ಕಳೆದ ಶೈಕ್ಷಣಿಕ ವರ್ಷದಲ್ಲಿ ಸೈನಿಕರನ್ನು ಅವಹೇಳನ ಮಾಡಿ ಅವರ ಸಾಹಸ ಹೋರಾಟಕ್ಕೆ ಮಸಿ ಬಳಿದ ಬರಗೂರು ರಾಮಚಂದ್ರಪ್ಪನವರ ಯುದ್ಧ ಎನ್ನುವ ಲೇಖನವನ್ನು ಮಂಗಳೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವನ್ನಾಗಿಸಿದ ಅವಾಂತರ ಪ್ರತಿಭಟನೆ ಹೋರಾಟಗಳಿಂದ ಪಠ್ಯವನ್ನು ಹಿಂಪಡೆಯುವುದರೊಂದಿಗೆ ಕೊನೆಗೊಂಡಿತ್ತು. ಹೀಗಿದ್ದರೂ ವಿಶ್ವವಿದ್ಯಾನಿಲಯದ ಪಠ್ಯ ಪುಸ್ತಕ ರಚನಾ ಸಮಿತಿ ಪಾಠ ಕಲಿತಂತಿಲ್ಲ. ಈ ವರ್ಷ ಮತ್ತೆ ಅಂತಹುದೇ ಇನ್ನೊಂದು ಪಠ್ಯವನ್ನು ಸಿದ್ಧ ಮಾಡಿ ಭಾರತೀಯ ಕೌಟುಂಬಿಕ ಜೀವನ ಮೌಲ್ಯಗಳಿಗೆ, ನೈತಿಕ ಬದುಕಿನ ಭಾವನೆಗಳಿಗೆ ಕೊಡಲಿ ಏಟು ಕೊಡಲು ಹೊರಟಿದೆ.
ನುಡಿ ನೂಪುರ ಎಂಬ ಹೆಸರಿನ ದ್ವಿತೀಯ ವರ್ಷದ ಬಿಕಾಂ ತರಗತಿಗಳಿಗೆ ಸಿದ್ಧಗೊಳಿಸಿದ ಪಠ್ಯ ಪುಸ್ತಕದಲ್ಲಿರುವ ಒಂದು ಕಥೆ ಎಂಥವರನ್ನೂ ಬೆಚ್ಚಿ ಬೀಳಿಸಬಹುದು. ಮಟ್ಟಾರು ವಿಠಲ ಹೆಗ್ಡೆ ಎನ್ನುವ ಕಥೆಗಾರರೊಬ್ಬರು ಸಾವಿರದ ಒಂಬೈನೂರ ಮೂವತ್ತ ಒಂಬತ್ತು(1939) ರಲ್ಲಿ ಬರೆದ “ಮಗುವಿನ ತಂದೆ” ಎಂಬ ಹೆಸರಿನ ಕಥೆಯನ್ನು ಈ ಪಠ್ಯ ಪುಸ್ತಕದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ಕಥೆಯ ಕಥಾವಸ್ತು ರತ್ನ ಎನ್ನುವ ವೈದ್ಯ ಪತ್ನಿ ಗೃಹಿಣಿಯೊಬ್ಬಳು ತನ್ನ ಪತಿಯಿಂದ ಶಾರೀರಿಕ ಸುಖವನ್ನು ಪಡೆದರೂ ಸಂತೃಪ್ತಳಾಗದೆ ಮನೆಯ ಸಮೀಪದಲ್ಲೇ ನದಿಯ ದಂಡೆಯಲ್ಲಿ ದೈಹಿಕವಾಗಿ ಕಟ್ಟುಮಸ್ತಾದ ಅಪರಿಚಿತನ ಅಂಗಸೌಷ್ಟವವನ್ನು ನೋಡಿ ಆತನೊಂದಿಗೆ ಅನೈತಿಕ ಸಂಬಂಧವನ್ನು ಆರಂಭಿಸಿ ಸುಖಿಸುತ್ತಾ ಗರ್ಭ ಧರಿಸಿ, ಆ ಮಗು ತನ್ನ ಗಂಡನದೇ ಅಥವಾ ನದಿ ದಂಡೆಯಲ್ಲಿ ತನ್ನೊಂದಿಗೆ ಸೇರುತ್ತಿದ್ದ ಆ ಅಪರಿಚಿತ ಯುವಕನದೇ ಎಂಬ ಸಂಶಯದಲ್ಲಿ, ಒಂದು ವೇಳೆ ಆ ಮಗು ಅನೈತಿಕ ಸಂಬಂಧದಿಂದ ಹುಟ್ಟಿದರೆ ಆತನ ದೈಹಿಕ ಚಹರೆಯನ್ನು ಹೋಲಬಹುದೆಂದು, ಇದರಿಂದ ಪತಿಗೆ ಸಂಶಯ ಬಂದೀತೆಂದು, ಜನ್ಮ ನೀಡುತ್ತಲೇ ಮಗುವನ್ನು ತ್ಯಜಿಸಿ ತನಗೆ ಗರ್ಭಪಾತ ಆಯಿತು ಎಂದು ಬೇರೆ ಊರಿಗೆ ವರ್ಗವಾಗಿದ್ದ ಪತಿಗೆ ಸುಳ್ಳು ಹೇಳಿ, ಗುಟ್ಟಾಗಿ ತನ್ನೊಂದಿಗೆ ಸಂಬಂಧವಿರಿಸಿಕೊಂಡಿದ್ದ ಯುವಕನ ಮನೆಯಲ್ಲಿ ಮಗುವನ್ನು ಸಾಕಿ ಕೊಳ್ಳುವಂತೆ ಮಾಡಿರುತ್ತಾಳೆ. ಕೆಲವು ದಿನಗಳ ನಂತರ ಆ ಮಗುವನ್ನು ನೋಡಿದಾಗ ಆ ಮಗು ತನ್ನ ಯೋಚನೆಯಂತೆ ಅಪರಿಚಿತ ವ್ಯಕ್ತಿಯ ದೈಹಿಕ ಚಹರೆಯನ್ನು ಹೋಲದೆ ಇದ್ದುದರಿಂದ ಅಯ್ಯೋ ! ಎಂದೆನಿಸಿ ಸತ್ಯವನ್ನು ನುಡಿಯಲಾಗದೇ ಆತಂಕದಲ್ಲಿರುವಾಗಲೇ ವೈದ್ಯನಾದ ಗಂಡನು ಒಂದು ಅನಾಥ ಮಗುವನ್ನು ತಂದು ನಾವು ಸಾಕಿಕೊಳ್ಳುವ ಎಂದು ತೋರಿಸಿದಾಗ, ಅದು ತನ್ನದೇ ಮಗುವಾಗಿದ್ದುದನ್ನು ಕಂಡು ಪತಿ ಎದುರು ನಡೆದ ಎಲ್ಲ ಘಟನೆಗಳನ್ನು ವಿವರಿಸಿ ಆತನ ಉದಾರತೆಯಿಂದ ಜತೆಗೆ ಜೀವನ ನಡೆಸುವ ಕಥಾವಸ್ತುವನ್ನು ಹೊಂದಿದೆ.
ಆದರೆ ಈ ಕಥೆಯು ಇಲ್ಲಿ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಸಂತೋಷಕ್ಕಾಗಿ ಓದುವ ಕಥೆಯಲ್ಲ. ಸಾವಿರಾರು ವಿದ್ಯಾರ್ಥಿಗಳು ಅದರಲ್ಲೂ ಹದಿ ವಯಸ್ಸಿನ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕದ ಕಥೆಯಿದು. ಆ ವಯಸ್ಸಿನ ವಿದ್ಯಾರ್ಥಿಗಳ ಮುಂದೆ ಅಧ್ಯಾಪಕರು ಈ ಕಥೆಯನ್ನು ವಿವರಿಸಬೇಕಿದೆ. ನೈತಿಕತೆಯ ಎಲ್ಲ ಚೌಕಟ್ಟುಗಳನ್ನು ದಾಟಿ ಈ ಕಥೆಯ ಸಾರವನ್ನು, ಆಶಯವನ್ನು ವಿದ್ಯಾರ್ಥಿಗಳಿಗೆ ಅಧ್ಯಾಪಕರು ಬೋಧಿಸಬೇಕಾಗಿದೆ.
