ದೆಹಲಿಯ ಜಂತರ್ಮಂತರ್ ಇಲ್ಲಿ ತನಕ ಅಸಂಖ್ಯಾತ ಪ್ರತಿಭಟನೆಗಳನ್ನು ಕಂಡಿದೆ. ಎಂತೆಂತಹ ಹೋರಾಟಗಳು ಇಲ್ಲಿ ಫಲ ಕಂಡಿದೆ. ಹೇಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆಗಳು ನಡೆಯುತ್ತದೆಯೋ, ಹಾಗೆ ದೆಹಲಿಯ ಜಂತರ್ಮಂತರ್ ಕೂಡ ಪ್ರತಿಭಟನೆಗೆ ಖಾಯಂ ಸ್ಥಳ. ಸಾಮಾನ್ಯವಾಗಿ ಯಾವುದೇ ಪ್ರತಿಭಟನೆಗಳು ನಡೆಯುವ ಮೊದಲು ಆ ಪ್ರತಿಭಟನೆಯನ್ನು ಆಯೋಜಿಸಿಸವರು ಮಾಧ್ಯಮಗಳಿಗೆ ತಮ್ಮ ಪ್ರತಿಭಟನೆಯ ಬಗ್ಗೆ ಹೇಳಿರುತ್ತಾರೆ. ದಯವಿಟ್ಟು ಬಂದು ಪ್ರಚಾರದ ಮೂಲಕ ಒಂದಿಷ್ಟು ಬೆಂಬಲ ಕೊಡಿ ಎನ್ನುವ ವಿನಂತಿ ಇದ್ದೇ ಇರುತ್ತದೆ. ಹಾಗೇ ಒಳ್ಳೆಯ ಉದ್ದೇಶಕ್ಕೆ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಮಾಧ್ಯಮದವರು ಅದನ್ನು ಕವರ್ ಮಾಡುವುದು ಹೊಸತೇನಲ್ಲ.
ಇನ್ನು ಕೆಲವೆಡೆ ಮಾಧ್ಯಮದವರು ಬಂದ ಮೇಲೆನೆ ಪ್ರತಿಭಟನೆ ಪ್ರಾರಂಭಿಸುವವರು ಇದ್ದಾರೆ. ಹಲವು ಬಾರಿ ಸ್ಥಳೀಯ ಪ್ರಭಾವಿ ಮಾಧ್ಯಮದವರು ಫ್ರೀ ಇರುವ ಸಮಯ ಕೇಳಿಯೇ ಪ್ರತಿಭಟನೆಯ ಸಮಯವನ್ನು ಅದಲು ಬದಲು ಮಾಡುವುದೂ ಇದೆ. ಎಲ್ಲಿಯ ತನಕ ಅಂದರೆ ಮಂಗಳೂರಿನಲ್ಲಿ ಆಗಾಗ ಸುದ್ದಿಗೋಷ್ಟಿ ಮಾಡುವ ಮಾಜಿ ಕೇಂದ್ರ ಸಚಿವರೊಬ್ಬರು ಆ ಪೇಪರ್ನವರು, ಈ ಟಿವಿಯವರು ಬಂದಿದ್ದಾರಾ ಎಂದು ವಿಚಾರಿಸಿಯೇ ತಮ್ಮ ಮಾತನ್ನು ಪ್ರಾರಂಭಿಸುತ್ತಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟಿವಿ ಕ್ಯಾಮೆರಾದವರಿಗೆ ಸರಿಯಾಗಿ ದೃಶ್ಯಗಳು ಸಿಗುವಂತೆ ಮುಖಕ್ಕೆ ಸೆಗಣಿ ಬಳಿಯುವ, ಮಸಿ ಬಳಿಯುವ ಪ್ರತಿಭಟನಾಕಾರರು ಇದ್ದಾರೆ. ಇನ್ನೂ ಕ್ಯಾಮೆರಾದವರನ್ನು ಕಂಡರೆ ತಕ್ಷಣ ಅಳುವ ಮೂಲಕ ವಿಷಯದ ಗಂಭೀರತೆಯನ್ನು ಸಾರುವವರ ಪ್ರತಿಭಟನಾಕಾರರು ಇದ್ದಾರೆ. ಸಂಜೆ 4ಗಂಟೆಗೆ ಎರಡು ಪ್ರತಿಭಟನೆಗಳು ಇದ್ದರೆ ಮಾಧ್ಯಮದವರಿಗೆ ಬರಲು ಕಷ್ಟವಾಗುತ್ತೆ ಎಂದು ಒಂದು ಪ್ರತಿಭಟನೆ ಮುಂದಕ್ಕೆ ಹೋದದ್ದು ಇದೆ. ಆದ್ದರಿಂದ ಪತ್ರಕರ್ತರಿಗೆ ಈ ಖಾಯಂ ಪ್ರತಿಭಟನಾಕಾರರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ.
