ಮುಂಗಾರು ಮಳೆ ಪ್ರಾರಂಭವಾದ ತಕ್ಷಣ ವೃದ್ಧರೊಬ್ಬರು ತಮ್ಮ ಹಿತ್ತಲಿನ ತೋಟದಲ್ಲಿ ಗುಂಡಿಗಳನ್ನು ತೆಗೆಯುತ್ತಿದ್ದರು. ಇದನ್ನು ನೋಡಿದ ನೆರೆಮನೆಯವರೊಬ್ಬರು ‘ಇದೇನು ಮಾಡುತ್ತಿರುವಿರಿ’? ಎಂದು ಕೇಳಿದಾಗ ‘ನಾನು ಮಾವಿನ ಗಿಡಗಳನ್ನು ನೆಡುತ್ತಿದ್ದೇನೆ’ ಎಂದು ವೃದ್ಧರು ಉತ್ತರಿಸಿದರು.
‘ಈ ಗಿಡಗಳು ದೊಡ್ಡದಾದ ಮೇಲೆ ಬಿಡುವ ಮಾವಿನ ಹಣ್ಣುಗಳನ್ನು ತಾವು ತಿನ್ನಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೀರಾ’? ಎಂದು ನೆರೆಯವರು ಪ್ರಶ್ನಿಸಿದರು. ‘ಇಲ್ಲ, ಇಲ್ಲ, ನಾನು ಅಷ್ಟು ದಿನ ಬದುಕಿರಲಾರೆ. ಆದರೆ ಈ ಭೂಮಿಯ ಮೇಲೆ ಬೇರೆಯವರು ಬದುಕಿರುತ್ತಾರಲ್ಲ. ಇಷ್ಟು ದಿನ ನಾವು ನಮ್ಮ ಪೂರ್ವಜರು ಬೆಳೆದಿರುವ ಹಣ್ಣುಗಳನ್ನು ತಿನ್ನುತ್ತಾ ಬಂದಿದ್ದೇವೆ. ನಮ್ಮ ಮುಂದಿನ ಪೀಳಿಗೆಯವರಿಗೂ ಮಾವಿನ ಹಣ್ಣುಗಳು ದೊರೆಯಲಿ ಎಂದು ಮಾವಿನ ಗಿಡಗಳನ್ನು ನೆಡುತ್ತಿದ್ದೇನೆ’ ಎಂದು ಹೇಳಿ ವೃದ್ಧರು ತಮ್ಮ ಕೆಲಸವನ್ನು ಮುಂದುವರೆಸಿದರು.
ಇದು ನಾನು ಚಿಕ್ಕವಳಾಗಿದ್ದಾಗ ನಮ್ಮ ಅಜ್ಜಿ ನನಗೆ ಹೇಳಿದ ಕಥೆ. ಈ ಕಥೆ ಎಷ್ಟು ಅರ್ಥಗರ್ಭಿತವಾಗಿದೆ. ನಮ್ಮ ಹಿರಿಯರಿಗೆ ಪರಿಸರ! ಅರಿವು, ಪರಿಸರದ ಬಗ್ಗೆ ಕಾಳಜಿ ಎಷ್ಟಿತ್ತೆಂಬುದು ಇದರಿಂದ ತಿಳಿಯುತ್ತದೆ. ತಮ್ಮ ಮುಂದಿನ ಪೀಳಿಗೆಗೆ ಏನು ಕೊಡಬೇಕು ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದರು.
ಇಂತಹ ಸುಂದರ ಪರಿಸರದ ನಿರ್ಮಾಣಕ್ಕಾಗಿ ಜನರಲ್ಲಿ ಅರಿವು ಮೂಡಿಸಬೇಕಾದ ಅವಶ್ಯಕತೆಯಿದೆ. ಇದಕ್ಕಾಗಿ ಪ್ರಪಂಚದಾದ್ಯಂತ 1973 ಜೂನ್ 5 ರಿಂದ ‘ವಿಶ್ವ ಪರಿಸರ ದಿನ’ ವನ್ನು ಆಚರಿಸಲು ಪ್ರಾರಂಭಿಸಲಾಯಿತು.
