ನ ವಾ ಅರೇ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ| ಆತ್ಮನಸ್ತು ಕಾಮಾಯ ಪತಿಃ ಪ್ರಿಯೋ ಭವತಿ||
ನ ವಾ ಅರೇ ಜಾಯಾಯೈ ಕಾಮಾಯ ಜಾಯಾ ಪ್ರಿಯಾ ಭವತಿ | ಆತ್ಮನಸ್ತು ಕಾಮಾಯ ಜಾಯಾ ಪ್ರಿಯಾ ಭವತಿ ||
ಪತ್ನಿಗೆ ಕೇವಲ ಪತಿಯ ಎಲ್ಲ ಅಭೀಷ್ಟಗಳನ್ನು ಪೂರ್ಣಗೊಳಿಸಬೇಕು ಎಂಬ ಅರ್ಥದಲ್ಲಿ ಪತಿಯು ಪ್ರಿಯನಾಗಿರುವದಿಲ್ಲ. ತನ್ನ ಮನೋಗತವನ್ನು ಪೂರ್ಣ ಮಾಡುತ್ತಾನೆ ಎಂಬ ದೃಷ್ಟಿಯಿಂದ ಪತಿಯು ಪ್ರಿಯನಾಗಿರುತ್ತಾನೆ.
ಹಾಗೆಯೇ ಪತಿಯು ಕೇವಲ ಪತ್ನಿಗಾಗಿಯೇ ಪ್ರೀತಿಸುವದಿಲ್ಲ. ಇವಳು ತನ್ನ ಸಂತೋಷಕ್ಕೆ ಕಾರಣೀಭೂತಳು ಎಂದು ತನ್ನ ಪತ್ನಿಯನ್ನು ಪ್ರೀತಿಸುತ್ತಾನೆ ಎಂದು ಬೃಹದಾರಣ್ಯಕೋಪನಿಷತ್ ಸತಿ-ಪತಿಗಳ ಅಂತರಂಗವನ್ನು ಬಯಲು ಮಾಡಿದೆ.
ಪತ್ನಿಯ ಪ್ರೀತಿ ಬೇಕು ಎಂಬ ಹಂಬಲ ಪತಿಗಿದ್ದರೆ ಪತಿಯ ಬೆಂಬಲ ಸದಾ ತನಗಿರಬೇಕೆಂದು ಪತ್ನಿಯ ಅಪೇಕ್ಷೆಯಾಗಿದೆ. ಆತ್ಮಪ್ರೀತಿಯನ್ನೇ ಆಧರಿಸಿ ಪರಸ್ಪರ ಪ್ರೇಮಿಸುವ ಇವರೀರ್ವರ ದಾಂಪತ್ಯ ಪಾವಿತ್ರ್ಯಕ್ಕೆ ದ್ಯೋತಕವಾಗಿದೆ. ಅರ್ಥಾತ್ ನೈಜವಾದ ಪ್ರೇಮದಿಂದಲೇ ಪಾವಿತ್ರ್ಯದ ಅನಾವರಣವಾಗುತ್ತದೆ ಹೊರತು ಕೇವಲ ಕಾಮದಿಂದಲ್ಲ. ಆದರೂ ಪ್ರೇಮವು ಸೃಷ್ಟಿಯಾಗುವುದು ಕಾಮದಿಂದಲೇ ಎಂಬ ಸಂಗತಿ ಸುಳ್ಳೇನಲ್ಲ.
ಒಂದರ್ಥದಲ್ಲಿ ಕಾಮದಿಂದಲೇ ಪ್ರೇಮಾಂಕುರವಾಗುತ್ತದೆ ಎಂಬ ಮಾತು ಪ್ರಮಾಣಪ್ರಮಿತವಾಗಿದೆ ಹಾಗೂ ಪ್ರೇಮಲೋಕವಿದಿತವೂ ಆಗಿದೆ. ಉದಾಹರಣೆಗೆ ದಶರಥ-ಕೈಕಯಿ, ದುಶ್ಶಂತ-ಶಕುಂತಲಾ, ಯಯಾತಿ-ಶರ್ಮಿಷ್ಠಾ, ಪಾಂಡು-ಮಾದ್ರಿ ಈ ಎಲ್ಲ ಸುಪ್ರಸಿದ್ಧ ಜೋಡಿಗಳು ಕಾಮಿಸಿ ಪ್ರೇಮಿಸಿದ ರಮಣಜೀವಿಗಳು.
