ಪ್ರತೀ ಬಾರಿ ನಾಡ ಹಬ್ಬ ದಸರಾ ಸಮೀಪಿಸುತ್ತಿದ್ದಂತೆಯೇ ರೈತರ ಸಂಕಷ್ಟ, ಬರ, ನೆರೆ ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳ ದಸರಾವನ್ನಾಗಿ ಆಚರಿಸಬೇಕು ಎನ್ನುವ ಒತ್ತಾಯ ಕೆಲವರಿಂದ ಕೇಳಿಬರುತ್ತದೆ. ನಾಡಿನ ರೈತರು ಕಷ್ಟದಲ್ಲಿರುವಾಗ ಅದ್ದೂರಿಯಾಗಿ ದಸರಾ ಆಚರಿಸುವುದು ಸರಿಯಲ್ಲ ಎನ್ನುವುದು ಅದ್ದೂರಿ ದಸರಾ ವಿರೋಧಿಸುವವರು ನೀಡುವ ಪ್ರಮುಖ ಕಾರಣ.
ಆದರೆ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನಂಬಿಕೊಂಡಿರುವ ಮೈಸೂರಿಗರ ಅಭಿಪ್ರಾಯವೇ ಬೇರೆ.ಅಲ್ಲಿನ ಬಹುತೇಕ ಹೋಟೆಲ್ಗಳು ಸಂಪೂರ್ಣವಾಗಿ ಭರ್ತಿಯಾಗುವುದು ದಸರಾ ಸಮಯದಲ್ಲಿ ಮಾತ್ರ. ಹಾಗಾಗಿಯೇ ಸರ್ಕಾರ ಅನುಮತಿ ನೀಡಿದರೆ ನಾವೇ ದಸರಾವನ್ನು ಅದ್ದೂರಿಯಾಗಿ ಆಚರಿಸುತ್ತೇವೆ ಎಂದು ಹೋಟೆಲ್ ಮಾಲೀಕರು ಒಮ್ಮೆ ಬೇಡಿಕೆಯಿಟ್ಟಿದ್ದರು. ತಾವೇ ತಮ್ಮ ಸ್ವಂತ ಹಣ ಖರ್ಚು ಮಾಡಿ ಅದ್ದೂರಿಯಾಗಿ ದಸರಾ ಮಾಡಿಯೂ ಖರ್ಚು ಮಾಡಿದ್ದಕ್ಕಿಂತಲೂ ಹೆಚ್ಚು ಲಾಭ ಗಳಿಸಬಹುದು ಎನ್ನುವ ವಿಶ್ವಾಸ ಹೋಟೆಲ್ ಮಾಲೀಕರುಗಳಿಗೂ ಇದೆ. ಅಂದ ಮೇಲೆ ಸರ್ಕಾರ ಕೂಡಾ ಎಷ್ಟೇ ಹಣ ಖರ್ಚು ಮಾಡಿದರೂ ಅದಕ್ಕಿಂತಲೂ ಹೆಚ್ಚು ಲಾಭ ಸರ್ಕಾರಕ್ಕೆ ಮರಳಿ ಬಂದೇ ಬರುತ್ತದೆ ಎನ್ನುವುದು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಹಾಗೆ ಬಂದ ಲಾಭವನ್ನು ಸಂಕಷ್ಟದಲ್ಲಿರುವ ರೈತರ ಕಲ್ಯಾಣಕ್ಕೇ ಬಳಸಿಕೊಳ್ಳಬಹುದು. ಆದ್ದರಿಂದ ಹೆಚ್ಚು ಬಂಡವಾಳ ಹಾಕಿ ಹೆಚ್ಚು ಲಾಭ ತೆಗೆಯಬಹುದಾದ ಈ ಸಂದರ್ಭದಲ್ಲೂ ಅದ್ದೂರಿತನಕ್ಕೆ ಕಡಿವಾಣ ಹಾಕಿ ಹಣ ಉಳಿಸಬೇಕೆನ್ನುವುದು ಮೂರ್ಖತನದ ವಾದವೇ ಸರಿ.
