ಒಂದು ವೇಳೆ ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮಕದಲ್ಲಿ ನಾನು ಆಯ್ಕೆಯಾಗಿ, ಅಲ್ಲಿ ಶತಮಾನದ ಅತ್ಯುತ್ತಮ ಆವಿಷ್ಕಾರ ಯಾವುದು ಎಂದು ಪ್ರಶ್ನೆ ಬಂದರೆ ಅದಕ್ಕೆ ನಾನು ಕೊಡುವ ಉತ್ತರಸೋಲಾರ್ ವಾಟರ್ ಹೀಟರೆಂದು. ಅರೆ! ಸಾವಿರ ಕಿಲೋ ಮೀಟರ್ ದೂರಕ್ಕೆ ಹಾರಿ ಕರಾರುವಾಕ್ಕಾಗಿ ನಾವು ಗುರಿಯಿಟ್ಟ ನಗರವನ್ನು ಧ್ವಂಸ ಮಾಡಬಲ್ಲ ಕ್ಷಿಪಣಿಗಿಂತಲೂ, ಒಂದು ನಿಮಿಷಕ್ಕೆ ಒಂದು ಸಾವಿರ ಪ್ಲಾಸ್ಟಿಕ್ ಕವರ್ ಗಳನ್ನು ತಯಾರಿಸಬಲ್ಲ ಯಂತ್ರಕ್ಕಿಂತಲೂ, ಕೇವಲ ಒಂದು ಲೀಟರ್ ದ್ರಾವಣದಿಂದ ಏಡಿ, ಕಪ್ಪೆ, ಎರೆ ಹುಳುಗಳೂ ಸೇರಿದಂತೆಒಂದು ಎಕರೆ ಜಮೀನಿನ ಕಳೆಯನ್ನೆಲ್ಲಾ ಸಂಪೂರ್ಣವಾಗಿನಾಶ ಮಾಡಬಲ್ಲ ವಿಷಕಾರಿ ರಾಸಾಯನಿಕಕ್ಕಿಂತಲೂ ಅಷ್ಟೊಂದು ಸರಳ ವಿನ್ಯಾಸದ ಸೋಲಾರ್ ವಾಟರ್ಹೀಟರ್ಹೇಗೆ ಅತ್ಯುತ್ತಮ ಆವಿಷ್ಕಾರವಾದೀತು ಎಂದೇನಾದರೂಕೇಳಿದರೆ ಅದಕ್ಕೂ ನನ್ನಲ್ಲಿ ಉತ್ತರವುಂಟು.
ನಮ್ಮ ಮಲೆನಾಡಿನ ಮನೆಗಳಲ್ಲಿ ಸ್ನಾನಕ್ಕಾಗಿ ನೀರು ಕಾಯಿಸುವುದು ಒಂದು ದೊಡ್ಡ ಸವಾಲು.ವರ್ಷದಲ್ಲಿ ಒಂದು ತಿಂಗಳು ಆ ವರ್ಷಕ್ಕೆ ಬೇಕಾಗುವಷ್ಟು ಕಟ್ಟಿಗೆಗಳನ್ನು ಕಡಿಯುವುದೇ ಬಹುತೇಕರ ಉದ್ಯೋಗ. ಕಟ್ಟಿಗೆಯನ್ನು ಜೋಡಿಸಲೆಂದೇ ಮನೆಯ ಪಕ್ಕ ಒಂದು ಕೊಟ್ಟಿಗೆಯನ್ನು ಕಟ್ಟಲಾಗಿರುತ್ತದೆ. ದೊಡ್ಡ ಮರಗಳನ್ನಾದರೆ ಗರಗಸದಿಂದ ಕತ್ತರಿಸಿ ನಂತರಕೊಡಲಿಯಿಂದ ಕಡಿದುಜೋಡಿಸಿಡುವುದು, ಬಹುತೇಕ ಒಂದೇ ಅಳತೆಗೆಸೌದೆಗಳನ್ನು ಕಡಿದುತಂದು ಅವುಗಳನ್ನು ಸೌದೆ ಕೊಟ್ಟಿಗೆಯಲ್ಲಿ ಜೋಡಿಸಿಡುವುದೇ ಒಂದು ಸಾಹಸ. ಕೇವಲ ಸೌದೆ ಅಷ್ಟೇ ಅಲ್ಲ, ಸೌದೆಗೆ ಬೆಂಕಿ ಹತ್ತಿಕೊಳ್ಳುವವರೆಗೂ ಅಡಿಕೆ ಹಾಳೆಯನ್ನು ಬಳಸಬೇಕಾಗುತ್ತದೆ. ಜೊತೆಗೊಂದಷ್ಟು ಅಡಿಕೆ ಸಿಪ್ಪೆ, ತೆಂಗಿನ ಸಿಪ್ಪೆ ಇತ್ಯಾದಿ ಇತ್ಯಾದಿ. ಮಳೆಗಾಲದ ಥಂಡಿಯಲ್ಲಂತೂ ಸೌದೆ ಹತ್ತಿಸುವಷ್ಟರಲ್ಲಿ ಸಾಕಪ್ಪಾ ಸಾಕು ಎನ್ನಿಸುವ ಅನುಭವ. ಜೊತೆಗೆ ಅಸಾಧ್ಯ ಹೊಗೆ. ಆ ಹೊಗೆಗೆ ಕಣ್ಣೆಲ್ಲಾ ನೀರುನೀರು. ಮುಂಜಾನೆ ಊರಿಗೆ ಹೊರಡುವ ನೆಂಟರಿದ್ದರೆ ಹಿಂದಿನ ದಿನ ರಾತ್ರಿಯೇ ಒಲೆಯುರಿ ಹಾಕಿ ಮಲಗಿಕೊಳ್ಳಬೇಕು. ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರಿಗೆ ಆ ಒಲೆಯ ಬುಡದಲ್ಲೇ ಕಡ್ಡಾಯ ಶಿಕ್ಷಣ. ಒಂದು ಕೈಯಲ್ಲಿ ಪುಸ್ತಕ ಹಿಡಿದು ಇನ್ನೊಂದು ಕೈಯಲ್ಲಿ ಒಲೆಯ ಬೆಂಕಿ ಸರಿಸುವ ಕೆಲಸ. ಪಕ್ಕದಲ್ಲೇ ತಾನು ಮಲಗಲು ಬೆಚ್ಚನೆಯ ಜಾಗ ಹುಡುಕಿ ಬರುವ ಮನೆಯ ನಾಯಿ!
ಇದೆಲ್ಲವೂ ಸ್ನಾನಕ್ಕೆ ನೀರು ಕಾಯಿಸುವ ಹಳ್ಳಿಗರ ಸಮಸ್ಯೆಯಾದರೆ ನಗರ, ಪಟ್ಟಣಗಳಲ್ಲಿ ನೀರು ಕಾಯಿಸುವಾಗಿನ ಸಮಸ್ಯೆಯೇ ಇನ್ನೊಂದು ಬಗೆ.
ಸಾ ಮಿಲ್ಲಿನಿಂದ ಮರದ ಹೊಟ್ಟು ಖರೀದಿಸಿ ಇಟ್ಟುಕೊಳ್ಳುವುದು, ಕಾಯಿ ಮಟ್ಟೆ(ತೆಂಗಿನ ಕಾಯಿಯ ಸಿಪ್ಪೆ)ಯನ್ನು ತಿಂಗಳಿಗೊಮ್ಮೆ ಖರೀದಿಸಿ ಮನೆ ತುಂಬಿಸಿಕೊಳ್ಳುವುದು, ಅಡುಗೆಗೆ ಬಳಸಿದ ಕಾಯಿಯ ಕರಟ, ಸಾಮಾನು ಸರಂಜಾಮುಗಳ ಜೊತೆ ಮನೆ ಸೇರುವ ರಟ್ಟು, ಪೇಪರ್ ಜೊತೆಗೊಂದಷ್ಟು ಪ್ಲಾಸ್ಟಿಕ್ ಎಲ್ಲವನ್ನೂ ಮನೆಯಲ್ಲಿ ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲಾ ತುರುಕಿಟ್ಟುಕೊಳ್ಳುವುದು… ಹೀಗೆ ನೀರು ಕಾಯಿಸಲು ಏನೇನು ಬೇಕೋ ಎಲ್ಲವನ್ನೂ ಮಾಡಿಕೊಳ್ಳುವುದರಜೊತೆಗೆ ನೂರಾರು ಜಿರಲೆಗಳ ಸಂಸಾರಗಳನ್ನೂ ಸಾಕುವ ಔದಾರ್ಯ ತೋರಿಸಬೇಕಾಗುತ್ತದೆ. ಕೇವಲ ಜಿರಲೆಗಳಷ್ಟೇ ಅಲ್ಲ, ಕೆಲವೊಮ್ಮೆ ಹಾವುಗಳೂ ಕೂಡಾ ಉರುವಲು ಸಾಮಗ್ರಿಗಳ ಮಧ್ಯದಲ್ಲಿ ನೆಮ್ಮದಿಯಾಗಿ ಸುತ್ತಿಕೊಂಡು ಮಲಗಿ ನಿದ್ರಿಸಿದ್ದನ್ನು ಕಂಡು ಗಾಬರಿಗೊಂಡ ನಗರವಾಸಿಗಳಿದ್ದಾರೆ!
