ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸ – ಗಣೇಶನ ಪರಿಸರ ಅಸ್ನೇಹಿ ವಿಗ್ರಹ ಹಾದಿಯಾಗದಿರಲಿ
ಧಾರವಾಡ : ಗಣೇಶ ಚತುರ್ಥಿಯ ಹೊಸ್ತಿಲಲ್ಲಿದ್ದೇವೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ‘ಪಿಓಪಿ’ ವಿಗ್ರಹ ಗಣಪ ಯಥಾ ಪ್ರಕಾರ ಅವಳಿ ನಗರಕ್ಕೆ ಈ ಬಾರಿಯೂ ಪಾದಾರ್ಪಣೆಗೈಯಲು ಸರ್ವಸನ್ನದ್ಧವಾಗಿರುವ ಕುರುಹು ಲಭ್ಯವಾಗಿದೆ. ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸಕ್ಕೆ ಹಬ್ಬ ಹಾದಿಯಾಗಬಾರದು ಎಂಬ ನೈತಿಕ ಎಚ್ಚರವೂ ಇಲ್ಲವಾಗುತ್ತಿದೆ ಎಂಬ ಕಳವಳ ಪರಿಸರ ಪ್ರೇಮಿಗಳದ್ದು.
ಕಳೆದ ಬಾರಿ ಗಣೇಶೋತ್ಸವದಲ್ಲಿ, ಈ ವರ್ಷ ಕೊನೆ ಎಂಬಂತೆ ಕೆಲವರ ಅನುಚಿತ ಪ್ರಭಾವಕ್ಕೆ ಬಾಗಿ, ಜಿಲ್ಲಾಡಳಿತ ‘ಪಿಓಪಿ’ ಗಣೇಶ ವಿಗ್ರಹಗಳ ಮಾರಾಟಕ್ಕೆ ಅನುವು ಮಾಡಿತು. ಕಲಾವಿದರಿಂದ ಮುಚ್ಚಳಿಕೆ ಸಹ ಬರೆಸಿಕೊಂಡಿತ್ತು.
ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್ – ಕೆಎಂಸಿ ಕಾಯ್ದೆ 1976 ರ ಅಡಿ ಕಾನೂನು ಕ್ರಮ ಜರುಗಿಸುವುದಾಗಿ ಪಾಲಿಕೆಯ ವಲಯ ಅಧಿಕಾರಿಗಳು ಕಲಾವಿದರಿಗೆ ನೋಟಿಸ್ ಜಾರಿಗೊಳಿಸಿದ್ದರು. ಈ ಬಾರಿಯೂ ‘ಕೆಲಸ’ ಮಾಡಿದ್ದಾರೆ. ಅವರ ‘ಕರ್ತವ್ಯ’ ಮುಗಿದಂತೆ ತೋರುತ್ತದೆ! ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ ಈ ನಿಟ್ಟಿನಲ್ಲಿ ಸ್ಪಷ್ಟವಾಗಬೇಕಿದೆ.
‘ಸ್ವಚ್ಛ ಭಾರತ ಅಭಿಯಾನ’ದ ಅಡಿ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಪ್ರಾವಧಾನ ಇದೆಯೇ? ಅಥವಾ ಈ ಹಬ್ಬವನ್ನು ಅಭಿಯಾನದಿಂದ ಅನುಕೂಲ ಸಿಂಧು ಎಂಬಂತೆ ಪ್ರತ್ಯೇಕಿಸಲಾಗಿದೆಯೇ? ಜಿಲ್ಲಾಡಳಿತ ಸ್ಪಷ್ಟ ಪಡಿಸಬೇಕಿದೆ.
