ಇತ್ತೀಚಿಗೆ ಸೋಶಿಯಲ್ ಮೀಡಿಯಾ ಉಪಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ಮಾದರಿಯ ಸ್ಮಾರ್ಟ್ ಫೋನ್ಗಳು, ಜಿಯೋ ಉಚಿತ ಇಂಟರ್ನೆಟ್ ಜನರನ್ನು ಸೋಶಿಯಲ್ ಮೀಡಿಯಾಗೆ ಹೆಚ್ಚು ಹತ್ತಿರವಾಗಿಸಿದೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಕೂಡ ಹೆಚ್ಚಾಗಿದೆ. ಒಂದು ವಾಟ್ಸ್ಯಾಪ್ ಗ್ರೂಪ್ನಲ್ಲಿ ಯಾವುದೊ ಒಂದು ಸುದ್ದಿ ಬಂತು, ಅದರ ಪೂರ್ವಾಪರ ವಿಚಾರಿಸದೆ ಅದನ್ನು ಇನ್ನು ಹತ್ತು ಗ್ರೂಪ್ಗಳಿಗೆ ಫಾರ್ವರ್ಡ್ ಮಾಡುವ ಸಂಸ್ಕೃತಿ ನಮ್ಮ ಜನರಲ್ಲಿ ಹೆಚ್ಚಾಗಿದೆ. ಇದರಿಂದ ಮುಂದೆ ಏನಾಗುತ್ತದೆ ಎಂದು ಕೂಡ ಜನರಿಗೆ ಗೊತ್ತಿಲ್ಲ. ಇನ್ನು ಕೆಲವರಿಗೆ ಇದು ನಿಜವೋ ಸುಳ್ಳೋ ಎಂದು ಕೂಡ ಗೊತ್ತಿಲ್ಲ. ಇದರ ಬಗ್ಗೆ ಇಲ್ಲಿ ಸ್ವಲ್ಪ ಬೆಳಕನ್ನು ಹಚ್ಚುತ್ತೇನೆ.
ಪ್ರತಿ ವರ್ಷ SSLC/PUC ಫಲಿತಾಂಶ ಬಂದಾಗ ವೈರಲ್ ಆಗುವ ಕಾಮನ್ ಮೆಸೇಜ್ ಏನೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಬ್ದುಲ್ ಕಲಾಂ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ SSLC ಮತ್ತು PUC ಯಲ್ಲಿ 60ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿ ವೇತನ ಕೊಡುತ್ತದೆ. ಇದಕ್ಕೆ ನೀವು ಈ ವೆಬ್ಸೈಟ್ನಲ್ಲಿ ಅಪ್ಲೈ ಮಾಡಿ ಎಂದು http://www.desw.gov.in/scholarship ವೆಬ್ಸೈಟ್ ಲಿಂಕ್ ಕೂಡ ಹಾಕಿ ಸಂದೇಶ ಕಳುಹಿಸುತ್ತಾರೆ. ಇದನ್ನು ನೋಡಿದ ಎಷ್ಟೋ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಹಾಯಧನ ಸಿಗುತ್ತದೆ ಎನ್ನುವ ಹುರುಪಿನಲ್ಲಿ ಸಂತೋಷದಿಂದ ಕುಣಿದಾಡುತ್ತಾರೆ. ಸೈಬರ್ಗೆ ಹೋಗಿ ಈ ವೆಬ್ಸೈಟ್ಗೆ ಹೋದಾಗ ಅವರಿಗೆ ತಿಳಿಯುತ್ತದೆ ಈ ಸಹಾಯಧನ ಕೇವಲ ನಿವೃತ್ತ ಸೈನಿಕರ ಮಕ್ಕಳಿಗೆ ಮಾತ್ರ ಎಂದು. ಇದನ್ನು ತಿಳಿದ ನಂತರ ಬಹಳಷ್ಟು ಪೋಷಕರು ಮತ್ತು ಮಕ್ಕಳು ನಿರಾಸೆಯಿಂದ ಖಿನ್ನತೆಗೆ ಒಳಗಾಗಿದ್ದಾರೆ. (ಸ್ವಂತ ಕಂಡಿದ್ದೇನೆ). ಸೋ ಈ ಸಂದೇಶ ಫಾರ್ವರ್ಡ್ ಮಾಡಿದ ಪುಣ್ಯಾತ್ಮ ಒಮ್ಮೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೈಟ್ ಪರಿಶೀಲಿಸಿದ್ದರೆ ಆತನಿಗೆ ಗೊತ್ತಾಗುತ್ತಿತ್ತು ಇದು ಎಲ್ಲಾ ವರ್ಗದ ಜನರಿಗೆ ಇಲ್ಲ ಕೇವಲ ಸೈನಿಕರ ಮಕ್ಕಳಿಗೆ ಮಾತ್ರ ಎಂದು. ಇದಕ್ಕೆ ತೆಗೆದುಕೊಳ್ಳುವ ಸಮಯ ಕೇವಲ ಎರಡು ನಿಮಿಷ. ಆದರೆ ಇತರರಿಗಿಂತ ಮೊದಲು ನಾನೇ ಎಲ್ಲರಿಗೆ ತಿಳಿಸಬೇಕು ಎನ್ನುವ ದುರಾಸೆಯಿಂದ ಅಥವಾ ಎಲ್ಲರಿಗೆ ಉಪಕಾರ ಆಗಲಿ ಎನ್ನುವ ಉದ್ಧೇಶದಿಂದ ಯಾವುದನ್ನೂ ಪರಿಶೀಲಿಸದೆ ಸೀದಾ ಕಳುಹಿಸಿದರೆ ತೊಂದರೆ ಆಗುತ್ತದೆ.
