ಅಕ್ಟೋಬರ್ 1974ರಲ್ಲಿ A.Q. ಖಾನನಿಗೆ ನೆದರ್ಲ್ಯಾಂಡಿನ ಅಲ್ಮೆಲೋದಲ್ಲಿನ ಜರ್ಮನ್ ತಂತ್ರಜ್ಞಾನ G-2 ದೊಡನೆ ತಯಾರುಗುತ್ತಿದ್ದ ಹೊಸ ಮಾದರಿಯ ಯುರೇನಿಯಂ Centrifuge ಗಳ ತಯಾರಿಕಾ ಘಟಕಕ್ಕೆ ಪ್ರವೇಶ ದೊರೆಯಿತು.
ಘಟಕದ ನಿಯಮಗಳ ಪ್ರಕಾರ, ಅತಿ ರಹಸ್ಯ ದಾಖಲೆಗಳು ಮತ್ತು ಕಡತಗಳಿದ್ದ Brain-Box ಗಳ ಕೋಣೆಗೆ ಅತ್ಯಂತ ಗರಿಷ್ಠ ಮಟ್ಟದ ತಪಾಸಣೆಯಲ್ಲಿಯೇ ಹಾಗೂ ಹಲವಾರು ಸುತ್ತಿನ ಪರೀಕ್ಷೆಗಳ ನಂತರವಷ್ಟೇ ಪ್ರವೇಶ ಮಾಡಬಹುದಾಗಿತ್ತು.ಆದರೆ, ಮೊದಲ ಸುತ್ತಿನ ಪರೀಕ್ಷೆಗಳ ನಂತರ ತನ್ನ ಹಳೆಯ ಕಛೇರಿಯಲ್ಲಿದ್ದ ಹಲವಾರು ಪರಿಚಿತ ಮುಖಗಳೇ ಖಾನನ ಎದುರಾದವು. ಅವರ ಸಹಾಯದಿಂದ ಮುಂದಿನ ಕೆಲವೇ ಸಮಯದಲ್ಲಿ ನೇರವಾಗಿ Brain- Box ಗಳಿದ್ದ ಕೋಣೆಯಲ್ಲಿಯೇ ಆತ ನಿಂತಿದ್ದ, ಹೆಚ್ಚಿನ ಪರೀಕ್ಷೆ ಅಥವಾ ಪ್ರಶ್ನೆಗಳಿಲ್ಲದೇ.
16 ದಿನಗಳ ಕಾಲ ಖಾನ್ ಸತತವಾಗಿ ಕೆಲಸದಲ್ಲಿ ನಿರತನಾಗಿದ್ದ. ನೋಡುವವರಿಗೆ ಆತ ಜರ್ಮನ್ ಭಾಷೆಯ ಕಡತಗಳ ಡಚ್ ಭಾಷೆಯ ಅನುವಾದದ ಕೆಲಸದಲ್ಲಿ ಮುಳುಗಿರುವುದು ಕಾಣುತ್ತಿತ್ತಾದ್ದರೂ ಅದೇ ಹೊತ್ತಿಗೆ ಪ್ರತಿಯೊಂದು ವಿವರಗಳನ್ನು ಉರ್ದುವಿಗೂ ಭಾಷಾಂತರಿಸುತ್ತಿದ್ದ ಆತನ ಕೈಚಳಕವನ್ನು ಯಾರಿಗೂ ಕಂಡುಹಿಡಿಯಲಾಗಲಿಲ್ಲ. ಕೆಲವೊಮ್ಮೆ ಹೆಚ್ಚಿನ ಕೆಲಸದ ನೆಪವೊಡ್ಡಿ ಮಹತ್ವದ ಕಡತಗಳನ್ನು ಮನೆಗೂ ಸಾಗಿಸುತ್ತಿದ ಖಾನ್ ಕೇಳಿದವರಿಗೆ ತನ್ನ ಹೆಂಡತಿ ಡಚ್ ಮೂಲದವಳೆಂದೂ ತನ್ನ ಕೆಲಸಕ್ಕೆ ಆಕೆಯ ಸಹಾಯಬೇಕು ಎಂಬ ಉತ್ತರವೂ ಆತನಲ್ಲಿ ಸಿದ್ಧವಾಗಿತ್ತು.
ಇದರ ಮಧ್ಯೆಯೇ ಖಾನನ ಸಹೋದ್ಯೋಗಿ ಮತ್ತು ಸ್ನೇಹಿತ ಫೋಟೋಗ್ರಾಫರ್ ಫ್ರಿಟ್ಸ್ ವೀರ್ಮನ್ ಅದೊಮ್ಮೆ ರಾತ್ರಿ ಭೋಜನಕ್ಕಾಗಿ ಅತಿಥಿಯಾಗಿ ಆತನ ಮನೆಗೆ ಬಂದಿದ್ದ. ಮಾತುಕತೆ ಹರಟೆಗಳ ಸುತ್ತುಗಳ ನಂತರ ಖಾನ್ ಅದೇಕೋ ಮತ್ತೊಂದು ಕೋಣೆಗೆ ಹೋದ, ಸಹಜವಾಗಿ ತನ್ನ ಸುತ್ತಲೆಲ್ಲ ಕಣ್ಣಾಡಿಸುತ್ತಿದ್ದ ವೀರ್ಮನ್ನನಿಗೆ ಅದೊಂದು ಕಚೇರಿಯ ಕಡತದಂತಹ ವಸ್ತು ಕಣ್ಣಿಗೆ ಬಿತ್ತು. ಕುತೂಹಲ ತಡೆಯದೇ ಅದನ್ನು ಪರೀಕ್ಷಿಸಿದವನೇ ಇದು ಜರ್ಮನ್ ಭಾಷೆಯ ಅತಿರಹಸ್ಯ ಕಡತಗಳೆಂದೂ ಅದರ ಮೇಲೆಯೇ ಉರ್ದುವಿನಲ್ಲಿದ್ದ ಖಾನನ ಟಿಪ್ಪಣಿಗಳನ್ನೂ ನೋಡಿ ಹೌಹಾರಿಹೋದ. ಆವೇಳೆಗೆ ಖಾನ್ ಅಲ್ಮೆಲೋದಲ್ಲಿ ಅತಿಸುರಕ್ಷಿತ ತಾಣದಲ್ಲಿ, ಅತಿಗೂಢ ಯೋಜನೆಯೊಂದಕ್ಕಾಗಿ ಕೆಲಸಮಾಡುತ್ತಿರುವುದು ವೀರ್ಮನ್ಗೆ ತಿಳಿದಿರುವ ವಿಷಯವೇ ಆಗಿತ್ತು. ಆದರೂ ಅಂತಹ ಸೂಕ್ಷ್ಮಕೆಲಸದಲ್ಲಿದ್ದಾಗ್ಯೂ ಕಡತಗಳನ್ನು ಮನೆಗೆ ಸಾಗಿಸುವ, ಅವುಗಳ ವಿವರಗಳನ್ನು ತನ್ನ ಸ್ವಂತ ಭಾಷೆಗೆ ಅನುವಾದಿಸುವ ಖಾನನ ನಡಾವಳಿ ವಿಚಿತ್ರವೆನಿಸಿತು.