ಹುಬ್ಬಳ್ಳಿ ಧಾರವಾಡದಲ್ಲಿ ಅಂದಾಜು 1,500 ಸಾರ್ವಜನಿಕ ಗಣೇಶ ಮೂರ್ತಿಗಳು ಹಾಗೂ ಸುಮಾರು 1.5 ಲಕ್ಷದಷ್ಟು ಖಾಸಗಿ ಗಣೇಶ ವಿಗ್ರಹಗಳು ಪ್ರತಿಷ್ಠಾಪನೆಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯ 70 ಕುಟುಂಬಗಳ 100 ಜನ ಕಲಾವಿದರು ಕಳೆದ 6 ತಿಂಗಳಿಂದ ದುಡಿದು, ಮಣ್ಣಿನ ಗಣೇಶ ವಿಗ್ರಹ ರೂಪಿಸಿದ್ದಾರೆ. ಪಶ್ಚಿಮ ಬಂಗಾಳದ ಕಲಾವಿದರೂ ಸಹ ಹುಲ್ಲಿನ ಸಿಂಬೆ (ದುರ್ಗಾ ಪೂಜೆಯ ಮೂರ್ತಿಗಳ ಮಾದರಿ) ಬಳಸಿ ಸುಮಾರು 500 ಸಾರ್ವಜನಿಕ ಗಣೇಶ ವಿಗ್ರಹ ತಯಾರಿಸಿದ್ದಾರೆ. ಶೇಕಡ 40ರಷ್ಟು ವಿಗ್ರಹ ಬೇಡಿಕೆ ಮಾತ್ರ ಪೂರೈಸುವ ಕ್ಷಮತೆ ಇವರು ಹೊಂದಿದ್ದಾರೆ. ಬಾಕಿ ಶೇ.60ರಷ್ಟು ಗಣೇಶ ವಿಗ್ರಹಗಳ ಬೇಡಿಕೆ ಪೂರೈಕೆಯಾಗುವುದು ಯಾವ ರೀತಿ? ಲೆಕ್ಕಾಚಾರ ಮಗುಮ್ಮಾಗಿದೆ.
ಹಿರಿಯ ಕಲಾವಿದರ ಆರೋಪದಲ್ಲಿ ಹುರುಳಿದೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ‘ಪಿಓಪಿ’ ಸೇರಿದಂತೆ, ‘ಶೇಡೂ ಮಣ್ಣು’ ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ವಿಗ್ರಹಗಳ ತಯಾರಿಸುವಿಕೆ, ಸಂಗ್ರಹಿಸುವಿಕೆ ಮತ್ತು ಮಾರಾಟದ ಬಗ್ಗೆ ಸ್ಪಷ್ಟ ನಿಲುವು ತಾಳುತ್ತಿಲ್ಲ. ಪರಿಸರ ಸ್ನೇಹಿ ಕಲಾವಿದರಿಗೇ ನೊಟೀಸ್ ಹಂಚುವುದರಲ್ಲಿ ಪಾಲಿಕೆ ಉಮ್ಮೇದಿ ಮೆರೆದಿದೆ!
ಕಳೆದ ಬಾರಿ ಜಿಲ್ಲಾಧಿಕಾರಿ (ಡಾ.ಎಸ್.ಬಿ. ಬೊಮ್ಮನಹಳ್ಳಿ) ಅಧ್ಯಕ್ಷತೆಯ ಸಭೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪತಿ ತಯಾರಿಸುತ್ತಿರುವ ಕಲಾವಿದರು ಅಲವತ್ತುಕೊಂಡಿದ್ದರು. ಮಣ್ಣು ಸಂಗ್ರಹಿಸಲು ಒಂದು ನಿಗದಿತ ಜಾಗೆ. ವಿಗ್ರಹ ತಯಾರಿಸಲು, ಜೋಡಿಸಿಡಲು ಶೆಡ್ ನಿರ್ಮಿಸಿಕೊಳ್ಳಲು ವ್ಯವಸ್ಥೆ. ಪ್ರಾಮಾಣಿಕ ಕಾಳಜಿ ಇರುವ ಕಲಾವಿದರಿಗೆ ಪರಿಸರ ಸ್ನೇಹಿ ಬಣ್ಣಗಳ ತಯಾರಿಕೆ, ಬಳಕೆ ಬಗ್ಗೆ ಸೂಕ್ತ ತರಬೇತಿ. ಪರಿಸರ ಸ್ನೇಹಿ ಮೂರ್ತಿ ತಯಾರಿಸುವ ಕಲಾವಿದರ ಪಟ್ಟಿ ತಯಾರಿಸಿ, ಸಂಬಂಧಿತ ಇಲಾಖೆಯಿಂದ ಸೂಕ್ತ ಪರಾಮರ್ಶೆ ನಡೆಸಿ ಮಾನ್ಯತಾ ಪತ್ರ ಒದಗಿಸುವುದು. ಪಿಓಪಿ, ಶೇಡೂ ಮಣ್ಣು ಮತ್ತು ರಾಸಾಯನಿಕ ಬಣ್ಣ ಲೇಪಿತ ಮೂರ್ತಿಗಳ ಮಾರಾಟದ ಕಟ್ಟುನಿಟ್ಟಿನ ನಿಷೇಧದ ಕುರಿತು ಪಕ್ಕಾ ಭರವಸೆ. ಕಾರಣ, ತೀರ ಅಗ್ಗದ ದರದಲ್ಲಿ ಗಣೇಶ ವಿಗ್ರಹಗಳು ಕೊನೆ ಕ್ಷಣದಲ್ಲಿ ಲಭ್ಯವಾದರೂ ಈ ಕಲಾವಿದರ ಅರ್ಧ ವಾರ್ಷಿಕ ದುಡಿಮೆ ಹಾಳು ಮತ್ತು ಮಾರಾಟವಾಗದೇ ವಿಗ್ರಹಗಳು ಉಳಿದು ಬಿಡುವ ಸಾಧ್ಯತೆ. ಕಳೆದ ಬಾರಿ, 50 ರೂಪಾಯಿಗೂ ಮಣ್ಣಿನ ವಿಗ್ರಹ ಅನಿವಾರ್ಯವಾಗಿ ಮಾರಿದ ಉದಾಹರಣೆಗಳಿವೆ.
ಅಸೆಂಬಲ್ಡ್ ಗಣಪ!
ಈ ಬಾರಿ ‘ನವ ಕಲಾವಿದರು’ ಹೊಸ ದಾರಿ ತುಳಿದಿದ್ದಾರೆ. ಈಗಾಗಲೇ ಕೆಲವರು ಅವಳಿ ನಗರ, ಹೊರವಲಯದಲ್ಲಿ ಪಿಓಪಿ ಮತ್ತು ಶೇಡೂ ಮಣ್ಣಿನ ವಿವಿಧ ಗಾತ್ರದ ಗಣೇಶ ವಿಗ್ರಹಗಳ ಪ್ರತ್ಯೇಕ ಅವಯವ ಸಂಗ್ರಹಿಸಿಕೊಂಡು, ಜೋಡಿಸುವಲ್ಲಿ ನಿರತರಾಗಿದ್ದಾರೆ! ಮತ್ತೆ ಕೆಲವರು ಬಿಳಿ ಬಣ್ಣದ ವಿಗ್ರಹ ಸಂಗ್ರಹಿಸಿಕೊಂಡು ಬಣ್ಣ ಬಳಿದು ಇದು ‘ಪರಿಸರ ಸ್ನೇಹಿ’ ವಿಗ್ರಹ ಎಂದು ಬಿಂಬಿಸಲು ಹೊರಟಿದ್ದಾರೆ. ಅಂತಿಮ ಕ್ಷಣದ ಕಲಾವಿದರು, ಹೇಗಾದರೂ ಮಾಡಿ ಅಲ್ಲಲ್ಲಿ ಊರ ಹೊರಗೆ, ತಾಲೂಕುಗಳಲ್ಲಿ ಹಾಕಿಕೊಂಡಿರುವ ‘ವರ್ಕ್ಶಾಪ್ ಶೆಡ್’ನಿಂದ ವಿಗ್ರಹಗಳನ್ನು ಜಿಲ್ಲೆಯ ಗಡಿ ದಾಟಿಸಲು ಹೊಂಚು ಹಾಕಿ ಕಾಯ್ದಿದ್ದಾರೆ.