ಇದೆಲ್ಲಾ ಬಿಟ್ಟು ಗ್ಯಾಸ್ ಗೀಸರ್ ಬಳಸೋಣವೆಂದರೆ ಸಬ್ಸಿಡಿ ಹೊಂದಿರುವ ಗ್ಯಾಸ್ ಸಿಲಿಂಡರ್ ಗಳ ಸಂಖ್ಯೆಯನ್ನು ಸರ್ಕಾರ ಮಿತಿಗೊಳಿಸಿಬಿಟ್ಟಿದೆ. ವಿದ್ಯುತ್ ಗೀಸರ್ ಬಳಸೋಣವೆಂದರೆ ದುಡಿಮೆಯ ಶೇ.10 ರಷ್ಟನ್ನು ವಿದ್ಯುತ್ ಬಿಲ್ ಕಟ್ಟಲೆಂದೇ ತೆಗೆದಿರಿಸಬೇಕಾದೀತು. ಇಷ್ಟೆಲ್ಲಾ ಸಮಸ್ಯೆಗಳನ್ನೂ ಏಕ ಕಾಲದಲ್ಲಿ ಬಗೆಹರಿಸಬಹುದಾದ ಸಾಧನವೇ ಸೋಲಾರ್ ವಾಟರ್ ಹೀಟರ್. ಬಹುಷಃ ನನಗಷ್ಟೇ ಅಲ್ಲ, ಮೇಲೆನಾನು ಹೇಳಿದ್ದನ್ನೆಲ್ಲಾ ಅನುಭವಿಸಿದ ಪ್ರತಿಯೊಬ್ಬರಿಗೂ ಇದು ನಿಜಕ್ಕೂ ಒಂದು ಅದ್ಭುತ ಸಂಶೋಧನೆ ಎನ್ನಿಸದಿರದು.
ಇನ್ನೂ ನೀವು ನಿಮ್ಮ ಮನೆಗೆ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಂಡಿಲ್ಲವೇ? ಹಾಗಾದರೆ ಆ ಸಾಧನದ ಬಗ್ಗೆ ಒಂದಷ್ಟು ತಿಳಿಯೋಣ ಬನ್ನಿ.
ಈಗ ಹೆಚ್ಚು ಬಳಕೆಯಲ್ಲಿರುವ ಸೋಲಾರ್ ವಾಟರ್ ಹೀಟರ್ ಗಳಲ್ಲಿ ಸಾಮಾನ್ಯವಾಗಿ ಎರಡು ಮಾದರಿಗಳಿವೆ. ಫ್ಲಾಟ್ ಪ್ಲೇಟ್ ಮಾದರಿ ಮತ್ತು ETC (evacuated tube collector) ಮಾದರಿ. ಫ್ಲಾಟ್ ಪ್ಲೇಟ್ ಮಾದರಿ ಸ್ವಲ್ಪ ದುಬಾರಿ. ಅವುಗಳ ನಿರ್ವಹಣೆ ಕೂಡಾ ತುಸು ಕಷ್ಟ. ಜೊತೆಗೆ ಗಡುಸು ನೀರಾದರೆ ಆಗಾಗ ನೀರು ಹರಿದು ಬಿಸಿಯಾಗುವ ಕೊಳವೆಗಳು ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚು.