ಈ ಮೊದಲೆಲ್ಲ ಖಾನ್ ತನ್ನ ಸಹಾಯದಿಂದ ಆಧುನಿಕ ಕ್ಯಾಮೆರವೊಂದನ್ನು ಸಂಪಾದಿಸಿದ್ದು , ಮೇಲಿಂದಮೇಲೆ ವಿವಿಧ ಉಪಕರಣಗಳ, ಯಂತ್ರಣಗಳ ಅವುಗಳ ಮಾದರಿಗಳನ್ನು ಕತ್ತಲು-ಬೆಳಕಿನ ಸರಿಯಾದ ಪರಿಮಾಣದಲ್ಲಿ ಹೇಗೆ ಚಿತ್ರಗಳಾಗಿ ಸೆರೆಹಿಡಿಯುವುದು ಎಂಬ ವಿಷಯದಲ್ಲಿ ತೋರುತ್ತಿದ್ದ ಅತೀವ ಉತ್ಸಾಹದ ವಿವರಗಳು ವೀರ್ಮನ್ನನ ಮುಂದೆ ಧಿಗ್ಗನೆ ಮೂಡಿಹೋದವು. ಆದರೆ, ವೃತ್ತಿಸ್ತರದಲ್ಲಿಯೂ ಅನುಭವಗಳಲ್ಲಿಯೂ ತನಗಿಂತ ಮೇಲಿನ ವಿಜ್ಞಾನಿಯ ದರ್ಜೆಯಲ್ಲಿದ್ದ ಖಾನನ ಮೇಲೆ ಸಂಶಯಪಡುವುದು ಅಥವಾ ಆತನ ನಡಾವಳಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ತನ್ನ ಮಿತೃತ್ವ ಮತ್ತು ಕೆಲಸ ಎರಡಕ್ಕೂ ಸಂಚಕಾರಿಯಾಗಬಹುದು ಎಂಬ ಯೋಚನೆಯೊಂದಿಗೆ ಆ ವಿಚಾರವನ್ನು ವೀರ್ಮನ್ ಅಲ್ಲಿಗೆ ಬಿಟ್ಟುಕೊಟ್ಟ. ಆದರೂ, ಸಂಶಯದ ಹುಳು ಆತನ ತಲೆಯನ್ನ ಹೊಕ್ಕಾಗಿತ್ತು.
74ರ ಅಕ್ಟೋಬರಿನ ಕೊನೆಗೆಲ್ಲ ಖಾನ್ ಆಂಸ್ಟರ್ಡ್ಯಾಮ್ ನ ತನ್ನ ಪ್ರಧಾನ ಕಚೇರಿಗೆ ಮರಳಿದ. ಕಚೇರಿಯಲ್ಲಿ ಎಲ್ಲವೂ ಮೊದಲಿನಂತೆ ಇತ್ತಾದರೂ ಖಾನನ ಮೇಲೆ ವೀರ್ಮನ್ನನ ಸಂಶಯದ ದೃಷ್ಟಿನೆಟ್ಟಿತ್ತು.ಈ ಹೊತ್ತಿಗೆಲ್ಲ ಖಾನ್ ಕಡತಗಳನ್ನು ಅವುಗಳ ಮೂಲಭಾಷೆಯಿಂದ ಡಚ್ ಭಾಷೆಗೂ ಮತ್ತು ರಹಸ್ಯವಾಗಿ ಉರ್ದುವಿಗೂ ಭಾಷಾಂತರಿಸುವಲ್ಲಿ ಸಫಲನಾಗಿದ್ದ. ಅಷ್ಟರಲ್ಲೇ ಆತ ಎದುರು ನೋಡುತ್ತಿದ್ದ ಪಾಕಿಸ್ತಾನದ ಭೇಟಿಯ ಸಮಯವೂ ಹತ್ತಿರವಾಗುತ್ತಿತ್ತು.
ಡಿಸೆಂಬರಿನ ಮಧ್ಯಭಾಗದಲ್ಲಿ ತನ್ನ ವಾರ್ಷಿಕರಜೆಗಳನ್ನು ಕಳೆಯಲು ತವರುನೆಲ ಪಾಕಿಸ್ತಾನದ ಪ್ರವಾಸಕ್ಕೆ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳ ಸಮೇತನಾಗಿ ಖಾನ್ ಹೊರಟುನಿಂತ. ಮೊದಲು ತನ್ನ ಹೆಂಡತಿ ಮಕ್ಕಳನ್ನು ಕರಾಚಿಯ ತನ್ನ ಪರಿವಾರದೊಡನೆ ಇರಲು ಬಿಟ್ಟು ತಾನು ಎರಡೂವರೆ ಗಂಟೆಗಳ ವಿಮಾನಯಾನದ ನಂತರ ಇಸ್ಲಾಮಾಬಾದಿಗೆ ಬಂದಿಳಿದ.
