ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಇಸ್ರೇಲ್ ಪ್ರವಾಸ ಇಂದಿನಿಂದ ಆರಂಭವಾಗಲಿದೆ. 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ಗೆ ಭೇಟಿ ನೀಡುತ್ತಿರುವುದು ಒಂದು ಐತಿಹಾಸಿಕ ಭೇಟಿಯಾಗಲಿದೆ.
ಭಾರತ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧ ಆರಂಭವಾಗಿ 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲೂ ಈ ಭೇಟಿ ಮಹತ್ವ ಪಡೆದಿದೆ. ರಕ್ಷಣಾ ಕ್ಷೇತ್ರದಲ್ಲಿನ ಒಪ್ಪಂದ, ಆರ್ಥಿಕ ಸಹಕಾರ, ಕೃಷಿ, ರಾಜತಾಂತ್ರಿಕ, ನೀರಿನ ನಿರ್ವಹಣೆ ಮತ್ತು ಭಯೋತ್ಪಾದನೆಯ ನಿಗ್ರಹ ಪ್ರವಾಸದ ಪ್ರಮುಖ ಆದ್ಯತೆಗಳಾಗಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಬರಾಕ್ 8 ಕ್ಷಿಪಣಿ ಜಂಟಿಯಾಗಿ ಉತ್ಪಾದಿಸುವ ಕುರಿತು ಚರ್ಚಿಸಲಿದ್ದಾರೆ. ಮೇಕ್ ಇನ್ ಇಂಡಿಯಾ ಘೋಷವಾಕ್ಯದಡಿಯಲ್ಲಿ ಇದನ್ನು ಉತ್ಪಾದಿಸುವ ಕುರಿತು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಶತ್ರು ರಾಷ್ಟ್ರಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಲು ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕೇಂದ್ರಕ್ಕೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಕ್ಷಿಪಣಿ ತಂತ್ರಜ್ಞಾನ, ರಾಡಾರ್, ಡ್ರೋನ್ ಕುರಿತಂತೆ ಚರ್ಚಿಸಲಿದ್ದಾರೆ.
ದೇಶದ 15 ರಾಜ್ಯಗಳಲ್ಲಿ ಇಸ್ರೇಲ್ ನೆರವಿನಿಂದ ಆಹಾರ ಸಂಸ್ಕರಣೆ ಕುರಿತಂತೆ ಕೃಷಿ ತಂತ್ರಜ್ಞರ ಕೇಂದ್ರಗಳನ್ನು ವಿಸ್ತರಿಸುವ ನಿಟ್ಟಿನಲ್ಲೂ ಮಾತುಕತೆ ನಡೆಯಲಿದೆ.
ಇಸ್ರೇಲ್ ಪ್ರಧಾನಿ ಜೊತೆ ಔತಣಕೂಟ, 4 ಸಾವಿರ ಮಂದಿ ಭಾರತೀಯರನ್ನುದ್ದೇಶಿಸಿ ಭಾಷಣ. ರಸಾಯನಶಾಸ್ತ್ರ, ಕೃಷಿ, ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಜತೆ ಪ್ರತ್ಯೇಕ ಸಂವಾದ, ಹೈಫಾದಲ್ಲಿರುವ ಭಾರತೀಯ ಸೈನಿಕರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುವುದು ಇವೆಲ್ಲವೂ ಪ್ರಧಾನಿ ಮೋದಿಯವರ ಕಾರ್ಯಕ್ರಮಗಳಾಗಿವೆ.
ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಈ ಪ್ರವಾಸ ಅತ್ಯಂತ ಮಹತ್ವದ್ದು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.