ಇನ್ನು ಪ್ರೇಮವೂ ಕೂಡ ಕಮ್ಮಿಯೇನಿಲ್ಲ. ಪ್ರೇಮಪರವಶರಾದಾಗ ಕಾಮವೂ ಶರಣಾಗುತ್ತದೆ ಎಂಬುದಕ್ಕೆ ಸಾಕ್ಷಿ ದಶರಥ- ಕೌಸಲ್ಯಾ, ಯಯಾತಿ-ದೇವಯಾನಿ, ಪಾಂಡು-ಕುಂತೀ ಈ ಜೋಡಿಗಳು ಆಮರಣಪರ್ಯಂತ ಪ್ರೇಮಿಸಿ ಕಾಮಿಸಿದ ಧನ್ಯಜೀವಿಗಳು.
ಪ್ರೇಮ-ಕಾಮಗಳ ಸಮ್ಮಿಲನವನ್ನೇ ಮಧುರದಾಂಪತ್ಯ, ಸಾರ್ಥಕದಾಂಪತ್ಯ ಎಂದು “ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ” ಎಂದು ಶ್ರುತಿಯು ಎಲ್ಲ ಸತಿ-ಪತಿಗಳ ಹೃದಯ ಮುಟ್ಟುವಂತೆ ಸಾರಿದೆ.
ವೈವಾಹಿಕ ಜೀವನಾರಂಭದಲ್ಲಿ ಮಾಡುವ ಈ ಪ್ರತಿಜ್ಞೆಗೆ ಪವಿತ್ರ ಪ್ರಾಜಾಪತ್ಯಾಗ್ನಿಯೇ ಸಾಕ್ಷಿಯಾಗಿರುತ್ತದೆ. ಇಂಥ ದಿವ್ಯಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವವರು ಅಥವಾ ಸಾಕ್ಷಿಯನ್ನೇ ಸುಳ್ಳನ್ನಾಗಿ ಮಾಡಲು ಪ್ರಯತ್ನಿಸುವವರು ಇಂಥ ಅಪವಿತ್ರರನ್ನು ಧರ್ಮಾಗ್ನಿಯೇ ಸುಟ್ಟುಬೂದಿ ಮಾಡುತ್ತದೆ.
ವೈವಾಹಿಕ ಜೀವನವೇ ಭಾರತೀಯಧರ್ಮದ ಪ್ರಧಾನಾಂಗವಾದಾಗ ಅದು ಸ್ವರೂಪತಃ ಪರಮಪವಿತ್ರವೇ ಆಗಿರುತ್ತದೆ. ಈ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಪರಮ ಧರ್ಮವೂ ಆಗಿದೆ. ಇಂಥ ಧರ್ಮ ಅನಾದಿದಂಪತಿಗಳಾದ ಲಕ್ಷ್ಮೀ-ನಾರಾಯಣರಿಗೆ, ಪ್ರಾಣ-ಭಾರತಿಯರಿಗೆ, ಶಿವ-ಪಾರ್ವತಿಯರಿಗೆ ಪರಮಪ್ರೀತಿಕರ.