ಕಥೆಯ ಭಾಷೆ ಹಾಗೂ ವಸ್ತು ಎರಡು ತರಗತಿಯ ಪಠ್ಯ ಬೋಧನೆಗೆ ಸೂಕ್ತವಾಗಿಲ್ಲ. ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಇಬ್ಬರೂ ಮುಜುಗರ, ಸಂಕೋಚದಿಂದಲೇ ಪಠ್ಯವನ್ನು ಓದಿ ವಿವರಿಸಬೇಕಾಗುತ್ತದೆ. ಅಶ್ಲೀಲತೆಯ ಕಾರಣಕ್ಕೆ ವಯಸ್ಕರು ಮಾತ್ರ ನೋಡಬಹುದಾಗಿದೆ ಎಂಬ ಪ್ರಮಾಣ ಪತ್ರ ಪಡೆದ ಸಿನಿಮಾದ ಹಾಗೆ ಕಥೆಯ ಭಾಷೆ ಸಡಿಲವಾಗಿದೆ. ನೈತಿಕ ನೆಲೆಗಟ್ಟು ಜಾರಿದ್ದನ್ನು ಹೇಳುವಾಗ ಕಥೆಯ ಭಾಷೆ ಹದ ತಪ್ಪಿದೆ. ಉದಾಹರಣೆಗೆ “ರತ್ನಾಳ ಗಂಡ ಆಗಾಗ ಇಡೀ ರಾತ್ರಿ ಹೊರಗೆ ಇರಬೇಕಾಗುತ್ತಿತ್ತು. ರತ್ನನಿಗೆ ತನ್ನ ಗಂಡನಿಂದ ದೊರೆವ ಪ್ರೇಮವು ಸಾಲದು. ಅವಳ ಆ ಪ್ರಾಯಕ್ಕೆ, ಆ ದೇಹಕ್ಕೆ ಏನೂ ಸಾಲದು. ಅವಳ ತಾರುಣ್ಯವು ಒಮ್ಮೊಮ್ಮೆ ಕೆರಳಿ ಹುಚ್ಚು ಹಿಡಿಸುತ್ತಿತ್ತು “. (ಪುಟ 61).
“ರತ್ನ ನೀರಿಗಿಳಿದಳು. ಸುಬ್ಬನ ದಪ್ಪ ಕೈಗಳು ರತ್ನನ ಬಡ ನಡುವನ್ನು ಹಿಡಿದುಕೊಂಡವು. ರತ್ನನಿಗೆ ಬಲ ಬಂತು. ಆವರೆಗೆ ಎಂದೂ ಬಾರದಿದ್ದ ಬಲ ಬಂತು. ಒಮ್ಮೆ ಕಿಲಕಿಲ ನಕ್ಕು ನಡುವೆ ನಗುತ್ತಾ ರತ್ನ ಸುಬ್ಬನಿಂದ ಈಜಾಟ ಕಲಿತಳು “. ( ಪುಟ 63).
