ಬೆಳ್ತಂಗಡಿ : ಮುಂದಿನ ವರ್ಷ 6 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಸತಿ ಸಚಿವ ಅಂಬರೀಶ್ ಹೇಳಿದ್ದಾರೆ.
ಅವರು ಭಾನುವಾರ ಧರ್ಮಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ವರ್ಷ 3 ಲಕ್ಷ ಮನೆಗಳ ನಿರ್ಮಾಣದ ಗುರಿಯನ್ನು ಹೊಂದಿದ್ದು, ಚುನಾವಣೆಯಿಂದಾಗಿ ಸ್ಪಲ್ಪ ತಡವಾಗಿದೆ. ಅದನ್ನು ಎಪ್ರಿಲ್ ತಿಂಗಳ ಒಳಗೆ ಪೂರ್ಣಗೊಳಿಸಲಾಗುತ್ತಿದೆ. ಅಲ್ಲದೆ ಪರಿಶಿಷ್ಟ ಜಾತಿ/ಪಂಗಡದವರಿಗೆ ಅಂಬೇಡ್ಕರ್ ವಸತಿ ಯೋಜನೆಯಲ್ಲಿ 1.70 ಲಕ್ಷ ಮನೆ ನಿರ್ಮಾಣದ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ದೇವರಾಜ ಅರಸು ಯೋಜನೆಯಡಿ ಅಂಗವಿಕಲರಿಗೆ ವಿಶೇಷ ಯೋಜನೆಯನ್ನು ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಿಗೂ ಆದ್ಯತೆ ನೀಡಿ ಮನೆಗಳ ಹಂಚಿಕೆ ಮಾಡಲಾಗುವುದು. ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಅವರು ವಸತಿಗೆ ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆ. ಆದ್ಯತೆ ಮೇಲೆ ನೀಡಲಾಗುವುದು ಎಂದರು.
ಚಿತ್ರನಟಿ ಮಾಲಾಶ್ರೀ ಹಾಗೂ ನಿರ್ಮಾಪಕ ಮಂಜು ಅವರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿವಾದವನ್ನು ಮಾಧ್ಯಮದಿಂದ ಮಾತ್ರ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಯಾವ ವಿಚಾರವನ್ನು ಇಬ್ಬರು ತಿಳಿಸಿಲ್ಲ. ಸೋಮವಾರ ಬೆಂಗಳೂರಿಗೆ ತೆರಳಲಿದ್ದು ಅವರಲ್ಲಿ ಮಾತನಾಡಿ ವಿವಾದವನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.