ಆದರೆ ETC ಮಾದರಿ ಅತ್ಯಂತ ಸರಳ ವಿನ್ಯಾಸ ಹೊಂದಿದೆ. ಓವರ್ ಹೆಡ್ ಟ್ಯಾಂಕ್ ನಿಂದ ಬರುವ ನೀರು ಸಂಗ್ರಾಹಕ ಟ್ಯಾಂಕ್ ಹಾಗೂ ಅದಕ್ಕೆ ನೇರವಾಗಿ ಅಳವಡಿಸಲಾಗಿರುವ ನಿರ್ವಾತ(Vacuum) ಗಾಜಿನ ಕೊಳವೆಗಳಲ್ಲಿ ತುಂಬಿಕೊಳ್ಳುತ್ತದೆ. ಆ ನಿರ್ವಾತ ಗಾಜಿನ ಕೊಳವೆಗಳ ಮೇಲೆ ಬೀಳುವ ಸೂರ್ಯನ ಕಿರಣಗಳು ಅವುಗಳಲ್ಲಿ ತುಂಬಿರುವ ನೀರನ್ನು ಶೀಘ್ರವಾಗಿ ಬಿಸಿಯಾಗಿಸುತ್ತದೆ. ಹಾಗೆ ಬಿಸಿಯಾದ ನೀರು ವಾಟರ್ ಹೀಟರ್ ನ ಸಂಗ್ರಾಹಕ ಟ್ಯಾಂಕ್ ನ ಮೇಲ್ಭಾಗಕ್ಕೆ ಹೋಗಿ ನಿಲ್ಲುತ್ತದೆ. ತಣ್ಣಗಿರುವ ನೀರು ಕೆಳಗಿರುವ ಗಾಜಿನ ಕೊಳವೆಯ ಕಡೆಗೆ ಹರಿಯುತ್ತದೆ. ವಾಟರ್ ಹೀಟರ್ ನ ಟ್ಯಾಂಕ್ ನ ಮೇಲ್ಭಾಗಕ್ಕೆ ಹೋಗಿ ನಿಂತ ಬಿಸಿ ನೀರು ನೇರವಾಗಿ ನಮ್ಮ ಬಚ್ಚಲು ಮನೆಗೆ ಬರುತ್ತದೆ. ಸಂಗ್ರಾಹಕ ಟ್ಯಾಂಕ್ ಸಂಪೂರ್ಣವಾಗಿ ಇನ್ಸುಲೇಟೆಡಾಗಿರುವುದರಿಂದ ಒಮ್ಮೆ ಕಾದ ನೀರು ಬೇಗನೆ ತಣ್ಣಗಾಗುವುದಿಲ್ಲ. ಹಗಲು ರಾತ್ರಿಯೆನ್ನದೆ ಯಾವಾಗ ಬೇಕಾದರೂ ಆ ಬಿಸಿ ನೀರನ್ನು ಬಳಸಿಕೊಳ್ಳಬಹುದು.
ಹಾಗಾದರೆ ನಾವುಯಾವ ಗಾತ್ರದ ಸೋಲಾರ್ ವಾಟರ್ ಹೀಟರ್ ಕೊಳ್ಳಬೇಕು ಎನ್ನುವುದು ಮೊದಲು ಎದುರಾಗುವ ಪ್ರಶ್ನೆ. ಸಾಮಾನ್ಯವಾಗಿ ಸೋಲಾರ್ ವಾಟರ್ ಹೀಟರ್ ಗಳಗಾತ್ರವನ್ನು LPD (Liters Per Day) ಎನ್ನುವ ಮಾಪನದಲ್ಲಿ ನಿರ್ಧರಿಸುತ್ತಾರೆ. ನೂರು LPD ಎಂದರೆ ಒಂದು ದಿನದಲ್ಲಿ ನೂರು ಲೀಟರ್ ನೀರು ಕಾಯಿಸಬಲ್ಲ ಸಾಮರ್ಥ್ಯ ಹೊಂದಿರುವುದು ಎನ್ನಬಹುದು. ಇಪ್ಪತ್ತೈದು ಲೀಟರ್ ಬಿಸಿ ನೀರು ಒಬ್ಬರು ಬಳಸುತ್ತಾರಾದರೆ ನಾಲ್ಕು ಜನರ ಕುಟುಂಬಕ್ಕೆ ನೂರು LPD ಯ ಸೋಲಾರ್ ವಾಟರ್ ಹೀಟರ್ ಆಯ್ಕೆ ಮಾಡಿಕೊಳ್ಳಬಹುದು. ಹೀಗೆಯೇ ಕುಟುಂಬ ಸದಸ್ಯರ ಸಂಖ್ಯೆಯನ್ನಾಧರಿಸಿ ನೂರೈವತ್ತು, ಇನ್ನೂರು, ಇನ್ನೂರ ಐವತ್ತು…. LPD ಸೋಲಾರ್ ವಾಟರ್ ಹೀಟರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ನಮ್ಮಮನೆಗೆ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಂಡ ನಂತರ ಅದರ ದಾಖಲೆಗಳನ್ನು ವಿದ್ಯುತ್ ಸರಬರಾಜು ಕಂಪನಿಯ ಕಚೇರಿಗೆ ಸಲ್ಲಿಸಿ ವಿದ್ಯುತ್ ಬಿಲ್ ನಲ್ಲಿ ರಿಯಾಯಿತಿ ಕೂಡಾ ಪಡೆಯಬಹುದು. ಪ್ರಸ್ತುತ ಒಂದು ಯೂನಿಟ್ ಗೆ ಐವತ್ತು ಪೈಸೆಯಂತೆ ನೂರು ಯೂನಿಟ್ ವರೆಗೂ ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ನಾವು ಬಳಸುವ ವಿದ್ಯುತ್ ನ ಬಿಲ್ ನಲ್ಲಿ ಒಂದು ವರ್ಷಕ್ಕೆ 600 ರೂ.ಗಳ ವರೆಗೆ ಉಳಿತಾಯ ಮಾಡಬಹುದು. ಅದೇ ಉಳಿತಾಯದ ಹಣವನ್ನು ನಾವು ಕೊಂಡವಾಟರ್ ಹೀಟರ್ ನ ವಾರ್ಷಿಕ ನಿರ್ವಹಣೆಗೆ ಬಳಸಿಕೊಂಡರೆ ವರ್ಷ ಪೂರ್ತಿ ಸಂಪೂರ್ಣ ಉಚಿತವಾಗಿ ಬಿಸಿ ನೀರು ಕಾಯಿಸಿಕೊಳ್ಳಬಹುದು!
ಸೋಲಾರ್ ವಾಟರ್ ಹೀಟರ್ ನಿರ್ವಹಣೆ ಹೇಗೆ?
ಮುಖ್ಯವಾಗಿಮಕ್ಕಳು ಅದರ ಬಳಿ ಆಟವಾಡದಂತೆ ತಿಳಿಹೇಳಬೇಕು. ಒಂದೊಮ್ಮೆ ಆಟವಾಡುವಾಗ ಗಾಜಿನ ಟ್ಯೂಬ್ ಒಡೆದದ್ದೇ ಆದರೆ ನುಗ್ಗಿ ಬರುವ ಬಿಸಿನೀರಿನಿಂದ ಅಪಾಯ ಸಂಭವಿಸಬಹುದು. ಹಾಗೆಯೇ ಇನ್ನಿತರಯಾವುದೇ ಅಚಾತುರ್ಯದಿಂದ ನಿರ್ವಾತ ಗಾಜಿನ ಕೊಳವೆಗಳು ಒಡೆಯದಂತೆ ನೋಡಿಕೊಳ್ಳಬೇಕು. ಕೆಲವೊಮ್ಮೆ ಸಂಗ್ರಾಹಕ ಟ್ಯಾಂಕ್ ನ ಗಾಳಿ ಕಿಂಡಿಯು(Airvent) ಸಂಪೂರ್ಣವಾಗಿ ಕಟ್ಟಿಕೊಂಡು ಗಾಳಿ ಹೊರ ಹೋಗದಂತಾದಾಗ ಕೂಡಾ ಗಾಜಿನ ಕೊಳವೆ ಒಡೆಯುವ ಸಾಧ್ಯತೆ ಇರುತ್ತದೆ. ಗಾಜಿನ ಕೊಳವೆಗಳ ಮೇಲೆ ತುಂಬಾ ಧೂಳು ಕೂರದಂತೆ ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಗಡುಸು ನೀರಿರುವ ಕಡೆಗಳಲ್ಲಾದರೆ ವರ್ಷಕ್ಕೆ ಎರಡು ಬಾರಿಯಾದರೂ ನಿರ್ವಹಣೆ ಮಾಡಿಸಲೇಬೇಕು.