‘ವಿಕ್ರಯ-ದಲಾಲಿ’
ವಿಗ್ರಹ ಮಾರಾಟಗಾರರ ಪೈಕಿ ಕೆಲವರು ಎಲ್ಲ ಇಲಾಖೆಗಳಿಗಿಂತ ನೂರು ಹೆಜ್ಜೆ ಮುಂದಿದ್ದಾರೆ! ಈ ಬಾರಿ ಅವರು ಈ ವರೆಗೆ ಟೆಂಟ್ ಹಾಕಿಸಿಲ್ಲ. ಅಂಗಡಿ ಬಾಡಿಗೆಗೆ ಪಡೆದಿಲ್ಲ. ವಿದ್ಯುತ್ ಅಲಂಕಾರ ಮಾಡಿಸಿಲ್ಲ. ಗಣೇಶ ವಿಗ್ರಹ ಮಾದರಿಗಳನ್ನು ಅಲಂಕರಿಸಿ, ‘ಅಡ್ವಾನ್ಸ್ಡ್ ಬುಕಿಂಗ್’ಗಾಗಿ ರಿಸೀಟ್ ಬುಕ್ ಹಿಡಿದು ನಿಂತಿಲ್ಲ. ‘ವಾಟ್ಸ್ ಅಪ್ ಆಪ್’ ಮೂಲಕ ನೂರಾರು ವಿಗ್ರಹಗಳನ್ನು ಸಾರ್ವಜನಿಕ ಗಣೇಶೋತ್ಸವ ಮಂಡಳಿ, ಯುವಕ ಮಂಡಳಿ ಹಾಗೂ ಖಾಸಗಿಯವರಿಗೆ ತೋರಿಸುತ್ತಿದ್ದಾರೆ. ಅವರದ್ದೀಗ ಅಕ್ಷರಶಃ ‘ಮೊಬೈಲ್ ಅಂಗಡಿ’!
5 ರಿಂದ 6 ಅಡಿಯ ಮಣ್ಣಿನ ವಿಗ್ರಹಕ್ಕೆ 10 ರಿಂದ 12 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಹಾಗಾಗಿ, ಕೇವಲ ಅರ್ಧ ದರಕ್ಕೆ ‘ಪಿಓಪಿ’ ಮತ್ತು ‘ಶೇಡೂ ಮಣ್ಣು’ ಗಣಪನನ್ನು ಮಾರಾಟ ಮಾಡಲು ’ಅಡ್ವಾನ್ಸ್’ ಪಡೆದು ಕೊನೆ ಕ್ಷಣದಲ್ಲಿ ಹೇಗಾದರೂ ಪೂರೈಸುವ ಭರವಸೆ ನೀಡುತ್ತಿದ್ದಾರೆ ಈ ‘ಮಧ್ಯವರ್ತಿಗಳು’.
ಪರಿಣಾಮ, ಸ್ಥಳೀಯ ಕಲಾವಿದರು 12 ರಿಂದ 15 ಸಾವಿರ ರೂಪಾಯಿ ಬೆಲೆಯ ವಿಗ್ರಹಗಳಿಗೆ, 500 ರಿಂದ 1000 ರೂಪಾಯಿ ಮುಂಗಡ ಪಾವತಿಸಿಕೊಂಡು ಬೃಹದ್ ಗಾತ್ರದ ಗಣೇಶ ವಿಗ್ರಹ ತಯಾರಿಸಿದ್ದಾರೆ. ಈಗ ಅವುಗಳಿಗೆ ಅಂತಿಮ ಸ್ಪರ್ಷ ಸಹ ನೀಡುತ್ತಿದ್ದಾರೆ. ಯುವಕ ಮಂಡಳದ ಪದಾಧಿಕಾರಿಗಳು ಆಗಮಿಸಿ, ‘ನಮ್ಮ ಆರ್ಡರ್ ಕ್ಯಾನ್ಸಲ್ ಮಾಡ್ರಿ.. ಓಣಿ ಹಿರ್ಯಾರು ಬ್ಯಾರೇ ಕಡೆ ಮೂರ್ತಿ ಬುಕ್ ಮಾಡ್ಯಾರ; ನೀವೇನೂ ಅಡ್ವಾನ್ಸ್ ವಾಪಸ್ ಕೊಡೋದು ಬ್ಯಾಡಾ..’ ಈಗ ಈ ಕಲಾವಿದರು ದಿಕ್ಕು ತೋಚದಂತಾಗಿದ್ದಾರೆ.
