ಉಪ್ಪುಂದ: ಮನುಷ್ಯನ ಸಂಘ ಜೀವನದೊಂದಿಗೆ ಅವನ ಸಂಸ್ಕೃತಿ ರೂಪುಗೊಂಡಿತು. ಅದರ ಜತೆಗೆ ಜನರ ನೋವು, ನಲಿವುಗಳ, ದುಃಖ- ದುಮ್ಮಾನಗಳ, ತಲ್ಲಣ, ಆತಂಕಗಳ ಅಭಿವ್ಯಕ್ತಿಗೆ ರಂಗಭೂಮಿ ಹುಟ್ಟಿಕೊಂಡಿತು.
ರಂಗಭೂಮಿ ಈಗ ಒಂದು ಉತ್ಕೃಷ್ಟ ಪ್ರದರ್ಶನ ಕಲೆಯಾಗಿ ಪರಿಪೂರ್ಣತೆ ಸಾಧಿಸಿದೆ. ಅದೀಗ ಮನೋರಂಜನೆಯ ಜತೆಗೆ ಸಮಾಜದ ತಪ್ಪುಗಳನ್ನು ತಿದ್ದುವ ಶಿಕ್ಷಣ ಮಾಧ್ಯಮವಾಗಿಯೂ ಕೆಲಸ ಮಾಡುತ್ತಿದೆ ಎಂದು ಕುಂದಾಪುರದ ಹಿರಿಯ ಪತ್ರಕರ್ತ ಜಾನ್ ಡಿ’ಸೋಜ ಹೇಳಿದರು.
ಉಪ್ಪುಂದದ ರಂಗಸ್ಥಳ, ಜೇಸಿಐ ಮತ್ತು ಬೈಂದೂರಿನ ಸುರಭಿ ಸಂಯುಕ್ತವಾಗಿ ಶುಕ್ರವಾರ ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾನವ ಹಕ್ಕು ಜನಜಾಗೃತಿ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಮಾತನಾಡಿ, ಸಮಾಜದಲ್ಲಿ ರಂಗಭೂಮಿಯಿಂದ ಸಾಮರಸ್ಯ ವೃದ್ಧಿಯಾಗುತ್ತದೆ. ರಂಗಭೂಮಿಯ ಒಡನಾಟ ಮಾನವನ ವ್ಯಕ್ತಿತ್ವ ವಿಕಸನಕ್ಕೆ ರಹದಾರಿ. ಹಾಗಾಗಿ ಸಾಮಾಜಿಕ ಸುಧಾರಣೆಗೆ ರಂಗಭೂಮಿ ಶ್ರೇಷ್ಠ ಮಾಧ್ಯಮ ಎಂದರು.
ಜೇಸಿಐ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಅಧ್ಯಕ್ಷತೆ ವಹಿಸಿದ್ದರು. ರಂಗಸ್ಥಳದ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ಸ್ವಾಗತಿಸಿ, ಪ್ರಸ್ತಾವನೆಗೈದರು. ಜೇಸಿಐ ಸ್ಥಾಪಕಾಧ್ಯಕ್ಷ ದಿವಾಕರ ಶೆಟ್ಟಿ, ಗ್ರಾ.ಪಂ ಸದಸ್ಯ ಯು. ಎ. ಮಂಜು ದೇವಾಡಿಗ, ಸುರಭಿಯ ಸಂಚಾಲಕ ಸುಧಾಕರ ಪಿ. ಬೈಂದೂರು ಶುಭ ಹಾರೈಸಿದರು. ಹಿರಿಯ ರಂಗಕಲಾವಿದ ಯು. ಎಚ್. ರಾಜರಾಮ ಭಟ್ರನ್ನು ಸನ್ಮಾನಿಸಲಾಯಿತು. ಗಣೇಶ ಉಪ್ಪುಂದ ಪರಿಚಯಿಸಿದರು. ಜೈರಾಜ್ ವಂದಿಸಿದರು.
ಅನಂತರ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್ನ ಕಲಾವಿದರು ’ಇವಾಳಜ್ಜಿಯೂ ಆದಮಜ್ಜನೂ’ ನಾಟಕ ಪ್ರದರ್ಶಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.