ನವದೆಹಲಿ: 18 ತಿಂಗಳಲ್ಲಿ ತ್ರಿವಳಿ ತಲಾಖ್ಗೆ ಸಂಬಂಧಿಸಿದಂತೆ ಪರಿವರ್ತನೆ ತರುವೆವು ಎಂದಿದ್ದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಒಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಒಂದೇ ಬಾರಿಗೆ 3 ಬಾರಿ ತಲಾಖ್ ಹೇಳುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದಿರುವ ಮಂಡಳಿ, ತಲಾಖ್ ನೀಡಲು 90 ದಿನಗಳ ಅವಧಿಯನ್ನು ನಿಗದಿಪಡಿಸಿದೆ.
ತ್ರಿವಳಿ ತಲಾಖ್ಗೆ ಸಂಬಂಧಿಸಿದಂತೆ 8 ಅಂಶಗಳನ್ನು ಪ್ರಸ್ತಾಪಿಸಿರುವ ಮಂಡಳಿ, ನಿಖಾಹ್ ಹಲಾಲಾ ಹಾಗೂ ಬಹುಪತ್ನಿತ್ವದ ಬಗ್ಗೆ ಮಾತ್ರ ಮೌನವಹಿಸಿದೆ.
ಮಾರ್ಗಸೂಚಿಗಳು
1. ದಂಪತಿಗಳ ನಡುವೆ ಭಿನ್ನಾಭಿಪ್ರಾಯವಿದ್ದಲ್ಲಿ ಅದನ್ನು ಪರಸ್ಪರ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು.
2. ಪರಸ್ಪರ ಸಂಧಾನ ಸಾಧ್ಯವಾಗದೇ ಇದ್ದಲ್ಲಿ ತಾತ್ಕಾಲಿಕವಾಗಿ ದೂರವಿರಬೇಕು.
3. ಈ ಮೇಲಿನ ಎರಡೂ ಸಾಧ್ಯವಾಗದಿದ್ದಲ್ಲಿ ಉಭಯ ಕುಟುಂಬಗಳು ಮಾತುಕತೆಗೆ ಮುಂದಾಗಬೇಕು.
4. ಇವ್ಯಾವ ಪ್ರಯತ್ನಗಳು ಫಲಿಸದಿದ್ದ ಪಕ್ಷದಲ್ಲಿ ಪತಿ ಒಂದು ಸಲ ಮಾತ್ರ ತಲಾಖ್ ಹೇಳಬೇಕು. 3 ತಿಂಗಳು ಕಾದು ಭಿನ್ನಾಭಿಪ್ರಾಯ ಹೋಗಲಾಡಿಸಲು ಪ್ರಯತ್ನಿಸಬೇಕು. ಎಲ್ಲವೂ ಸರಿ ಹೋದರೆ 90 ದಿನಗಳಲ್ಲಿ ಮತ್ತೆ ಕೂಡಿ ಜೀವನ ಸಾಗಿಸಬೇಕು. ಪತ್ನಿ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ತಲಾಖ್ ಹೇಳುವಂತಿಲ್ಲ.
5. 90 ದಿನಗಳ ನಂತರ ಭಿನ್ನಾಭಿಪ್ರಾಯ ಸರಿಹೋದರೆ ಮರು ವಿವಾಹ ಆಗಬೇಕು.
6. ತಿಂಗಳಿಗೆ ಒಂದರಂತೆ ತಲಾಖ್ ಹೇಳಬೇಕು. 3 ನೇ ತಲಾಖ್ ಹೇಳುವ ಮುನ್ನ ಒಂದುಗೂಡುವ ಮನಸ್ಥಿತಿಗೆ ಬಂದಲ್ಲಿ 3 ನೇ ತಲಾಖ್ ಹೇಳುವ ಅವಶ್ಯಕತೆ ಇಲ್ಲ.
7. ಪತಿ ಇಷ್ಟವಾಗದಿದ್ದಲ್ಲಿ ಖುಲಾ ಮೂಲಕ ಪತ್ನಿ ಪತಿಯಿಂದ ದೂರವಾಗಬಹುದು.
8. ತ್ರಿವಳಿ ತಲಾಖ್ ಹೇಳುವವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ಇದರಿಂದ ತ್ರಿವಳಿ ತಲಾಖ್ ದುರುಪಯೋಗ ತಡೆಗಟ್ಟಬಹುದು.
ಹೀಗೇ ಒಂದಿಷ್ಟು ಮಾರ್ಗಸೂಚಿಗಳನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ರಚಿಸಿದ್ದು, ವಾಸ್ತವಿಕವಾಗಿ ಹಾಗೂ ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಇವು ಎಷ್ಟು ಮಹತ್ವ ಪಡೆದುಕೊಳ್ಳುತ್ತವೆ ಎಂಬುದು ಚರ್ಚಾರ್ಹ ಸಂಗತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.