ಹಾಗೆ ನೋಡಿದರೆ ಕೇವಲ ದಸರಾ ವಸ್ತು ಪ್ರದರ್ಶನ ಟೆಂಡರ್ ಒಂದರಿಂದಲೇ ಸುಮಾರು 8-9 ಕೋಟಿ ರೂ.ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ದಸರಾ ಸಂದರ್ಭವೊಂದರಲ್ಲೇ ಸರ್ಕಾರದ ಆಡಳಿತಕ್ಕೊಳಪಡುವ ಚಾಮುಂಡೇಶ್ವರಿ ದೇವಾಲಯದದಿಂದ ಹಲವಾರು ಕೋಟಿ ರೂ. ಆದಾಯ ದೊರೆಯುತ್ತದೆ. ಇನ್ನು ಆಹಾರ ಮೇಳ, ಫಲ ಪುಷ್ಪ ಪ್ರದರ್ಶನ ಮುಂತಾದ ಹಲವಾರು ಕಾರ್ಯಕ್ರಮಗಳ ಪ್ರವೇಶ ಟಿಕೆಟ್ ಮೂಲಕ ಹಣದ ಹೊಳೆಯೇ ಹರಿಯುತ್ತದೆ.
ಆಷಾಢ ಮಾಸದ ನಾಲ್ಕು ಶುಕ್ರವಾರಗಳಂದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮೈಸೂರಿನ ಸಾರ್ವಜನಿಕರು ಪ್ರಸಾದ ವಿತರಣೆಗಾಗಿ ಮಾಡುವ ಖರ್ಚೇ ಕೋಟಿ ಮೀರುತ್ತದೆ. ಹಾಗಿರುವಾಗ ಸ್ಥಳೀಯ ವ್ಯಾಪಾರಿಗಳಿಂದ ಹಿಡಿದು ಅಕ್ಕ ಪಕ್ಕದ ರಾಜ್ಯಗಳ ವ್ಯಾಪಾರಿಗಳಿಗೆ, ಆಟೋ ಡ್ರೈವರ್ಗಳಿಂದ ಹಿಡಿದು ಟಾಂಗಾ ವಾಲಾಗಳವರೆಗೆ, ಕಡಲೆಕಾಯಿ ಮಾರುವವರಿಂದ ಹಿಡಿದು ಮೈಸೂರು ರೇಷ್ಮೆ ಸೀರೆ ಮಾರುವವರವರೆಗೆ, ಚುರುಮುರಿ ಅಂಗಡಿಯವನಿಂದ ಹಿಡಿದು ದೊಡ್ಡ ಹೋಟೆಲ್ ಮಾಲೀಕರವರೆಗೆ ಪ್ರತಿಯೊಬ್ಬರಿಗೂ ಲಾಭ ಮಾಡಿಕೊಡುವ ವಿಶ್ವ ವಿಖ್ಯಾತ ದಸರಾ ಆಚರಣೆಗೆ ಅನುದಾನ ಕಡಿತಗೊಳಿಸಿ ಎನ್ನುವ ಸಲಹೆಯೇ ಬಾಲಿಶ ಎಂದೆನಿಸದಿರದು. ಇದಿಷ್ಟೇ ಅಲ್ಲದೆ ಮೈಸೂರು ದಸರಾ ಎಂದರೆ ಇಡೀ ಜಗತ್ತಿನ ಗಮನ ಸೆಳೆಯುವ, ನಮ್ಮ ನಾಡಿನ ಇತಿಹಾಸ, ಕಲೆ, ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ, ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ರಮವೂ ಹೌದು. ಕೃಷಿ ದಸರಾ, ಯುವ ದಸರಾ, ಮಕ್ಕಳ ದಸರಾ, ಆಹಾರ ಮೇಳ ಮುಂತಾದ ಉಪ ಸಮಿತಿಗಳ ಮೂಲಕ ಎಲ್ಲ ವರ್ಗದ ಜನರಿಗೆ ವಿವಿಧ ಮಾಹಿತಿ ಒದಗಿಸುವ, ತಿಳುವಳಿಕೆ ನೀಡುವ ಹಾಗೂ ವಿವಿಧ ಸ್ಪರ್ಧೆಗಳ ಮೂಲಕ ಪ್ರೋತ್ಸಾಹ ನೀಡುವ ರಾಜ್ಯ ಮಟ್ಟದ ಕಾರ್ಯಕ್ರಮವೂ ಹೌದು. ವಸ್ತು ಪ್ರದರ್ಶನ ಮಳಿಗೆಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ನಾಡಿನ ಜನರಿಗೆ ತಿಳಿಸುವ ಸರ್ಕಾರೀ ಕಾರ್ಯಕ್ರಮವೂ ಹೌದು.