ದಂಪತಿಗಳು ಭಕ್ತಿ-ಶ್ರದ್ಧಾನ್ವಿತರಾಗಿ ನಿತ್ಯ ಮಾಡುವ ಪ್ರಾಜಾಪತ್ಯಾಗ್ನಿಯ ಆರಾಧನೆಯಿಂದಲೇ ಶುಭಾಂಗ-ಸುಶೀಲಯುಕ್ತ ಸಂತತಿಯು ಅಭಿವೃದ್ಧಿಯಾಗುತ್ತದೆ ಎಂದು ಮನುಸ್ಮೃತಿಯು ಪ್ರತಿಪಾದಿಸಿದೆ. ಪಾವಿತ್ರ್ಯ ಹಾಗೂ ಶಾಂತಿ ಇವುಗಳ ಮೂಲಾಧಾರಶಕ್ತಿ ಗೃಹಿಣಿಯೇ ಆಗಿದ್ದಾಳೆ. ಕೇವಲ ಪುರುಷರಿದ್ದರೆ ಅದು ಗೃಹ ಎಂದೆನಿಸುವದಿಲ್ಲ. ಗೃಹಿಣೀ ಇದ್ದರೆ ಮಾತ್ರ ಅದು ಶೋಭನವಾದ ಗೃಹವಾಗುತ್ತದೆ. “ಗೃಹವಾಸಃ ಸುಖಾರ್ಥಾಯ ಪತ್ನೀ ಮೂಲಂ ಗೃಹೇ ಸುಖಮ್”
ಹಿರಿಯರನ್ನು, ಪತಿ ಹಾಗೂ ಮಕ್ಕಳನ್ನು ಸಮಾಧಾನಗೊಳಿಸುವ ಶಕ್ತಿ ಅವಳಲ್ಲಿರುತ್ತದೆ. ಸಮಗ್ರ ಕುಟುಂಬ ಗೃಹಿಣಿಯ ಮೇಲೆ ಅವಲಂಬಿತವಾಗಿರುತ್ತದೆ. ಅದಕ್ಕೆ ಕಾರಣ ಅವಳು ನಿಸ್ವಾರ್ಥದಿಂದ ಮಾಡುವ ಕರ್ಮಯಜ್ಞ ಹಾಗೂ ಮನಃಪಾವಿತ್ರ್ಯ. ತಾನು ಹುಟ್ಟಿದ ಮನೆಯನ್ನು ತೊರೆದು ಪತಿಯ ಹೃದಯಮಂದಿರದಲ್ಲಿ ನೆಲೆಸಲು ಸನ್ನದ್ಧಳಾಗಿ ಬರುವ ಸತಿಗೆ ಪ್ರೀತಿಯ ಆಸರೆಯನ್ನು ಕೊಡುವುದು ಪುರುಷನ ಗೃಹಸ್ಥಧರ್ಮ.
ಸತಿ-ಪತಿಗಳ ಮಾಧುರ್ಯ- ಪಾವಿತ್ರ್ಯಯುಕ್ತ ದಾಂಪತ್ಯಕ್ಕೆ ಇವರ ವಿವಾಹದ ದಿನವೂ ಕಾರಣವಾಗಿರುತ್ತದೆ. ಅಂದರೆ ಶುಭಮುಹೂರ್ತವು ವಧೂ-ವರರ ಸಂಲಗ್ನಕ್ಕೆ ನಾಂದಿಯಾಗಿರುತ್ತದೆ. ಚಾತುರ್ಮಾಸ್ಯ ಕಾಲವನ್ನು ಹೊರತುಪಡಿಸಿ ಸುಮುಹೂರ್ತಗಳ ಬಗ್ಗೆ ದೈವಜ್ಞರಿಂದ ಕೇಳಿ ತಿಳಿದುಕೊಳ್ಳಬೇಕು.
ನಾಸ್ತಿಕ್ಯಭಾವನೆಯಿಂದ ಅಥವಾ ಅಹಂಕಾರಾತಿಶಯದಿಂದ ಮುಹೂರ್ತಗಳಿಲ್ಲದ ದಿನಗಳಲ್ಲಿ ನೆರವೇರುವ ಪಾಣಿಗ್ರಹಣವು ಮುಂದಿನದಿನಗಳಲ್ಲಿ ಕರಾಳಗ್ರಹಣವಾಗಿ ಪರಿಣಮಿಸುತ್ತದೆ.
“ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ”
ತಾರಾನುಕೂಲವಿರುವ, ಲಗ್ನಾಧಿಪತಿಯಾದ ದೇವತೆಯ ಕೃಪೆಯಿಂದ ಶುಭದಿನದ ಸುಮುಹೂರ್ತದಲ್ಲಿ ಮಂತ್ರನಿನಾದದೊಂದಿಗೆ ಮಂಗಳವಾದ್ಯ ಮೊಳಗಬೇಕು. ಆ ಮೂಲಕ ಸತಿ-ಪತಿಗಳ ದಾಂಪತ್ಯದಲ್ಲಿ ಪಾವಿತ್ರ್ಯ ಸಿದ್ಧಿಸಬೇಕು.
“ಸುಮುಹೂರ್ತೇ ಸಾವಧಾನ – ಸುಲಗ್ನಾ ಸಾವಧಾನ”