ಬಾಗಲಕೋಟೆ: ಮಂಗಳೂರು ಚಲೋ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಬಂಧನ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾಗಿರುವ ಮುಖಂಡರ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಗರ ಮಂಡಳ ಅಧ್ಯಕ್ಷ ರಾಜು ನಾಯ್ಕರ, ಸರ್ಕಾರ ಕೂಡಲೇ ಬಂಧಿತ ಮುಖಂಡರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರವು ಬಂಧಿತ ಮುಖಂಡರನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸಿದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಬಿಜೆಪಿ ಹೋರಾಟಕ್ಕೆ ಇಳಿಯಲಿದ ಎಂದು ಎಚ್ಚರಿಕೆ ನೀಡಿದರು.
ಯುವ ಮೋರ್ಚಾ ನಗರ ಮಂಡಳ ಅಧ್ಯಕ್ಷ ಪಾಲಾಕ್ಷಯ್ಯ ಕಟ್ಟಿಮಠ, ಮಂಗಳೂರು ಬೈಕ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡರ ಬಂಧನವನ್ನು ತೀವ್ರವಾಗಿ ಖಂಡಿಸಿ, ಕೂಡಲೇ ಬಂಧಿತ ಮುಖಂಡರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘ ಪರಿವಾರದ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣವಾಗಿರುವ ಕೆಎಪ್ಡಿ, ಪಿಎಫ್ಐ ಸಂಘಟಣೆಗಳನ್ನು ನಿಷೇದಿಸುವ ಹಾಗೂ ಅದಕ್ಕೆ ಕಾರಣರಾಗಿರುವ ಸಚಿವ ರಮಾನಾಥ ರೈ ಅವರ ಬಂಧನಕ್ಕೆ ಒತ್ತಾಯಿಸಿ ಶಾಂತಿಯುತವಾದ ಮಂಗಳೂರು ಬೈಕ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ಯುವ ಮೋರ್ಚಾದ ಸಾವಿರಾರು ಕಾರ್ಯಕರ್ತರನ್ನು ಬಂಧಿಸಿರುವುದನ್ನು ಯುವ ಮೋರ್ಚಾ ನಗರ ಘಟಕ ಖಂಡಿಸುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯನ್ನು ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಈ ಹಕ್ಕನ್ನು ಮೊಟಕುಗೊಳಿಸಿ, ತುರ್ತು ಪರಿಸ್ಥಿತಿ ಸೃಷ್ಠಿಸುತ್ತಿರುವ ಸಿಎಂ ಸಿದ್ದರಾಮಯ್ಯ ನಡೆ ಖಂಡನಾರ್ಹ ಎಂದು ಮನವಿಯಲ್ಲಿ ತಿಳಿಸಿದೆ. ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದಲ್ಲಿ ಹೋರಾಟವನ್ನು ಉಗ್ರಗೊಳಿಸುವ ಎಚ್ಚರಿಕೆಯನ್ನು ಮನವಿಯಲ್ಲಿ ಯುವಮೋರ್ಚಾ ನೀಡಿದೆ.
ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಯಕುಂಪಿ, ರಾಜು ಗವಳಿ, ಬಸವರಾಜ ಅವರಾದಿ, ಬಸವರಾಜ ನಾಶಿ, ಶ್ರೀಶೈಲ ಅಂಗಡಿ, ರವಿ ದಾಮಜಿ, ಪಾಲಾಕ್ಷ ಕಟ್ಟಿಮಠ, ಪ್ರವೀಣ ಖಾತೆದಾರ, ಮಂಜು ಹೊದ್ಲೂರ, ಸಾಗರ ಬಂಡಿ, ಸಿದ್ದು ವಡ್ಡರ, ಹುಚ್ಚೇಶ ಬಾಗಲಕೋಟೆ,ರಾಜು ಖಾತೆದಾರ, ಮಹಾಂತೇಶ ಅವರಾದಿ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.