ದಸರಾ ಸಮಯದಲ್ಲಿ ಕೇವಲ ಮೈಸೂರಷ್ಟೇ ಅಲ್ಲದೆ ಕೊಡಗು, ಚಾಮರಾಜ ನಗರ, ಮಂಡ್ಯ, ಹಾಸನ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಎಲ್ಲಾ ಪ್ರವಾಸೀ ತಾಣಗಳೂ ಪ್ರವಾಸಿಗರಿಂದ ತುಂಬಿ ತುಳುಕುತ್ತವೆ. ಭಾರತದ ಅತೀ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಸ್ಥಳಗಳಲ್ಲೊಂದಾದ ಮೈಸೂರು ಕೇವಲ ಅರಮನೆಯೊಂದೇ ಅಲ್ಲದೆ ಸುತ್ತ ಮುತ್ತಲೂ ಹಲವಾರು ಐತಿಹಾಸಿಕ ಸ್ಥಳಗಳನ್ನೊಳಗೊಂಡಿದೆ. ಶ್ರೇಷ್ಠ ಇತಿಹಾಸ ಹೊಂದಿರುವ ಮೈಸೂರಿಗೆ ದಸರಾ ಸಂದರ್ಭದಲ್ಲಿ ಭೇಟಿ ಕೊಡಬಹುದಾದ ಪ್ರವಾಸಿಗರಿಂದ ಸ್ಥಳೀಯರಿಗೆ ಸಾಕಷ್ಟು ಅನುಕೂಲಗಳಿವೆ. ಅಲ್ಲಿನ ಹಲವಾರು ವ್ಯಾಪಾರಿಗಳಿಗೆ ದಸರಾ ಸಂದರ್ಭದಲ್ಲಿ ಮಾತ್ರ ಲಾಭ, ಉಳಿದಂತೆ ಅಲ್ಲಿಂದೆಲ್ಲಿಗೆ ಎನ್ನುವ ಪರಿಸ್ಥಿತಿಯಿದೆ. ಸರಳ ದಸರಾ ಎಂದು ಪ್ರಚಾರ ಮಾಡಿಬಿಟ್ಟರೆ ಅಂತಹಾ ವ್ಯಾಪಾರಿಗಳು ನಷ್ಟ ಅನುಭವಿಸುತ್ತಾರೆ ಮತ್ತು ವರ್ಷದವರೆಗೂ ಚೇತರಿಸಿಕೊಳ್ಳುವುದು ಕೂಡಾ ತುಂಬಾ ಕಷ್ಟವಾಗುತ್ತದೆ.
ಆದರೂ ಇಲ್ಲಿ ನಾವು ನಮ್ಮ ಅನಿಸಿಕೆಯನ್ನು ಮಾತ್ರ ಹೇಳಿದರೆ ತಪ್ಪಾಗುತ್ತದೆ ಎನ್ನುವ ಕಾರಣಕ್ಕೆ ಸ್ಥಳೀಯರನ್ನೇ ಸಂಪರ್ಕಿಸಿ ಅಭಿಪ್ರಾಯ ಪಡೆದಾಗ ಅವರಿಂದ ಬಂದ ಅನಿಸಿಕೆಗಳೂ ಭಿನ್ನವಾಗೇನೂ ಇರಲಿಲ್ಲ.