ವಿಶ್ವ ಪರಿಸರ ದಿನವನ್ನು ಹೇಗೆ ಆಚರಿಸುತ್ತಾರೆ?
ಹೆಚ್ಚು ಗಿಡಮರಗಳನ್ನು ಬೆಳೆಸುವ ಸಲುವಾಗಿ ವಿವಿಧ ಹಂತಗಳಲ್ಲಿ ಹೊಸ ಗಿಡಗಳನ್ನು ನೆಡುತ್ತಾರೆ. ಗಿಡಗಳನ್ನು ಬೆಳೆಸಿ ವನಮಹೋತ್ಸವವನ್ನು ಆಚರಿಸುತ್ತಾರೆ.
ವಿಶ್ವ ಪರಿಸರ ದಿನವನ್ನು ಏಕೆ ಆಚರಿಸಬೇಕು?
ಸಸ್ಯ ಸಂಪತ್ತು ನಮ್ಮ ರಾಷ್ಟ್ರದ ನೈಸರ್ಗಿಕ ಶ್ರೀಮಂತಿಕೆಯ ಸೂಚಕಗಳಾಗಿವೆ. ಒಂದು ದೇಶ ಎಷ್ಟು ಶ್ರೀಮಂತವಾಗಿದೆ ಎಂದು ನಿರ್ಧರಿಸುವ ಅಂಶಗಳಲ್ಲಿ ಅತಿ ಮುಖ್ಯ ಅಂಶವೇ ಆ ದೇಶದ ಸಸ್ಯ ಸಂಪತ್ತು ಎಂದರೆ ಕಾಡುಗಳು, ಅರಣ್ಯಗಳು.
ಕಾಡುಗಳು ಪರಿಸರಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಿವೆ. ಆದರೆ ಜನಸಂಖ್ಯಾ ಸ್ಫೋಟದಿಂದಾಗಿ ನಗರೀಕರಣ, ಜೌದ್ಯೋಗೀಕರಣ, ಗಣಿಗಾರಿಕೆ ಹೀಗೆ ಹಲವು ಕಾರಣಗಳಿಂದ ಇಂದು ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದರಿಂದಾಗಿ ನಾವು ಇಂದು ಪರಿಸರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
1. ಜಲ ಚಕ್ರವು ಬಾಧಿಸಲ್ಪಡುತ್ತಿರುವುದರಿಂದ ಮಳೆ ಬೀಳುವ ವಿಧಾನ ಬದಲಾಗಿದೆ. ಮಳೆಯ ಪ್ರಮಾಣ ಕ್ಷೀಣಿಸಿದೆ.
2. ವಾತಾವರಣದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಕಾರ್ಬನ್ ಡೈಆಕ್ಸೈಡ್ನ ಪ್ರಮಾಣ ಹೆಚ್ಚಾಗಿದೆ.
3. ಹವಾಮಾನದಲ್ಲಿ ತಾಪಮಾನ ಹೆಚ್ಚಾಗಿ ಹಸಿರು ಮನೆ ಪರಿಣಾಮ ಉಂಟಾಗಿದೆ.
4. ಮಣ್ಣಿನ ಸವಕಳಿ ತೀವ್ರವಾಗಿ ಭೂಕುಸಿತ ಉಂಟಾಗುತ್ತಿದೆ.
5. ಅಂತರ್ಜಲ ಕಡಿಮೆಯಾಗಿದೆ.
6. ವನ್ಯ ಜೀವಿಗಳಿಗೆ ಆಶ್ರಯ ತಪ್ಪಿ ಅಮೂಲ್ಯ ಪ್ರಭೇದಗಳು ನಶಿಸಿ ಹೋಗುತ್ತಿದೆ.
7. ಪರಿಸರ ವ್ಯವಸ್ಥೆಯಲ್ಲಿ ಸಮತೋಲನ ತಪ್ಪಿ ಹೋಗುತ್ತಿದೆ.
