ಭಾವದ ಕಾಲುಷ್ಯ ಕಳೆದು ಭಾವವನ್ನ ವಿಕಸಿತ ಗೊಳಿಸೋದ ಯೋಗ. ಇದರ ಉದ್ದೇಶ ಪರಮ ಅನುಭಾವ, ಅದು ಪ್ರಶಾಂತಿಯನ್ನ ಕೊಡ್ತಾದ. ಮನುಷ್ಯ ಅನುಭಾವಿಯಾಗಬೇಕು. ಪರಮ ಆನಂದಿಯಾಗಬೇಕು. ಇದು ಬಹಳ ಮಹತ್ವದ್ದು.
ವಿಶ್ವದಲ್ಲಿ ಏನದ ಅದನ್ನ ಅನುಭವಿಸಬೇಕು. ವಿಶ್ವವನ್ನು ಮೀರಿ ಪರಿಭಾವಿಸಬೇಕು. ಜೀವ ಅಮೂಲ್ಯವಾದದ್ದು, ಜೀವ ಸ್ಪಂದನೆ. ಏನ್ ಮಿಡಿತಾದ, ಏನ್ ಭಾವನೆಗಳು, ಏನ್ ಕಾರ್ಯಗಳು, ಏನ್ ಕಲ್ಪನೆಗಳ ಬದುಕು. ಇದೊಂದು ವೈಭವ, ಸಮಾರಂಭ, ಹಬ್ಬ ಇದ್ದಂಗ. ಹಬ್ಬ ಮಾಡಿ ಬದುಕೋದ. ಅದಕ್ಕಾಗಿ ಸದ್ಭಾವ ಯೋಗ ಬೇಕು.
ಜೀವನದ ಪರಮ ಉದ್ದೇಶ ಸಾರ್ಥಕತೆ ಪಡೆಯೋದ ಅದ ಎಂಬುದನ್ನು ಅರಿತುಕೊಳ್ಳಲು ಭಾವನೆ ಕಾರಣ. ಸೌಂದರ್ಯ ತರೋದ. ಭಾವ ಸೌರಭ ತರೋದು, ಭಾವ ಎಷ್ಟು ಚೆಂದ ಅದ. ಅದನ್ನು ಪೋಷಿಸೋದು, ವಿಕಾಸಗೊಳಿಸೋದ ನಮ್ಮ ಜೀವನದ ಧ್ಯೇಯವಾಗಬೇಕು. ಆದ್ರ ನಾವು ನಮ್ಮ ಎದೆಯನ್ನ ಮರೆತೀವಿ. ನಮ್ಮ ಮನೆಯ ಮುಂದೆ ಸುಂದರ ವನ ನಿರ್ಮಿಸಿ, ಅದನ್ನ ಅನುಭವಿಸೋದನ್ನ ಮರೆತೀವಿ. ನಿನ್ನ ಹೃದಯವೂ ಹೂವಾಗಿ ಅರಳಬೇಕು ಮನುಷ್ಯನೇ.
ಹೂವೂ ನೋಡ್ರಿ ಎಷ್ಟು ಆಕಾರ, ಎಷ್ಟು ಬಣ್ಣ, ಎಷ್ಟು ಸುಗಂಧ ಎಷ್ಟು ಅದ್ಭುತ. ಹಂಗ ನಿತ್ಯ ಅರಳಬೇಕು. ಒಂದೇ ತಾಸ ಇದ್ದರೂ ಜಗತ್ತನ್ನ ನೋಡಬೇಕು. ಅನುಭವಿಸಬೇಕು, ಹೃದಯ ಅರಳಿಸಬೇಕು. ಇಂತಹ ಭಾವ ಸಾಧನೆ ಮಾಡೋದು, ಶುದ್ಧ ಮಾಡೋದು, ಗುಣ ಗೌರವ ಮಾಡೋದು, ಗುರುತಿಸೋದ, ಜಗತ್ತನ್ನ ಸುಂದರವಾಗಿಸೋದು.
ಒಳಗೆ ಆತ್ಮಿಯತೆ, ಹೊರಗ ಸುಗಂಧ ಹರಡಿದರೆ ಅದುವೇ ಸ್ವರ್ಗ. ಅಣುಗಳನ್ನು ನೋಡ್ರಿ, ಹರಿದು ಹರಿದು ಜಗತ್ತನ್ನ ಸುಂದರ ಮಾಡ್ತಾವ. ಅಷ್ಟು ಸೂಕ್ಷ್ಮ ಇದ್ದರೂ ವಿಶ್ವದಲ್ಲಿ ಬೆಳಕು ಕೊಡ್ತಾ ಇದಾವ. ಜಗತ್ತನ್ನೂ ನೋಡಲು ಅವಕಾಶ ಕೊಡ್ತಾ ಇದಾವಲ್ಲ ಹಂಗ ಸದಾ ಕಾಲ ಚಲನಾಶೀಲವಾಗಿರಬೇಕು. ಅಣುವಿನ ಒಳಗ ದೊಡ್ಡ ಸಾಮ್ರಾಜ್ಯವೇ ಅದ. ಲಕ್ಷ ಲಕ್ಷ ಸಂಗತಿಗಳನ್ನು ನಮಗ ಬೇಕಾದಾಗ ಕೊಡುವ ಅದ್ಭುತ ಸಾಧನೆ ಅದು.
