ದೇಶಪ್ರೇಮ ಪ್ರತಿಯೊಬ್ಬ ಪ್ರಜೆಗೂ ಇರಬೇಕಾದಂತಹ ಒಂದು ಮಹತ್ವದ ಅಂಶ. ದೇಶ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಇದರ ಪಾತ್ರ ಮುಖ್ಯವಾದುದು. ದೇಶಪ್ರೇಮ ಎಂದರೇನು ಎಂಬುದಕ್ಕೆ ಪ್ರಪಂಚದ ಹಲವು ದಾರ್ಶನಿಕರು ಒಂದೊಂದು ರೀತಿಯಲ್ಲಿ ವಿವರಣೆ ನೀಡುತ್ತಾರೆ. ಅಮೇರಿಕಾದ ಥಿಯೊಡರ್ ರೂಸ್ ವೆಲ್ಟ್ “ದೇಶಪ್ರೇಮ ಎಂದರೆ ದೇಶದ ಜೊತೆ ನಿಲ್ಲುವುದು. ಆದರೆ ದೇಶದ ಅಧ್ಯಕ್ಷ ಅಥವಾ ಯಾವುದೇ ಸಾರ್ವಜನಿಕ ಅಧಿಕಾರಿಯ ಜೊತೆ ನಿಲ್ಲುವುದಲ್ಲ” ಎನ್ನುತ್ತಾರೆ. ಮತ್ತೊಬ್ಬ ಅಮೇರಿಕಾದ ಸೈನಿಕ ನಾಥೆನ್ ಹೇಲ್ “ದೇಶಕ್ಕಾಗಿ ಕೊಡಲು ನನ್ನ ಬಳಿ ಕೇವಲ ಒಂದೇ ಜೀವ ಇರುವುದು ಎಂದು ಬಹಳ ಬೇಸರವಾಗುತ್ತದೆ” ಎಂದು ದೇಶಪ್ರೇಮದ ಬಗ್ಗೆ ವಿವರಿಸುತ್ತಾರೆ. ಆದರೆ ನಾವು ಭಾರತೀಯರು ಇದನ್ನು ದೇಶಪ್ರೇಮ ಎನ್ನಲಿಲ್ಲ ಬದಲಾಗಿ ದೇಶಭಕ್ತಿ ಎಂದೆವು. ಪದವೇ ಸೂಚಿಸುವಂತೆ ದೇಶದ ಮೇಲಿರುವ ಭಕ್ತಿಯೇ ದೇಶಭಕ್ತಿ. ಅಂದರೆ ದೇಶವನ್ನು ನಾವು ದೇವರಂತೆ ಕಂಡವರು ನಾವು. ಅದರಲ್ಲೂ “ಜನನಿ ಜನ್ಮಭೂಮಿಶ್ಚ ಸ್ವರ್ಗದಪಿ ಗರೀಯಸಿ” ಅಂದರೆ ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಧ್ಯೇಯ ವಾಕ್ಯದ ನೆರಳಲ್ಲಿ ಬೆಳೆದವರು ನಾವು. ರಾಮಾಯಣದ ಕಾಲದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡವರು ನಾವು. ಬಹುಶಃ ಪ್ರಪಂಚದಲ್ಲಿ ಭಾರತೀಯರಾದ ನಾವು ಮಾತ್ರ ದೇಶವನ್ನು ಹೆತ್ತ ತಾಯಿ ಹಾಗೂ ದೇವರ ರೂಪದಲ್ಲಿ ಕಂಡವರು. ಬಹಳ ಹೆಮ್ಮೆಯ ವಿಚಾರ ಅಲ್ಲವೇ???
ಹೌದು, ಇದು ಹೆಮ್ಮೆಯ ವಿಚಾರ ಆದರೆ ಯಾವುದೋ ಕಾಲಕ್ಕೆ ಮಾತ್ರ. ಸದ್ಯದ ಪರಿಸ್ಥಿತಿಗಂತೂ ಅಲ್ಲವೇ ಅಲ್ಲ. ಕಾರಣ ಎಲ್ಲರಿಗೂ ಗೊತ್ತಿರುವಂತೆಯೇ ಅತ್ಯಾಚಾರ, ಒಳಜಗಳ, ಕೋಮುಗಲಭೆ ಇತ್ಯಾದಿ ಇತ್ಯಾದಿ…… ಇಂತಹ ಕಾರಣಗಳಿಂದ ಭಾರತೀಯರಲ್ಲಿ ದೇಶಭಕ್ತಿ ಕ್ಷೀಣಿಸುತ್ತಿರುವುದು ದುರಾದೃಷ್ಟವೇ ಸರಿ.
ಪರಿಪೂರ್ಣ ಜೀವನ ಪಾಠ ಕಲಿಸುವ ವೇದಗಳ ಬಗ್ಗೆ ನಮಗೆ ತಿಳಿಯದು. ಇಂದು ನಮ್ಮ ಸಂಸ್ಕೃತಿಯನ್ನು ವಿದೇಶಿಯರು ಮೆಚ್ಚುತ್ತಾರೆ ಹಾಗೂ ಅನುಸರಿಸುತ್ತಾರೆ. ಆದರೆ ನಾವು ಮಾತ್ರ ನಮ್ಮ ಸಂಸ್ಕೃತಿಯನ್ನು ನಿರ್ಲಕ್ಷಿಸಿ ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಪದ್ಧತಿಗೆ ಮಾರುಹೋಗುತ್ತಿದ್ದೇವೆ.
ಹಾಗಾದರೆ ಈಗಿನ ಪೀಳಿಗೆಯ ಈ ನಿರ್ಲಕ್ಷ್ಯಕ್ಕೆ ಕಾರಣ ಯಾರು? ಶಾಲೆಗಳಾ? ಪೋಷಕರಾ ಅಥವಾ ಸರ್ಕಾರಗಳಾ? ಮುಖ್ಯವಾಗಿ ಈಗಿನ ಶಾಲೆಗಳು ಉತ್ತಮ ವ್ಯಕ್ತಿಯನ್ನು ರೂಪಿಸುವ ಕೆಲಸ ಮಾಡುತ್ತಿಲ್ಲ. ಮಾಡುತ್ತಿದ್ದರೂ ಬೆರಳೆಣಿಕೆಯಷ್ಟು ಮಾತ್ರ. ಪುಸ್ತಕದಲ್ಲಿರುವುದನ್ನು ಉತ್ತರ ಪತ್ರಿಕೆಗೆ ಇಳಿಸುವುದನ್ನು ಮಾತ್ರ ಈಗಿನ ಶಾಲೆಗಳು ಹೇಳಿಕೊಡುತ್ತಿವೆ. ಪಾಠದ ಸಾರಾಂಶವನ್ನು ಮಕ್ಕಳ ಮನಸ್ಸಿಗೆ ಇಳಿಸುವ ಶಾಲೆಗಳು ತೀರಾ ಕಡಿಮೆ. ರಾಜಕಾರಣಿಗಳು, ಉದ್ಯಮಿಗಳು ತಮ್ಮ ಕಪ್ಪುಹಣವನ್ನು ಬಿಳಿಯಾಗಿಸುವ ಸಲುವಾಗಿ ಬೀದಿ ಬೀದಿಗಳಲ್ಲಿ ನಾಯಿ ಕೊಡೆಗಳಂತೆ ಶಾಲೆಗಳನ್ನು ಕಟ್ಟಿದ್ದಾರೆ. ಇಂತಹ ಶಾಲೆಗಳು ಆದಾಯಕ್ಕಾಗಿ ಮಾತ್ರ. ಇನ್ನೆಲ್ಲಿ ಉತ್ತಮ ರಾಷ್ಟ್ರ ಮತ್ತು ವ್ಯಕ್ತಿತ್ವ ನಿರ್ಮಾಣವಾಗಬೇಕು?