ಇಂತಹ ಅನೇಕ ಸಾಲುಗಳು ತರಗತಿಯ ಬೋಧನೆಯ ಸಂದರ್ಭದಲ್ಲಿ ಉಂಟು ಮಾಡಬಹುದಾದ ಮುಜುಗರ, ನೈತಿಕ ತಿಳುವಳಿಕೆಯ ಸರಿ ತಪ್ಪುಗಳ ಕಲ್ಪನೆಗಳನ್ನು ಪಠ್ಯದ ಸಂಪಾದನಾ ಮಂಡಳಿ ಸಂಪೂರ್ಣವಾಗಿ ಮರೆತಂತಿದೆ. ಮಾತ್ರವಲ್ಲ ಅದಕ್ಕಿಂತಲೂ ದೊಡ್ಡ ಆಘಾತವೆಂದರೆ ಸಂಪಾದಕ ಮಂಡಳಿ ಕಥೆಯ ಕೊನೆಯಲ್ಲಿ ನೀಡಿದ ವಿಮರ್ಶಾತ್ಮಕ ಆಶಯದ ಮಾತುಗಳು. ಕಥೆಯ ಆಶಯ ಕೌಟುಂಬಿಕ ಚೌಕಟ್ಟಿನೊಳಗೆ ಪರಸ್ಪರ ನಂಬಿಕೆಯನ್ನು ಪತಿ – ಪತ್ನಿಯರು ಉಳಿಸಿಕೊಳ್ಳಬೇಕು ಎಂಬುದೋ, ಅನೈತಿಕವಾದ ಇಂಥ ನಡವಳಿಕೆಯಿಂದ ಕೌಟುಂಬಿಕ ಮೌಲ್ಯಗಳು ನಾಶವಾಗುತ್ತದೆ ಎಂಬ ಕಾಳಜಿಯನ್ನು ತಿಳಿಸುವುದು ಅಲ್ಲ. ಬದಲಿಗೆ “ಹಳೆಯ ರೀತಿಯ ವ್ಯಾಖ್ಯೆಗಳಿಗೆ ಸಿಗದ ಗಂಡು ಹೆಣ್ಣಿನ ಸಂಬಂಧದ ಚಿತ್ರಣದ ಜೊತೆ – ಜೊತೆಗೆ ಅಪರಿಚಿತನಿಂದ ಆದ ಗರ್ಭದಾನವನ್ನು ಒಬ್ಬ ವೈದ್ಯನಾಗಿ ಒಪ್ಪಿಕೊಳ್ಳುವ ಪ್ರಗತಿಪರ ಚಿಂತನೆ ಮತ್ತು ಆಧುನಿಕ ಮನೋಭಾವನೆಯನ್ನು ಲೇಖಕರು ಮನೋವೈಜ್ಞಾನಿಕವಾಗಿ ಚಿತ್ರಿಸಿದ್ದಾರೆ” ಎನ್ನುತ್ತಾರೆ. ಅಂದರೆ ಗಂಡನೊಬ್ಬ ತನ್ನ ಪ್ರಗತಿಶೀಲ ಚಿಂತನೆಯನ್ನು, ಆಧುನಿಕ ಮನೋಭಾವವನ್ನು ಪ್ರಕಟಿಸಲು ಹೆಂಡತಿಯ ಅನೈತಿಕ ಸಂಬಂಧವನ್ನು ಹಾಗೂ ಆ ಸಂಬಂಧದಿಂದ ಪಡೆದ ಸಂತಾನವನ್ನು ಒಪ್ಪಿಕೊಳ್ಳುವುದರಲ್ಲಿದೆ ಎಂದು ಹೇಳಲು ಹೊರಟಂತಿದೆ. ಆ ಮೂಲಕ ಪ್ರಗತಿಶೀಲ ಮನೋಭಾವದ ಪ್ರಕಟೀಕರಣಕ್ಕೆ ಅನೈತಿಕತೆಯ ಮುಖವಾಡವನ್ನು ತೊಡಿಸಲಾಗಿದೆ. ಇಷ್ಟೇ ಅಲ್ಲ ಮುಂದುವರಿದು ಸಂಪಾದಕ ಮಂಡಳಿ ಹೇಳುವ ಇನ್ನೊಂದು ಮಾತು ಹೀಗಿದೆ. ” ಈ ಕಥೆ ಪ್ರಸ್ತುತ ಸಮಾಜದಲ್ಲಿ ವಿವಾಹೋತ್ತರ ಸಂಬಂಧಗಳು ಬಹುಶಃ ಪುನರ್ ವಿಮರ್ಶೆಯ ಹಂತದಲ್ಲಿದೆಯೆ? ಎಂಬ ಜಿಜ್ಞಾಸೆಯನ್ನು ಓದುಗರಲ್ಲಿ ಮೂಡಿಸುತ್ತದೆ.” ಅಂದರೆ ವಿವಾಹೋತ್ತರ ಸಂಬಂಧಗಳು ಬದಲಾದ ಕಾಲಘಟ್ಟದ ಲಕ್ಷಣ. ಅದು ಅನೈತಿಕವಲ್ಲ, ನಿಷೇಧಿತವಲ್ಲ. ಬದಲಾಗಿ ಪುನರ್ ವಿಮರ್ಶೆಯ ಮೂಲಕ ವಿವಾಹೋತ್ತರ ಸಂಬಂಧಗಳನ್ನು ಮಾನ್ಯ ಮಾಡಬಹುದು ಎಂದು ಹೇಳುತ್ತಿದೆ.