ಇಲ್ಲಿ ಆತನ ಭೇಟಿ ಪಾಕಿಸ್ತಾನದ ಪ್ರಧಾನಮಂತ್ರಿಯ ಕಚೇರಿಯಲ್ಲಿಯೇ, ಪ್ರಧಾನಿಯ ಮಿಲಿಟರಿ ಸಲಹೆಗಾರ ‘ಜನರಲ್ ಅಲಿ’ ಯೊಡನೆ ಆಗಲಿಕ್ಕಿತ್ತು. ಕೋಣೆಯ ಬದಿಯಲ್ಲಿನ ಬಾಗಿಲಿನಿಂದ ಜನರಲ್ ಅಲಿ ಬರುವುದು ಆತನಿಗೆ ಕಂಡಿತು. ಆತನ ಹಿಂದೆಯೇ ಗಂಭೀರ ನಡಿಗೆಯಲ್ಲಿ ಬರುತ್ತಿದ್ದ ಇನ್ನೊಂದು ಆಕೃತಿ ಆಗ ದೇಶದ ಪ್ರಧಾನಿಯ ಪಟ್ಟದಲ್ಲಿ ತನ್ನನ್ನೇ ಪ್ರತಿಷ್ಠಾಪಿಸಿಕೊಂಡಿದ್ದ ಜುಲ್ಫಿಕರ್ ಭುಟ್ಟೊನದ್ದೇ ಎಂದು ತಿಳಿದಾಗ ತನ್ನ ದೇಶ ಮತ್ತು ದೀನ್ ಗಳ ಉಳಿವಿಗಾಗಿ ತಾನು ಕೈಗೊಂಡಿರುವ ಮಹತ್ತರ ಕೆಲಸಕ್ಕೆ ತನ್ನ ದೇಶಬಾಂಧವರು ಅದರಲ್ಲೂ ತನ್ನ ಪ್ರಧಾನಿಯೇ ನೀಡುತ್ತಿರುವ ಮಹತ್ವವನ್ನು ಸಾಕ್ಷಾತ್ಕರಿಸಿಕೊಂಡ ಧನ್ಯತಾಭಾವ ಮೂಡಿತು.
ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿದ ಖಾನ್, ಪ್ರಧಾನಿ ಭುಟ್ಟೊ ಮತ್ತು ಆತನ ಮಿಲಿಟರಿ ಸಲಹೆಗಾರ ಜನರಲ್ ಅಲಿಗೆ ಪಾಕಿಸ್ತಾನ ನಡೆಸಲು ಪ್ರಯತ್ನಿಸುತ್ತಿದ್ದ ಪ್ಲುಟೋನಿಯಂ ಆಧಾರಿತ ಪರಮಾಣು ಪರೀಕ್ಷಣಗಳಲ್ಲಿನ ಹುಳುಕುಗಳನ್ನು ಎತ್ತಿ ತೋರಿಸಿದ. ಇಂತಹ ಪ್ರಯತ್ನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ಅಮೇರಿಕಾ ಸಮೇತ ಪಶ್ಚಿಮರಾಷ್ಟ್ರಗಳ ಕಣ್ಣಿಗೆ ಸುಲಭವಾಗಿ ಬೀಳುವಂತಹದಾಗಿದ್ದು ಇದಕ್ಕೆ ಹೋಲಿಸಿದಲ್ಲಿ ಪುಷ್ಟಿಕರಿಸಿದ ಯುರೇನಿಯಂನ ಬಳಕೆಯಿಂದ ಕಡಿಮೆಖರ್ಚಿನಲ್ಲಿ , ಹೆಚ್ಚು ಗೌಪ್ಯವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾದ ನ್ಯೂಕ್ಲಿಯರ್ ಅಸ್ತ್ರಗಳನ್ನು ತಯಾರಿಸಲು ಸಾಧ್ಯವೆಂದು,ಅದುವರೆಗು ತಾನು ಕಲೆಹಾಕಿದ್ದ ವಿವರಗಳ, ಚಿತ್ರಗಳ ಮೂಲಕ ಸಾದ್ಯಂತವಾಗಿ ಸ್ಪಷ್ಟಪಡಿಸಿದ. ಯುರೇನಿಯಂ ಪರೀಕ್ಷಣಗಳಿಗೆ ಬೇಕಾದ ಕಚ್ಚಾ ಪಧಾರ್ಥಗಳು ಮತ್ತು Centrifuge ಗಳ ಸಮೇತ ಅನೇಕ ಬಿಡಿ ಭಾಗಗಳನ್ನು ವಿದೇಶಗಳಿಂದ ಸುಲಭವಾಗಿ ಸಂಗ್ರಹಿಸಲು ಸಾಧ್ಯ ಎಂಬುದನ್ನೂ ತಿಳಿಸಿದ.