ಒಮ್ಮೆ ಸ್ವಾಮಿ ವಿವೇಕಾನಂದರು ಜಪಾನ್ ಪ್ರವಾಸದಲ್ಲಿದ್ದರು. ರಾತ್ರಿ ಮಲಗುವಾಗ ಅಲ್ಲಿನ ಒಬ್ಬ ಹುಡುಗನಿಗೆ ಒಂದು ಬಾಳೆಹಣ್ಣು ತರುವಂತೆ ಹೇಳುತ್ತಾರೆ. ಆ ಹುಡುಗ ಹೋದವನು ಬರುವುದೇ ಇಲ್ಲ. ವಿವೇಕಾನಂದರು ಕಾದು ಕಾದು ಮಲಗಲು ಹೋಗುತ್ತಾರೆ. ಆಗ ಹುಡುಗ ಬಾಳೆಹಣ್ಣಿನೊಂದಿಗೆ ಓಡೋಡಿ ಬರುತ್ತಾನೆ. ಏಕೆ ಇಷ್ಟು ಹೊತ್ತು ಎಂದು ಕೇಳಿದಾಗ ಆ ಹುಡುಗ “ನಮ್ಮೂರಿನ ಎಲ್ಲಾ ಅಂಗಡಿಗಳು ಮುಚ್ಚಿದ್ದರೂ ಪಕ್ಕದ ಊರಿಗೆ ಹೋಗಿ ಬರಲು ತಡವಾಯಿಯಿತು. ಬಾಳೆಹಣ್ಣು ತರಲಿಲ್ಲವೆಂದರೆ ನಿಮ್ಮ ದೇಶಕ್ಕೆ ಹೋಗಿ ಜಪಾನ್ನಲ್ಲಿ ಒಂದು ಬಾಳೆಹಣ್ಣಿಗೂ ಗತಿಯಿಲ್ಲ ಎಂದು ಹೇಳಬಾರದಲ್ಲವೇ?” ಎನ್ನುತ್ತಾನೆ. ಅವನ ದೇಶಪ್ರೇಮವನ್ನು ನೋಡಿ ವಿವೇಕಾನಂದರು ಬೆರಗಾಗುತ್ತಾರೆ. ಅಲ್ಲಿದ್ದಾಗಲೇ ಇನ್ನೊಬ್ಬ ಹುಡುಗನನ್ನು “ಬುದ್ಧ ನಿಮ್ಮ ಆರಾಧ್ಯ ದೈವ, ಅಕಸ್ಮಾತ್, ಭಾರತದಿಂದ ಬುದ್ಧ ನಿಮ್ಮ ಮೇಲೆ ಯುದ್ದಕ್ಕೆ ಬರುತ್ತಾನೆ ಎಂದು ಊಹಿಸಿ. ಆಗ ಏನು ಮಾಡುತ್ತೀರಾ?” ಎಂದು ವಿವೇಕಾನಂದರು ಕೇಳುತ್ತಾರೆ. ಆಗ ಆ ಹುಡುಗ “ಹಾಗೇನಾದರೂ ಆದರೆ ನಾವು ಯುದ್ಧ ಮಾಡಿ ಬುದ್ಧನನ್ನು ಸೋಲಿಸುತ್ತೇವೆ” ಎನ್ನುತ್ತಾನೆ.
ಭಾರತಕ್ಕೆ ಅವಶ್ಯಕವಾಗಿ ಬೇಕಿರುವುದು ‘ಭಾರತೀಯತೆ’. ಭಾರತೀಯತೆ ಅಂದರೆ ಭಾರತದ ಗ್ರಂಥಗಳ, ವೇದಗಳ, ಮಹಾಪುರುಷರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವುದು. ಮಹಾಪುರುಷರ ಅರಿವೇ ಇಲ್ಲದ ಈಗಿನ ಜನತೆ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತದಾ? ಭಾರತ ತನ್ನದೇ ಆದ ಕೆಲವು ವಿಶೇಷತೆಗಳನ್ನು