ಕಾಯ್ದೆ-ನಾಕಾಬಂದಿ ಜೊತೆ ಪಿಓಪಿ ವಿಗ್ರಹ ಮಾರಾಟ!
ನೇಚರ್ ರಿಸರ್ಚ್ ಸೆಂಟರ್ ಈ ನಿಟ್ಟಿನಲ್ಲಿ ಕ್ಷೇತ್ರಾಧ್ಯಯನ ಕೈಗೊಂಡಿದೆ. ಇಷ್ಟೆಲ್ಲ ಇಲಾಖೆಗಳು, ಜೊತೆಗೆ ಜಿಲ್ಲಾಡಳಿತ ಸೇರಿ ಇಷ್ಟು ಮಾಡಿದರೆ ಸಾಕು. ಸಾರ್ವಜನಿಕ ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಮಂಡಳಗಳು ಪಾಲಿಕೆ ವಲಯ ಕಚೇರಿ, ವ್ಯಾಪ್ತಿಯ ಪೊಲೀಸ್ ಠಾಣೆ ಪರವಾನಗಿ ಪಡೆಯುವುದು ಕಡ್ಡಾಯ. ಜೊತೆಗೆ ಗಣೇಶ ಮಂಟಪಕ್ಕೆ ಹೆಸ್ಕಾಂನಿಂದ ತಾತ್ಕಾಲಿಕ ವಿದ್ಯುತ್ ಜೋಡಣೆ ಪಡೆದು, ಮೀಟರ್ ಕೂಡಿಸಿಕೊಳ್ಳುವುದೂ ಅನಿವಾರ್ಯ.
ಈ ಹಂತದಲ್ಲಿ, ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸ್ನೇಹಿ ವಿಗ್ರಹ ತಯಾರಕರ ಪಟ್ಟಿ ಅಥವಾ ತುರ್ತು ಮಾನ್ಯತೆ ಪತ್ರ ಒದಗಿಸುವ ಮೂಲಕ, ಈ ಕಲಾವಿದರಿಂದ ಮೂರ್ತಿ ಖರೀದಿಸುತ್ತಿರುವ ಬಗ್ಗೆ ಅಧಿಕೃತ ರಸೀದಿ ಮತ್ತು ಪತ್ರ ಗಜಾನನೋತ್ಸವ ಮಂಡಳಗಳು ಅರ್ಜಿಯೊಂದಿಗೆ ಹಾಜರುಪಡಿಸಿದಲ್ಲಿ ಮಾತ್ರ ಪರವಾನಗಿ ಅಥವಾ ನಿರಪೇಕ್ಷಣಾ ಪತ್ರ ಜಾರಿ ಮಾಡಬೇಕು ಅಥವಾ ಮೂರ್ತಿ ನಿಷೇಧಿತ ಹೂರಣದಿಂದ ತಯಾರಾಗಿಲ್ಲ ಎಂಬ ಬಗ್ಗೆ ತಜ್ಞ ಸಮಿತಿ ವರದಿ ಪಡೆದು ಒಪ್ಪಿಗೆ ಸೂಚಿಸಬೇಕು.
ಮಂಡಳಿಯವರು ವಿಫಲರಾದ ಪಕ್ಷದಲ್ಲಿ ಅನುಮತಿ ಖಂಡಿತ ನಿರಾಕರಿಸಬೇಕು. ದಂಡ ವಿಧಿಸಬೇಕು. ಜನಪ್ರತಿನಿಧಿಗಳು ಮೂಗು ತೂರಿಸಿದಲ್ಲಿ, ಅಂತಹವರ ಲಿಖಿತ ಶಿಫಾರಸು ಪತ್ರ ಕಡ್ಡಾಯಗೊಳಿಸಿ, ಸಾರ್ವಜನಿಕ ಮಾಹಿತಿಗೆ ಬಿಡುಗಡೆಗೊಳಿಸಬೇಕು. ಮನೆಗಳಲ್ಲಿ ಪ್ರತಿಷ್ಠಾಪನೆಗೆ ಪರಿಸರ ಸ್ನೇಹಿ ವಿಗ್ರಹ ಅನ್ಯಾನ್ಯ ಕಾರಣಗಳಿಂದ ಲಭ್ಯವಾಗದಿದ್ದರೆ, ಪರ್ಯಾಯವಾಗಿ ಪಿಓಪಿ ಮೂರ್ತಿ ಖರೀದಿಸಲು ಸಾಧ್ಯವಾಗದ ರೀತಿ ವ್ಯವಸ್ಥೆಯಾಗಬೇಕು. ಮೇಲಾಗಿ, ಸಾರ್ವಜನಿಕ ವಿಗ್ರಹ ವಿಸರ್ಜನೆಗೆ ಒಂದು ಬಾವಿ ಅಥವಾ ಕೆರೆ ಪಾಲಿಕೆ ನಿಶ್ಚಯಗೊಳಿಸಬೇಕು. ಪಟಾಕಿ, ಧ್ವನಿ ವರ್ಧಕಗಳ ಬಳಕೆ ಸಹ ಕಾನೂನಿನ್ವಯ ಹಿತವಾಗಿರುವಂತೆ ಮಿತಿಗೊಳಿಸಬೇಕು.