“ನಮ್ಮ ನಾಡ ಹಬ್ಬವಾದ ದಸರಾಕ್ಕೆ ಅದರದ್ದೇ ಆದಂತಹಾ ವೈಶಿಷ್ಟ್ಯವಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಎಂದೇ ಹೆಸರುವಾಸಿಯಾಗಿರುವ ಮೈಸೂರು ದಸರಾವನ್ನು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಖ್ಯಾತಿಗೆ ತಕ್ಕಂತೆಯೇ ನಮ್ಮ ನಾಡಿನ ಪರಂಪರೆಯನ್ನು ಎತ್ತಿ ಹಿಡಿಯುವಂತೆ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಹೋಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸುವ ಚಾಮುಂಡೇಶ್ವರಿ ಬ್ಲಾಕ್ ಬಿಜೆಪಿ ಅಧ್ಯಕ್ಷರಾಗಿರುವ ಅರುಣ್ ಕುಮಾರ್ ಗೌಡ ಅವರು “ದಸರಾ ಅನುದಾನದಲ್ಲಿ ಒಂದೆರಡು ಕೋಟಿ ರೂ.ಗಳನ್ನು ಉಳಿಸಿದರೆ ನಮ್ಮ ರಾಜ್ಯದ ಎಷ್ಟು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ?” ಎನ್ನುವ ಪ್ರಶ್ನೆಯನ್ನೂ ಮುಂದಿಡುತ್ತಾರೆ.
“ತೀವ್ರ ಬರ ಪರಿಸ್ಥಿತಿ ಇರುವಾಗ ದಸರಾ ಹಬ್ಬವನ್ನು ರಾಜರುಗಳೇ ಸರಳವಾಗಿ ಆಚರಿಸಿದ ಉದಾಹರಣೆಯಿದೆ. ಆದರೆ ಈ ಬಾರಿ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ. ನಾಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರೆ ಇಲ್ಲಿಗೆ ದೇಶ ವಿದೇಶಗಳ ಪ್ರವಾಸಿಗರು ಹೆಚ್ಚು ಆಗಮಿಸುತ್ತಾರೆ. ಈ ಬಾರಿ ಹೇಳಿಕೊಳ್ಳುವಂತಹಾ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ಮೈಸೂರು ದಸರಾವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಬೇಕು” ಎನ್ನುವುದು ಕಾಂಗ್ರೆಸ್ ಮುಖಂಡ ಚಂದ್ರು ಅವರ ಅಭಿಪ್ರಾಯ.
“ಸಂಪ್ರದಾಯ ಉಳಿಸಿಕೊಳ್ಳುವ ಸಲುವಾಗಿ ಸಾಲ ಮಾಡಿಯಾದರೂ ಹಬ್ಬ ಮಾಡುವ ಸಂಸ್ಕೃತಿ ನಮ್ಮದು. ಆದ್ದರಿಂದ ದಸರಾ ಅನುದಾನದಲ್ಲಿ ಸರ್ಕಾರ ಹಣ ಉಳಿಸಲು ಹೋಗಬಾರದು. ಹಾಗೊಂದು ವೇಳೆ ಹಣ ಉಳಿಸಲೇ ಬೇಕಿದ್ದರೆ ನಮ್ಮ ರಾಜ್ಯದ ರಾಜಕಾರಣಿಗಳು, ಅಧಿಕಾರಿಗಳು ಆಗಾಗ ದೆಹಲಿಗೆ ಭೇಟಿಕೊಡುವುದನ್ನು ನಿಲ್ಲಿಸಿ ಟೆಲಿ ಕಾನ್ಫರೆನ್ಸ್ ಮೂಲಕ ವ್ಯವಹರಿಸಲಿ. ಆ ಮೂಲಕ ಹಣ ಉಳಿಸಲಿ” ಎನ್ನುವ ಅಭಿಪ್ರಾಯ ಸಣ್ಣ ಹೋಟೆಲ್ ಮಾಲೀಕರಾದ ಶಿವಕುಮಾರ್ ಅವರದ್ದು.