ಈ ಎಲ್ಲ ಸಮಸ್ಯೆಗಳನ್ನು ನಿಯಂತ್ರಿಸಲು ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಮನುಷ್ಯ ತನ್ನ ಎಲ್ಲಾ ಅವಶ್ಯಕತೆಗಳನ್ನು ಪರಿಸರದಿಂದಲೇ ಪೂರೈಸಿಕೊಳ್ಳಬೇಕು. ಪರಿಸರವನ್ನು ಸಂರಕ್ಷಿಸುವ, ಮತ್ತು ಅದರ ಅರಿವು ಮೂಡಿಸುವುದೇ ವಿಶ್ವ ಪರಿಸರ ದಿನದ ಮುಖ್ಯ ಉದ್ದೇಶ.
ನಾವೀಗ ಪರಿಸರವನ್ನು ಹೇಗೆ ಸಂರಕ್ಷಿಸಬೇಕು
ನಮ್ಮ ಹಿರಿಯರು ಅರಳಿಮರ, ಬೇವಿನ ಮರ, ನೆಲ್ಲಿಗಿಡ, ಬನ್ನಿಗಿಡ, ಔದುಂಬರ, ತುಳಸಿ ಹೀಗೆ ಹಲವು ವೃಕ್ಷಗಳಿಗೆ ಮಹತ್ವ ಪೂರ್ಣ ಸ್ಥಾನವನ್ನು ಕೊಟ್ಟರು. ಹಸು, ಗರುಡ, ಹಾವು ಮುಂತಾದ ಪ್ರಾಣಿಗಳು ಭಾರತೀಯ ಸಂಪ್ರದಾಯದಲ್ಲಿ ಪೂಜನೀಯ. ಹೀಗೆ ಸದ್ದುಗದ್ದಲವಿಲ್ಲದೆ ಪರಿಸರ ಸಂರಕ್ಷಣೆಯಾಗುತ್ತಿತ್ತು. ನಾವೀಗ ಪರಿಸರ ಸಂರಕ್ಷಣೆಗಾಗಿ
• ಗಿಡ ಮರಗಳನ್ನು ಬೆಳೆಸಬೇಕು.
• ಮರ ಕಡಿಯುವುದನ್ನು ನಿರ್ಬಂಧಿಸಬೇಕು.
• ಸಾಮಾಜಿಕ ವನೀಕರಣ, ಗೋಮಾಳಗಳನ್ನು ಸಂರಕ್ಷಿಸಬೇಕು.
• ಮಕ್ಕಳಲ್ಲಿ ಗಿಡ ಮರಗಳ ಬಗ್ಗೆ ಪ್ರೀತಿ ಬೆಳೆಸಬೇಕು.
• ಮನೆಗೊಂದು ಮರ, ಅಂಗಳಕ್ಕೊಂದು ಗಿಡ ಬೆಳೆಸಬೇಕು.
• ಶಾಲೆಯಲ್ಲೊಂದು ಕೈ ತೋಟ ಬೆಳಸಬೇಕು.
• ಕೊನೆಪಕ್ಷ ಮನೆಯಲ್ಲಿ ಒಂದು ತುಳಸಿ ಗಿಡವನ್ನಾದರೂ ಬೆಳೆಸಬೇಕು.
• ಮುಂದಿನ ಪೀಳಿಗೆಗಾಗಿ ‘ಗಿಡ ನೆಡು’ ಎಂದು ಸಂದೇಶ ಸಾರಬೇಕು.
ಬನ್ನಿ ನಾವೆಲ್ಲರೂ ಸಾಲು ಮರಗಳ ತಿಮ್ಮಕ್ಕನ ನೆನೆಯೋಣ ; ಪರಿಸರವನ್ನು ಸಂರಕ್ಷಿಸೋಣ ; ಹಸಿರೇ ಉಸಿರು, ಉಸಿರಿಗಾಗಿ ಹಸಿರು ಎನ್ನೋಣ ; ಪರಿಸರ ರಕ್ಷತಿ ರಕ್ಷಿತಃ ಎನ್ನೋಣ ; ಪ್ರತಿದಿನ ಪರಿಸರ ದಿನವನ್ನು ಆಚರಿಸೋಣ.
ಕೃಪೆ : ಶಿಕ್ಷಕ ಸಮಾಚಾರ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.