ಶತಮಾನದ ಮಹಾ ಪ್ರವಾಹಕ್ಕೆ ಅಕ್ಷರಶಃ ನಲುಗಿ ಹೋಗಿದ್ದ ಕೇರಳ ನಿಧಾನಕ್ಕೆ ಸಾವರಿಸಿಕೊಳ್ಳುತ್ತಿದೆ. ಆದರೆ ನೆರೆಯಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳಲು ಆ ರಾಜ್ಯಕ್ಕೆ ಇನ್ನೂ ಹಲವಾರು ವರ್ಷಗಳೇ ಬೇಕಾಗಬಹುದು. ದೇಶದ ಒಂದು ಪುಟ್ಟ ರಾಜ್ಯ ಕೇರಳಕ್ಕಾದ ಸಂಕಷ್ಟವನ್ನು ಸಮಸ್ತ ಭಾರತೀಯರು ತಮಗೊದಗಿದ ಸಂಕಷ್ಟ ಎಂಬಂತೆ ತಿಳಿದು ಅದರ ಸಹಾಯಕ್ಕೆ ಧಾವಿಸಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ ಸೇನಾಪಡೆಗಳು ಹಗಲಿರುಳು ಶ್ರಮಿಸಿ ಕೇರಳಿಗರ ರಕ್ಷಣಾ ಕಾರ್ಯಾಚರಣೆ ಮಾಡಿದವು. ತಮ್ಮ ಜೀವದ ಹಂಗು ತೊರೆದು ಯೋಧರು ಅಪಾಯಕಾರಿ ಸನ್ನಿವೇಶದಲ್ಲೂ ಒಂದೊಂದು ಜೀವಗಳನ್ನು ಕಾಪಾಡಿದರು. ಸೇವಾಭಾರತಿಯಂತಹ ಸ್ವಯಂಸೇವಾ ಸಂಘಟನೆಗಳು ನಿರಂತರವಾಗಿ ಕೇರಳ ಜನತೆಯ ರಕ್ಷಣಾ ಕಾರ್ಯದಲ್ಲಿ, ಪರಿಹಾರ ಕಾರ್ಯದಲ್ಲಿ ಭಾಗಿಯಾದವು.
ಕೇಂದ್ರ ಸರ್ಕಾರ ರೂ. 950 ಕೋಟಿಯಷ್ಟು ನೆರವನ್ನು ಕೇರಳಕ್ಕೆ ನೀಡಿತು, ಬಹುತೇಕ ರಾಜ್ಯಗಳು ಕೋಟಿಗಟ್ಟಲೆ ಹಣವನ್ನು ಆರ್ಥಿಕ ನೆರವಾಗಿ ಕೇರಳಕ್ಕೆ ಘೋಷಣೆ ಮಾಡಿವೆ. ವೈದ್ಯರ ತಂಡ, ಅಗತ್ಯ ವಸ್ತುಗಳು ದೇಶದ ಮೂಲೆ ಮೂಲೆಯಿಂದ ಕೇರಳಕ್ಕೆ ಹರಿದು ಬಂದವು.
ಮಿತ್ರ ರಾಷ್ಟ್ರ ಇಸ್ರೇಲ್ ಕೂಡಾ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.
ಆದರೆ ಕೇರಳ ಸರ್ಕಾರ ಮತ್ತು ಅಲ್ಲಿನ ಕೆಲವರಿಗೆ ಭಾರತೀಯರಿಂದ ಬಂದ ಈ ನೆರವು ನಗಣ್ಯವಾಗಿದೆ. ಯುಎಇ ರೂ.700 ಕೋಟಿಯನ್ನು ಘೋಷಣೆ ಮಾಡಿದೆ ಎಂದು ಅಲ್ಲಿನ ಸಿಎಂ ಪಿನರಾಯಿ ವಿಜಯನ್ ಕಪೋಲಕಲ್ಪಿತವಾಗಿ ನೀಡಿದ ಹೇಳಿಕೆಯನ್ನೇ ನಂಬಿ ಅಲ್ಲಿನ ಒಂದಿಷ್ಟು ಮಂದಿ ಯುಎಇ ದೊರೆಗಳಿಗೆ ಸಲಾಂ ಹೊಡೆಯಲಾರಂಭಿಸಿದ್ದಾರೆ. ನಮ್ಮನ್ನು ನೆರೆಯಿಂದ ಕಾಪಾಡಿದ್ದು ಯುಎಇ ದೊರೆಯೇ ಎಂಬಂತಿದೆ ಅವರ ವರ್ತನೆ.