ಕಾಲೇಜು ಓದಲು ಬಂದ ಹದಿವಯಸ್ಸಿನ ಮಕ್ಕಳಿಗೆ ಈ ಕಥೆಯನ್ನು ಬೋಧಿಸುವುದರ ಅಂತಿಮ ಉದ್ದೇಶ ವಿವಾಹೇತರ ಸಂಬಂಧಗಳಾಗಲೀ ಅದರ ಮೂಲಕ ಹೊಂದುವ ಸಂತಾನವಾಗಲಿ, ಅದನ್ನು ಅನೈತಿಕ ಎನ್ನಲಾಗದು ಎಂದು ಹೇಳಿ ಕೊಟ್ಟಂತಾಯಿತು. ಒಂದು ಕಡೆಯಿಂದ ಈಗಾಗಲೇ ಮನರಂಜನಾ ಮಾಧ್ಯಮಗಳಿಂದ, ಆಧುನಿಕತೆಯ ಹೆಸರಲ್ಲಿ, ವೈವಾಹಿಕ ಬದುಕಿನ ಮೌಲ್ಯಗಳೆಲ್ಲ ಕಡೆಗಣಿಸಲ್ಪಟ್ಟು, ‘ಲಿವಿಂಗ್ ಟುಗೆದರ್’ ಸಂಬಂಧಗಳು ಮತ್ತು ವಿವಾಹೇತರ ದೈಹಿಕ ಸಂಬಂಧಗಳು ಯುವ ಸಮಾಜವನ್ನು ದಾರಿ ತಪ್ಪಿಸುತ್ತಿರುವಾಗಲೆ, ವಿಶ್ವವಿದ್ಯಾನಿಲಯದ ಪಠ್ಯವೇ ನೇರವಾಗಿ ವಿದ್ಯಾರ್ಥಿಗಳಲ್ಲಿ ವಿವಾಹೇತರ ಸಂಬಂಧಗಳನ್ನು ಪ್ರಗತಿಪರತೆಯ, ಆಧುನಿಕತೆಯ ಮಾನದಂಡವೆಂಬ ಅಭಿಪ್ರಾಯವನ್ನು ಮೂಡಿಸಿದರೆ ಸಮಾಜ ಎಲ್ಲಿಗೆ ಹೋಗಿ ತಲುಪಬಹುದು ಎಂಬ ಯೋಚನೆಯನ್ನು ನಡೆಸಿದಂತಿಲ್ಲ. ಭಾರತೀಯ ಕೌಟುಂಬಿಕ ಜೀವನ ಕ್ರಮಗಳನ್ನು ವ್ಯವಸ್ಥಿತವಾಗಿ ಒಡೆದು, ದಾಂಪತ್ಯ ಜೀವನಕ್ಕೆ ನಿಷ್ಠೆಯನ್ನು ತೋರಲು ಬೇಕಾಗಿಲ್ಲ ಎಂಬ ಮನೋಭಾವವನ್ನು ಸಾರ್ವತ್ರಿಕಗಳಿಸುತ್ತಲೇ, ಕೌಟುಂಬಿಕ ವಿಘಟನೆಗೆ ಕಾರಣವಾಗುತ್ತಿರುವ ಸಂಚು ವಿಶ್ವವಿದ್ಯಾನಿಲಯದ ಪಠ್ಯವನ್ನು ಪ್ರವೇಶಿಸಿತೇ ? ಎಂಬ ಸಂಶಯ ಕಾಡಲಾರಂಭಿಸಿದೆ. ಕುಟುಂಬ ವ್ಯವಸ್ಥೆಯ ನಾಶದ ಸಂಚನ್ನು ಅಜೆಂಡಾವನ್ನಾಗಿಸಿದ ಶಕ್ತಿಗಳು ಸಾಂಸ್ಕೃತಿಕ ಚರ್ಚೆ, ಮುಕ್ತತೆ, ಸ್ವಾತಂತ್ರ್ಯದ ಹೆಸರಲ್ಲಿ ಯುವ ಮನಸ್ಸುಗಳನ್ನು ಕಲಕಲು ಹೊರಟಿದೆಯೇ? ಎಂಬ ಚರ್ಚೆ ಇಂದು ನಡೆಯಬೇಕಾಗಿದೆ.