ಅರವಿಂದ ಮಹರ್ಷಿಗಳು ಹೇಳ್ತಾರೆ, ದೇವ ಜಗತ್ತ, ದಿವ್ಯ ಜಗತ್ತು ಇದು. ಇದನ್ನು ಗುಣ ಗೌರವ ಮಾಡಬೇಕು. ಭಕ್ತಿ ಭಾವ ಸಾಧನೆ ಬೇಕಲ್ಲ. ಇದನ್ನೆಲ್ಲಾ ನೋಡಬೇಕು. ಬರೀ ಎದ್ದರೂ, ಬಿದ್ದರೂ ರೂಪಾಯಿನೇ ಎಣಿಸೋದ ಅಲ್ಲ. ಕವಿ ರವೀಂದ್ರನಾಥ ಟ್ಯಾಗೂರ ಅವರ ಹೇಳ್ತಾರೆ, ಮನುಷ್ಯನೇ ಮನೆ ಬಿಟ್ಟು ಹೊರಗೆ ಬರಬಾರದೆ. ಈ ಭೂಮಿ ಲಕ್ಷ, ಕೋಟಿ, ಅಸಂಖ್ಯ ಜನರನ್ನು ಹೊಂದಿರುವ ಮನೆ. ಇದರ ಹಿರಿಮೆ, ಗೌರವ ನೋಡಿ, ಅನುಭವಿಸು. ನೂರು ವರ್ಷ ಬದುಕೋದು ಅದ್ಭುತ ಚಮತ್ಕಾರ. ಗುಣ ಗೌರವ ಸಣ್ಣದಾದರೂ, ದೊಡ್ಡದಾದರೂ ಏನಗ್ತಾದ ?
ಜಗತ್ತು ಅಪ್ರತಿಮ. ಸದಾ ಉದ್ಯಮಶೀಲತೆಯಲ್ಲಿ ತೊಡಗಬೇಕು. ಇಡೀ ಜೀವನ ಸದಾ ಚಲನದಲ್ಲಿದೆ. ಪೂರ್ಣ ವಿಶ್ರಾಂತಿ ಪಡಿತೀನಿ ಅಂದ್ರ ಜೀವನ ಹೋತು ಅರ್ಥ. ಫ್ರಾನ್ಸ್ ಗಣಿತಜ್ಞ ಫಾಸ್ಕಲ್ ಅವರು ಹೇಳ್ತಾರೆ, ಜೀವನ ದರ್ಶನ ಮಾಡಿಕೋ. ಚಲನಾ ಜೀವನ, ಕ್ರಿಯಾಶೀಲವಾಗಿ ಬದುಕಬೇಕು. ಪಾಶ್ಚಿಮಾತ್ಯ ತತ್ವಜ್ಞಾನಿ ಹೇಳ್ತಾರ, ಜೀವನ ಇರೋತನಕ ಒಳ್ಳೇಯ ಕೆಲಸ ಕೊಡು. ಇರೋತನಕ ಬದುಕು ಕೊಡು ಅಂತಾರೆ. ಎರಡು ಬೇರೆ ಬೇರೆ ಅಲ್ಲ. ಎರಡು ಕೊಡು ಅಂದ. ನೂರು ವಸಂತಗಳನ್ನ ಕೆಲಸ ಮಾಡಕೋತ ಬದುಕಬೇಕು ಅಂತ ಬಯಸಬೇಕು. ಆಧ್ಯಾತ್ಮ ಅಂದ್ರ ಬದುಕೋದು, ಸುಂದರವಾಗಿ ಬದುಕಿ, ಬದುಕಿನ ತುಂಬಾ ಕರ್ಮಗಳನ್ನ, ಯೋಗ್ಯ ಕಾರ್ಯಗಳನ್ನ ಮಾಡಕೋತ ನೂರು ವರ್ಷ ಬದುಕೋದು. ನೋಡೋದು, ಕೇಳೋದು, ಮುಟ್ಟೋದು, ಮಾಡೋದರಲ್ಲಿ ಎಷ್ಟು ಆನಂದ ಅದ ನೋಡ್ರಿ. ಬೇಕಿದ್ರ ಒಂದು ವಾರ ಮಲಗಿ ನೋಡ್ರಿ ಜೀವನದ ಮಹತ್ವ ಗೊತ್ತಾಗ್ತದ.