ಆದರೆ ಭಾರತದಲ್ಲಿನ ಯುಎಇ ರಾಯಭಾರಿ ಹೇಳುವಂತೆ ಇದುವರೆಗೆ ಅಂತಹ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಪಿನರಾಯಿ ವಿಜಯನ್ ಯಾವ ಆಧಾರದಲ್ಲಿ ಆ ಹೇಳಿಕೆ ನೀಡಿದರು ಎಂಬ ಸ್ಪಷ್ಟನೆಯೂ ಇನ್ನು ಸಿಕ್ಕಿಲ್ಲ. ಆದರೆ ಕೆಲವರಂತು ಭಾರತ ಸರ್ಕಾರ ಮತ್ತು ಭಾರತೀಯರನ್ನು ತುಚ್ಛವಾಗಿಸಿ ಯುಎಇಗೆ ಸಲಾಂ ಹೊಡೆಯಲಾರಂಭಿಸಿದ್ದಾರೆ. ಹಗಲಿರುಳು ದುಡಿದು ಸಂತ್ರಸ್ಥರನ್ನು ಕಾಪಾಡಿದ ಯೋಧರಿಗೆ ಥ್ಯಾಂಕ್ಸ್ ಹೇಳದ ಇವರು, ಅರಬ್ ದೊರೆಗಳ ಅನುಯಾಯಿಗಳಂತೆ ವರ್ತಿಸುತ್ತಿದ್ದಾರೆ.
ಕೆಲವು ಬೀದಿಗಳಲ್ಲಿ ಯುಎಇ ದೊರೆಗಳಿಗೆ ಅಭಿನಂದನೆಗಳನ್ನು ಕೋರುವ ದೊಡ್ಡ ದೊಡ್ಡ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ. ಕೆಲವೊಂದು ಬೀದಿಗಳಿಗೂ ಅರಬ್ ದೊರೆಯ ಹೆಸರನ್ನಿಡಲು ಕೆಲವರು ಮುಂದಾಗಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಂತೂ ಟ್ವೀಟ್, ಪೋಸ್ಟರ್ಗಳ ಸುರಿಮಳೆ ಇದೆ. ಅಷ್ಟೇ ಅಲ್ಲದೆ ಸ್ಥಳೀಯ ಪತ್ರಿಕೆಯ ಮುಖಪುಟದಲ್ಲಿ ಕೂಡಾ ಅರಬ್ ದೊರೆಗಳ ಚಿತ್ರದೊಂದಿಗೆ ಧನ್ಯವಾದ ಹೇಳಿರುವ ಪೂರ್ತಿ ಪುಟದ ಜಾಹೀರಾತು ಪ್ರಿಂಟ್ ಆಗಿದೆ !
ಕೇರಳವನ್ನು ನಿಜವಾಗಿಯೂ ಪ್ರವಾಹದಿಂದ ಮೇಲೆತ್ತಿದವರಿಗೆ ಇಲ್ಲದ ರಾಜ ಮರ್ಯಾದೆ ಯುಎಇಗೆ ಸಿಗುತ್ತಿರುವುದು ವಿಪರ್ಯಾಸವೇ ಸರಿ.
ಇಷ್ಟಕ್ಕೂ ಕೇರಳದ ಅಪಾರ ಮಂದಿ ಯುಎಇನಲ್ಲಿ ದುಡಿಯುತ್ತಿದ್ದಾರೆ, ಈ ಮೂಲಕ ಅಲ್ಲಿನ ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆ ಕೊಡುಗೆಗಳನ್ನು ನೀಡುತ್ತಿದ್ದಾರೆ. ಹೀಗಿರುವಾಗ ಕೇರಳ ನೆರೆಗೆ ತತ್ತರಿಸಿದಾಗ ಒಂದಷ್ಟು ನೆರವು ಘೋಷಣೆ ಮಾಡುವುದು ದೊಡ್ಡ ಸಂಗತಿಯೇನಲ್ಲ. ಆದರೆ ನಿಜವಾದ ರಕ್ಷಕರನ್ನು ಕಡೆಗಣನೆ ಮಾಡಿ ಎಲ್ಲೋ ದೂರದಲ್ಲಿ ಕೂತು ನೆರವು ನೀಡುತ್ತೇವೆ ಎಂದವರನ್ನು ದೇವರಂತೆ ಕಾಣುವುದು ಒಳ್ಳೆಯ ನಡೆಯಲ್ಲ. ಕೇರಳದ ಮೊದಲ ಅಭಿನಂದನೆಯೇನಿದ್ದರೂ ಅದು ಯೋಧರಿಗೆ, ಹಗಲಿರುಳು ದುಡಿದ ಸ್ವಯಂಸೇವಕರಿಗೆ ಸೇರಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.