕಂಡಿತು.
ಈ ಎಲ್ಲ ಮಾಹಿತಿಗಳನ್ನು ನೇರವಾಗಿ ಮೊದಲು ಡಚ್ ಅಧಿಕಾರಿಗಳಿಗೂ ಮತ್ತು ಅವರ ಮೂಲಕ ಅಮೇರಿಕಾದ ಬೇಹುಗಾರಿಕಾ ಸಂಸ್ಥೆ ಸಿ.ಐ.ಎ ನ ಗಮನಕ್ಕೂ ತರಲಾಯ್ತು. ಆದರೆ ಪಾಕಿಸ್ತಾನಿ ಕಂಪನಿಗಳ ಜನ್ಮಜಾಲಾಡುವ ಬದಲಿಗೆ ಸಿ.ಐ.ಎ ಅವುಗಳ ಕುರಿತಾಗಿ ಉದಾಸೀನ ತಳೆಯಿತು. ಏಕೆಂದರೆ, ತಮಗೆ ಲಭ್ಯವಿದ್ದ ಮಾಹಿತಿಗಳ ಪ್ರಕಾರ ಭುಟ್ಟೋ ಕೇವಲ ಪ್ಲುಟೋನಿಯಂ ಪುಷ್ತೀಕರಣದ ಮೂಲಕ ಅಣು ಪರೀಕ್ಷೆಗಳ ತಯಾರಿಯಲ್ಲಿದ್ದ . ಪಾಕಿಸ್ತಾನ ಮೂಲದ ಈ ಕಂಪನಿಗಳು ನೆದರ್ಲ್ಯಾಂಡ್ನ ಕಂಪನಿಗೆ ಸಲ್ಲಿಸಿದ್ದ ನಿರ್ಬಂಧಿತ ಲೋಹದ ಬೇಡಿಕೆಗಳು ಪ್ಲುಟೋನಿಯಂ ಪುಷ್ಟೀಕರಣದಲ್ಲಿ ಬಳಕೆಗೆ ಬರುವಂಥದ್ದಲ್ಲ. ಹೀಗಾಗಿ ಈ ಬೇಡಿಕೆಗಳ ಬಗ್ಗೆ ಸಂಶಯ ತಳೆಯುವ ಅಗತ್ಯವಿಲ್ಲ ಎಂಬ ಮೂರ್ಖ ವಿಚಾರದಲ್ಲಿಯೇ ಸಿ.ಐ.ಎ ಅಧಿಕಾರಿಗಳು ಮುಳುಗಿದ್ದರು. ವಾಮಮಾರ್ಗದಲ್ಲಿ ಭುಟ್ಟೋ ಯುರೇನಿಯಂ ಪರೀಕ್ಷೆಗಳಿಗೂ ಕೈಹಾಕಿದ್ದು ಅವರ ಮಂದಬುದ್ಧಿಗಳಿಗೆ ಹೊಳೆಯಲೇ ಇಲ್ಲ.
ಪಶ್ಚಿಮ ದೇಶಗಳ ವ್ಯವಹಾರ ಮತ್ತು ಆಚರಣೆಗಳಲ್ಲಿದ್ದ ಇಂತಹ ಲೋಪದೋಷಗಳನ್ನೇ ತಮ್ಮ ವ್ಯವಹಾರ ಸಿದ್ಧಿಗೆ ಬಳಸಿಕೊಳ್ಳುವಲ್ಲಿ ಖಾನ್ ಮತ್ತು ಬಟ್ ದಿನದಿನಕ್ಕೆ ಸಫಲರಾಗುತ್ತಿದ್ದರು. ಅದೊಮ್ಮೆ ಸುಮಾರು 532 centrifugeಗಳ ತಾಯಾರಿಕೆಗೆ ಬೇಕಾಗಿದ್ದ ವಿಶಿಷ್ಟ ಉಕ್ಕಿನ ಬೇಡಿಕೆಯನ್ನು ಏಕಕಾಲದಲ್ಲಿ ಡಚ್ ಮತ್ತು ಜರ್ಮನ್ ಕಂಪನಿಗಳಿಗೆ ಸಲ್ಲಿಸಲಾಯಿತು. ಈ ಉಕ್ಕಿನ ಉತ್ಪಾದನೆಯ ಮೇಲೆ ಮೇಲೆ ಡಚ್ಚರು ನಿಷೇಧ ಹೇರಿದ್ದರಾದರೂ ಜರ್ಮನ್ನರು ಅಧಿಕ ಲಾಭದಾಸೆಯಿಂದ ಮುಕ್ತವಾಗಿಯೇ ಮಾರುತ್ತಿದ್ದರು. ಹೀಗಾಗಿ ಸುಲಭವಾಗಿ ಉಕ್ಕನ್ನು ಗಿಟ್ಟಿಸಿದ ಬಟ್ ನಿರಾಯಾಸವಾಗಿ ಅದನ್ನು ತನ್ನ ದೇಶಕ್ಕೆ ಸಾಗಿಸಿದ್ದ.