ಹಾಗೆಂದು ಸೋಲಾರ್ ವಾಟರ್ ನ ನಿರ್ವಹಣೆ ತುಂಬಾ ಕಷ್ಟದ ಕೆಲಸವೇನೂ ಅಲ್ಲ. ಗಾಜಿನ ಕೊಳವೆಗಳನ್ನು ನಿಧಾನವಾಗಿ ಸಂಗ್ರಾಹಕ ಟ್ಯಾಂಕ್ ನ ಒಳಗೆ ತಳ್ಳಿ ಸ್ವಲ್ಪ ಮೇಲೆತ್ತಿ ಎಳೆದು ತೆಗೆಯಬಹುದು. ಹಾಗೆ ತೆಗೆದ ಕೊಳವೆಯನ್ನು ಅತ್ಯಂತ ಜಾಗರೂಕತೆಯಿಂದ ನೀರಿನೊಂದಿಗೆ ಮಿಶ್ರಣ ಮಾಡಲ್ಪಟ್ಟ ದುರ್ಬಲ ಆಸಿಡ್ ಬಳಸಿ ಸ್ವಚ್ಛಗೊಳಿಸಬೇಕು. ಸಾಕಷ್ಟು ನೀರು ಬಳಸಿ ಗಾಜಿನ ಕೊಳವೆಗಳನ್ನು ಬೇರ್ಪಡಿಸಲ್ಪಟ್ಟ ಸಂಗ್ರಾಹಕ ಟ್ಯಾಂಕ್ ನ ಒಳಭಾಗವನ್ನು ಸ್ವಚ್ಛಗೊಳಿಸಬೇಕು. ವಾಲ್ವ್ ಗಳೆಲ್ಲವೂ ಸರಿಯಾಗಿವೆಯೇ ಎನ್ನುವುದನ್ನು ಪರೀಕ್ಷಿಸಬೇಕು. ನಂತರ ಕಳಚಿದ ಗಾಜಿನ ಕೊಳವೆಗಳ ತುದಿಗಳಿಗೆ ಸ್ವಲ್ಪ ಶಾಂಪೂ ಅಥವಾ ಹ್ಯಾಂಡ್ ವಾಷ್ ಸವರಿ ನಿಧಾನವಾಗಿ ಸಂಗ್ರಾಹಕ ಟ್ಯಾಂಕ್ ನ ಒಳಗೆ ತಳ್ಳಿ ಮೊದಲಿದ್ದಂತೆಯೇ ಕೂರಿಸಿದರೆ ಆಯಿತು. ಒಂದೆರಡು ಬಾರಿ ನೋಡಿಕೊಂಡರೂ ನಂತರದಲ್ಲಿ ಮನೆಯವರಲ್ಲೇ ಒಬ್ಬರು ಸುಲಭವಾಗಿ ನಿರ್ವಹಣೆ ಮಾಡಬಹುದು. ಆಸಕ್ತ ಯುವಕರು ಕೇವಲ ಒಂದು ವಾರ ಇದರ ನಿರ್ವಹಣೆಯ ತರಬೇತಿ ಪಡೆದರೂ ಸ್ವಂತ ಅರೆಕಾಲಿಕ ಉದ್ಯೋಗವೊಂದನ್ನು ಅತ್ಯಂತ ಕಡಿಮೆ ಬಂಡವಾಳದೊಂದಿಗೆ ಪ್ರಾರಂಭಿಸಬಹುದು.
ಆಯ್ಕೆ ಹೇಗೆ?
ಈಗ ಹೆಚ್ಚು ಬಳಕೆಯಲ್ಲಿರುವ ಸೋಲಾರ್ ವಾಟರ್ ಹೀಟರ್ ಗಳಲ್ಲಿ ಸಾಮಾನ್ಯವಾಗಿ ಎರಡು ಮಾದರಿಗಳಿವೆ.ಫ್ಲಾಟ್ ಪ್ಲೇಟ್ ಮಾದರಿ ಮತ್ತು ETC (evacuated tube collector) ಮಾದರಿ. ಇದಲ್ಲದೆ ಹೋಟೆಲ್, ಹಾಸ್ಟೆಲ್ ಮುಂತಾದ ಕಡೆಗಳಲ್ಲಿ ಬಳಸಬಹುದಾದ ಬೇರೆ ಬೇರೆ ವಾಣಿಜ್ಯ ವಿನ್ಯಾಸಗಳೂ ಇವೆ. ಮೊದಲೇ ತಿಳಿಸಿದಂತೆ ಫ್ಲಾಟ್ ಪ್ಲೇಟ್ ಮಾದರಿ ಸ್ವಲ್ಪ ದುಬಾರಿ ಮತ್ತು ಅದರ ನಿರ್ವಹಣೆ ಕೂಡಾ ತುಸು ಕಷ್ಟವಾದ್ದರಿಂದ ನಾನಿಲ್ಲಿ ಗೃಹ ಬಳಕೆಯ ETC ಮಾದರಿಯ ಸೋಲಾರ್ ವಾಟರ್ ಹೀಟರ್ ಗಳ ಬಗ್ಗೆ ಮಾತ್ರ ಹೇಳುತ್ತಿದ್ದೇನೆ. ನಾವು ಕೊಳ್ಳುವ ಸೋಲಾರ್ ವಾಟರ್ ಹೀಟರ್ ಹೆಸರಾಂತ ಬ್ರಾಂಡ್ ನದ್ದೇ ಆಗಿರಬೇಕೆಂದೇನೂ ಇಲ್ಲ. ಕೊಳ್ಳುವ ಮೊದಲು ಅದು MNRE (Ministry of New and Renewable Energy)ಯಿಂದ ಅನುಮೋದನೆ ಪಡೆದಿದೆಯೇ ಎನ್ನುವುದನ್ನು ಗಮನಿಸಿದರೆ ಸಾಕು. ನಿಗದಿತ ಗುಣಮಟ್ಟ ಹೊಂದಿರುವ ಸೋಲಾರ್ ಉತ್ಪನ್ನಗಳನ್ನು ಮಾತ್ರ MNRE ಅನುಮೋದಿಸಿರುತ್ತದೆ. ಇನ್ನು ಅದರ ಗಾತ್ರವನ್ನು ಈ ಮೊದಲೇ ತಿಳಿಸಿದಂತೆ ಕುಟುಂಬದ ಸದಸ್ಯರ ಸಂಖ್ಯೆಯನ್ನಾಧರಿಸಿ ಆಯ್ಕೆ ಮಾಡಿಕೊಳ್ಳಬೇಕು. ಕಡಿಮೆ ಸುತ್ತಳತೆಯ ಟ್ಯೂಬ್ ಗಳನ್ನು ಹೊಂದಿರುವ ವಾಟರ್ ಹೀಟರ್ ಗಳು ಇವೆಯಾದರೂ ಈಗ ಹೆಚ್ಚು ಬಳಕೆಯಲ್ಲಿರುವ ಸೋಲಾರ್ ವಾಟರ್ ಹೀಟರ್ ಗಳ ಗಾಜಿನ ಕೊಳವೆಗಳು 1800 ಎಂಎಂ ಉದ್ದ ಹಾಗೂ 58 ಎಂಎಂ ಸುತ್ತಳತೆಯವಾಗಿರುತ್ತವೆ. ಮತ್ತು ಅವು ನಮ್ಮ ಬಳಕೆಗೆ ಹೆಚ್ಚು ಸೂಕ್ತವಾಗಿವೆ. ಉಳಿದಂತೆ ಸಂಗ್ರಾಹಕ ಟ್ಯಾಂಕ್ ಹೆಚ್ಚು ದಪ್ಪದ (ಉದಾ:50 ಎಂಎಂ) ಇನ್ಸುಲೇಷನ್ ಹೊಂದಿದ್ದರೆ ಒಮ್ಮೆ ಕಾದ ನೀರನ್ನು ಹೆಚ್ಚು ಕಾಲ ಬಿಸಿಯಾಗಿರುತ್ತದೆ. ಟ್ಯಾಂಕ್ ನ ಒಳಪದರ ಫುಡ್ ಗ್ರೇಡ್ ಗುಣಮಟ್ಟದ ಲೋಹದ ಹಾಳೆಯಿಂದ ತಯಾರಿಸಿದ್ದಾದರೆ ಇನ್ನೂ ಉತ್ತಮ. ಹಾಗೆಯೇ ಟ್ಯಾಂಕ್ ನ ಹೊರ ಮೈ ಸೇರಿದಂತೆ ಒಟ್ಟಾರೆಯಾಗಿ ವಾಟರ್ ಹೀಟರ್ ನ ಇತರ ಎಲ್ಲಾ ರಚನೆಗಳು ಸುಲಭವಾಗಿ ತುಕ್ಕು ಹಿಡಿಯದ ಲೋಹಗಳಿಂದ ತಯಾರಿಸಲಾಗಿದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು.