ಇನ್ನೂ ಟಿವಿಯವರು ಬಂದ ತಕ್ಷಣ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಳ್ಳುವ, ಬೆಂಕಿ ಹಚ್ಚಲು ಮುಂದಾಗುವ ಪ್ರತಿಭಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಆವತ್ತು ಗಜೇಂದ್ರ ಸಿಂಗ್ ಕೂಡ ಅಂತಹುದೇ ಒಂದು ಸರ್ಕಸ್ ಮಾಡಲು ಮುಂದಾಗಿದ್ದ ಎನ್ನುವುದು ಎಲ್ಲೋ ನಿಜವಾಗಿರಬಹುದು ಅನಿಸುತ್ತದೆ. ಆವತ್ತು ಬೆಳಿಗ್ಗೆ ತನ್ನ ಹಿತೈಷಿಗಳಿಗೆ ಕರೆ ಮಾಡಿ ಇವತ್ತು ಟಿವಿ ನೋಡ್ತಾ ಇರಿ, ಅದರಲ್ಲಿ ಬರುತ್ತೇನೆ ಎಂದು ಆತ ಹೇಳಿದ್ದ ಎಂದು ದೆಹಲಿ ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ. ಹೆಚ್ಚಾಗಿ ಯಾವುದೇ ಮಾಧ್ಯಮಗಳಲ್ಲಿ ಮಿಂಚಬೇಕಾದರೆ ಎನು ಮಾಡಬೇಕು ಎನ್ನುವುದು ಕನ್ನಡಕ್ಕಾಗಿ ಆಗಾಗ ಹೋರಾಟ ಮಾಡುವ ಬೆಂಗಳೂರಿನ ಮಾಜಿ ಶಾಸಕರೊಬ್ಬರಿಗೆ ಗೊತ್ತಿದೆ. ಅವರು ನವನವೀನ ತಂತ್ರಗಳ ಮೂಲಕ ಹೆಡ್ಲೈನ್ನಲ್ಲಿ ಮಿಂಚುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅತಿರೇಕದ ವರ್ತನೆಗಳಿಂದಲೇ ಮಾಧ್ಯಮಗಳಲ್ಲಿ ಸುದ್ದಿಯಾಗಬಹುದು ಎನ್ನುವುದು ಅರ್ಥ ಮಾಡಿಕೊಂಡಿರುವ ಕೆಲವು ಪ್ರತಿಭಟನಾಕಾರರು ಮರುದಿನ ಪತ್ರಿಕೆಗಳಲ್ಲಿ, ಅಂದು ರಾತ್ರಿ ಟಿವಿಗಳಲ್ಲಿ ಬರಲು ಯಾವುದೇ ಹಂತಕ್ಕೆ ಹೋಗುತ್ತಾರೆ. ಗಜೇಂದ್ರ ಸಿಂಗ್ ಆ ದಾರಿಯಲ್ಲಿ ನಡೆಯುವ ಯತ್ನ ಮಾಡಿದ್ದಾರೆ. ಬಿಜೆಪಿ, ಬಿಎಸ್ಪಿ, ಎಸ್ಪಿ ಕೊನೆಗೆ ಕಾಂಗ್ರೆಸ್ನಲ್ಲೂ ತನ್ನ ಅಸ್ತಿತ್ವ ಸಾಧಿಸುವಲ್ಲಿ ವಿಫಲನಾಗಿದ್ದ ಗಜೇಂದ್ರ ಸಿಂಗ್ ಆಪ್ನಲ್ಲಿ ಮಿಂಚಬೇಕಾದರೆ ಎನು ಮಾಡಬೇಕು ಎಂದು ಸಾಕಷ್ಟು ಬಾರಿ ಯೋಚಿಸಿಯೇ ಒಂದು ಚಾಣಾಕ್ಷ ನಡೆಗೆ ಕೈ ಹಾಕಿದ್ದ. ಆದರೆ ಗಜೇಂದ್ರ ಸಿಂಗ್ ಆತ್ಮಹತ್ಯೆ ಮಾಡುವಷ್ಟು ಹಂತಕ್ಕೆ ಹೋಗುವ ಸಾಧ್ಯತೆಯೇ ಇರಲಿಲ್ಲ ಎನ್ನುವುದು ಅವನ ಮನೆಯವರ ಮಾತು. ಆತನಿಗೆ ರಾಜಕೀಯ ಮಹತ್ವಾಕಾಂಕ್ಷೆ ಇತ್ತು. ಪತ್ರಿಕಾಗೋಷ್ಟಿಯಲ್ಲಿ ಮಂತ್ರಿಗಳ ಮೇಲೆ ಬೂಟು ಎಸೆದು ಪ್ರಖ್ಯಾತಿ ಹೊಂದಿ ಈಗ ಶಾಸಕರಾಗಿರುವವರ ಉದಾಹರಣೆ ಅವನ ಮುಂದೆ ಇತ್ತು.