ಇನ್ನೊಂದು ಸಂದೇಶ ಬರುತ್ತದೆ ಜೀನ್ಸ್ ಮೇಲೆ ಟಿ-ಶರ್ಟ್ ಧರಿಸಿ ಮನೆಗೆ ಬರುತ್ತಾರೆ ಅವರು ಮಕ್ಕಳ ಕಳ್ಳರು ಎಂದು. ಜೊತೆಗೆ ಕೆಳಗೆ ಓರ್ವ ಐಪಿಎಸ್ ಅಧಿಕಾರಿಯ ಹೆಸರು ಕೂಡ. ಸ್ವಾಮಿ ಐಪಿಎಸ್ ಅಧಿಕಾರಿ ನಿಮ್ಮ ಕಿವಿಯಲ್ಲಿ ಬಂದು ಹೇಳಿದರಾ ? ನೋಡಪ್ಪಾ ಮಕ್ಕಳ ಕಳ್ಳರು ಜೀನ್ಸ್ ಹಾಕಿರ್ತಾರೆ ಅಂತ ? ಮಕ್ಕಳ ಕಳ್ಳರು ಯಾವ ರೀತಿಯ ವೇಷದಲ್ಲಿ ಕೂಡ ಇರುತ್ತಾರೆ. ಎಲ್ಲೋ ಒಂದು ಕಡೆ ಜೀನ್ಸ್ನಲ್ಲಿ ಬಂದರೆ ಇನ್ನೊಂದು ಕಡೆ ಮಡಿ ಉಟ್ಟು ಬರುತ್ತಾರೆ. ನಮ್ಮ ಜಾಗರೂಕತೆಯಲ್ಲಿ ನಾವು ಇರಬೇಕು. ಆದರೆ ಈ ಒಂದು ಸಂದೇಶದಿಂದ ನಾಳೆ ನೀವೇ ಜೀನ್ಸ್ ಹಾಕಿಕೊಂಡು ಎಲ್ಲಾದರೂ ಹೋದಾಗ ಜನರು ಹಿಡಿದು ಬಡಿಯದಿದ್ದರೆ ಸಾಕು.
ಇನ್ನೊಂದು ಇಂಟರೆಸ್ಟಿಂಗ್ ಸಂದೇಶ ನನಗೆ ಒಂದು ಗ್ರೂಪ್ನಲ್ಲಿ ಬಂದಿತ್ತು. ಈ ಮೇಲಿನ ಲಿಂಕ್ಗೆ ಕ್ಲಿಕ್ ಮಾಡಿದರೆ ನಿಮಗೆ ಫ್ರೀ ಅಮೆಜಾನ್ ಗಿಫ್ಟ್ ಸಿಗುತ್ತದೆ, ಆಪಲ್ ಐಫೋನ್ ಸಿಗುತ್ತದೆ ಎಂದು. ಕುತೂಹಲದಿಂದ ಆ ಲಿಂಕ್ ಮೇಲೆ ಕ್ಲಿಕ್ ಮಾಡಿದೆ. ತಕ್ಷಣ ನನ್ನ ಕಂಪ್ಯೂಟರ್ನಲ್ಲಿದ್ದ ಆ್ಯಂಟಿ-ವೈರಸ್ ಇದೊಂದು ಟ್ರೋಜನ್ ಮಲ್ವೇರ್, ನಿಮ್ಮ ಎಲ್ಲಾ ಮಾಹಿತಿಯನ್ನು ಕದಿಯುತ್ತದೆ ಎಂದು ಸವಿಸ್ತಾರವಾದ ಮಾಹಿತಿಯನ್ನು ಕೊಟ್ಟಿತು. ಏನೋ ನನ್ನ ಪುಣ್ಯ ವಾಟ್ಸ್ ಆಪ್ ವೆಬ್ ಓಪನ್ ಇದ್ದ ಕಾರಣ ಕಂಪ್ಯೂಟರ್ನಲ್ಲಿ ತೆರೆದು ನೋಡಿದ ಕಾರಣ ಈ ಸುದ್ದಿ ಗೊತ್ತಾಯ್ತು. ಎಲ್ಲಾದರೂ ಮೊಬೈಲ್ನಲ್ಲಿ ಓಪನ್ ಮಾಡಿದ್ದರೆ ಆ ವೈರಸ್ ನನ್ನ ಎಲ್ಲಾ ಪ್ರೈವೆಸಿಯ ಒನ್ ಟೂ ಕಾ ಫೋರ್ ಮಾಡುತ್ತಿತ್ತು.
