ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೃಹತ್ ಆಂದೋಲನವಾಗಿ ರೂಪುಗೊಳ್ಳುತ್ತಿರುವ ಅಭಯಾಕ್ಷರ ಆಂದೋಲನ ರಾಜ್ಯವ್ಯಾಪಿ ಚಳವಳಿಯಾಗಿ ರೂಪುಗೊಳ್ಳಲಿದ್ದು ಶ್ರೀಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 14) ಯಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು.
ರಾಜ್ಯ ಗೋಪರಿವಾರದ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸ್ವಾಮೀಜಿ, ರಾಜ್ಯದ ಪ್ರತಿ ಮನೆ ಮನೆಗಳಿಗೆ ತೆರಳಿ ಗೋಪ್ರೇಮಿಗಳಿಂದ ಹಸ್ತಾಕ್ಷರ ಸಂಗ್ರಹಿಸುವ ಅಭಿಯಾನ ಇದಾಗಿದ್ದು, ರಾಜ್ಯಾದ್ಯಂತ ಐದು ಕೋಟಿ ಗೋಪ್ರೇಮಿಗಳು ಗೋಹತ್ಯೆ ನಿಷೇಧಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸುವರು ಎಂದು ನುಡಿದರು.
ರಾಜ್ಯ ಗೋಪರಿವಾರ ಹಾಗೂ ಶ್ರೀರಾಮಚಂದ್ರಾಪುರ ಮಠದ ಸಾವಿರಾರು ಕಾರ್ಯಕರ್ತರು ಈ ಬೃಹತ್ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಗೋಪರಿವಾರ ರಚನೆಯಾಗಲಿವೆ ಎಂದರು.
ಸಂಪೂರ್ಣ ಗೋಹತ್ಯೆ ನಿಷೇಧ ಹಾಗೂ ಭಾರತೀಯ ಗೋತಳಿ ಸಂರಕ್ಷಣೆಯ ಹಕ್ಕೊತ್ತಾಯವನ್ನು ನಾಡಿನ ಪ್ರತಿಯೊಬ್ಬ ಗೋಪ್ರೇಮಿಯೂ ಸರ್ಕಾರಗಳ ಮುಂದೆ ಮಂಡಿಸುವರು. ಆಗ ಪ್ರಜಾಪ್ರಭುತ್ವ ಸರ್ಕಾರ ತಾನಾಗಿಯೇ ಜನಶಕ್ತಿಯ ಅಭಿಪ್ರಾಯವನ್ನು ಗೌರವಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ವಿವರಿಸಿದರು.
ನಾಡಿನ ಜನರ ಅಮೂಲ್ಯ ಅಭಯಾಕ್ಷರವನ್ನು ನಾಡಿನೆಲ್ಲೆಡೆ ವೈಭವದ ಮೆರವಣಿಗೆ ಮಾಡುವ ಅಭಯ ಗೋಯಾತ್ರೆ ಮುಂದಿನ ಹಂತದಲ್ಲಿ ನಡೆಯಲಿದೆ. ಇದು ರಾಜ್ಯದೆಲ್ಲೆಡೆ ಗೋಹತ್ಯೆ ವಿರುದ್ಧದ ರಣಕಹಳೆ ಮೊಳಗಿಸಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ಗೋತಳಿ ವರ್ಧನೆ ಉದ್ದೇಶದಿಂದ ಕೃತಕ ಗರ್ಭಧಾರಣೆ ವಿರುದ್ಧ ಬೃಹತ್ ಆಂದೋಲನ ನಡೆಯಲಿದೆ ಎಂದರು.
ರಾಜ್ಯ ಗೋಪರಿವಾರದ ಅಧ್ಯಕ್ಷ ಪಾಂಡುರಂಗ ಜೋಶಿ, ಪ್ರಧಾನ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಭಾರತೀಯ ಗೋ ಪರಿವಾರದ ಕಾರ್ಯದರ್ಶಿ ಮಧು ಗೋಮತಿ, ರಾಜ್ಯ ಪದಾಧಿಕಾರಿಗಳು ಹಾಗೂ ಮೈಸೂರು ಪ್ರಾಂತ್ಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.