ಗಜೇಂದ್ರ ಸಿಂಗ್ ಡೆತ್ನೋಟ್ ಬರೆದಿದ್ದ ಎನ್ನುವ ವಿಷಯವನ್ನೇ ಅವನ ಸಂಬಂಧಿಗಳು ನಂಬುವ ಸ್ಥಿತಿಯಲ್ಲಿ ಇಲ್ಲ. ಇನ್ನು ಆತ ತಾನು ಆತ್ಮಹತ್ಯೆ ಮಾಡುತ್ತಾನೆ ಎಂದು ಘೋಷಣೆ ಕೂಗುವಾಗ ಕೆಳಗಿದ್ದ ಆಪ್ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ನೋಡಿದಾಗ ಯರೂ ಕೂಡ ಆತನನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಅಷ್ಟಕ್ಕೂ ಕೇವಲ ತೋರಿಕೆಗೆ ಆತ್ಮಹತ್ಯೆ ಮಾಡುವಂತಹ ಪ್ರಯತ್ನ ಮಾಡಲು ಹೋಗಿ ಆ ನೇಣು ಕುತ್ತಿಗೆಗೆ ಬಿಗಿದುಕೊಂಡಿತೊ, ಆ ಸಂಭವನೀಯತೆಯ ಬಗ್ಗೆ ತನಿಖೆ ನಡೆಸಬೇಕಾಗಿದೆ. ಗಜೇಂದ್ರ ಸಿಂಗ್ ದೇಶದ ರೈತರಿಗೋಸ್ಕರ ಪ್ರಾಣಾರ್ಪಣೆ ಮಾಡಿದ ಎಂದು ಆಪ್ನವರು ನಿರ್ಧಾರಕ್ಕೆ ಬರುವ ಮೊದಲೇ ಬೇರೆ ಎಲ್ಲಾ ಸಾಧ್ಯತೆಗಳನ್ನು ಪರೀಕ್ಷಿಸುವುದು ಒಳ್ಳೆಯದು. ಯಾಕೆಂದರೆ ದೆಹಲಿ ಪೊಲೀಸರಿಗೆ ಗಜೇಂದ್ರ ಸಿಂಗ್ ಅವರನ್ನು ಬದುಕಿಸುವ ಪ್ರಯತ್ನ ಕೂಡ ವಿಫಲವಾಗಲು ಕಾರಣ ಗಜೇಂದ್ರ ಸಿಂಗ್ ಹತ್ತಿದ ಮರದ ಬಳಿ ಬರಲು ಆಪ್ ಕಾರ್ಯಕರ್ತರು ಪೊಲೀಸರಿಗೆ ಬಿಡಲೇ ಇಲ್ಲ. ಕೊನೆಗೆ ಪೊಲೀಸರು ಕಷ್ಟಪಟ್ಟು ಅಲ್ಲಿ ಬರುವಷ್ಟರಲ್ಲಿ ಗಜೇಂದ್ರ ಸಿಂಗ್ ಅಮರನಾಗಿದ್ದ!