ಇನ್ನೊಂದು ಸಂದರ್ಭದಲ್ಲಿ, ವಿಶಿಷ್ಟ ಲೋಹದ ತೆಳುಪದರಗಳ ಬೇಡಿಕೆಯೊಂದು ಡಚ್ ಮತ್ತು ಜರ್ಮನ್ ಕಂಪನಿಗಳಿಗೆ ಏಕಕಾಲದಲ್ಲಿಯೇ ಬಂತು. ಈ ಮೊದಲೇ ಇಂತಹದ್ದೇ ಬೇಡಿಕೆಯನ್ನು URENCO ಸಲ್ಲಿಸಿದ್ದರಿಂದ ಅನುಮಾನಗೊಂಡ ಡಚ್ ಅಧಿಕಾರಿಗಳು FDO ನ ಅಧಿಕಾರಿಗಳಿಗೆ ಈ ಹೊಸಕಂಪನಿಗಳ ಬೇಡಿಕೆಯ ಸುದ್ದಿ ಮುಟ್ಟಿಸಿದರು. FDO ನ ಅಧಿಕಾರಿಗಳಿಗೆ ಸುದ್ದಿ ಮುಟ್ಟಿದ್ದೇ ತಡ ಇಂತಹ ಸೂಕ್ಷ್ಮ ಮಾಹಿತಿಯ ಸೋರಿಕೆ ಆಗಿದ್ದು ಮೇಲ್ಮಟ್ಟದಲ್ಲೇ ಕಂಡುಬಂತು. ಈ ತೆಳುಪದರದ ತಯಾರಿಕೆಯಲ್ಲಿ ಉಪಯೋಗಿಸಲಾದ ಲೋಹದ ಸಂಶೋಧನೆಯಲ್ಲಿ ತೊಡಗಿದ್ದವನೆ A.Q. ಖಾನ್ ಆಗಿದ್ದರಿಂದ ಅದೇ ಮೊದಲ ಬಾರಿಗೆ ಸಂಶಯದ ಮುಳ್ಳುಗಳು ನೇರವಾಗಿ ಆತನೆಡೆಗೇ ತಿರುಗಿದವು. ಪಾಕಿಸ್ತಾನಿ ರಾಯಭಾರಿಯೊಬ್ಬನ ಅಧೀನದ ಕಂಪನಿಯಿಂದ ಬಂದ ಬೇಡಿಕೆ ಮತ್ತು URENCO ಸಲ್ಲಿಸಿದ್ದ ಬೇಡಿಕೆ ಕಾಕತಾಳೀಯವೂ ಆಗಿದ್ದಿರಬಹುದಾದ್ದರಿಂದ ಆ ಸಂದರ್ಭದಲ್ಲಿ ಖಾನ್ ಬಚಾವಾದ.