ಖಾನನ ಕಥನದ ನಂತರ ನ್ಯೂಕ್ಲಿಯರ್ ಬಾಂಬ್ ಮತ್ತು ಸಿಡಿತಲೆಗಳ ತಯಾರಿಯ ಸಾಧ್ಯಾಸಾಧ್ಯತೆಗಳನ್ನು ವಿವರವಾಗಿಬಲ್ಲ ಭುಟ್ಟೋ ಪುಷ್ಟಿಕರಿಸಿದ ಯುರೇನಿಯಂನ ಸಹಾಯದಿಂದ ತನಗೆ ಬೇಕಾದ ಇಸ್ಲಾಮಿ ನ್ಯೂಕ್ಲಿಯಾರ್ ಬಾಂಬ್ ನ ತಯಾರಿಯಲ್ಲಿ ಎದುರಾಗಬಹುದಾದ ಅಡೆತಡೆಗಳ ಕುರಿತಾದ ಲೆಕ್ಖಾಚಾರಗಳಲ್ಲಿ ಮುಳುಗಿದ್ದ. ಇಂತಹ ಆಧುನಿಕ ಯೋಜನೆಗೆ ಬೇಕಾದ ತಂತ್ರಜ್ಞಾನವನ್ನು ಸಿದ್ಧಿಸಿಕೊಳ್ಳಲು ಮುಂದುವರಿದ ದೇಶಗಳೇ ತೆಗೆದುಕೊಂಡಿದ್ದ ಅಗಾಧ ಕಾಲಾವಕಾಶ ಮತ್ತು ಅದಕ್ಕಾಗಿ ತಗುಲಿದ್ದ ಅಪಾರ ಖರ್ಚುವೆಚ್ಚಗಳ ಗಣನೆ ಆತನಿಗೆ ಸ್ಪಷ್ಟವಾಗಿ ತಿಳಿದಿತ್ತು. ಆದರೂ, ಪ್ಲುಟೋನಿಯಂ ಆಧಾರಿತ ಯೋಜನೆಗಳೆಲ್ಲ ಸುಲಭವಾಗಿ ಪತ್ತೆಹಚ್ಚಲು ಸಾಧ್ಯ ಎಂಬ ಖಾನನ ಎಚ್ಚರಿಕೆಯ ಸಲಹೆಗೆ ಆತನ ಸಹಮತಿಯೂ ಇತ್ತು. ಅಷ್ಟಕ್ಕೂ ತನ್ನ ಕಾರ್ಯಸಿದ್ಧಿಗೆ ಒಂದೇ ಒಂದು ದಾರಿಯನ್ನು ನೆಚ್ಚಿಕೊಳ್ಳುವ ಬದಲು ಎರಡೆರಡು ದಾರಿಗಳು ತೆರೆದಿದ್ದಲ್ಲಿ ತನಗೇ ಅನುಕೂಲ ಎಂಬ ರಾಜಕೀಯದ ಬುದ್ಧಿಯೂ ಕೆಲಸಮಾಡುತ್ತಿತ್ತು.
