ಮಂಗಳೂರು: ಕೇರಳದಲ್ಲಿ ಜನರ ಜೀವ ಬಲಿ ಪಡೆಯುತ್ತಿರುವ ನಿಪಾ ವೈರಸ್ ಬಗ್ಗೆ ದೇಶದಾದ್ಯಂತ ಆತಂಕ ಮೂಡಿಸಿದೆ. ವೈರಸ್ ತಡೆಗೆ ಸರ್ಕಾರ, ವೈದ್ಯರು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ರೋಗಿಗಳನ್ನು ಆರೈಕೆ ಮಾಡುತ್ತಾ, ಇತರರಿಗೆ ರೋಗ ಹರಡದಂತೆ ತಡೆಯಲು ವೈದ್ಯರು ಶತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಂತಹ ವೈದ್ಯರಲ್ಲಿ ಮಣಿಪಾಲದ ಡಾ.ಜಿ ಅರುಣ್ಕುಮಾರ್ ಕೂಡ ಒಬ್ಬರು.
ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್ನ ಮುಖ್ಯಸ್ಥ, ಮೈಕ್ರೋಬಯೋಲಾಜಿಸ್ಟ್ ಆಗಿರುವ ಅರುಣ್ ಕುಮಾರ್ ಪ್ರಸ್ತುತ ಕೇರಳದ ಕೋಝಿಕೋಡೆಯ ನಿಪಾ ಪೀಡಿತ ಪ್ರದೇಶದಲ್ಲಿ ಸೇವೆ ಮಾಡುತ್ತಿದ್ದಾರೆ. ಅಲ್ಲಿನ ಸರ್ಕಾರ ಮತ್ತು ವೈದ್ಯಕೀಯ ಸಮುದಾಯದೊಂದಿಗೆ ಸದಾ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
ನಿಪಾ ವೈರಸ್ ತಗುಲಿದ ಎರಡನೇ ವ್ಯಕ್ತಿಯನ್ನು ಬದುಕಿಸಲಾಗಿಲ್ಲವಾದರೂ ವೈರಸ್ ಬಗ್ಗೆ ತಿಳಿದುಕೊಂಡು ಅದರ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
‘ಕೋಝಿಕೋಡೆಯ ಒಂದು ಮನೆಯಿಂದ ವೈರಸ್ ದಾಳಿಯಾಗಿದೆ, ಅವರ ಕುಟುಂಬಸ್ಥರಿಗೆ ಪಸರಿಸಿದೆ. ಬಳಿಕ ಈ ಕುಟುಂಬ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ವೈರಸ್ ಪಸರಿಸಿದೆ. ಪ್ರಸ್ತುತ ಇತರ ಆಸ್ಪತ್ರೆಗಳ ಮೂಲಕ ರೋಗ ಹರಡದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಅರುಣ್ಕುಮಾರ್ ಹೇಳಿದ್ದಾರೆ.
‘ಪ್ರಾಥಮಿಕ ಹಂತದಲ್ಲೂ ಈ ವೈರಸ್ಗೆ ಚಿಕಿತ್ಸೆ ನೀಡುವುದು ಕಷ್ಟ. ಮೊದಲ ವ್ಯಕ್ತಿ ಪರೀಕ್ಷೆಗೂ ಮುನ್ನವೇ ತೀರಿ ಹೋದರು. ಅದೇ ಕುಟುಂಬದ ಎರಡನೇ ವ್ಯಕ್ತಿ ರೋಗಕ್ಕೆ ತುತ್ತಾದಾಗ ಅವರ ರಕ್ತ, ಮೂತ್ರದ ಮಾದರಿಯನ್ನು ಕೂಡಲೇ ಮಣಿಪಾಲ್ ಲ್ಯಾಬ್ಗೆ ಕಳುಹಿಸಿ 12 ಗಂಟೆಯೊಳಗೆ ನಿಪಾ ವೈರಸ್ ಎಂಬುದನ್ನು ಪತ್ತೆ ಮಾಡಿದೆವು. ಬಳಿಕ ಇಡೀ ವೈದ್ಯಕೀಯ ಸಮುದಾಯ ಅವರ ಚಿಕಿತ್ಸೆಗೆ ನಿಂತಿತು. ವ್ಯಕ್ತಿ ಬದುಕಲಿಲ್ಲ. ಆದರೆ ನಿಪಾ ವೈರಸ್ ಎಂದು ತಿಳಿದು ಕೂಡಲೇ ಅದರ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿದೆವು’ ಎಂದಿದ್ದಾರೆ.
ವೈರಸ್ ಪೀಡಿತರಿಗೆ ಚಿಕಿತ್ಸೆ ಕೊಡುವವರು ಈಗಲೂ ವೈರಸ್ಗೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂದಿರುವ ಅವರು, ಸಾಮಾನ್ಯ ಜನರು ಹೆಚ್ಚು ಆತಂಕಕ್ಕೆ ಒಳಗಾಗಬಾರದು ಎಂದಿದ್ದಾರೆ. ನಿಪಾ ವೈರಸ್ ನಿರ್ಮೂಲನೆಗೊಳ್ಳುವವರೆಗೂ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.