ಒಟ್ಟಾರೆಯಾಗಿ ನಾನು ಹೇಳುವುದು ಇಷ್ಟೇ. ನಿಮಗೆ ಒಂದು ಸಂದೇಶ ಬಂದರೆ ಅದನ್ನು ಇನ್ನೊಂದು ಕಡೆ ಫಾರ್ವರ್ಡ್ ಮಾಡುವ ಮೊದಲು ಅದರ ನಿಜಾಂಶವನ್ನು ಪರಿಶೀಲಿಸಿ. ಅಲ್ಲಿ ಲಿಂಕ್ ಇದ್ದರೆ ಅದಕ್ಕೆ ಕ್ಲಿಕ್ ಮಾಡಿ ನೋಡಿ. ಕೆಲವೊಂದು ಫೇಕ್ ಲಿಂಕ್ ಇದ್ದಲ್ಲಿ ಅದನ್ನು ಗುರುತಿಸಿ ಉದಾ : 😍 See this now xxxe.xxuxe.com ಈ ರೀತಿಯ ಲಿಂಕ್ ಫೇಕ್ ಲಿಂಕ್ ಆಗಿರುತ್ತದೆ. ಒರಿಜಿನಲ್ ಮತ್ತು ಸೇಫ್ ಲಿಂಕ್ ಗುರುತಿಸುವ ಸುಲಭ ವಿಧಾನ ಎಂದರೆ ಲಿಂಕ್ ನಲ್ಲಿ https:// ಎಂದು ಇದ್ದರೆ ಕಣ್ಣು ಮುಚ್ಚಿ ತೆರೆಯಬಹುದು. ಏಕೆಂದರೆ ಸದ್ಯದ ಮಾಪಕದ ಪ್ರಕಾರ https:// ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆಮೇಲೆ ಲಿಂಕ್ನ ಕೊನೆಗೆ gov.in, nic.in ಇದ್ದಲ್ಲಿ ಇದು ಸರಕಾರೀ ವೆಬ್ಸೈಟ್ ಎಂದು ನಂಬಬಹುದು. ಇನ್ನು ಕೆಲವೊಂದು ಸ್ಪೆಲ್ಲಿಂಗ್ ಮೂಲಕ ಗಮನಿಸಬಹುದು. ಉದಾ : https://www.infosys.com/ ಪ್ರಸಿದ್ಧ ಇನ್ಫೋಸಿಸ್ ಕಂಪೆನಿಯ ಅಫೀಷಿಯಲ್ ವೆಬ್ಸೈಟ್ ಆದಲ್ಲಿ ಯಾರೋ ಒಬ್ಬ ಬುದ್ದಿವಂತ ಅಪರಾಧಿ http://www.infosis.com ಎನ್ನುವ ವೆಬ್ಸೈಟ್ ಓಪನ್ ಮಾಡಿ ಇನ್ಫೋಸಿಸ್ನಲ್ಲಿ ಕೆಲಸ ಕೊಡಿಸುವುದಾಗಿ ಪ್ರತಿ ಅಭ್ಯರ್ಥಿಗಳಿಂದ 5 ಸಾವಿರ ರೂ. ವಸೂಲಿ ಮಾಡಿ ಸಿಕ್ಕಿ ಬಿದ್ದಿದ್ದ. ಆಮೇಲೆ ಕಂಪೆನಿ ಇಂತಹ ಸೈಟ್ ಹುಡುಕಿ ಬಂದ್ ಕೂಡ ಮಾಡಿತ್ತು. ಸೊ ಇನ್ನು ಮುಂದೆ ಆದರೂ ವಾಟ್ಸ್ ಆಪ್ ಹಾಗು ಇತರೆ ಸೋಶಿಯಲ್ ಮೀಡಿಯಾದಲ್ಲಿ ಸಂದೇಶವನ್ನು ಫಾರ್ವರ್ಡ್ ಮಾಡುವ ಮೊದಲು ಗಮನಿಸಿ ಉತ್ತಮ ನಾಗರೀಕರಾಗುವಿರಿ ಎಂದು ಆಶಿಸುತ್ತೇನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.