ದೇವರು, ಧರ್ಮದ ಹೆಸರಿನಲ್ಲಿ ಅನಗತ್ಯ ಆಚರಣೆಗಳಿಗೆ ಕಡಿವಾಣ ಈಗ ಅನಿವಾರ್ಯ. ಪರಿಸರ ಸ್ನೇಹಿ ಹಬ್ಬದ ಆಚರಣೆಗೆ ಆದ್ಯತೆ ಜೊತೆಗೆ ಪುರಸ್ಕಾರ ನೀಡುವಾಗ ಮಹಾಮಂಡಳಿ ಈ ಎಲ್ಲ ಅಂಶಗಳನ್ನು ಗಮನಿಸಬೇಕು. ಒಟ್ಟಾರೆ, ಎಲ್ಲ ವರ್ಗದ ಅರ್ಹ ಪ್ರಾಮಾಣಿಕ ಶ್ರಮಿಕರಿಗೆ ಹಬ್ಬದ ಲಾಭ ತಟ್ಟುವಂತಾಗಬೇಕು. ಮಧ್ಯವರ್ತಿಗಳು, ದಲ್ಲಾಳಿಗಳು, ಅಧಿಕಾರ ಕೇಂದ್ರಕ್ಕೆ ಹತ್ತಿರವಿರುವವರ ಜೇಬು ತುಂಬಿ, ದೇವರ ಹೆಸರಿನಲ್ಲಿ ಪರಿಸರ ಶೋಷಿಸುವ ಕೆಲಸಕ್ಕೆ ಹಬ್ಬ ಹಾದಿಯಾಗಬಾರದು ಎಂಬ ನೈತಿಕ ಎಚ್ಚರ ನಿರೂಪಿಸಬೇಕು.
ಅನಿಸಿಕೆ : ಹಬ್ಬ ಉಪದ್ರವವಲ್ಲ.
ಪರಿಸರ ಅಸ್ನೇಹಿ ವಿಗ್ರಹಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚುರ ಪಡಿಸಿ ಮಾರುವ ಹುನ್ನಾರ ಈ ಬಾರಿಯ ಹೊಸ ಅನ್ವೇಷಣೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗ ನಿಗಾವಹಿಸಬೇಕು. ಸಾರ್ವಜನಿಕರೂ ತಮ್ಮ ಸಾಮಾಜಿಕ ಹೊಣೆಗಾರಿಕೆ ಅಡಿ ಇಂಥವರ ಬಗ್ಗೆ ಸೂಕ್ತ ಮಾಹಿತಿ ಒದಗಿಸಬೇಕು. ಹಬ್ಬಗಳು ನಾಡಿನ ಶ್ರೀಮಂತಿಕೆಯ ಪ್ರತೀಕವಾಗಿ ಬಿಂಬಿತವಾಗಬೇಕು. ಉಪದ್ರವ ಎನಿಸಬಾರದು. ಈಗಲೇ ಎಲ್ಲ ಇಲಾಖೆಗಳು ಗಟ್ಟಿ ಸಂದೇಶ ರವಾನಿಸಲಿ.