ಹೊಂದಿದೆ. ಜರಾಯುವೆಂಬ ಪೊರೆಯಿಂದ ಗರ್ಭವು ಮುಚ್ಚಲ್ಪಟ್ಟಿದೆ ಎಂದು ಶ್ರೀ ಕೃಷ್ಣ ಭಗವದ್ ಗೀತೆಯಲ್ಲಿ ಬೋಧಿಸಿರುವ ನೆಲ ಭಾರತ. ಆಯುರ್ವೇದ, ಚದುರಂಗ, ದಶಾಂಶ ಪದ್ಧತಿ, ಬೀಜಗಣಿತ, ಕ್ಯಾಲ್ಕುಲಸ್ ಶುರುವಾಗಿದ್ದೇ ಭಾರತದಲ್ಲಿ. ರಾಮಾನುಜರೊಬ್ಬರೇ ಬರೋಬ್ಬರಿ 3542 ಗಣಿತ ಸಿದ್ಧಾಂತಗಳನ್ನು ಬರೆದಿದ್ದಾರೆ. 13ನೇ ಶತಮಾನದಲ್ಲಿ ಹಾವು-ಏಣಿ ಆಟವನ್ನು ಮೋಕ್ಷಪತ್ ಎಂಬ ಹೆಸರಿನಿಂದ ಆಡುತ್ತಿದ್ದರು. ಸಂಸ್ಕೃತ ಕಂಪ್ಯೂಟರ್ ಸಾಫ್ಟ್ವೇರ್ಗೆ ಸರಿಯಾಗಿ ಹೊಂದುತ್ತದೆ. ವಿಶ್ವದ ಪ್ರಥಮ ವಿಶ್ವವಿದ್ಯಾಲಯ ಶುರುವಾಗಿದ್ದು ತಕ್ಷಿಲಾದಲ್ಲಿ. ಇಲ್ಲಿ 10500 ವಿದ್ಯಾರ್ಥಿಗಳು ಸುಮಾರು 60 ವಿಷಯಗಳನ್ನು ಅಭ್ಯಸಿಸಿದ್ದರು. ಇಂದು ಓದಲು ವಿದೇಶಕ್ಕೆ ಹಾರುವ ಎಷ್ಟೋ ವಿದ್ಯಾರ್ಥಿಗಳಿಗೆ ಇದು ಗೊತ್ತೇ ಇಲ್ಲ.
ಇದೆಲ್ಲ ಒಂದೆಡೆಯಾದರೆ, ಇನ್ನೊಂದೆಡೆ ಚೀನಾ, ಪಾಕಿಸ್ಥಾನ, ಶ್ರೀಲಂಕಾ ಒಂದಾಗುತ್ತಿವೆ. ಹಣದುಬ್ಬರ ಏರಿಕೆ ಕಾಣುತ್ತಿದೆ. ವಿದೇಶಿ ವಿನಿಮಯ ಕುಸಿಯುತ್ತಲೇ ಇದೆ. ಓಟಿಗೆ ಮುನ್ನ ಜನ ದೇಶದ ಬದಲು ಜಾತಿ, ನೋಟು ನೋಡುತ್ತಿದ್ದಾರೆ. ಶಿಕ್ಷಣದಲ್ಲಿ ದೇಶಭಕ್ತಿ ಬದಲು ಸ್ವಾರ್ಥ ಬೆಳೆಯುತ್ತಿದೆ. ಆ್ಯಂಬುಲೆನ್ಸ್, ಪೊಲೀಸರಿಗಿಂತ ಪಿಜ್ಜಾ ಬೇಗ ಮನೆಗೆ ಬರುತ್ತಿದೆ. ಶೈಕ್ಷಣಿಕ ಹಾಗೂ ರೈತರ ಸಾಲಕ್ಕೆ ಅಧಿಕ ಬಡ್ಡಿಯಾದರೆ, ಮರ್ಸಿಡೀಸ್ ಬೆನ್ಜ್ ಕಾರುಕೊಳ್ಳಲು ಶೇ.0 ಬಡ್ಡಿ. ತಿನ್ನೋ ಅಕ್ಕಿ 50 ರುಪಾಯಿ ಆದರೆ, ಸಿಮ್ ಕಾರ್ಡ್ ಫ್ರೀ! ಬಡವರು ಕ್ರಿಕೆಟ್ ಪಂದ್ಯದ ಟಿಕೆಟ್ ಕೊಳ್ಳಲು ಪರದಾಡಿದರೆ, ಶ್ರೀಮಂತರು ಕ್ರಿಕೆಟ್ ತಂಡವನ್ನೇ ಖರೀದಿಸುತ್ತಾರೆ.