ಬಹುತೇಕ ಸಂಭಾವ್ಯ ಗ್ರಾಹಕರ, ಅದರಲ್ಲೂ ಮಲೆನಾಡು ಭಾಗದ ಜನರ ಪ್ರಮುಖ ತಕರಾರೆಂದರೆ ’ಮಳೆಗಾಲದಲ್ಲಿ ಅದು ನಮಗೆ ಉಪಯೋಗಕ್ಕೆ ಬರುವುದಿಲ್ಲ’ ಎನ್ನುವುದು. ಸೋಲಾರ್ ವಾಟರ್ ಹೀಟರ್ ಬಳಕೆದಾರರು, ಅದರಲ್ಲೂ ಮಲೆನಾಡು ಭಾಗದವರು ಕಡಿಮೆ ಬಿಸಿಲಿರುವ ದಿನಗಳಲ್ಲಿ ಮಧ್ಯಾಹ್ನದ ನಂತರ ಬಿಸಿನೀರನ್ನು ಬಳಸದಿರುವುದು ಉತ್ತಮ. ಏಕೆಂದರೆ ನಾವು ಎಷ್ಟು ಬಿಸಿ ನೀರು ಬಳಸುತ್ತೇವೋ ಅಷ್ಟೇ ತಣ್ಣೀರು ಬಂದು ಟ್ಯಾಂಕ್ ನ ಬಿಸಿನೀರಿನೊಂದಿಗೆ ಸೇರಿಕೊಳ್ಳುತ್ತದೆ. ಆಗ ಮರುದಿನ ಮುಂಜಾನೆ ಬಳಸಲು ಹೆಚ್ಚು ಬಿಸಿ ನೀರು ನಮಗೆ ದೊರೆಯುವುದಿಲ್ಲ. ಭಾರತದಲ್ಲಿ ವರ್ಷದಲ್ಲಿ ಸರಾಸರಿ 300 ದಿನಗಳಷ್ಟು ನಿಚ್ಚಳ ಬಿಸಿಲು ದೊರೆಯುತ್ತದೆ. ಆದ್ದರಿಂದ ನಾವು ಅಳವಡಿಸಿಕೊಂಡ ಸೋಲಾರ್ ವಾಟರ್ ಹೀಟರ್ ಹೆಚ್ಚೆಂದರೆ ವರ್ಷದಲ್ಲಿ ಎರಡು-ಮೂರು ತಿಂಗಳು ಸಮರ್ಥವಾಗಿ ಕೆಲಸ ಮಾಡದೆ ಇರಬಹುದು. ಆದರೆ ಆ ಸಮಯದಲ್ಲೂ ಅದರೊಳಗೆ ಅಳವಡಿಸಲಾಗಿರುವ ವಿದ್ಯುತ್ ಕಾಯಿಲ್ ಮೂಲಕ ಅದೇ ಸೋಲಾರ್ ವಾಟರ್ ಹೀಟರನ್ನು ವಿದ್ಯುತ್ ಗೀಸರ್ ನಂತೆ ಉಪಯೋಗಿಸಿಕೊಳ್ಳಬಲ್ಲ ಸೌಲಭ್ಯವೂ ಇದೆ ಮತ್ತು ಆ ಸಮಯದಲ್ಲೂ ನಮ್ಮ ಗೃಹ ಬಳಕೆಯವಿದ್ಯುತ್ ಬಿಲ್ ನ ಮೇಲೆ ರಿಯಾಯಿತಿಯಂತೂ ಸಿಕ್ಕೇ ಸಿಗುತ್ತದೆ. ಅಲ್ಲಿಗೆ ಹೇಗೆ ಲೆಕ್ಕ ಹಾಕಿದರೂ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳುವುದು ಲಾಭದಾಯಕವೇ ಸರಿ.
ಉರುವಲು ಸಂಗ್ರಹಿಸಲು ಬೇಕಾದ ಸಮಯ ಮತ್ತು ಶ್ರಮದ ಉಳಿತಾಯ, ಅಮೂಲ್ಯ ವಿದ್ಯುತ್ ಬಳಕೆಯಲ್ಲಿ ಮಿತ ವ್ಯಯದ ಜೊತೆ ಜೊತೆಗೇ ವಿದ್ಯುತ್ ಬಿಲ್ ನಲ್ಲಿನ ಉಳಿತಾಯ, ಪರಿಸರ ಸಂರಕ್ಷಣೆ, ಹೊಗೆ ರಹಿತ ಬಚ್ಚಲು ಮನೆ, ಬೇಕೆಂದಾಗ ದೊರೆಯುವ ಬಿಸಿ ನೀರು… ಹೀಗೆ ಎಲ್ಲಾ ರೀತಿಯಲ್ಲೂ ಅನುಕೂಲಕರವೇ ಆಗಿರುವ ಸೋಲಾರ್ ವಾಟರ್ ಹೀಟರ್ ನಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಲೇಬೇಕಾದ ಒಂದು ಅತ್ಯಾವಶ್ಯಕ ಸಾಧನ ಮತ್ತು ಶತಮಾನದ ಅತ್ಯುತ್ತಮ ಆವಿಷ್ಕಾರಗಳಲ್ಲೊಂದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.