– ಪಿ.ವಿ. ಹಿರೇಮಠ, ಕಾರ್ಯಾಧ್ಯಕ್ಷರು, ನೇಚರ್ ರಿಸರ್ಚ್ ಸೆಂಟರ್ (ರಿ), ಧಾರವಾಡ.
ಅನಿಸಿಕೆ : ಧರ್ಮ ಸೂಕ್ಷ್ಮತೆ ಅರಿಯೋಣ
ಗಣೇಶ ಹಬ್ಬದ ಆಚರಣೆಯ ಹಿಂದಿನ ವಿಶೇಷತೆ ಮತ್ತು ವೈಜ್ಞಾನಿಕತೆ ತಿಳಿಯುವುದು ನಮ್ಮ ಆದ್ಯತೆಯಾಗಲಿ. ಎಲ್ಲ ಹಂತದಲ್ಲಿ, ಪ್ರಾಣ ಪ್ರತಿಷ್ಠಾಪನೆಯಿಂದ ವಿಸರ್ಜನೆಯ ವರೆಗೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸುವ ಮನೋಸ್ಥಿತಿ ನಮ್ಮದಾಗಲಿ. ಕಾಯ್ದೆ ತಂದು ಧರ್ಮದ ಆಚರಣೆ ತಿದ್ದುವಷ್ಟು ಹಿಂದೂ ಧರ್ಮ ಕುಲಗೆಡುವುದು ನಾಗರಿಕ ಸಮಾಜಕ್ಕೆ ಶ್ರೇಯಸ್ಕರವಲ್ಲ.
– ಮುಕುಂದ ಮೈಗೂರ, ಕಾರ್ಯಾಧ್ಯಕ್ಷರು, ಕ್ರಿಯಾಶೀಲ ಗೆಳೆಯರು ಬಳಗ, ಧಾರವಾಡ.
ಅನಿಸಿಕೆ : ಅಕ್ರಮ-ಸಕ್ರಮವಲ್ಲ!
ಪರಿಸರ ಸ್ನೇಹಿ ಕಲಾವಿದರ ಸಂಘವನ್ನು ಧಾರವಾಡದ ಹಿರಿಯ ಕಲಾವಿದ ಕಾಳಪ್ಪ ಬಡಿಗೇರ ಅವರ ಗೌರವ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದ್ದೇವೆ. ಮಣ್ಣಿನ ವಿಗ್ರಹಗಳ ತಯಾರಿಕೆ ನಮ್ಮ ಅನ್ನದ ಮಾರ್ಗ. ಅನಗತ್ಯ ಒಳಸುರಿ ಹಾಗೂ ಹೊರಸುರಿಗಳ ದರ್ಬಾರಿನಲ್ಲಿ ತಯಾರಿಸಿ ನಷ್ಟ ಮಾಡಿಕೊಳ್ಳುವುದಕ್ಕಿಂತ, ಎಂಥಾದ್ದೋ ಒಂದು ವಿಗ್ರಹ ತಂದು, ಸಂತೆಯೊಳಗಿಟ್ಟು ಮಾರಿ, ಕಮಿಷನ್ ರೂಪದಲ್ಲಿ ಲಾಭ ಮಾಡಿಕೊಳ್ಳುವುದು ಯೋಗ್ಯ ಎಂಬ ಭಾವನೆ ಯುವ ಪೀಳಿಗೆಯ ಕಲಾವಿದರ ಮನಸ್ಸಿನಲ್ಲಿ ಬಲಿಯುವಂತೆ ವ್ಯವಸ್ಥೆ ರೂಪುಗೊಳ್ಳದಿರಲಿ ಎಂಬುದೇ ಪ್ರಾರ್ಥನೆ. ಅಕ್ರಮ ಯಾವತ್ತೂ ಸಕ್ರಮವಾಗಲು ಸಾಧ್ಯವಿಲ್ಲ.
– ಮಂಜುನಾಥ ಹಿರೇಮಠ, ಕಾರ್ಯಾಧ್ಯಕ್ಷರು, ಪರಿಸರ ಸ್ನೇಹಿ ಕಲಾವಿದರ ಸಂಘ, ಧಾರವಾಡ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.