ಕನ್ನಡ ಸಾಹಿತ್ಯ ಲೋಕ ಮಾಸ್ತಿ, ಪಂಜೆ, ಕುವೆಂಪು, ತೇಜಸ್ವಿ, ಬೆಸಗರಹಳ್ಳಿ ಮೊದಲಾದ ಶ್ರೇಷ್ಠ ಕಥೆಗಾರರನ್ನು ಹೊಂದಿಯೂ, ವಿದ್ಯಾರ್ಥಿಗಳು ಪ್ರಾತಿನಿಧಿಕವಾಗಿ ಓದುವ ಪಠ್ಯಪುಸ್ತಕದಲ್ಲಿ ಸಾರ್ವಕಾಲಿಕ ಮೌಲ್ಯಗಳ ಪ್ರತಿಪಾದನೆಯ ಕನ್ನಡದ ಮಾದರಿ ಶ್ರೇಷ್ಠ ಕಥೆಯೊಂದನ್ನು ಪಠ್ಯವಾಗಿರಿಸಿದರೆ, ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಕುತೂಹಲ, ಒಲವು ಬೆಳೆಯಲು ಕಾರಣವಾಗುತ್ತಿತ್ತು. ಇಂಥ ಪಠ್ಯಗಳನ್ನು ಓದಿದ ಮೇಲೆ ಕನ್ನಡ ಸಾಹಿತ್ಯ ಒಂದು ಒಳ್ಳೆಯ ಕಥೆಯ ಆಯ್ಕೆಗೆ ಅವಕಾಶವಿಲ್ಲದಷ್ಟು ಬರ ಪೀಡಿತವಾಗಿದೆಯೆ ? ಎಂಬ ಪ್ರಶ್ನೆಯನ್ನು ಮೂಡಿಸಿದರೆ ಅದಕ್ಕೆ ಸಂಪಾದನಾ ಮಂಡಳಿಯೇ ಹೊಣೆಯಲ್ಲವೆ ? ಇದಕ್ಕಿಂತ ಒಂದು ಉತ್ತಮ ಕಥೆಯನ್ನು ಪಠ್ಯದಲ್ಲಿ ಸೇರಿಸಿದ್ದರೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿಯೂ ಬೆಳೆಯುತ್ತಿತ್ತು. ಕೂಡಲೇ ಈ ಕತೆಯನ್ನು ಬದಲಿಸುವಂತೆ ಅದೆಷ್ಟು ಪ್ರಾಧ್ಯಾಪಕರು ಬಯಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.