ರಾಜ್ ಆ್ಯಂಡ್ ರಾಜ್ ಸಂಸ್ಥೆಯಿಂದ ಜಯರಾಜ್ ರವರು 1977 ರಲ್ಲಿ ಕನ್ನಡದ ಖ್ಯಾತ ಸಾಹಿತಿಗಳಾದ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ “ಕಾಕನಕೋಟೆ” ಎಂಬ ನಾಟಕ ಆಧಾರಿತ ಸಿನಿಮಾವನ್ನು ಸಿ.ಆರ್.ಸಿಂಹ ರವರು ನಿರ್ದೇಶಿಸಿದ್ದಾರೆ. ಗಿರೀಶ್ ಕಾರ್ನಾಡ್ ರವರು ಚಿತ್ರನಾಟಕ ಬರೆದಿದ್ದಾರೆ. ಎಂ.ಎಸ್.ಸತ್ಯರವರ ಕಲಾ ನಿರ್ದೇಶನ, ಇಷಾನ್ ಆರ್ಯರವರ ಛಾಯಾಗ್ರಹಣ, ಸಿ.ಅಶ್ವಥ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಲೋಕೇಶ್, ಶ್ರೀನಾಥ್, ಗಿರಿಜಾ ಲೋಕೇಶ್, ಲಾವಣ್ಯರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ಬರೆದ ಹಾಡುಗಳಿಗೆ ಬಿ.ವಿ.ಕಾರಂತ್, ಜಿ.ಕೆ.ವೆಂಕಟೇಶ್, ಸಿ.ಅಶ್ವಥ್, ಸುಲೋಚನ, ಕೌಸಲ್ಯ ಹಾಗೂ ಗಾಯತ್ರಿ ರವರು ದನಿಯಾಗಿದ್ದಾರೆ. ಇಂತಹ ಘಟಾನುಘಟಿಗಳು ಈ ಸಿನಿಮಾಕ್ಕಾಗಿ ದುಡಿದಿದ್ದಾರೆಂದರೆ ಆ ಸಿನಿಮಾದ ಗುಣಮಟ್ಟ ಹೇಗಿರಬಹುದು ಎಂಬುದನ್ನು ನೀವೆ ಊಹಿಸಿ.
ಮೂರನೇ ಅತ್ಯುತ್ತಮ ಚಿತ್ರ, ಅತ್ಯುತ್ತಮ ಕಥೆಗಾರ (ಮಾಸ್ತಿ ವೆಂಕಟೇಶ ಅಯ್ಯಂಗಾರ್) ಹಾಗೂ ಅತ್ಯುತ್ತಮ ಸಂಕಲನ (ಬಾಲ್.ಜಿ.ಯಾದವ್) ಎಂಬ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕಥೆ:
ಸಿ.ಅಶ್ವಥ್ ರವರ ದನಿಯಲ್ಲಿ ಹಾಗೂ ಅವರದೇ ಸಂಗೀತದಲೆಯಲ್ಲಿ “ಬೆಟ್ಟದ ತುದಿಯಲ್ಲಿ, ಕಾಡುಗಳ ಎದೆಯಲ್ಲಿ, ಕಬಿನಿಯ ನದಿಯಲ್ಲಿ, ಕೂಗುತಿರುವುದು ಅಲ್ಲಿ, ಕೊಂಬಿನ ಸಲಗಾ.. ಹೆಣ್ಣಾನೆ ಮರಿ ಬಳಗ” ಎಂಬ ಮಧುರ ಗೀತೆಯೊಂದಿಗೆ ಹಸಿರು ಕಾನನದ ಸೌಂದರ್ಯದ ಅನಾವರಣದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮೈಸೂರು ರಾಜ್ಯದ ಹೆಗ್ಗಡದೇವನಕೋಟೆ ಹತ್ತಿರದ ಕಾನನದಲ್ಲಿನ ಒಂದು ಕುರುಬರ ಹಾಡಿಯದೇ ಕತೆ ಇದು. ಪುಟ್ಟ ಪುಟ್ಟ ಗುಡಿಸಲು, ವಿಭಿನ್ನ ಶೈಲಿಯ ಉಡುಗೆ ತೊಡುಗೆ, ಬೆರಳೆಣಿಕೆಯಷ್ಟು ಕುಟುಂಬಗಳು, ಪ್ರೀತಿ, ಸಾಮರಸ್ಯದ ಬದುಕು, ಇದೆಲ್ಲಾ ಆ ಹಾಡಿಯ ಗುಣಾವಳಿ. ಮೈಸೂರು ಪಟ್ಟಣದಲ್ಲೂ ಒಂದಷ್ಟು ವರ್ಷಗಳವರೆಗೆ ಇದ್ದು, ಹಾಡಿಗೆ ಬಂದ ಕಾಕ (ಲೋಕೇಶ್), ಹಾಡಿಯಲ್ಲಿನ ಜನರಲ್ಲೇ ಬುದ್ದಿವಂತನಾಗಿರುತ್ತಾನೆ. ಆ ಕಾರಣಕ್ಕಾಗಿ ಹಾಡಿನ ಜನರು ಆತನನ್ನು ಗೌರವಿಸುತ್ತಾರೆ, ಎಲ್ಲಾ ವಿಷಯದಲ್ಲೂ ಆತನ ಸಲಹೆ ಕೇಳುತ್ತಾರೆ. ಅಲ್ಲದೇ ಆತನ ಮಾತಿನಂತೆ ನಡೆದುಕೊಳ್ಳುತ್ತಾರೆ. ಮೈಸೂರು ರಾಜ್ಯದ ಹೆಗ್ಗಡದೇವನಕೋಟೆಯ ಹೆಗ್ಗಡೆಯರು ಈ ಹಾಡಿಗಳಿಂದ ಕಪ್ಪವನ್ನು ಪಡೆದು ಮೈಸೂರು ಅರಸರಿಗೆ ಒಪ್ಪಿಸುವ ಸಲುವಾಗಿ ತಮ್ಮ ಕರಣಿಕರೊಂದಿಗೆ ಬಂದಿರುತ್ತಾರೆ. ಅರಸರಿಗೆ ಕೊಡಬೇಕಾದ ಪಾಲಿಗಿಂತ ಹೆಚ್ಚಾಗಿ ಹೆಗ್ಗಡೆಯವರು ಕಪ್ಪ ವಸೂಲು ಮಾಡುತ್ತಿರುವುದನ್ನು ಗಮನಿಸಿದ ಕಾಕ, ಅತಿಯಾದ ನಾಜೂಕಿನಿಂದ ಹೆಗ್ಗಡೆಯನ್ನು ಸಂಭಾಳಿಸುತ್ತಾ, ಕಪ್ಪ ಕಟ್ಟುವುದನ್ನು ಮುಂದೂಡುತ್ತಾ, ಅರಸರ ಗಮನಕ್ಕೆ ವಿಷಯ ಅರುಹಲು ಪ್ರಯತ್ನಿಸುತ್ತಿರುತ್ತಾನೆ.
ಆ ಪ್ರಯತ್ನದಲ್ಲಿ ಇರುವಾಗಲೇ, ಹೆಗ್ಗಡೆಯೊಂದಿಗೆ ಜಗಳವಾಗಿ, ಆತನ ಮಗನನ್ನು ಗುಟ್ಟಾಗಿ ಕರೆತಂದು ತನ್ನ ಹಾಡಿಯಲ್ಲಿಯೇ ಬಂಧಿಸಿಡುತ್ತಾನೆ. ಕರೆತರುವಾಗ ಆತನ ಕಾಲಿಗೆ ಪೆಟ್ಟಾಗಿರುತ್ತೆ. ಕಾಡುಮದ್ದು ಬಳಸಿ, ಅವನಿಗೆ ಚಿಕಿತ್ಸೆಯನ್ನು ಸಹ ಈ ಹಾಡಿ ಮಂದಿಯೇ ನೀಡುತ್ತಿರುತ್ತಾರೆ. ಆ ಸಮಯದಲ್ಲಿ ಕಾಕನ ಮಗಳು (ಲಾವಣ್ಯ), ಹೆಗ್ಗಡೆಯ ಮಗನ ಚೆಲುವಿಗೆ ಸೋತು, ಅವನಲ್ಲಿ ಅನುರಾಗಕ್ಕಾಗಿ ಹಂಬಲಿಸುತ್ತಾಳೆ. ಆಗ ಆಕೆಯ ಪ್ರೀತಿಗೆ ಸೋತ ಹೆಗ್ಗಡೆಯ ಮಗನೂ, ಆಕೆಯೊಂದಿಗೆ ಹಾಡಿ ತೊರೆದು, ತನ್ನ ತಂದೆಯಿದ್ದ ಡೇರೆಯ ಕಡೆ ಹೋಗಲು ಕಾಡಿನೊಳಗೆ ನುಗ್ಗುತ್ತಾನೆ. ಮೈಸೂರು ಮಹಾರಾಜರ ಸಹಾಯಕ್ಕಾಗಿ ಕಾದೂ ಕಾದೂ, ಕೊನೆಗೆ ಮೈಸೂರು ಅರಸರು ಬರಲಾರರೆಂದು, ತಮ್ಮ ಹಾಡಿಯೊಂದಿಗೆ ಕೈಜೋಡಿಸಿದ ಬೇರೆ ಹಾಡಿಯವರೆಲ್ಲರೂ ತನ್ನನ್ನು ಕ್ಷಮಿಸುವಂತೆ ಹಾಗೂ ಹೆಗ್ಗಡೆಯವರು ಕೇಳಿದ ಕಪ್ಪ ಕೊಡುವಂತೆ ಕೇಳಿಕೊಳ್ಳುತ್ತಾನೆ. ಕಾಡಿನಲ್ಲಿ ತಪ್ಪಿಸಿಕೊಂಡು ಓಡುತ್ತಿದ್ದ ಕಾಕನ ಮಗಳು ಹಾಗೂ ಹೆಗ್ಗಡೆಯರ ಮಗನನ್ನು ಮಾರುವೇಷದಲ್ಲಿ ಬಂದಿದ್ದ ಮೈಸೂರು ಮಹಾರಾಜರೇ (ಶ್ರೀನಾಥ್) ಖುದ್ದಾಗಿ, ತಮ್ಮ ಕುದುರೆಯಲ್ಲಿ ಕೂರಿಸಿಕೊಂಡು ಕಾಕ ಇದ್ದಲ್ಲಿಗೆ ಬರುತ್ತಾರೆ. ತನ್ನ ಮನವಿಗೆ ಓಗೊಟ್ಟು ಕೊನೆಗೂ ಬಂದ ಅರಸರನ್ನು ಕಂಡು ಕಾಕನಿಗೆ ತುಂಬಾ ಖುಷಿಯಾಗುತ್ತದೆ. ಮೈಸೂರು ಅರಸರು ಹಾಡಿಯನ್ನು ಉದ್ದೇಶಿಸಿ, ಇನ್ನು ಮುಂದೆ ನೀವು ಯಾವ ಕಪ್ಪವನ್ನು ನೀಡಬೇಕಾಗಿಲ್ಲ ಹಾಗೂ ಈ ಪ್ರಾಂತ್ಯಕ್ಕೆ “ಕಾಕನಕೋಟೆ” ಎಂಬ ಹೆಸರಿನಿಂದ ಕರೆಯುವಂತೆ ಆದೇಶಿಸುತ್ತಾನೆ. ಅಷ್ಟೇ ಅಲ್ಲದೇ ತಾವೇ ಖುದ್ದಾಗಿ ಮುಂದೆ ನಿಂತು ಕಾಕನ ಮಗಳು ಹಾಗೂ ಹೆಗ್ಗಡೆ ಮಗನಿಗೆ ಹಾಡಿಯ ಸಂಪ್ರದಾಯದಂತೆ ಮದುವೆ ಮಾಡಿಕೊಡುತ್ತಾನೆ. ಮದುವೆಯ ಸಂಭ್ರಮದೊಂದಿಗೆ ಸಿನಿಮಾ ಮುಗಿಯುತ್ತದೆ.
ಈ ಸಿನಿಮಾದ ಹಾಡುಗಳ ಕುರಿತಂತೆ ಇಲ್ಲಿ ಹೇಳಲೇಬೇಕು. ಸಿ. ಅಶ್ವಥ್ ರವರ ದನಿಯಲ್ಲಿ “ಬೆಟ್ಟದ ತುದಿಯಲ್ಲಿ” ಗೀತೆಯು ಹಸಿರು ಸಿರಿಯ ಸೊಬಗನ್ನು ಕಣ್ ತುಂಬಿಕೊಳ್ಳುವಂತೆ ಮನಸಿಗೆ ಮುದ ನೀಡುತ್ತದೆ. ಬಿ.ವಿ.ಕಾರಂತ್, ಜಿ.ಕೆ.ವೆಂಕಟೇಶ್ ಹಾಗೂ ಸಿ.ಅಶ್ವಥ್ ರವರ ದನಿಯಲ್ಲಿ “ಕರಿ ಹೈದನೆಂಬೋರು” ಗೀತೆಯು ಹಾಗೂ ಸಿ.ಅಶ್ವಥ್ ರವರ ದನಿಯಲ್ಲಿ “ಒಂದು ದಿನ ಕರಿಹೈದ” ಎಂಬ ಗೀತೆಯು ಜಾನಪದ ಶೈಲಿಯಲ್ಲಿ ಮಧುರವಾಗಿ ಕೇಳಿ ಬರುತ್ತದೆ. ಸುಲೋಚನ ರವರ ದನಿಯಲ್ಲಿ “ನೇಸರ ನೋಡು..” ಎಂಬ ಗೀತೆಯು ಹಸಿರು ಸಿರಿಯ ನಡುವೆ, ಬೆಟ್ಟದ ನಡುವಿಂದ ಮೂಡಿಬರುವ ನೇಸರನ ಚೆಲುವನ್ನು ಬಣ್ಣಿಸುವುದರ ಜೊತೆಜೊತೆಗೆ ಹೆಣ್ಣಿನ ಪ್ರೀತಿಯ ಭಾವನೆಗಳ ಮೆರವಣಿಗೆಯಾದಂತೆ ಮೂಡಿಬಂದಿದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಮೈಸೂರು ಪ್ರಾಂತ್ಯದ ಒಂದು ಬುಡಕಟ್ಟು ಜನಾಂಗದ ಜನಜೀವನದ ಕುರಿತಂತೆ ತಿಳಿಯಲು.
2. ನಾಯಕತ್ವ ನಡೆಸುವ ರೀತಿ ಹಾಗೂ ನಿಸ್ವಾರ್ಥ ಸೇವೆಯ ಮಹತ್ವದ ಕುರಿತು ತಿಳಿಯಲು.
3. ಅನ್ಯಾಯದ ವಿರುದ್ಧ ಬಂಡಾಯ ಮಾಡುವಾಗ, ಯಾವ ಹಂತದವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ತಿಳಿಯಲು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.