ಮುಂಬೈ: ರೋಗಗಳ ತಾಣವಾಗಿದ್ದ ಆ ಕೊಳಚೆಯನ್ನು ದಾಟಿ ಶಾಲೆಗೆ ಹೋಗುವುದು ಮಕ್ಕಳಿಗೆ ಸವಾಲೇ ಆಗಿತ್ತು. ಅದೆಷ್ಟೋ ಮಕ್ಕಳು ಶಾಲೆಗೆ ಗೈರು ಹಾಜರಾಗಲು ದೊಡ್ಡ ಚರಂಡಿಯೊಂದು ಕಾರಣವಾಗಿದ್ದು ಸುಳ್ಳಲ್ಲ. ಇದಕ್ಕೊಂದು ಬಿದಿರಿನ ಸೇತುವೆಯನ್ನೇ ನಿರ್ಮಿಸಿದ ಮಹಾನುಭಾವ 17 ವರ್ಷದ ಎಶಾನ್ ಬಲ್ಬಲೆ. ಆಗ ಕೊಳಗೇರಿಯ ಕನಸುಗಳು ಬಲಗೊಂಡಂತಾದವು.
ಹೌದು. ಮುಂಬೈನ ಸಾಥೆ ನಗರ ಹೇಳಿ ಕೇಳಿ ಸ್ಲಂ. ಇದರ ಹೊರಭಾಗದಲ್ಲಿ ದೊಡ್ಡ ಚರಂಡಿ ಹಾಗೂ ಕೊಳಚೆ ನೀರು ಹರಿಯುವ ಕಾಲುವೆಯೂ ಅಲ್ಲಿದೆ. ಅಕ್ಷರಶಃ ಅದು ರೋಗಗಳ ತಾಣ. ಸ್ಲಂ ಮಕ್ಕಳು ಶಾಲೆಗೆ ಹೋಗಲು, ಜನ ಮಾರ್ಕೆಟ್, ರೈಲ್ವೆ ಸ್ಟೇಶನ್ ಹೀಗೇ ಎಲ್ಲೇ ಹೋಗಬೇಕೆಂದರೂ ಅದನ್ನು ದಾಟಿಯೇ ಹೋಗಬೇಕಿತ್ತು. ಅನೇಕರು ಕೊಳಚೆ ತಾಗದಂತೆ ಬಟ್ಟೆ ಮೇಲೆತ್ತಿಕೊಂಡು ನಡೆದರೆ, ಮಕ್ಕಳು ಪಾಪ, ಅನಿವಾರ್ಯವಾಗಿ ಅದನ್ನು ತುಳಿದುಕೊಂಡೇ ಹೋಗುವ ಸ್ಥಿತಿ ಅಲ್ಲಿತ್ತು.
ಕೊಳಚೆಯಲ್ಲೇ ಹಾದು ಹೋಗಬೇಕಿದ್ದ ಕಾರಣ, ಅದರಿಂದ ಅನೇಕ ಚರ್ಮರೋಗಗಳು ಸಾಮಾನ್ಯವಾಗಿದ್ದವು. ಮಕ್ಕಳು ಗಲೀಜು ಮಾಡಿಕೊಂಡು ಶಾಲೆಗೆ ಹೋದರೆ ಕೆಲವೊಮ್ಮೆ ಅವರಿಗೆ ಪ್ರವೇಶ ಸಿಗುವುದೂ ದುರ್ಲಭವಾಗಿತ್ತು.
ಮುಂಬೈ ನಗರಿಯ ಥಾಣೆ ನಿವಾಸಿ ಎಹ್ಸಾನ್ ಬಲ್ಬಲೆ 17 ವರ್ಷದವನಿದ್ದಾಗ ಈ ಸ್ಲಂಗೆ ಭೇಟಿ ನೀಡಿದ್ದ. ಈ ಕೊಳಚೆ ಪ್ರದೇಶದ ಮಕ್ಕಳ ಶ್ರೇಯೋಭಿವೃದ್ಧಿಗೆ ಏನನ್ನಾದರೂ ಮಾಡಬೇಕೆಂದು ಕನಸು ಕಂಡಿದ್ದ. ಅದಕ್ಕೆ ಪೂರಕವಾಗಿ ಒಮ್ಮೆ ಟ್ಯಾಬ್ಲ್ಯಾಡ್ ಪತ್ರಿಕೆಯೊಂದರಲ್ಲಿ ಸ್ಲಂನ ಸ್ಥಿತಿ ಗತಿ ಕುರಿತು ವರದಿ ಬಂತು. ಅಲ್ಲಿನ ಮಕ್ಕಳು ಅನುಭವಿಸುತ್ತಿರುವ ಕಟುಸತ್ಯ ಬಲ್ಬಲೆಯ ಮನಸ್ಸನ್ನು ಕದಡಿತು. 2015 ರಲ್ಲಿ ಸ್ಥಳಕ್ಕೆ ಭೇಟಿ ನೀಡಿಯೇ ಬಿಟ್ಟ.
ಉತ್ತಮವಾಗಿ ಬದುಕುತ್ತಿರುವ ತನ್ನ ಸ್ಥಿತಿ ನೆನಪಿಸಿಕೊಂಡ. ಸ್ಲಂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ನಿರ್ಧರಿಸಿದ. ಕಾಂಕ್ರೀಟ್ ಸೇತುವೆ ನಿರ್ಮಾಣಕ್ಕೆ ಬಿಎಂಸಿ ಪರವಾನಗಿ ಅಗತ್ಯವಾಗಿತ್ತು. ಯಾವುದೇ ಸರ್ಕಾರದ ಧನ ಸಹಾಯಕ್ಕೂ ಕೈಯೊಡ್ಡಲಿಲ್ಲ. ಎನ್ಜಿಓ ಸಹಾಯ ಪಡೆದ. ಕೊಳಚೆ ನಾಲೆಯ ಮೇಲೆ ಬಿದಿರಿನ ಸೇತುವೆ ನಿರ್ಮಿಸಲು ಮುಂದಾದ. ಒಂದಿಷ್ಟು ಕಟ್ಟಡ ಕಾರ್ಮಿಕರ ಸಹಕಾರದಿಂದ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟ. 8 ದಿನಗಳಲ್ಲಿ ಸೇತುವೆ ಸಿದ್ಧವಾಗಿತ್ತು.
ಮಕ್ಕಳು ಖುಷಿಗೆ ಪಾರವೇ ಇರಲಿಲ್ಲ. ಸುರಕ್ಷಿತವಾಗಿ ಸಂಚರಿಸಲು ಸೇತುವೆ ಎಲ್ಲರಿಗೂ ಅನುಕೂಲ ಕಲ್ಪಿಸಿತ್ತು. ಗಮನಾರ್ಹ ಸಂಗತಿ ಎಂದರೆ, ಬಲ್ಬಲೆಯಿಂದ ಜನಪ್ರತಿನಿಧಿಗಳು ಸ್ಪೂರ್ತಿಗೊಂಡರು. ಅಲ್ಲಿ ಇನ್ನೊಂದು ಸೇತುವೆ ನಿರ್ಮಾಣವಾಯಿತು. ಅಲ್ಲಿನ ಜನಕ್ಕೀಗ ಎರಡೆರಡು ಸೇತುವೆಯ ಭಾಗ್ಯ. ಮಕ್ಕಳ ಭವಿಷ್ಯಕ್ಕೊಂದು ಸೇತುವೆ ನಿರ್ಮಿಸಿದ ಮಹಾನುಭಾವ ಬಲ್ಬಲೆ ನಿಜಕ್ಕೂ ಸ್ಪೂರ್ತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.