ಇತ್ತೀಚೆಗೆ ಭಾರತದಲ್ಲಿ ಸ್ಯಾಮ್ಸಂಗ್ ಮೊಬೈಲ್ ಕಂಪೆನಿಯು ವಿಶ್ವದ ಅತೀ ದೊಡ್ಡ ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಆರಂಭಿಸಿದೆ. ಈ ಮೊದಲು ಚೀನಾದಲ್ಲೂ ಸ್ಯಾಮ್ಸಂಗ್ ಮೊಬೈಲ್ ಕಂಪೆನಿಯು ಮೊಬೈಲ್ ಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸಿತ್ತು. ಆದರೆ ಅಲ್ಲಿನ ಆರ್ಥಿಕ ಬೆಳವಣಿಗೆಯಲ್ಲಿನ ವೇಗದ ಕುಸಿತ, ಗರಿಷ್ಟ ಮಿತಿಯನ್ನು ತಲುಪಿದ ಮಾರುಕಟ್ಟೆ ಮುಂತಾದವುಗಳು ಮೊಬೈಲು ಮತ್ತು ಎಲೆಕ್ಟ್ರಾನಿಕ್ ಉತ್ಪಾದನಾ ಸಂಸ್ಥೆಗಳು ಭಾರತದತ್ತ ಮುಖ ಮಾಡುವಂತೆ ಮಾಡಿವೆ. ಈ ಸಂಸ್ಥೆಗಳಿಗೆ ಭಾರತದ ಮಾರುಕಟ್ಟೆಯಲ್ಲಿ ವಿಸ್ತರಿಸಿಕೊಳ್ಳುವ ಅಗಾಧ ಅವಕಾಶಗಳಿವೆ. ಉದಾಹರಣೆಗೆ ಪ್ರಸ್ತುತ 30% ಭಾರತೀಯರು ಮಾತ್ರ ಮೊಬೈಲ್ ಫೋನ್ ಉಪಯೋಗಿಸುತ್ತಿದ್ದಾರೆ. ಇನ್ನೂ 70% ದಷ್ಟು ಭಾರತೀಯರಿಗೆ ಮೊಬೈಲು ಫೋನ್ ತಲುಪಿಸುವಷ್ಟು ಮಾರುಕಟ್ಟೆಯನ್ನು ವೃದ್ಧಿಪಡಿಸಿಕೊಳ್ಳುವ ಅವಕಾಶ ಕಂಪೆನಿಗಳಿಗೆ ಇದೆ.
ಆ್ಯಪಲ್ ಕಂಪೆನಿಯು ಈಗಾಗಲೇ ಭಾರತದಲ್ಲಿ ಮೊಬೈಲ್ ಉತ್ಪಾದನಾ ಘಟಕವನ್ನು ಆರಂಭಿಸಿದ್ದು ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಐ-ಫೋನ್ಗಳು ಭಾರತದಲ್ಲಿ ತಯಾರಾಗುತ್ತಿದೆ. ಪ್ರಸಿದ್ಧ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪೆನಿಯಾದ ಫಾಕ್ಸ್ ಕಾನ್ ಕೂಡಾ ಭಾರತದಲ್ಲಿ ತಯಾರಿಕಾ ಘಟಕವನ್ನು ಆರಂಭಿಸುವ ಒಪ್ಪಂದವನ್ನು ಮಾಡಿಕೊಂಡಿದೆ. ಏಸರ್ ಕಂಪೆನಿಯ ಪ್ರಮುಖ ಪೂರೈಕೆದಾರ ಸಂಸ್ಥೆಯಾದ ವಿಸ್ಟ್ರಾನ್ ಕಂಪೆನಿಯು ಕೂಡಾ ಉತ್ಪಾದನಾ ಘಟಕವನ್ನು ಭಾರತದಲ್ಲಿ ಆರಂಭಿಸುತ್ತಿದೆ. ಹೆಚ್ಚೇಕೆ ಚೀನಾದ ಮೊಬೈಲ್ ಫೋನ್ ಕಂಪೆನಿಗಳಾದ ವೀವೋ, ಲೆನೋವೋ, ಓಪ್ಪೋ, ಕ್ಸಿಯೋಮಿ (ರೆಡ್ಮಿ) ಗಳು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿವೆ.