ಪ್ರತಿಭಟನೆಯ ಸಂದರ್ಭಗಳಲ್ಲಿ ಸರ್ಕಾರಿ ವಾಹನಗಳಿಗೆ ಕಲ್ಲು ಎಸೆಯುತ್ತೇವೆ. ಸರ್ಕಾರಿ ಆಸ್ತಿ ನಮ್ಮದೇ ಎಂಬ ಪರಿಜ್ಞಾನವೂ ಇರುವುದಿಲ್ಲ. ನಮ್ಮ ಹಬ್ಬಗಳು ಈಗಾಗಲೇ ನೆಲಕಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಹೊಸ ವರ್ಷವನ್ನು ಜನವರಿ ಒಂದಕ್ಕೆ ಆಚರಿಸುತ್ತೇವೆ. ಮದ್ಯಪಾನ, ಧೂಮಪಾನ ಮಾಡಿ ಹೊಸ ವರ್ಷವನ್ನು ಸ್ವಾಗತಿಸುವುದು ನಮ್ಮ ಸಂಸ್ಕೃತಿಯೇ? ಹಾಗಂತ ವಿದೇಶಿ ಸಂಸ್ಕೃತಿಯನ್ನು ತುಚ್ಛವಾಗಿ ಕಾಣಬೇಕು ಎನ್ನುತ್ತಿಲ್ಲ. ಆದರೆ ಅದರಲ್ಲಿರುವ ಒಳ್ಳೆಯ ಸಂಗತಿಗಳನ್ನು ಬಿಟ್ಟು, ಕೆಟ್ಟದರತ್ತಲೇ ನಮ್ಮ ಆಸಕ್ತಿ ಏಕೆ? ಆ ಆಸಕ್ತಿಯ ಬೆನ್ನು ಹತ್ತಿ ನಮ್ಮತನವನ್ನು ನಾವು ಮರೆಯುತ್ತಿದ್ದೇವೇಕೆ?
ಇವೆಲ್ಲದರ ನಡುವೆ ಹಣದುಬ್ಬರ ಭಯಾನಕ ಏರಿಕೆ ಕಾಣುತ್ತಿದೆ. ವಿದೇಶಿ ವಿನಿಮಯ ಕುಸಿಯುತ್ತಲೇ ಇದೆ. ಬಾಹ್ಯ ಶಕ್ತಿಗಳು ಭಾರತವನ್ನು ದುರ್ಬಲವಾಗಿಸಲು ಹೊಂಚು ಹಾಕುತ್ತಿವೆ. ಆದರೆ ಈ ಸಮಸ್ಯೆಗಳಿಗೆಲ್ಲ ಪರಿಹಾರ ಕೊಡಬಲ್ಲ ನಾಯಕನೊಬ್ಬ ಬಂದಿದ್ದಾನೆ. ದೇಶವನ್ನು ಬಲಿಷ್ಠಗೊಳಿಸಲು ಭಾರತೀಯ ಸಂಸ್ಕೃತಿಯನ್ನು ಪುನಃ ಸ್ಥಾಪಿಸಲು ಆತ ಪ್ರತಿಜ್ಞೆ ಮಾಡಿದ್ದಾನೆ. ಹಾಗಂತ ಬದಲಾವಣೆಯೆನ್ನುವುದು ಬರೀ ಆತನೊಬ್ಬನಿಂದಲೇ ಸಾಧ್ಯವಿಲ್ಲ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಒಂದು ದೇಶವನ್ನು ಉಜ್ವಲವಾಗಿಸಲು ಕೇವಲ ರಾಜಕೀಯದಿಂದಲೇ ಸಾಧ್ಯವಿಲ್ಲ. ಸಾಂಸ್ಕೃತಿಕ ಸಂಗತಿಗಳೂ ಮುಖ್ಯವಾಗುತ್ತವೆ.
ಸ್ವಾಮಿ ವಿವೇಕಾನಂದರ ಕನಸಿನ ಭಾರತ ನಿರ್ಮಾಣವಾಗಬೇಕೆಂದರೆ ಮೊದಲು ನಾವು ಕಣ್ತೆರೆಯಬೇಕು. ಭಾರತ ವಿಶ್ವಗುರುವಾಗಿ ಮೆರೆಯಬೇಕೆಂದರೆ ‘ಭಾರತೀಯತೆ’ ಬೆಳೆಯಬೇಕು.