“ನಾನು ಚಿಕ್ಕವರಿದ್ದಾಗ ಅಪ್ಪನ ಹೆಗಲ ಮೇಲೆ ಕುಳಿತು ವೈಭವದ ಜಂಬೂ ಸವಾರಿ ನೋಡಿದ್ದೇನೆ. ನಾವೂ ಕೂಡಾ ನಮ್ಮ ಮಕ್ಕಳಿಗೆ ಅದೇ ರೀತಿ ದಸರಾ ಮೆರವಣಿಗೆಯನ್ನು ತೋರಿಸಿದ್ದೇವೆ. ದಸರಾ ಹಬ್ಬವನ್ನು ಯಾರೂ ಕೂಡಾ ಯಾವ ಕಾಲಕ್ಕೂ ಕಳೆಗುಂದಿಸಬಾರದು” ಎನ್ನುವುದು ತರಕಾರಿ ವ್ಯಾಪಾರ ಮಾಡುವ ಹಿರಿಯ ಸ್ಥಳೀಯ ಮಹಿಳೆಯೊಬ್ಬರ ಆಶಯ. ದಸರಾ ಸಂದರ್ಭದಲ್ಲಿ ಮೈಸೂರಿನಲ್ಲೇ ಉಳಿದುಕೊಂಡು ಆಹಾರ ಮಳಿಗೆಯೊಂದನ್ನು ನಡೆಸುವ ಉತ್ತರ ಕರ್ನಾಟಕದ ವ್ಯಕ್ತಿಯೊಬ್ಬರು ಹೇಳುವಂತೆ ಅವರು ಪ್ರತೀ ವರ್ಷ ಮೈಸೂರು ದಸರಾ ಚೆನ್ನಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರಂತೆ!
ಹೀಗೆ ಪ್ರತಿಯೊಬ್ಬರೂ ನಮ್ಮ ನಾಡ ಹಬ್ಬ ದಸರಾವನ್ನು ಅತ್ಯಂತ ಅದ್ದೂರಿಯಾಗಿಯೇ ಆಚರಿಸಬೇಕು ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಬರಹ ಏಕಪಕ್ಷೀಯವಾಗಿರಬಾರದೆನ್ನುವ ಕಾರಣಕ್ಕೆ ವಿವಿಧ ಸ್ಥರದ ಅದೆಷ್ಟೋ ಜನರನ್ನು ಸಂಪರ್ಕಿಸಿದರೂ ಅವರಲ್ಲಿ ಒಬ್ಬರೂ ಸರಳ ದಸರಾ ಬಗ್ಗೆ ಒಲವಿರುವವರಾಗಿರಲಿಲ್ಲ. ಹಾಗಾದರೆ ಪ್ರತೀ ಬಾರಿ ನಾಡ ಹಬ್ಬ ದಸರಾವನ್ನು ಸರಳವಾಗಿ ಆಚರಿಸಬೇಕು ಎಂದು ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಿರುವವರು ಯಾರು? ಅಷ್ಟಕ್ಕೂ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಕಾರ್ಯ ನಿರ್ವಹಿಸುವ ಸರ್ಕಾರವೆಂದರೆ ಅದು ಕೇವಲ ಹಣ ಹೂಡಿಕೆ ಮಾಡಿ ಲಾಭ ತೆಗೆಯುವ ವಾಣಿಜ್ಯ ಸಂಸ್ಥೆಯಲ್ಲ ಅಲ್ಲವೇ?
PC: http://www.mysoredasara.gov.in & http://www.kamat.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.