ಕ್ಸಿಯೋಮಿಗೆ ಭಾರತದಲ್ಲಿ ಈಗಾಗಲೇ ಎರಡು ಉತ್ಪಾದನಾ ಘಟಕಗಳಿದ್ದು ಈ ವರ್ಷ ಇನ್ನೂ ಒಂದು ಘಟಕವನ್ನು ಆರಂಭಿಸುವುದಾಗಿ ಹೇಳಿದೆ. ವಿವೋ ಕಂಪೆನಿಯು 30,000 ಚದರ ಮೀಟರ್ ವಿಸ್ತಾರದ ಉತ್ಪಾದನಾ ಘಟಕವನ್ನು ತೆರೆದಿದೆ. ಇದು ಚೀನಾದ ಹೊರಗಡೆ ವಿವೋ ಕಂಪೆನಿಯು ಆರಂಭಿಸಿದ ಅತೀ ದೊಡ್ಡ ಘಟಕವಾಗಿದೆ. ಇಲೆಕ್ಟ್ರಾನಿಕ್ ಬಿಡಿ ಭಾಗಗಳ ತಯಾರಿಕಾ ಸಂಸ್ಥೆ ಚಿಪ್ ಮೇಕರ್ ಮೀಡಿಯಾಟೆಕ್ ತನ್ನ ಚೀನಾದ ಉತ್ಪಾದನೆಯನ್ನು ಕುಂಠಿತಗೊಳಿಸಿ ಭಾರತದತ್ತ ಹೊರಳುತ್ತಿದೆ. ಪ್ರಸಿದ್ಧ ಎಲೆಕ್ಟ್ರೋನಿಕ್ಸ್ ಸಂಸ್ಥೆಗಳಾದ ಸ್ಯಾಮ್ ಸಂಗ್, ಪ್ಯಾನಾಸೋನಿಕ್, ಸೋನಿ, ತೋಶೀಬಾ ಮೊದಲಾದ ಸಂಸ್ಥೆಗಳು ಚೀನಾದಿಂದ ಭಾರತದೆಡೆಗೆ ಮುಖ ಮಾಡಿ ನಿಂತಿವೆ.
ಭಾರತದಲ್ಲಿ ಉತ್ತಮಗೊಳ್ಳುತ್ತಿರುವ ರಸ್ತೆ, ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳು, ಸಡಿಲಗೊಂಡ ಕಾನೂನು ತೊಡಕುಗಳು, ಸರಕಾರದ ಉತ್ತೇಜಕಗಳು ಹಾಗೂ ಪ್ರೋತ್ಸಾಹ, ಕಡಿಮೆ ಬೆಲೆಗೆ ಸಿಗುತ್ತಿರುವ ಯಂತ್ರೋಪಕರಣಗಳು, ಮಿತ ಬಾಡಿಗೆಯಲ್ಲಿ ಲಭ್ಯವಿರುವ ಭೂಮಿ, ಚೀನಾಕ್ಕೆ ಹೋಲಿಸಿದರೆ ಕಡಿಮೆ ಸಂಬಳಕ್ಕೆ ಲಭ್ಯವಾಗುವ ಕುಶಲ ಶ್ರಮಿಕ ವರ್ಗ ಮುಂತಾದವುಗಳು ಉತ್ಪಾದನಾ ಕಂಪೆನಿಗಳನ್ನು ಭಾರತದೆಡೆಗೆ ಆಹ್ವಾನಿಸುತ್ತಿವೆ.
2014 ರಿಂದ ಕಾರ್ಯಾಚರಿಸುತ್ತಿರುವ ನರೆಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯ ಉತ್ತೇಜನಾ ಕಾರ್ಯಕ್ರಮಗಳು ಫಲ ಕೊಡಲು ಆರಂಭಿಸಿವೆ. ಉತ್ಪಾದನಾ ಘಟಕಗಳು ಚೀನಾದಿಂದ ಭಾರತದೆಡೆಗೆ ಮುಖ ಮಾಡುತ್ತಿದೆ. ಭಾರತವು ಜಗತ್ತಿನ ಪ್ರಮುಖ ಉತ್ಪಾದನಾ ದೇಶವಾಗಿ ಬೆಳೆಯುತ್ತಿದೆ. ಭಾರತದ ವಿದ್ಯಾವಂತ ಯುವ ಕುಶಲ ಶ್ರಮಿಕ ಜನತೆಯು ಇದರ ಭರಪೂರ ಲಾಭವನ್ನು ಪಡೆಯಲಿದೆ.
By incentivising local production, Govt’s #MakeInIndia programme is enhancing economic growth & job creation in the country, helping India become the centre of global manufacturing.https://t.co/A4aQIFczLf
— Piyush Goyal (@PiyushGoyal) August 7, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.