ಆ ಭೇಟಿಯನ್ನು ಅಲ್ಲಿಗೆ ಮುಗಿಸಿದವನೇ ಭುಟ್ಟೊ ಖಾನ್ ನನ್ನು ದೇಶದಲ್ಲಿನ ಪರಮಾಣು ಕೇಂದ್ರಗಳ ಕ್ಷಿಪ್ರಪ್ರವಾಸಕ್ಕೆ ಕಳಿಸಿದ. ಮುಂದಿನ ಯೋಜನೆಗಾಗಿ ಈ ಪರಮಾಣುಕೇಂದ್ರಗಳ ಸಿದ್ಧತೆ ಮತ್ತು ಕಾರ್ಯಕ್ಷಮತೆಗಳನ್ನು ಅಳೆಯುವುದು ಈ ಭೇಟಿಯ ಹಿಂದಿನ ಉದ್ದೇಶ್ಯವಾಗಿತ್ತು. ತನಗೆ ಒಪ್ಪಿಸಿದ ಕಾರ್ಯವನ್ನು ಶಿರಸಾವಹಿಸಿದ ಖಾನ್ ಶೀಘ್ರದಲ್ಲೇ ತನ್ನ ಪ್ರವಾಸವನ್ನು ಮುಗಿಸಿ ಭುಟ್ಟೋನ ಭೇಟಿಗೆ ಮತ್ತೊಮ್ಮೆ ಹಾಜರಾದ. ದೇಶದ ಯಾವೊಂದು ಪರಮಾಣು ಪರೀಕ್ಷಣಾ ಘಟಕವೂ ತನ್ನ ನಿರೀಕ್ಷೆಯಂತಿಲ್ಲವೆಂದೂ ಅವುಗಳ ಕಾರ್ಯಪದ್ಧತಿಯನ್ನು ಮೇಲ್ದರ್ಜೆಗೇರಿಸುವ ತೀವ್ರತರ ಬೇಡಿಕೆಯಿದೆ ಎಂದೂ ತಿಳಿಸಿದ.
ಖಾನನ ನೀರಿಕ್ಷೆಗಳ ವಿರುದ್ಧವಾಗಿ ಪ್ರಧಾನಿ ಭುಟ್ಟೂ ಆತನಿಗೆ ಪಾಕಿಸ್ತಾನದಲ್ಲಿಯೇ ನೆಲೆಗೊಳ್ಳಲು ತಿಳಿಸದೇ ತನ್ನ ಕೆಲಸಕ್ಕೆ ವಾಪಸಾಗಲು ಹೇಳಿದ. ಪಾಕಿಸ್ತಾನದ ಪರಮಾಣು ಪರೀಕ್ಷಣಗಳಿಗೆ ಆವ್ಯಶ್ಯಕವಾದ ಸಾಮಾನು ಸರಂಜಾಮುಗಳ ಕೊಳ್ಳುವಿಕೆಗೆ ವಿದೇಶಗಳಿಂದಲೇ ಕಾರ್ಯನಿರ್ವಹಿಸುತ್ತಿದ್ದ ಜಾಲವೊಂದರ ಮೇಲ್ವಿಚಾರಣೆಯಲ್ಲಿ ಕೆಲಸಮಾಡುವಂತೆಯೂ, ಉಚಿತ ಸಮಯಕ್ಕೆ ಆತನನ್ನು ಸ್ವದೇಶಕ್ಕೆ ಕರೆಸಿಕೊಳ್ಳುವುದಾಗಿಯೂ ಭರವಸೆ ನೀಡಿ ಕಳಿಸಿದ. ಸ್ವತ: ದೇಶದ ಪ್ರಧಾನಿಯ ಅಭಯಹಸ್ತವೇ ತನ್ನ ಮೇಲಿರುವ ಅಭಿಮಾನ ಮತ್ತು ದೊರೆತಿರುವ ಗುರುತರ ಜವಾಬ್ದಾರಿ ಗಳೊಂದಿಗೆ ಹೆಂಡತಿಮಕ್ಕಳ ಸಮೇತನಾಗಿ ಖಾನ್ ನೆದರ್ಲ್ಯಾಂಡ್ ಗೆ ಮರಳಿದ. ಹೀಗೆ ಮರಳುವಾಗ ಆತ ಅದೇ ಹಿಂದಿನ ಮಧ್ಯಮಸ್ತರದ ವಿಜ್ಞಾನಿ A.Q ಖಾನ್ ಆಗಿರದೆ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐ.ಎಸ್.ಐ ನ ನಂಬಿಕಸ್ಥ ಏಜಂಟ್ ಕರೀಂಖಾನ್ ಆಗಿ ಬದಲಾಗಿದ್ದ.
(ಸಶೇಷ..)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.