ಆದರೂ ತನ್ನ ದೇಶದ ಪ್ರಯೋಗಶಾಲೆಯ ಬಾಗಿಲುಗಳ ಮೂಲಕ ಅದಾಗಲೇ ಕಳ್ಳಹೆಜ್ಜೆಗಳ ಪ್ರವೇಶ ಆಗಿದೆ ಎಂಬ ಖಾತರಿ FDO ಅಧಿಕಾರಿಗಳಿಗೆ ಆಗಿತ್ತು. ಇದೇ ಆಧಾರದ ಮೇಲೆ ಅವರು ಡಚ್ ರಾಷ್ಟ್ರೀಯ ಸುರಕ್ಷಾ ಸಂಸ್ಥೆ BVD ಗೆ ಶರಣುಹೋದರು. 1975 ರ ಅಕ್ಟೋಬರ್ನಲ್ಲಿ ಖಾನ್ ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆಯಲಿದ್ದ ಅಣ್ವೀಕ – ಕೈಗಾರಿಕೆಗಳ ಪ್ರದರ್ಶನಿಯೊಂದಕ್ಕೆ ಹೋಗುವವನಿದ್ದ. ಇಂತಹ ಸಂದರ್ಭದಲ್ಲಿ ಆತನನ್ನು ನೆದರ್ಲ್ಯಾಂಡ್ನ ಕಾನೂನು ಸಂಹಿತೆಗೆ ಸಿಲುಕದ ಸ್ಥಳವೊಂದಕ್ಕೆ ಹೋಗಲು ಬಿಡುವುದು ಸಮಂಜಸವೇ ಎಂಬ ಪ್ರಶ್ನೆ FDO ಮತ್ತು BVD ಯ ಅಧಿಕಾರಿಗಳಿಗೆ ಬಂತು. ತಮ್ಮ ಸಂಶಯಗಳ ಕುರಿತು ಖಾನ್ ಎಚ್ಚತ್ತು ಕೊಳ್ಳುವುದು ಬೇಡ ಎಂಬ ನಿರ್ಧಾರದೊಂದಿಗೆ ಖಾನ್ನನ್ನು ಆ ಪ್ರದರ್ಶನಿಗೆ ಹೋಗಲು ಕೊನೆಗೂ ಅನುಮತಿಸಲಾಯ್ತು.
ಪ್ರದರ್ಶನಿಯಲ್ಲಿ ಖಾನ್ ಮಳಿಗೆಯಿಂದ ಮಳಿಗೆಗೆ ಓಡಾಡಿ ಮಾಹಿತಿ ಕಲೆಹಾಕುತ್ತಿರುವ ದೃಶ್ಯ BVD ಯ ರಹಸ್ಯಕಣ್ಣುಗಳಿಂದ ತಪ್ಪಿಸಿಕೊಳ್ಳಲಿಲ್ಲ. ಆಗೆಲ್ಲ ಖಾನ್ ಸಂಗ್ರಹಿಸುತ್ತಿದ್ದ ಮಾಹಿತಿಗಳು FDOದಲ್ಲಿ ಆತನ ಕೆಲಸದ ಪರಿಧಿಗೂ ಮೀರಿದವಾಗಿದ್ದವೆಂಬ ಸಂಗತಿ ಸ್ಪಷ್ಟವಾಯಿತು. ಖಾನನ ಚಲನವಲನಗಳ ಕುರಿತಾದ ಸಮಗ್ರ ವರದಿಯೊಂದು ಆತ ಮರಳಿ FDOದ ಕಚೇರಿಗೆ ಬರುವುದರೊಳಗೇ ಅಲ್ಲಿನ ಅಧಿಕಾರಿಗಳ ಕೈ ಸೇರಿತ್ತು. ತನ್ನ ಬೆನ್ನ ಹಿಂದೆ ಇಷ್ಟೆಲ್ಲಾ ನಡೆಯುತ್ತಿದ್ದರೂ ತಾನು ಮಾತ್ರ ಕಣ್ಣುಮುಚ್ಚಿ ಹಾಲುಕುಡಿಯುವ ಬೆಕ್ಕಿನ ಆಟವನ್ನು ಖಾನ್ ಆಡುತ್ತಲೇ ಇದ್ದ.
(ಸಶೇಷ..)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.